ಗೋ…ಗೋ…. ಗೋಪಾಲ ಭಟ್ಟರ ಕಥೆ | ಕಾಲ್ಪನಿಕ ಕಥೆ

December 29, 2023
3:58 PM
ಗೋವಿನಕುಡುಗೆ ಗೋವಿಂದರಾಮ ಭಟ್ರ ಹಿರಿಯ ಪುತ್ರ ಗೋಪಾಲ ಭಟ್ಟರು ಹೆಸರಿಗೆ ತಕ್ಕಂತೆ "ಗೋ" ಪಾಲ ರೇ.. ಗೋವೆಂದರೆ ಗೋಪಾಲ ಭಟ್ರು. ಗೋವು ಅಂದರೆ ಕಮರ್ಷಿಯಲ್ ಗೋವು ಅಲ್ಲ... ಶುದ್ಧ ಮಲೆನಾಡು ಗಿಡ್ಡ ..!! ಹೆಚ್ಚು ಹಾಲಕೊಡೋಲ್ಲ.. ಹಾಲು ಮೂತ್ರ ಎಲ್ಲಾ ಶ್ರೇಷ್ಠ... ಅಮೂಲ್ಯ ಅಮೃತ ಸಮಾನ .. ಆದರೆ ಯಾವುದೇ ಗೋ ಉತ್ಪನ್ನ ಕ್ಕೂ ಬೆಲೆ ಇಲ್ಲ.... ಹೀಗೆ ಎಲ್ಲ ಭಾರತೀಯತೆಗೂ ಅಮೂಲ್ಯ ಅದ್ಬುತ ಅಂತೆಲ್ಲ ಹೇಳಿಯೂ ಬೆಲೆ ಕೊಡದದ್ದು ಒಂದು ಭಾರತೀಯತೆ ಅಲ್ವಾ.? ನಮ್ಮ ಜನ‌ ಒಳ್ಳೆಯದನ್ನು ಪ್ರೋತ್ಸಾಹಿಸೋಲ್ಲ.

ಈಗ ಗೋಪಾಲ ಭಟ್ಟರಿಗೆ ಎಪ್ಪತ್ತೈದು ವರ್ಷ, ಗೋಪಾಲ ಭಟ್ಟರ ಧರ್ಮ ಪತ್ನಿ ರಾದಮ್ಮನಿಗೆ ಎಪ್ಪತ್ತು ವರ್ಷ.ವಯೋ ಸಹಜ ಅನಾರೋಗ್ಯ... ಮೂರು ಮಕ್ಕಳು ; ಇಬ್ಬರು ಗಂಡು ಒಬ್ಬಳು ಹೆಣ್ಣು.. ಎಲ್ರಿಗೂ ಮದುವೆ ಆಗಿದೆ. ಎಲ್ರೂ ಬೆಂಗಳೂರಿನಲ್ಲಿ ಅತ್ಯುತ್ತಮ ಸ್ಥಿತಿ ಯಲ್ಲಿದ್ದಾರೆ.‌ ಹಳ್ಳಿಯಲ್ಲಿ ಇರುವ ಅಪ್ಪ ಅಮ್ಮರ ಬಗ್ಗೆ ಪ್ರೀತಿ ಇದೆ ಪರವಾಗಿಲ್ಲ. ಆದರೆ ಗೋಪಾಲ ಭಟ್ರು ಗಂಡ ಹೆಂಡತಿಗೆ ಬೆಂಗಳೂರು ಹಿಡಿಸೋಲ್ಲ.. ಅದಕ್ಕೊಂದು ಕಾರಣ "ಗೋವುಗಳ ಮೇಲಿನ ವಿಪರೀತ ಮಮಕಾರ " ಮನೆಯಾರೂ ಬಿಟ್ಟು ಬಂದಾರೂ ಕೊಟ್ಟಿಗಿ ಬಿಟ್ಟು ಬರೋಲ್ಲ..

ನೂರಾರು ಗೋವನ್ನು ಸಾಕಿದ್ದ ಭಟ್ಟರ ಕೊಟ್ಟಿಗೆಯಲ್ಲಿ ಇದೀಗ ಎಂಟು ದನಕರುಗಳಿವೆ. ಈಗ ಮಲೆನಾಡಿನ ಎಲ್ಲಾ ಕಡೆಯೂ ಅಷ್ಟೇ. ಗೋಮಾಳ ಮತ್ತು ಗೋವುಗಳ ಆಧಾರವಾಗಿದ್ದ ಗದ್ದೆ ಬೇಸಾಯ ಕಡಿಮೆಯಾಗಿ ಜಾನುವಾರುಗಳಿಗೆ ಮೇವು ಕೊರತೆಯಾಗಿದೆ. ಜೊತೆಗೆ ಹೆಚ್ಚು ಹಾಲು ಕೊಡುವ ಎಚ್ ಎಫ್ ಜರ್ಸಿ ಎಂಬ ಹಾಲು ಕೊಡುವ ಯಂತ್ರಗಳ ಮೇಲಾಟ ಶುರುವಾಗಿದೆ. ಮೇಲ್ವರ್ಗದ ಹೆಚ್ಚಿನವರ ಕುಟುಂಬ ಎರಡನೇ ಮೂರನೇ ತಲೆಮಾರು ಪಟ್ಟಣ ಸೇರಿಯಾಗಿದೆ. ಕೃಷಿ ಜಾನುವಾರು ಮತ್ತು ವೃದ್ದರು ಯಾರಿಗೂ ಬೇಡವಾಗಿದೆ. ಎಲ್ರ ಮನೆಯೂ ಖಾಲಿ... ಕೊಟ್ಟಿಗೆ ಯೂ ಖಾಲಿ ಖಾಲಿ, ಒಂದು ಒಂದೂವರೆ ಜಾನುವಾರು ಗಳಿಗೆ ಕುಸಿದಿದೆ. ಪಾಪ ವೃದ್ದರು ಎಷ್ಟು ಗೋ ಸೇವೆ ಮಾಡಲು ಸಾಧ್ಯ..?

