ಬೆಂಗಳೂರಿನಲ್ಲಿ ನಡೆದ 11ನೇ ರಾಷ್ಟ್ರೀಯ ಕೈಮಗ್ಗ ದಿನಾಚರಣೆ ಕಾರ್ಯಕ್ರಮದಲ್ಲಿ ಐವರು ನೇಕಾರರಿಗೆ ರಾಜ್ಯ ಮಟ್ಟದ ಪ್ರಶಸ್ತಿ ನೀಡಿ ಗೌರವಿಸಲಾಯಿತು.ಕೈಮಗ್ಗ ನೇಕಾರರಾದ ತುಮಕೂರಿನ ಎಂ.ವಿ.ಪ್ರಕಾಶ್, ಚಿತ್ರದುರ್ಗದ ಸುರೇಶ್ ಡಿ,ಎಸ್, ಗದಗದ ತೇಜಸ್ವಿ ಚಿನ್ನೂರ, ಬಾಗಲಕೋಟೆ ಲಕ್ಷ್ಮಣ ಕಕ್ಕಣವರ, ಚಿತ್ರದುರ್ಗದ ಕೆ.ಎಂ. ಬಜ್ಜಪ್ಪ ಈ ಬಾರಿಯ ಪ್ರಶಸ್ತಿಗೆ ಪಾತ್ರರಾದರು.
ಈ ಸಂದರ್ಭ ಮಾತನಾಡಿದ ಶಾಸಕ ರಿಜ್ವಾನ್ ಅರ್ಷದ್, ಸ್ವಾತಂತ್ರ ಚಳವಳಿಯ ವೇಳೆ ಮಹಾತ್ಮಗಾಂಧಿಯವರು ಸ್ವದೇಶಿ ಚಳವಳಿ ಸಮಯದಲ್ಲಿ ವಿದೇಶಿ ವಸ್ತುಗಳ ಬಹಿಷ್ಕಾರ, ದೇಶಿ ವಸ್ತುಗಳ ಬಳಕೆಗೆಗೆ ಕರೆ ನೀಡಿದರು. ಖಾದಿ ವಸ್ತುಗಳು ಕೇವಲ ಬಟ್ಟೆ ಮಾತ್ರವಲ್ಲ ಸ್ವಾತಂತ್ರ್ಯ ಮತ್ತು ಹೋರಾಟದ ಪ್ರತೀಕ. ಇದರ ಹಿಂದೆ ನೇಕಾರರ ಕೊಡುಗೆ ಸಾಕಷ್ಟಿದೆ ಎಂದು ತಿಳಿಸಿದರು.
ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಮಾತನಾಡಿ, ಖಾದಿ ವಸ್ತ್ರಗಳು ಭಾರತೀಯರಿಗೆ ಅಂತಾರಾಷ್ಟ್ರೀಯ ಗುರುತು ನೀಡಿವೆ. ವಿದೇಶಗಳು ಭಾರತೀಯರನ್ನು ಖಾದಿ ಉತ್ಪನ್ನಗಳ ಮೂಲಕ ಗುರುತಿಸುತ್ತಾರೆ. ಪಾರಂಪರಿಕ ನೇಕಾರ ವೃತ್ತಿಯನ್ನು ಸಂರಕ್ಷಿಸುವ ಮೂಲಕ ಈ ಐತಿಹಾಸಿಕ ಮಹತ್ವವನ್ನು ಉಳಿಸಿಕೊಳ್ಳಬೇಕು ಎಂದರು.
ಪ್ರಶಸ್ತಿ ಪುರಸ್ಕೃತ ನೇಕಾರ ಕೆ.ಎಂ. ಬಜ್ಜಪ್ಪ ಕರಕುಶಲ ಅಭಿವೃದ್ದಿ ನಿಗಮದ ಪ್ರೋತ್ಸಾಹ ಮತ್ತು ಸಹಕಾರದಿಂದ ಕಂಬಳಿ ಮತ್ತು ಕೈಮಗ್ಗ ಕ್ಷೇತ್ರದಲ್ಲಿ ಸಾಧನೆ ಮಾಡಲು ಸಾಧ್ಯವಾಯಿತು ಎಂದು ತಿಳಿಸಿದರು. ಕರ್ನಾಟಕ ಉಣ್ಣೆ ಮತ್ತು ಖಾದಿಯೇತರ ಕೈಮಗ್ಗ ನೇಕಾರರ ಸಂಘದ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನಪ್ಪ, ಪ್ರಶಸ್ತಿ ನೀಡಿ ಗೌರವಿಸಿರುವುದು ನಶಿಸಿಹೋಗುತ್ತಿರುವ ಪಾರಂಪರಿಕೆ ನೇಕಾರ ವೃತ್ತಿಗೆ ನೀಡಿದ ಪ್ರೋತ್ಸಾಹ ಇದಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಎಂ.ಡಿ.ಲಕ್ಷ್ಮಿ ನಾರಾಯಣ್ ಮತ್ತಿತರರು ಉಪಸ್ಥಿತರಿದ್ದರು.




