ತೆಂಗು ಬೆಳೆ ಬಾಧಿಸುವ ಕೀಟಗಳನ್ನು ಹತೋಟಿಗೆ ತರಲು ಕ್ರಮವಹಿಸುವುದಾಗಿ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಶಾಸಕ ಸಿ.ಪಿ.ಯೋಗೇಶ್ವರ್ ತಿಳಿಸಿದ್ದಾರೆ. ರಾಮನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಕಾಸರಗೋಡು ತೆಂಗು ಬೆಳೆ ಉತ್ಪಾದನೆಯ ಸಂಶೋಧನಾ ವಿಭಾಗ ಹಾಗೂ ಜಿಲ್ಲಾ ತೋಟಗಾರಿಕೆ ಇಲಾಖೆ ವತಿಯಿಂದ ತೆಂಗಿನಲ್ಲಿ ಕಪ್ಪು ತಲೆ ಹುಳು, ಬಿಳಿ ನೊಣದ ನಿಯಂತ್ರಣ ಹಾಗೂ ತೆಂಗು ಬೆಳೆಯ ಅಭಿವೃದ್ಧಿ ಕುರಿತು ವಿಜ್ಞಾನಿಗಳ ತಂಡದೊಂದಿಗೆ ಹಮ್ಮಿಕೊಳ್ಳಲಾಗಿದ್ದ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ತೆಂಗಿಗೆ ರೋಗಬಾಧೆ ಎಲ್ಲಾ ಕಡೆಯು ಇದ್ದು, ಇದರ ಬಗ್ಗೆ ಅರಿವು ಮೂಡಿಸಲು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಕಾರ್ಯಕ್ರಮವನ್ನು ಏರ್ಪಡಿಸಲಾಗುವುದು. ಜಿಲ್ಲೆಯಲ್ಲಿ ತೆಂಗು ಬೆಳೆ ಅಭಿವೃದ್ಧಿಗಾಗಿ ರೈತರು ಆರ್ಥಿಕವಾಗಿ ಶಕ್ತರಾಗಬೇಕು. ನೀರಾ ಉತ್ಪಾದನೆಯನ್ನು ಹೆಚ್ಚಿಸುವ ದೃಷ್ಟಿಯಿಂದ ಅನೇಕ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದರು. ಚನ್ನಪಟ್ಟಣದ ತಿಟ್ಟಮಾರನಹಳ್ಳಿಯಲ್ಲಿ ಪ್ಲಾಂಟೆಷನ್ ಮಾಡಲು ಕ್ರಮವಹಿಸಲಾಗಿದೆ. ಇದರಿಂದ ಸುತ್ತಮುತ್ತಲಿನ ರೈತರಿಗೆ ಅನುಕೂಲವಾಗಲಿದೆ ಎಂದು ಶಾಸಕ ಸಿ.ಪಿ.ಯೋಗೇಶ್ವರ್ ತಿಳಿಸಿದರು.