ಇದು ಗೋಪಾಲ ಭಟ್ಟರ ಮನೆಯ ಪರಿಸ್ಥಿತಿ ಕೂಡ. ಒಂದಿನ ಅಚಾನಕ್ಕಾಗಿ ರಾದಮ್ಮ ಅಂಗಳದಲ್ಲಿ ಕಾಲು ಜಾರಿ ಮರಡಿ ಆಸ್ಪತ್ರೆ ಸೇರಿ ಬ್ಯಾಂಡೇಜ್ ಆದ ಮೇಲೆ ಗೋಪಾಲ ಭಟ್ಟರೊಬ್ಬರೇ ಕೊಟ್ಟಿಗೆ ಕೆಲಸಮಾಡಬೇಕಾಯಿತು. ಆಗ ಮಕ್ಕಳು ಅಪ್ಪನಿಗೆ ಜಾನುವಾರುಗಳನ್ನು ಮಾರಿ ಬೆಂಗಳೂರಿನ ನಮ್ಮ ಮನೆಗೆ ಬಂದಿರಿ ಎಂದು ಒತ್ತಾಯ ಮಾಡತೊಡಗಿದರು. ಇದು ತೀರಾ ಅನಿವಾರ್ಯ ಸಂದಿಗ್ದ ಪರಿಸ್ಥಿತಿ.
ಆದರೆ ಗೋವುಗಳ ಜೊತೆಗೆ ಅನ್ಯೋನ್ಯ ಸಂಬಂಧ ಹೊಂದಿದ್ದ ಭಟ್ಟರು ದಂಪತಿಗಳಿಗೆ ಅದು ಅಷ್ಟು ಸುಲಭವಾಗಿ ಜೀರ್ಣಿಸಿಕೊಳ್ಳುವ ವಿಷಯ ವಾಗಿರಲಿಲ್ಲ. ಗೋವುಗಳು ಅವರಮನೆಯ ಕುಟುಂಬ ಸದಸ್ಯರಿದ್ದ ಹಾಗೆ...! ಗಂಗೆ , ಗೌರಿ, ದಾಸಿ , ಚಂದ್ರಿ, ರತ್ನ, ಕುಂಟ, ಗುಂಡ, ಪುಟ್ಟ ,ಯಂಕ.. ಹೀಗೆ...  ಯಾರಿಗಾದರೂ ಯಾರಾದರೂ ಮಕ್ಕಳನ್ನು ಕೊಡಿ, ಮಾರಿ ಅಂದರೆ ಅದು ಸಲೀಸಾ...? ಭಟ್ರಿಗೂ ಆ ಹಸು ಕರುಗಳು ಮಕ್ಕಳ ಸಮಾನವೇ..

ಯಾರನ್ನೋ ನಾಲ್ಕು ದಿನದ ಮಟ್ಟಿಗೆ ಕೊಟ್ಟಿಗೆ ಕೆಲಸಕ್ಕೆ ಗೊತ್ತು ಮಾಡಿ ಭಟ್ಟರು ಜಾನುವಾರುಗಳನ್ನು ದಾಟಿಸುವ ಪ್ರಯತ್ನ ಮಾಡಲು ಶುರುಮಾಡಿದರು. ಈಗ್ಗೆ ನಾಲ್ಕು ವರ್ಷಗಳ ಹಿಂದೆ "ಭಟ್ರೆ ದನಿನ ಮಣಕ ಕೊಡದಿದ್ಯ " ಅಂತ ಮನೆ ಬಾಗಲಿಗೆ ಹುಡುಕಿಕೊಂಡು ಬರ್ತಿದ್ದರು.! ಈಗ ಜಾನುವಾರುಗಳನ್ನು ಉಚಿತವಾಗಿ ಕೊಟ್ಟೂ ಅವುಗಳ ಮೇಲೆ ಹಣ ಕೊಟ್ಟರೂ "ಸಾಕುವವರು" ಸಿಗೋಲ್ಲ. ಅದರಲ್ಲೂ ಈ ಹಳ್ಳಿ ತಳಿಗಳ ಹಸು ಯಾರಿಗೂ ಬೇಡ. ಬಹುಶಃ ತೊಂಬತ್ತು ಭಾಗ ದೇಸಿ ತಳಿಗಳು ಕಟುಕರ ಕೈಯಿಂದ ಆಹಾರ ಹಕ್ಕಿನವರ ಹೊಟ್ಟೆ ಸೇರಿಯಾಗಿದೆ....!!! ಇನ್ನು ಹತ್ತು ವರ್ಷಗಳಲ್ಲಿ ಖಂಡಿತವಾಗಿಯೂ ಜನಸಾಮಾನ್ಯರ ಯಾರ ಮನೆಯಲ್ಲೂ ದೇಸಿ ತಳಿಗಳ ಗೋವು ಇರೋಲ್ಲ...!!!

ಎಲ್ಲಾ ಕಡೆಯ ಗೋಶಾಲೆಲೂ ಭಟ್ಟರು ವಿಚಾರಿಸಿದರು. ಗೋಶಾಲೆಯಲ್ಲೂ ಜಾಗವೂ ಇಲ್ಲ.! ಆಸಕ್ತಿಯೂ ಹೆಚ್ಚಿನ ಗೋಶಾಲೆಯವರಿಗಿಲ್ಲ.! ಜನ ಯಾವ ಮಟ್ಟಿಗೆ ಗೋವುಗಳನ್ನು ನಿರಾಶ್ರಿತವಾಗಿ ಮಾಡಿದ್ದಾರೆಂದರೆ ಕೆಲವು ಗೋಶಾಲೆಯಲ್ಲಿ ಅವುಗಳನ್ನು ಕಟ್ಟಲು ಅಥವಾ ಕೂಡಲು ಜಾಗವಿಲ್ಲ! ಗೋಶಾಲೆ ಎದುರು ಬೀಡಾಡಿಗಳಾಗಿ ಬಂದು ಹೋಗುವವರ ಕೈ ನೋಡುತ್ತಾ ದೈನ್ಯಭಾವ ವ್ಯಕ್ತಪಡಿಸುತ್ತವೆ... !! ಭಟ್ಟರು ಅಂತಹ ಗೋಶಾಲೆಗಳನ್ನು ನೋಡಿ ನಾವು ಈ ಗೋಶಾಲೆಗೆ ಜಾನುವಾರು ಬಿಟ್ಟರೆ ನಮ್ಮ ಜಾನುವಾರಿನ ಕಥೆಯೂ ಇಷ್ಟೇ... ಅನ್ನಿಸಿತು.. ಯಾವುದೋ ಬಿಳ್ಳನೆಯ ದೊಡ್ಡ ಹೋರಿಗುಡ್ಡದ ದೊಡ್ಡ ಬೀಜ ತೋರಿಸಿ ಹಣ ಮಾಡಿಕೊಳ್ಳುವ ಸಂಭ್ರಮ ಒಂದು ಗೋಶಾಲೆಯದ್ದು...!!! ಭಟ್ಟರ ಗೋಶಾಲೆ ಪರಿಕ್ರಮದ ಪರಿಣಾಮ ಗೋಶಾಲೆಗೆ ಮನೆಯ ಜಾನುವಾರು ಬಿಡೋ ಆಸೆ ಕೈಬಿಡುವಂತಾಯಿತು.

ಭಟ್ರು ಯಾರಿಗಾದ್ರೂ ದನ ಕೊಟ್ಟು ಕೈ ತೊಳಕೊಳೊ ಜಾತಿಯಲ್ಲ. ಅವರಿಂದ ಗೋವು ಪಡೆದವರು ಸಾಕ ಬೇಕು. ತುಂಬಾ ಜನ ಅಯ್ಯ ನಂಗೊಂದು ಕರ ಕೊಡಿ ...‌ ಹೋರಿಕರ ಆದರೂ ಪರವಾಗಿಲ್ಲ " ನಮಗೆ ಮತ್ತೆಂತಕ್ಕೂ ಅಲ್ಲ ಗೊಬ್ಬರುಕ್ಕೆ..." ಅಂತ ಈ ಕಡೆ ಭಟ್ಟರ ಕೊಟ್ಟಿಗೆಯಿಂದ ಹೊರಗೆ ಹೊಡೆದುಕೊಂಡೋಗಿ ಆ ಕಡೆ ಕಟುಕರಿಗೆ ದಾಟಿಸುತ್ತಾರೆ...!? ಅದಕ್ಕಾಗಿ ಭಟ್ರು ಬಹಳ ಜಾಗೃತೆಯಿಂದ ತಲೆ ಕೆಡಿಸಿಕೊಂಡು ಗೋ ಸೇವೆ ಮಾಡುವ ತಮ್ಮಂಥ ಜನಗಳೇ ಬೇಕು ಎಂದು ಹುಡುಕಿದ್ದು. ತುಂಬಾ ಜನ ಗೋ ಸಾಕಣಿಕೆದಾರರ ಥಿಯರಿ ಏನೆಂದರೆ ಗೋವುಗಳು ತಮ್ಮ ಕೈ ತಪ್ಪಿದರೆ ಮುಗೀತು... ಕೊಂಡವ ಏನಾದರೂ ಮಾಡಿಕೊಳ್ಳಲಿ... ಕೆಲ ವ್ಯಾಪಾರಿಗಳು ಇವರಿಂದ ಕೊಂಡ ಹಸುಗಳನ್ನು ಕಡ್ಡಾಯವಾಗಿ ಕಟುಕರಿಗೇ ಕೊಡೋದು... 

ಹಾಗಂತ ಇವರಿಗೆ ವಿಶ್ವಾಸಾರ್ಹವಾಗಿಯೇ ಗೊತ್ತಿರುತ್ತದೆ. ಆದರೂ ಇವರು ಅವರಿಗೇ ಮಾರುತ್ತಾರೆ... ಹೆಚ್ಚಿನ ಗೋವುಗಳು ಹಾಗೆಯೇ ಕಟುಕರ ಕೈ ಸೇರಿದ್ದು... ಈ ಗೋ ವ್ಯಾಪಾರಿಗಳ ಹೆಸರು ಗೋಪಾಲಕೃಷ್ಣ, ಕೃಷ್ಣಮೂರ್ತಿ, ದಿವಾಕರ ಅಂತಲೇ ಇರುತ್ತದೆ. ನಾವು ಗೊಬ್ಬರಕ್ಕೆ ಸಾಕೋರಿಗೇ ಕೊಡೋದು ಅಂತಲೇ ಇವರು ಹೇಳೋದು... ಆದರೆ ಇವರು ಕಟುಕರಿಗೇ ಮಾರೋದು.! ಒಬ್ಬ ಮನುಷ್ಯ ಒಂದು ವರ್ಷ ಕ್ಕೆ ಕೇವಲ ನಾಲ್ಕೇ ನಾಲ್ಕು ಹಸುಗಳನ್ನು ಕೇರಳದ ಕಾಸರಗೋಡು ತಲುಪಿಸಿದರೆ ವರ್ಷವಿಡೀ ಯಾವುದೋ ಅಂಗಡಿ ಕಟ್ಟೆಲಿ ಬೀಡಿ ಸೇದಿಕೊಂಡು ಆರಾಮವಾಗಿ ಕಾಲ ಕಳಿಬೌದು.... ಅಷ್ಟು ಉತ್ಪತ್ತಿ ಸಿಗುತ್ತದೆ.!! ಈ ಹಸುಗಳನ್ನು ಸಾಗಾಟ ಮಾಡುವವರು ಜಗತ್ತಿನ ಅತ್ಯಂತ ಕ್ರೂರಿಗಳು... ಜಾನುವಾರು ಗಳ ಕಾಲು ಕಡಿದು ಬಟನ್ ಛತ್ರಿ ಮಡಚಿದಂತೆ ಮಡಚಿ ಇನ್ನೋವ ಕಾರಿನಲ್ಲಿ ಎಲ್ಲಿಂದೆಲ್ಲಿಗೋ ದಾಟಿಸುತ್ತಾರೆ...

ಬಹುಶಃ ಈ ಕ್ರೌರ್ಯ ವನ್ನು ಅದ್ಯಾವ ದೇವರು ಒಪ್ಪುತ್ತಾನೋ ಗೊತ್ತಿಲ್ಲ...!! ಇಷ್ಟು ಹಿಂಸೆ ಮಾಡಿ ಕೊಂದ ಹಸು ಗಳ ಆಹಾರ ತಿಂದವರೂ ಈ ಪಾಪ ಕರ್ಮದ ಫಲ ಪಡೆಯುವುದಂತೂ ಖಚಿತ...ಗೋ ಸಾಕುವವರು ದಿವಾಕರ, ಕೃಷ್ಣ ಮೂರ್ತಿಗೆ ಕೊಟ್ಟು , ದಿವಾಕರ ,ಕೃಷ್ಣ ಮೂರ್ತಿಯರು ಈ ದುಷ್ಟ ಹಲಾಲುಕೋರರಿಗೆ ಕೊಡುವ ಕ್ರಮ ಒಂಥರ ಸುಫಾರಿ ಕೊಲೆ ಮಾಡಿಸಿದಂತೆ. ನಮ್ಮ ಜನ ನಾಜೂಕಿನವರು.... ತಾವು ನೇರವಾಗಿ ಪಾಪ ಮಾಡದೇ ಯಾರೋ ಪಾಪ ಮಾಡುವಂತೆ ಮಾಡಿಸುತ್ತಾರೆ. ಆದರೆ ಭಗವಂತ ನಿಗೆ ಕಣ್ಣಿರುತ್ತದೆ. ಭಟ್ಟರು ಹಗಲು ರಾತ್ರಿ ಕಣ್ಣಿಗೆ ಎಣ್ಣೆ ಬಿಟ್ಟು ಕೊಂಡು ಊರೂರು ಸುತ್ತಿದರೂ ಗೋವುಗಳ ಸಾಕುವವರು ಸಿಗಲೇ ಇಲ್ಲ...!!

ಆಗ ಒಂದಿನ ಯಾನ್ ವೆಂಕಟಾಚಲ ಭಟ್ಟರಿಗೆ ಪ್ಯಾಟೆಲಿ ಸಿಕ್ಕಿ "ನಿಮ್ಮ ಸಮಸ್ಯೆ ನಾನು ಪರಿಹಾರ ಮಾಡ್ತೀನಿ.
ಒಂದು ಹತ್ತು ಸಾವಿರ ಖರ್ಚಾತದೆ ಅಷ್ಟೇ... ಲಿಂಗನ ಮಕ್ಕಿ ಆಣೆಕಟ್ಟಿನ ಹಿನ್ನೀರಿನ ಸಮೀಪದಲ್ಲಿ ಒಂದು ಹೊಸ ದೊಂದು ದೊಡ್ಡ ಗೋಶಾಲೆ ಇದೆ.... ತುಂಬಾ ಚೆನ್ನಾಗಿ ಸಾಕ್ತಾರೆ... ನಾಳನೇ ನಾ ನಿಮ್ಮನೆಗೆ ಯಾನ್ ತಗು ಬತ್ತಿನಿ, ನೀವು ಮಂಡೆ ಬಿಸಿ ಮಾಡಕಣದೇ ಬ್ಯಾಡ... ಬೆಳಿಗ್ಗೆ ರೆಡಿಯಾಗಿ... " ಅಂತ ಬರವಸೆ ಮೂಡಿಸಿದ ಭಟ್ಟರಿಗೆ. ಬೆಳಿಗ್ಗೆ... ಭಟ್ಟರು ಗಂಡಹೆಂಡತಿ‌ ಬೇಗನೇ ಎದ್ದು ತಮ್ಮ ಜೀವಮಾನದ ಕಟ್ಟ ಕಡೆಯ ಗೋ ಸೇವೆ ಮಾಡಲು ಪ್ರಾರಂಭಿಸಿದರು. ಹುಲ್ಲು ಹಿಂಡಿ ಮುರ ಕೊಟ್ಟರು. ಪೂಜೆಯನ್ನೂ ಮಾಡಿದರು. ಗೋವುಗಳಿಗೇ ಆಶ್ಚರ್ಯ ವಾಯಿತು. ಇದೇನು ದಿಡೀರಾಗಿ "ದೀಪಾವಳಿ" ಬಂತೇ...? ಏಕೆ ನಮಗೆ ಇವತ್ತು ಬೆಳ್ ಬೆಳಿಗ್ಗೇನೇ ವಿಶೇಷ ಪೂಜೆ...!? ರಾದಮ್ಮ ಕುಂಟಿಕೊಂಡೇ ಪೂಜೆ ಮುಗಿಸಿ ದುಃಖಿಸುತ್ತಲೇ ಗೋವುಗಳಿಗೆ ನಮಸ್ಕರಿಸಿದರು. ರಾದಮ್ಮನಿಗೆ ಯಾಕೋ "ಧರಣಿ ಮಂಡಲ ಮದ್ಯೆದೊಳಗೆ " ಹಾಡು ಅನಾಯಾಸವಾಗಿ ನೆನಪಾಗಿ ದುಃಖ ಮತ್ತಷ್ಟು ಒತ್ತರಿಸಿ ಬಂದು ಅಲ್ಲಿ ನಿಲ್ಲಲಾರದೇ ಒಳಗೆ ಹೋದರು.

ಯಾನ್ ವೆಂಕಟಾಚಲ ಎಂಟು ಗಂಟೆಗೆ ಯಾನ್ ತಗೊಂಡು ಭಟ್ಟರ ಮನೆಗೆ ಬಂದ. ನಂತರ ವ್ಯಾನ್ ನೊಳಗೆ ಭಟ್ಟರ ಗಂಗೆ ಗೌರಿ ದಾಸಿ ಕುಂಟ ಸೇರಿದಂತೆ ಎಲ್ಲಾ ಹಸುಗಳನ್ನು ಹತ್ತಿಸುವ ಕೆಲಸ ಪ್ರಾರಂಭವಾಯಿತು.  ಜಾನುವಾರು ಗಳಿಗೆ ಬಾಯಿ ಬರದಿರ ಬಹುದು.ಆದರೆ ಅವಕ್ಕೆ ಮುಂದಾಗುವ ಘಟನೆಗಳ ಬಗ್ಗೆ ಅರಿವಾಗುತ್ತದೆ. ಅಷ್ಟು ಸಲೀಸಾಗಿ ವ್ಯಾನ್ ಹತ್ತಲು ಒಪ್ಪಲಿಲ್ಲ...! ಕೆಲವು ಜಾನುವಾರು ಗಳನ್ನು ಹಗ್ಗ ಹಾಕಿ ದರ ದರ ಎಳೆದು ವ್ಯಾನ್ ಗೆ ತುಂಬಲಾಯಿತು. ಕರುಗಳನ್ನು ಅನಾಮತ್ತಾಗಿ ಎತ್ತಿ ವ್ಯಾನ್ ಗೆ ಹಾಕಲಾಯಿತು.... ಬಹುಶಃ ಭಟ್ಟರು ಈ ದೃಶ್ಯ ಅರಗಿಸಿ ಕೊಳ್ಳಲಾಗದೇ ಕುಸಿದು ಹೋದರು.

