ಭೂತಾನ್ ನಿಂದ 17 ಸಾವಿರ ಟನ್ ಅಡಿಕೆಯನ್ನು ಆಮದು ಮಾಡಿಕೊಳ್ಳುವ ಮೂಲಕ ಕೇಂದ್ರ ಸರ್ಕಾರದ ನಿರ್ಧಾರವು ಕರಾವಳಿಯ ಅಡಿಕೆ ಬೆಳೆಗಾರರ ಹಿತಕ್ಕೆ ವಿರುದ್ಧವಾಗಿದೆ. ತಕ್ಷಣವೇ ಅಡಿಕೆ ಆಮದು ರದ್ದು ಮಾಡಬೇಕು ಎಂದು ಕೆ.ಪಿ.ಸಿ.ಸಿ ಸಂಯೋಜಕ ಕಾವು ಹೇಮನಾಥ ಶೆಟ್ಟಿ ಒತ್ತಾಯಿಸಿದ್ದಾರೆ.
ಪುತ್ತೂರಿನಲ್ಲಿ ಪ್ರೆಸ್ ಕ್ಲಬ್ ನಲ್ಲಿ ಮಾತನಾಡಿದ ಅವರು ಅಡಿಕೆ ಬೆಲೆ 500 ರೂಪಾಯಿ ಗಡಿ ದಾಟಿದರೂ, ಉತ್ಪಾದನಾ ವೆಚ್ಚ ಇದಕ್ಕಿಂತಲೂ ಹೆಚ್ಚಾಗಿದೆ. ಗೊಬ್ಬರ ಸೇರಿ ಎಲ್ಲಾ ಸಾಮಾಗ್ರಿಗಳ ಬೆಲೆಯೂ ಹೆಚ್ಚಾಗಿದ್ದು, ಅಡಿಕೆಗೆ ಇನ್ನಷ್ಟು ಬೆಲೆ ಏರಿಸುವ ಅಗತ್ಯವಿದೆ ಎಂದರು.ಉತ್ಪಾದನಾ ವೆಚ್ಚದಿಂದ ಕಂಗೆಟ್ಟ ಈ ಸಮಯದಲ್ಲಿ ಕೇಂದ್ರ ಸರ್ಕಾರ ಭೂತಾನ್ ಸೇರಿದಂತೆ ವಿದೇಶಗಳಿಂದ ಅಡಿಕೆಯನ್ನು ಆಮದು ಮಾಡಲು ಮುಂದಾಗಿದೆ. ಇದರಿಂದಾಗಿ ಕರಾವಳಿಯಲ್ಲಿ ಬೆಳೆಯುವ ಅಡಿಕೆಯ ಬೆಲೆಯಲ್ಲಿ ಏರಿಳಿತವಾಗಲಿದೆ.
ಗೃಹ ಸಚಿವ ಅಮಿತ್ ಶಾ ಮಗ ಜಯ ಶಾ ಆಡಳಿತದ ಕಂಪನಿ ಈ ರೀತಿಯ ಆಮದು ಪ್ರಕ್ರಿಯೆಯಲ್ಲಿ ತೊಡಗಿಕೊಂಡಿದ್ದು, ಇದನ್ನು ಪ್ರಶ್ನೆ ಮಾಡುವ ತಾಕತ್ತು ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲ್, ಉಡುಪಿ-ಚಿಕ್ಕಮಗಳೂರು ಶೋಭಾ ಕರಂದ್ಲಾಜೆಯವರಿಗಿಲ್ಲ ಎಂದರು. ಕೇಂದ್ರ ಸರ್ಕಾರ ಕೂಡಲೇ ಈ ಆಮದು ಪ್ರಕ್ರಿಯೆಯನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದರು.