ಕರ್ನಾಟಕ ವಿಧಾನಸಭಾ ಚುನಾವಣೆಗೆ ಕೌಂಟ್ಡೌನ್ ಶುರುವಾಗಿದೆ. ಚುನಾವಣೆ ಘೋಷಣೆಗೂ ಮುನ್ನವೇ ಕಳೆದ ಎರಡು ಮೂರು ತಿಂಗಳಿಂದ ಜನಪ್ರತಿನಿಧಿಗಳು ತಮ್ಮ ತಮ್ಮ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ. ದಿನ ಹತ್ತಿರ ಬರುತ್ತಿದ್ದಂತೆ ಟಿಕೆಟ್ ಆಕಾಂಕ್ಷಿಗಳ ಓಡಾಟವೂ ಶುರುವಾಗಿದ್ದು, ಈ ಮಧ್ಯೆ ರಾಜ್ಯ ಚುನಾವಣಾ ಆಯೋಗವು ರಾಜಕಾರಣಿಗಳಿಗೆ ಮತ್ತಷ್ಟು ಟೆನ್ಶನ್ ನೀಡಿದೆ.
ರಾಜ್ಯ ವಿಧಾನಸಭಾ ಚುನಾವಣೆಗೆ ಇನ್ನು ಬೆರಳೆಣಿಕೆಯ ದಿನಗಳು ಮಾತ್ರ ಬಾಕಿಯಿದ್ದು, ಯಾವ ಕ್ಷಣದಲ್ಲಾದರೂ ನೀತಿ ಸಂಹಿತೆ ಘೋಷಣೆ ಆಗಬಹುದು ಎಂದು ರಾಜ್ಯ ಚುನಾವಣಾ ಆಯೋಗ ಹೇಳಿದೆ. ಈ ಬಗ್ಗೆ ಜಿಲ್ಲಾ ಚುನಾವಣಾ ಅಧಿಕಾರಿಗಳು, ಬಿಬಿಎಂಪಿ ಮುಖ್ಯ ಆಯುಕ್ತರು ಮತ್ತು ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಪತ್ರದ ಮೂಲಕ ನೋಟಿಫಿಕೇಶನ್ ಕಳಿಸಿರುವ ರಾಜ್ಯ ಚುನಾವಣಾ ಆಯೋಗ, ಈಗಿನಿಂದ ಯಾವುದೇ ಕ್ಷಣದಲ್ಲೂ ಚುನಾವಣಾ ಘೋಷಣೆ ಆಗುವ ಸಾಧ್ಯತೆ ಇದ್ದು, ತಕ್ಷಣ ಎಲ್ಲದಕ್ಕೂ ಸಿದ್ಧರಾಗಿ ಇರುವಂತೆ ಸೂಚನೆ ನೀಡಿದೆ.
ಚುನಾವಣಾ ಆಯೋಗದ ಆದೇಶದಲ್ಲಿ ಏನಿದೆ? : ರಾಜ್ಯ ಚುನಾವಣಾ ಆಯೋಗ ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ‘ಕರ್ನಾಟಕ ರಾಜ್ಯ ವಿಧಾನಸಭೆಗೆ ಏಪ್ರಿಲ್ ಮತ್ತು ಮೇ ತಿಂಗಳ ನಡುವೆ ಸಾರ್ವತ್ರಿಕ ಚುನಾವಣೆ ನಡೆಯಲಿದೆ. ಈ ಹಿನ್ನೆಲೆ ಕೇಂದ್ರ ಚುನಾವಣಾ ಆಯೋಗದಿಂದ ಈಗಿನಿಂದ ಯಾವ ಕ್ಷಣದಲ್ಲಾದರೂ ಚುನಾವಣೆ ಘೋಷಣೆ ಆಗಬಹುದು. ಹೀಗಾಗಿ ಕೆಲವು ಮಾಡಲೇಬೇಕಾದ ಚುನಾವಣಾ ಪೂರ್ವ ಸಿದ್ಧತೆಯನ್ನು ಕಡ್ಡಾಯವಾಗಿ ಚುನಾವಣೆ ಘೋಷಣೆಗೆ ಮುನ್ನವೇ ಮಾಡಿ ಮುಗಿಸಬೇಕು’ ಎಂದು ಸೂಚಿಸಲಾಗಿದೆ.
ಅಲ್ಲದೇ, ಇದರೊಂದಿಗೆ ಚುನಾವಣಾ ನೀತಿ ಸಂಹಿತೆಯ ಮಾದರಿ ಜಾರಿ ಸ್ವರೂಪವನ್ನು ಲಗತ್ತಿಸಲಾಗಿದ್ದು, ಚುನಾವಣೆ ಘೋಷಣೆಯಾದ ತತ್‌ಕ್ಷಣದಿಂದ ಜಿಲ್ಲಾ ಚುನಾವಣಾ ಅಧಿಕಾರಿಗಳು ಕೂಡಲೇ ಕ್ರಮ ಕೈಗೊಳ್ಳುವಂತೆ ತಿಳಿಸಲಾಗಿದೆ. ಇನ್ನು ಮಾರ್ಚ್ 27 ಅಥವಾ 28ರಂದು ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಘೋಷಣೆಯಾಗುವ ಸಾಧ್ಯತೆ ಇದೆ, ಈಗಾಗಲೇ ಒಂದು ಹಂತದಲ್ಲಿ ಎಲ್ಲಾ ಜಿಲ್ಲೆಗಳಲ್ಲಿ ಚುನಾವಣಾ ಪೂರ್ವ ತಯಾರಿಗಳನ್ನು ಮಾಡಲಾಗುತ್ತಿದೆ.