ಆದರೆ ಅನಿವಾರ್ಯ... ನಂತರ ಕಣ್ಣೀರು ಹಾಕುತ್ತಲೇ ವ್ಯಾನ್ ಹತ್ತಿ ಕ್ಯಾಬಿನ್ ನೊಳಗೆ ಕೂತರು.  ಜಾನುವಾರುಗಳು ಅಂಬೋ ... ಅಂತ ಚೀರತೊಡಗಿದವು‌. ದಾಸಿ ಗಂಗೆ ಗೌರಿಯರ ಕಣ್ಣಲ್ಲಿ ನೀರಿಳಿಯ ತೊಡಗಿತ್ತು... ಆದರೆ ಎಲ್ಲವಕ್ಕೂ ಒಂದಿನ ಮುಕ್ತಾಯ ಇರಲೇಬೇಕಲ್ವಾ...? ಯಾನ್ ವೆಂಕಟಾಚಲ ಭಟ್ಟರಿಗೆ ಕುರುಕ್ಷೇತ್ರದಲ್ಲಿ ಶಸ್ತ್ರ ಸನ್ಯಾಸ ಮಾಡಿದ ಅರ್ಜುನನಿಗೆ ಭಗವದ್ಗೀತೆ ಭೋದಿಸಿದಂತೆ ಭೋದನೆ ಮಾಡ ತೊಡಗಿದ... ಭಟ್ರೆ ನೀವ್ಯಾಕೆ ಚಿಂತೆ ಮಾಡ್ತೀರ‌...? ನಿಮಗೆ ಹಸುಗಳ ಬಗ್ಗೆ ಪ್ರೀತಿ ಯಿದೆ. ನಿಮ್ಮ ಕೈಲಿ ಕೂಡೋತನಕ ಸೇವೆ ಮಾಡಿದ್ದೀರ... ಈಗ ಆಗ್ತಿಲ್ಲ... ನಿಮ್ಮ  ಸ್ಥಾನದಲ್ಲಿ ಯಾರೇ ಇದ್ದರೂ ಹೀಗೆ ಮಾಡ್ತಿದ್ರು.... ನೀವೂ ಮಾಡ್ತಿದ್ದೀರ ಭಟ್ರೆ ಖಂಡಿತವಾಗಿಯೂ ಇದ್ರಲ್ಲಿ ನಿಮ್ದೇನೂ ತಪ್ಪೇನಿಲ್ಲ... ಈಗಿನ ಕಾಲದಲ್ಲಿ ಹೆತ್ತು ಹೊತ್ತು ಸಾಕಿ ಬೆಳಸಿದ ಅಪ್ಪ ಅಮ್ಮ ರನ್ನು ಕ್ರೂರವಾಗಿ ವೃದ್ದಾಶ್ರಮ ಕ್ಕೆ ಸೇರಿಸುವ ಕಾಲವಿದು.. ನೀವು ಈ ಮೂಕ ಪ್ರಾಣಿಗಳ ಬಗ್ಗೆ ಚಿಂತೆ ಮಾಡ್ತಿದ್ದೀರಲ್ಲ... ಅವನ್ನು ಎಲ್ಲೋ ಬದುಕಲು ಬಿಡ್ತಿದ್ದೀರಲ್ಲ... ಆರಾಮವಾಗಿರಿ ಭಟ್ರೆ... ಚಿಂತೆ ಬೇಡ"ಅಂದ...

ವ್ಯಾನ್ ಹೊಸನಗರ ದಾಟಿ ಹಳೆ ಸಾಗರ ರೋಡ್ ನಲ್ಲಿ ಲಿಂಗನ ಮಕ್ಕಿ ಆಣೆಕಟ್ಟಿನ ಹಿನ್ನೀರ ಬಯಲೊಂದರ ಸಮೀಪ ಬಂತು‌. ಅದೊಂದು ನಿರ್ಮಾನುಷ ಜಾಗ, ಒಂದು ಭಾಗದಲ್ಲಿ ಶರಾವತಿ ಹಿನ್ನೀರು.. ಮತ್ತೊಂದು ಭಾಗದಲ್ಲಿ ಕಾಡು ಒಂದಷ್ಟು ಹುಲ್ಲುಗಾವಲು ಅಷ್ಟೇ.. ಅಲ್ಲೇ ವ್ಯಾನ್ ನನ್ನು ಒಂದು ಎತ್ತರವಾದ ದಂಡೆ ಬಳಿ ಹಿಂದು ಮಾಡಿ ನಿಲ್ಲಿಸಿ ವ್ಯಾನ್ ಹಿಂಬದಿ ಬಾಗಿಲು ತೆಗೆದು ಜಾನುವಾರುಗಳನ್ನು ಹೊರ ಬಿಡಲಾಯಿತು... ಜಾನುವಾರುಗಳಿಗದು ಹೊಸ ಪ್ರಪಂಚ... ಆ ಎಲ್ಲಾ ಹಸುಗಳು ಹುಟ್ಟಿ ಬೆಳದದ್ದು ಭಟ್ಟರ ಮನೆ ಕೊಟ್ಟಿಗೆ ಅಂಗಳದಲ್ಲಿ... ಭಯಾಶ್ಚರ್ಯಗಳಿಂದ ಅವಕ್ಕೆ ಈ ಹೊಸ ಜಗತ್ತು ನೋಡಿ ದಿಕ್ಕುತಪ್ಪಿದಂತಾಯಿತು....!!??

ತಕ್ಷಣ ಭಟ್ಟರನ್ನು ವ್ಯಾನ್ ಹತ್ತಲು ಹೇಳಿದ ವೆಂಕಟಾಚಲ ‌.. ಭಟ್ರೂ ಕೂಡ ಹಸುಗಳ ತರಹವೇ ಕಕ್ಕಾಬಿಕ್ಕಿ..!?
ವೆಂಕಟಾಚಲ ಇಲ್ಲೊಂದು ದೊಡ್ಡ ಹೊಸ ಗೋಶಾಲೆ ಇದೆ ಎಂದಿದ್ದ...!! ಆದರೆ ಇಲ್ಲಿ ಯಾವ ಗೋಶಾಲೆಯೂ ಇಲ್ಲ... ಏನು ಕಥೆ...? ಭಟ್ರೆ ನೀವು ಯಾನ್ ಹತ್ತಿ ಏನಂತ ನಾ ಹೇಳ್ತೀನಿ ಅಂದ... ಒಂಥರ ಭಟ್ರನ್ನು ಕ್ಯಾಬಿನ್ ನೊಳಗೆ ದಬ್ಬಿ ತಳ್ಳಿ ಭಟ್ಟರ ಕುಳ್ಳಿರಿಸಿದ... ಯಾನ್ ಸ್ಟಾರ್ಟ್ ಆಯಿತು.. ನಿಧಾನವಾಗಿ ವ್ಯಾನ್ ಮುಂದು ಹೊರಟಾಗ ಭಟ್ಟರು ವ್ಯಾನ್ ಕ್ಯಾಬಿನ್ ಕಿಟಕಿಯಿಂದ ಹಿಂಬದಿ ನೋಡಿದರು... ಗಂಗೆ ಗೌರಿ ದಾಸಿ ಸೇರಿದಂತೆ ಎಲ್ಲಾ ಹಸುಗಳು ವ್ಯಾನ್ ಹಿಂದಕ್ಕೇ ಕೂಗುತ್ತಾ ಓಡಿ ಓಡಿ ಬರತೊಡಗಿತು... ಭಟ್ಟರ ಎದೆಯೊಡದಂತಾಯಿತು... ಭಟ್ಟರು- "ವ್ಯಾನ್ ನಿಲ್ಲಿಸಿ... ನಾನು ಜಾನುವಾರು ಗಳನ್ನು ಮನೆಗೇ ವಾಪಾಸು ಹೊಡೆದುಕೊಂಡು ಹೋಗಿ ಸಾಕ್ತೀನಿ..

