ಅದು ಮಾವಿನಕೊಡುಗೆ ವಿಶಾಲ್ ಚಿಕ್ಕಿ ಮನೆ.
ಬೆಳಗಾತ ವಿಶಾಲ್ ಚಿಕ್ಕಿಸೊಸೆ ಸುಷ್ಮಿತ ದೇವರ ಪೂಜೆಗೆ ಹೂ ಕೊಯ್ಯೊಕೊಂಡು ಮನೆಯೊಳಗೆ ಬಂದವಳು…
ದೇವರ ಮನೆ ಎದುರು ಕೂತು ವಿಷ್ಣು ಸಹಸ್ರನಾಮ ಓದ್ತಾ ಕೂತಿದ್ದ ವಿಶಾಲ್ ಚಿಕ್ಕಿ ಗೆ…. “ಅತ್ತೆ ಎದೆ ಗಟ್ಟಿ ಮಾಡಕೊಳಿ..
ಒಂದು ಕೆಟ್ಟ ಸುದ್ದಿ ಹೇಳ್ತೀನಿ… ” ಅಂದಳು.
ವಿಶಾಲ್ ಚಿಕ್ಕಿ ಗೆ ಸೊಸೆ ಕೆಟ್ಟ ಸುದ್ದಿ ಹೇಳುವ ಮೊದಲೇ ಟೀಸರ್ ನಲ್ಲೇ ಇಷ್ಟು ಭಯ ಬೀಳಿಸುತ್ತಾಳೆ. ಇನ್ನ ಸುದ್ದಿ ಎಷ್ಟು ಭಯಂಕರ ಇರಬಹುದು ಅಂತ ಗಾಭರಿ ಯಾಗಿ … “ತಡಿ ಸುಷ್ಮ ಒಂದು ಬಿಪಿ ಮಾತ್ರೆ ಷುಗರ್ ಮಾತ್ರೆ ತಗೊಂಡು ಬಿಡ್ತೀನಿ ” ಅಂತ ಹೇಳಿ ಮಾತ್ರೆ ತಗೊಂಡು
“ಹಾಂ ಈಗ ಹೇಳು” …ಅಂದರು.
ಸೊಸೆ ಸುಷ್ಮಿತಾ – “ಜಲಜಕ್ಕ ಹೋಗ್ಬಿಟ್ರು”….. ಅಂತ ಮ್ಲಾನವದನ ದಿಂದ ಹೇಳಿ ಮತ್ತೆ ಪ್ರಶ್ನೊತ್ತರಕ್ಕೆ ಅಲ್ಲಿ ನಿಲ್ಲದೇ ಸೀದ ಉಪ್ಪರಿಗೆಯ ತನ್ನ ರೂಮಿ ಗೆ ಯೋಗ ಧ್ಯಾನ ಮಾಡಲು ಹೋಗೇ ಬಿಟ್ಟಳು.
ವಿಶಾಲ್ ಚಿಕ್ಕಿ ಮಾತ್ರೆ ತಗೊಂಡ್ರೂ ಬಾಯಿ ಚಪ್ಪೆ ಚಪ್ಪೆ ಯಾಗಿ ನಿಧಾನವಾಗಿ ಎದ್ದು ಬಚ್ಚಲಿಗೆ ಹೋಗಿ ಬಂದು ಕುರ್ಚಿ ಮೇಲೆ ಕೂತು ಮೊಬೈಲ್ ತಗೊಂಡು ತನ್ನ ಬಂಧು ಬಳಗ ದವರಿಗೆಲ್ಲ ಜಲಜಕ್ಕ ನ ಸಾವಿನ ಸುದ್ದಿ ಪ್ತಸಾರ ಮಾಡತೊಡಗಿದರು.
” ಎಷ್ಟು ಗಟ್ಟಿ ಗಾಡಾಗಿದ್ದಳು ಜಲಜ…
ಎಲ್ಲೇ ಊಟದ ಮನೆಲಿ ಸಿಕ್ಕರೂ ನನ್ನ ಹುಡುಕಿಕೊಂಡು ಬಂದು ಮಾತಾಡಸಿ ನಮಸ್ಕಾರ ಮಾಡಿ ಹೋಗ್ತಿದ್ದಳು… ಮಳೆಗಾಲ ಶುರು ಸುರಿಗೆ ನಾನು ಜಲಜ ನ ಮನೆಗೆ ಹೋಗಿ ಆ ರಾಕ್ಷಸ ಕಮಲ ಡೇರೆ ಗಿಡ ತಗೊಂಡು ಬಂದಿದ್ದೆ… ಆ ದಾಕ್ಷಾಯಿಣಿ ಮನೆಯಿಂದ ಯಾರೂ ಒಂದೇ ಒಂದು ಡೇರೆ ಬುಡ ತಂದಿರಲಿಲ್ಲ.
ಆದರೆ ಜಲಜ ಹೆಂಗೋ ಬುದ್ದಿವಂತಗೆ ಮಾಡಿ ದಾಕ್ಷಾಯಿಣಿ ಹತ್ರ ಒಂದು ಬುಡ ತಗೊಂಡು ಬಂದು ಅದರಲ್ಲಿ ಹತ್ತು ಬುಡ ಮಾಡಿ ಇಡೀ ಊರು ನಾಡಿಗೆಲ್ಲ ಹಂಚಿದಳು ಪುಣ್ಯಾತ್ತ್ ಗಿತ್ತಿ… ಅಷ್ಟು ಒಳ್ಳೆಯವಳಿಗೆ ಈ ಭೂಮಿ ಋಣ ಮುಗಿದಿದ್ದು ಬಾಳ ಬೇಜಾರಿನ ಸುದ್ದಿ….”
ಅಂತ ಅತ್ತರು….
ಇದು ವಾಟ್ಸಾಪ್ ಯುಗ.
ಕ್ಷಣ ಮಾತ್ರದಲ್ಲಿ “ಜಲಜಕ್ಕ ಹೋಗ್ಬಿಟ್ರು”
ಎಂಬ ಸಾಲು ವೈರಲ್ ಆಗಿಬಿಡ್ತು.
ಜಲಜಕ್ಕ ನ ಸಾವಿನ ಸುದ್ದಿ ಕನ್ಫರ್ಮ್ ಮಾಡೋದು ಹೇಗೆ…?
ಜಲಜಕ್ಕ ನ ಬಂಧು ಮಿತ್ರರಿಗೆಲ್ಲಾ ಈ ಸಮಸ್ಯೆ ಗೆ ಉತ್ತರ ಕಂಡುಕೊಳ್ಳುವ ಬಗೆ ತಿಳಿಯದಾತು.
ಜಲಜಕ್ಕ ನ ಮನೆ ಎಲ್ಲಾ ಮಲೆನಾಡಿಗರ ಮನೆಯಂತೆ “ಒಂಟಿ ಮನೆ” .ಈ ಒಂಟಿ ಮನೆ ಊರಿಗೆ ಶುಂಠಿಕೊಡಿಗೆ ಎಂದು ಹೆಸರು. ಶುಂಠಿ ಕೊಡಿಗೆ ಜಲಜಕ್ಕ ನ ಒಬ್ಬ ಮಗಳನ್ನು ಯು ಎಸ್ ಎ ಗೆ ಕೊಟ್ಟರೆ. ಇನ್ನೊಬ್ಬ ಮಗ ದೆಹಲಿ ಯಲ್ಲಿ ಇದ್ದಾನೆ. ಮನೆಯಲ್ಲಿ ಜಲಜಕ್ಕ ಮತ್ತು ಜಲಜಕ್ಕ ನ ಗಂಡ ಮಾತ್ರ ಇರೋದು.
ಜಲಜಕ್ಕ ಎಷ್ಟು “ಚುರ್ಕೋ ” ಅಷ್ಟೇ “ಬೊಡ್ಡು” ಜಲಜಕ್ಕ ನ ಗಂಡ. ಅವರು ಮೊಬೈಲ್ ಗಿಬೈಲು ಮುಟ್ಟೋಲ್ಲ. ಜಲಜಕ್ಕ ನಿಗೇ ಕರೆ ಮಾಡಿ ನೀವು ಸತ್ತು ಹೋಗಿದೀರಾ ಬದುಕಿದ್ದೀರ…? ಅಂತ ಕೇಳೋಕೇ ಆಗುತ್ತದ…? ಯಾರೋ ಆ ಪ್ರಯತ್ನ ವನ್ನೂ ಮಾಡಿದರು.
ಜಲಜಕ್ಕನ ಮೊಬೈಲ್ ಫೋನ್ ವ್ಯಾಪ್ತಿ ಪ್ರದೇಶದಿಂದ ಹೊರಗೆ ಹೋಗಿತ್ತು.
ಸಾವಿನ ಸುದ್ದಿ ಕೇಳಿದ ಮೇಲೆ ಸುಮ್ಮನೆ ಮನೇಲಿ ಕೂರದೆಂಗೆ..?
ಬಂಧು ಮಿತ್ರ ರ ಡಸ್ಟರ್, ಕ್ಲೈಂಬರ್, ಐ ಟೆನ್ , ಅಲ್ಟೋ , ಥಾರು ಕಾರು ಗಳು ಜಲಜಕ್ಕ ನ ಮನೆಯತ್ತ ಸಾಗತೊಡಗಿದವು….
ಜಲಜಕ್ಕ ಮನೆಯಂಗಳದಲ್ಲಿ ನಿರುಮ್ಮಳವಾಗಿ ಗಾರ್ಡನಿಂಗ್ ಮಾಡ್ತಿದ್ದರು. ಜಲಜಕ್ಕ ನಿಗೆ
ಬೆಳ್ ಬೆಳಿಗ್ಗೆ ಮನೆ ಬುಡದಲ್ಲಿ ಊರು ಮನೆಯವರ ಕಾರು ಬರ್ತಿರೋದು ನೋಡಿ ಭಯ ಆಶ್ಚರ್ಯ ಆತು.
ಊರು ಮನೆ ಹತ್ತಿರದ ನೆಂಟರಿಷ್ಟರಿಗೂ ಜಲಜಕ್ಕ ನ ಜೀವಂತ ನೋಡಿ ಆಶ್ಚರ್ಯ.
ಹೀಗೆ ಸಾವಿನ ಸುಳ್ಳು ಸುದ್ದಿ ಹರಡಿದರೆ ಬದುಕಿದ್ದವರಿಗೆ ಆಯಸ್ಸು ಜಾಸ್ತಿಯಾಗು ತ್ತಂತೆ.
ಆದರೂ ಜಲಜಕ್ಕ ನ “ಜಲಜಕ್ಕ ನೀವು ಬದುಕಿದ್ದೀರ…? ಸತ್ಯ ವಾಗಲೂ ನೀವು ಬದುಕಿದ್ದೀರ..? ಬೇಜಾರು ಮಾಡಕೋ ಬೇಡಿ.. ನೀವು ಸತ್ತು ಹೋದರಿ ಅಂತ ಸುದ್ದಿ ಬಂತು ಅದಕ್ಕೆ ಬಂದ್ವಿ… ” ಅಂತ ಹೇಳೋಕೆ ಆಗುತ್ತಾ…?
ಬಂದ ಬಂಧುಗಳು ಹೀಗೆ ಇಲ್ಲೇ ಎಲ್ಲೋ ಬಂದಿದ್ವಿ ಹಂಗೇ ನಿಮ್ಮ ನೋಡಿಕೊಂಡು ಹೋಗೋಣ ಅಂತ ಬಂದ್ವಿ .. ” ಅಂತ ಹೇಳಿ ಜಲಜಕ್ಕ ಕೊಟ್ಟ ಕಾಫಿ ಕುಡಿದು ವಾಪಾಸಾದರು.
ಇತ್ತ…
ವಿಶಾಲ್ ಚಿಕ್ಕಿ ಸೊಸೆ ಯೋಗ ಧ್ಯಾನ ಪ್ರಾಣಾಯಾಮ ಮುಗಿಸಿ ಮೊಬೈಲ್ ಡಾಟ ಆನ್ ಮಾಡಿದರೆ … ಬಂಧುಗಳಿಂದ
ಮೊದಲಿಗೆ “ಜಲಜಕ್ಕ’ ಹೋಗ್ಬಿಟ್ರು ” ಅಂತ ಸುದ್ದಿ ಒಂದು ಕಡೆಯಿಂದ ಬಂದರೆ ನಂತರ
“ಇಲ್ಲ ಜಲಜಕ್ಕ ಆರಾಮಿದ್ದಾರೆ. ಸುಳ್ಳು ಮಾಹಿತಿಗೆ ವಿಷಾಧನೆಗಳು … ” ಎನ್ನುವ ಸಮಜಾಯಿಷಿ.
“ಅರೆ ಏನಾಗ್ತಿದೆ ಇಲ್ಲಿ…!? ” ಅಂತ ಸುಷ್ಮಿತ ತಲೆ ಕೆಡಿಸಿಕೊಂಡು ಉಪ್ಪರಿಗೆಯಿಂದ ಇಳಿ ದು ಅಡಿಗೆ ಮನೆ ಊಟದ ಹಾಲ್ ಗೆ ಬಂದರೆ ಅಲ್ಲಿ ಅತ್ತೆ ಕೋಪ ಮಾಡಿಕೊಂಡು ಸೊಸೆ ಸುಷ್ಮಿತಾ ಳಿಗೆ
“ನೀನು ಯಾಕೆ ಜಲಜಕ್ಕ ಹೋದರು ” ಅಂತ ಸುಳ್ಳು ಸುದ್ದಿ ಹೇಳದೇ ಅಂತ ತರಾಟೆ ತಗೊಂಡರು.
ಸುಷ್ಮಿತ ಕಕ್ಕಾಬಿಕ್ಕಿಯಾದಳು…
“ಅಲ್ಲ ಅತ್ತೆ ಜಲಜಕ್ಕ ಹೋದರೆ ಹೋದರೂ ಅಂತಲೇ ಹೇಳೋಕೆ ಆಗೋದಲ್ವ….?”
ವಿಶಾಲ್ ಚಿಕ್ಕಿ – ಅಯ್ಯೋ ಜಲಜ ಎಲ್ಲಿ ಹೋಗೋದು…? ಜಲಜಕ್ಕ ಗಟ್ಟಿ ಗಾಡಾಗಿ ದಾಳಂತೆ. ನೀ ಜಲಜಕ್ಕ ಹೋದಳು ಅಂತ ಹೇಳಿದ್ದನ್ನ ನಾ ನಂಬಿ ಕೆಳಗಿನ ಮನೆಗೆ ಕುಂಬಾರಕುಡಿಗೆಗೆ ,ಶುಂಠಿಕುಡಿಗೆಗೆ,
ಬಸರೀಕಟ್ಟೆಗೆ , ಅಗಳಗಂಡಿಗೆ , ಸುಂಕುರ್ಡಿಗೆ , ತೋಟಕೋಟೆಗೆ ಎಲ್ಲಾ ಕಡೆಗೂ ಸುದ್ದಿ ಬ್ರೇಕ್ ಮಾಡದೆ ಮಾರಾಯ್ತಿ. ಅವರೆಲ್ಲ ಕಾರ್ ಹಾಕಿಕೊಂಡು ಜಲಜಕ್ಕ ನ ಮನಿಗೆ ಹೋಗಿ ಜಲಜಕ್ಕ ಮಾಡಿಕೊಟ್ಟ ಕಾಪಿ ಕುಡುಕೊಂಡು ವಾಪಸು ಮನೆಗೆ ಬಂದು ನಂಗೆ ಫೋನ್ ಮಾಡಿಕೊಂಡು ಬಾಯಿಗೆ ಬಂದಂಗ್ ಬೈತಿದಾರೆ…?ನಿಂಗೆಂತಾಗಿದೆ ಮರೇತಿ …? ಹಿಂಗೆ ಜೀವಂತ ಇರೋರನ್ನೆಲ್ಲಾ ಸತ್ತು ಹೋದರು ಅಂತ ಸುಳ್ಳು ಸುದ್ದಿ ಹೇಳ್ತಿ…?”
ಸುಷ್ಮಿತಾ – ಅಯ್ಯೋ ಅತ್ತೆ ನಾನು ಶುಂಠಿಕೊಡಿಗೆ ಜಲಜತ್ತೆ ಸತ್ತು ಹೋದರೂ ಅಂತ ನಾನೆಲ್ಲಿ ಹೇಳದೇ….?
ಶುಂಠಿಕೊಡಿಗೆ ಜಲಜತ್ತೆ ಕೊಟ್ಟ “ರಾಕ್ಷಸ ಕಮಲ ಡೇರೆ” ಗಿಡಕ್ಕೆ ನೀವು “ಜಲಜಕ್ಕ ನ ಡೇರೆ ” ಅಂತ ನಾಮಕರಣ ಮಾಡಿದ್ದರಲ್ಲ
…. ಆ ಡೇರೆ ಗಿಡ ಸುತ್ತು ಹೋಯಿತು ಎನ್ನುವುದಕ್ಕೆ “ಜಲಜಕ್ಕ ಹೋದರು ” ಅಂತ ಹೇಳದೆ…” ಅಂದಳು ಸೊಸೆ ಸುಷ್ಮಿತ ನಿರಪರಾಧಿಭಾವದಿಂದ.
ವೇ ಬ್ರಂ ಶ್ರೀ ಸದಾಶಿವ ಭಟ್ಟರ ಮಹಾಭಾರತ ಕೃತಿಯ ಉಪನ್ಯಾಸ ವನ್ನು ಡೈಲಿ ರೆಕಾರ್ಡ್ ಮಾಡಿ ವಾಟ್ಸಾಪ್ ಗುಂಪಿನಲ್ಲಿ, ವೈಯಕ್ತಿಕ ವಾಗಿ ಬಿಡ್ತಿದ್ದರು.
ಇದ್ಯಾವ ದಾವಂತದಲ್ಲೂ ಭಾಗಿಯಾಗದೇ ನೆಮ್ಮದಿಯಾಗಿ ವಿಶಾಲ್ ಚಿಕ್ಕಿ ಯಜಮಾನರು
“ವಿಶ್ವನಾಥ ಚಿಕ್ಕಪ್ಪ ” ಸದಾಶಿವ ಭಟ್ಟರ ಆಡಿಯೋ ಹಾಕಿಕೊಂಡು ಅಲೇಸ್ತಾ (ಕೇಳ್ತಾ) ಕಾಫಿ ಕುಡಿತಿದ್ದರು.
ಇವತ್ತಿನ ” ಭಾರತದ ಭಾಗ “ಅಶ್ವಥ್ಥಾಮ ಹತಃ ಕುಂಜರಃ “…
ಮಲೆನಾಡಿನಲ್ಲಿ ಬಗೆ ಬಗೆಯ ಡೇರೆ ಹೂವಿನ ಗಿಡವನ್ನು ಗುರುತಿಸಿಟ್ಟುಕೊಳ್ಳಲು ಆ ಡೇರೆ ಹೂವಿನ ಗಿಡ ಕೊಟ್ಟವರ ಹೆಸರನ್ನೇ ಇಡುವ ಪದ್ದತಿ ಯಿದೆ.
ವಿಶಾಲ್ ಚಿಕ್ಕಿ ಜಲಜಕ್ಕ ಕೊಟ್ಟ ರಾಕ್ಷಸ ಕಮಲದ ಗಿಡಕ್ಕೆ ” ಜಲಜಕ್ಕ ನ” ಹೆಸರನ್ನೇ ನಾಮಕರಣ ಮಾಡಿದ್ದು ಅದು ಸತ್ತು ಹೋಗಿತ್ತು. ಅದನ್ನು ರಾಕ್ಷಸ ಕಮಲದ ಡೇರೆ ಗಿಡ ಸತ್ತು ಹೋತು ಎನ್ನುವುದರ ಬದಲಾಗಿ ಸೊಸೆ ಸುಷ್ಮಿತ “ಜಲಜಕ್ಕ ಹೋದರು ” ಅಂತ ಹೇಳಿ ಇಷ್ಟು ಅನಾಹುತ ಆತು.
ಜಲಜಕ್ಕ ನ ಆಯಸ್ಸು ಜಾಸ್ತಿ ಯಾತು.
ವಿಶಾಲ್ ಚಿಕ್ಕಿ ಗರ ಬಡಿದು ಹೋಗಿದ್ದರು. ಇಷ್ಟೆಲ್ಲಾ ಆದರುಮೇಲೆ
ಜಲಜಕ್ಕ ನ ಹತ್ತಿರ ಇನ್ನೊಂದು ರಾಕ್ಷಸ ಕಮಲ ಡೇರೆ ಬುಡ ಹೆಂಗೆ ಕೇಳೋದು ಎನ್ನುವ ಪ್ರಶ್ನೆ ಕೊರೆಯತೊಡಗಿತು.