ವ್ಯಾನ್ ನಿಲ್ಲಸಿ... ನೀನೇನು‌ ಮನುಷ್ರು ಜಾತಿನಾ? ಗೋಶಾಲೆ ಅಂತ ಹೀಗೆ ನಾಯಿ ಮರಿ ಬೆಕ್ಕಿನ ಮರಿನ ಬಿಟ್ಟು ಬಂದಂತೆ ಜಾನುವಾರು ಗಳನ್ನು ಹೀಗೆ ಗೊತ್ತು ಗುರಿಯಿಲ್ಲದೇ ಬಯಲಿನಲ್ಲಿ ಬಿಟ್ಟು ಬಂದರೆ ಅವುಗಳ ಗತಿಯೇನು....!? " ಭಟ್ಟರು ವಿಪರೀತ ಟೆಂಕ್ಷನ್ ಮಾಡಿ ಕೊಂಡು ಕೂಗಾಡತೊಡಗಿದರು.. ವೆಂಕಟಾಚಲ ಭಟ್ಟರ ತೋಳು ಹಿಡಿದು ಕೂರಿಸಿ ಸಡನ್ ಆಗಿ ಜೇಬಿನಿಂದ ಬಟನ್ ಚಾಕು ತೆಗೆದು ಚಾಕು ಓಪನ್ ಮಾಡಿ ಭಟ್ಟರಿಗೆ ಹಿಡಿದು ತೋರಿಸಿ ತನ್ನ ನೈಜ ರೂಪ ಧರ್ಶನ ಮಾಡಿಸಿದ... "ಮುಚ್ಚಿಕೊಂಡು ಕೂತಕಳ ಭಟ್ಟಾ..
ಏನು ನೀನು ದೊಡ್ಡ ಸತ್ಯದ ತುಂಡು... ನಿನ್ನ ಮನೆ ಜಾನುವಾರು ಮಾತ್ರ ಅಲ್ಲ ನಾ ಇಲ್ಲಿಗೆ ತಂದು ಬಿಟ್ಟರೋದು... ಹೋಮ ಹವನ ಮಾಡೋರು, ದೇವಸ್ಥಾನದ ಪೂಜೆ ಮಾಡೋರು ರುದ್ರ ಹೇಳೋರು... ಹಿಂಗೆ ಇಪ್ಪತ್ತನಾಲ್ಕು ಗಂಟೆನೂ ಧರ್ಮ ದಯೆ ಮಾತಾಡೋ ತುಂಬಾ ಜನಗಳ ದನಗಳನ್ನು ತಣ್ಣಗೆ ಇಲ್ಲಿ ತಂದು ಬಿಟ್ಟಿದೀನಿ... ಅದು ಅವರಿಗೂ ಗೊತ್ತು ... ಇಲ್ಲಿ ಗಟ್ಟಿ ಇರೋವು ಉಳಿತಾವೆ..‌.. ಕಟುಕರಿಗೆ ಸಿಗೋ ಜಾನುವಾರುಗಳು ಆಹಾರ ಆಗ್ತಾವೆ.. ಅದು ಅವುಗಳ ಪ್ರಾರಭ್ದ ... ನಾವೇ ಏನು ಕಡಿತಿಲ್ಲವಲ್ಲ...." ಅಂತ ತಾನೂ ಕೂಗಿ ಕಣ್ಣು ಕೆಂಪು ಮಾಡಿ ಹೆದರಿಸಿದ.

ಭಟ್ಟರಿಗೆ ಇದೆಲ್ಲವೂ ಹೊಸತು... ಒಂದು ಕಡೆ ತನ್ನ ಪ್ರಾಣ ಪ್ರೀತಿಯ ಹಸುಗಳಿಗಾದ ಅನ್ಯಾಯ ಇನ್ನೊಂದು ಕಡ ಅಪಾತ್ರ ವ್ಯಕ್ತಿಯ ದುರ್ವರ್ತನೆ... ಭಟ್ಟರು ಕುಗ್ಗಿ ಹೋದರು... ವ್ಯಾನ್ ಹೊಸನಗರದಲ್ಲಿ ನಿಲ್ಲಿಸಿ‌ ಭಟ್ಟರನ್ನ ಇಳಿಸಿತು... ಭಟ್ಟರು ಮಗನಿಗೆ ಫೋನ್ ಮಾಡಿ ಹಿಂಗಿಂಗಾತು ಅಂತೇಳಿ ಕಣ್ಣೀರಾದರು. ಮಗ ನೀವು ಚಿಂತಿಸಬೇಡಿ ನಾನು ಈಗಲೇ ಊರಿಗೆ ಹೊರಡ್ತೀನಿ ಅಂದ. ಅವನಿಗೆ ಇದು ಅಪಾಯ ಪರಿಸ್ಥಿತಿಗೆ ಮುಟ್ಟಿದೆ ಎಂದು ಅರ್ಥವಾಗಿತ್ತು. ಭಟ್ಟರು ಗುರುಶಕ್ತಿ ಬಸ್ ಹತ್ತಿ ಊರಿಗೆ ಬಂದರು. ಮನೆಯಲ್ಲಿ ನೀರವ ಮೌನ ಆವರಿಸಿತ್ತು‌. ಭಟ್ಟರು ಹೆಂಡತಿಗೇನೂ ಹೇಳಲಿಲ್ಲ.. ಭಟ್ಟರಿಗೆ ಇದೆಲ್ಲಾ ಘಟನೆಯಿಂದ ಜ್ವರ ಬಂದಂತಾಗಿ ಮಲಗಿದರು... ಆದರೆ ಕ್ಷಣ ಕ್ಷಣಕ್ಕೂ ಜ್ವರ ಏರತೊಡಗಿತು... ರಾದಮ್ಮ ಗಾಭರಿಯಾಗಿ ಮಕ್ಕಳಿಗೆ ಕರೆ ಮಾಡಿ, ಪಕ್ಕದ ದಾಯದ್ರು ಮನೆಗೂ ಕರೆ ಮಾಡಿ ಬೆಳಗಿನ ಜಾವಕ್ಕೆ ತೀರ್ಥಹಳ್ಳಿಗೆ ಕರೆದುಕೊಂಡು ಹೋಗಿ ಅಲ್ಲಿಯಾಗದೇ ಮಣಿಪಾಲ್ ಗೆ ಕರೆದುಕೊಂಡು ಹೋಗಿ ಸೇರಿಸಲಾಯಿತು. ಭಟ್ಟರಿಗೆ ಗಂಭೀರವಾಗಿ ಹೃದಯಾಘಾತ ವಾಗಿತ್ತು.... ಭಟ್ಟರ ಮಕ್ಕಳು ಬೆಂಗಳೂರಿನಿಂದ ನೇರವಾಗಿ ಮಣಿಪಾಲ್ ಆಸ್ಪತ್ರೆ ಗೆ ಬಂದಿಳಿದರು. ಭಟ್ಟರು ಯಾವ ಚಿಕಿತ್ಸೆಗೂ ಸ್ಪಂದಿಸದೆ  ಕೊನೆಯುಸಿರೆಳೆದರು.

ಭಟ್ಟರ ಮನೆಯಲ್ಲಿ ಕರ್ಮಾಂಗಗಳ ಸಿದ್ದತೆ ನಡೆಯತೊಡಗಿತು. ಆ ಭಾಗದ ಸ್ಟಾರ್ ಪುರೋಹಿತರಾದ ವೇ ಬ್ರ ಶ್ರೀ ಕಾಡು ಮಲ್ಲಿಗೆ ನಾರಾಯಣ ಜೋಯಿಸರು ಮನೆಗೆ ಬಂದು ಕುಟುಂಬ ದವರಿಗೆ ಸಾಂತ್ವಾನ ಹೇಳಿ ದರು....ಭಟ್ಟರ ಗೋ ಸೇವೆಯನ್ನು ಹಾಡಿ ಹೊಗಳಿದರು. ಅದಕ್ಕೆ ಮಕ್ಕಳು ಅಪ್ಪನ ಗೋ ಪ್ರೀತಿಗಾಗಿ ನಾವು ಮೂರು ಹಸುಗಳನ್ನು ದಾನ ಮಾಡ್ತೀವಿ ಎಂದರು. ನಮಗೆ ಉತ್ತಮ ಹಸುಗಳು ಮತ್ತು ದಾನ ಹಿಡಿಯುವ ಅರ್ಹರು ಬೇಕು ಎಂದು ಜೋಯಿಸರಲ್ಲಿ ಕೇಳಿಕೊಂಡರು... ಅದಕ್ಕೆ ಜೋಯಿಸರು ಅದಕ್ಕೇನು ನಾನು ನಾಳೆ ಬರುವಾಗ ಅದರ ಲೀಸ್ಟ್ ತರುವೆ ಅಂದರು. 

ಜೋಯಿಸರು ಮಾರನೇ ದಿನ ಒಂದು ದೊಡ್ಡ ಪೆಟ್ಟಿಗೆ ತಂದರು. ಅದನ್ನು ನೋಡಿ ಮಕ್ಕಳು ಹಸುಗಳ ಮಾಡೆಲ್ ಇರಬಹುದು ಅಂದುಕೊಂಡರು‌. ನೋಡಿ ನಮ್ಮ ಬಳಿ ಎಪ್ಪತ್ತೈದು ಸಾವಿರ ಮೌಲ್ಯದ "ಗೀರ್ " ತಳಿ ಹಸು ಕರು ಇದೆ, ಐವತ್ತು ಸಾವಿರ ಮೌಲ್ಯದ ಸಾಹಿವಾಲ್ ತಳಿಯಿದೆ, ಇಪ್ಪತ್ತೈದು ಸಾವಿರ ಮೌಲ್ಯದ ಓಂಗೋಲ್ ತಳಿ ಯಿದೆ... ಹತ್ತು ಸಾವಿರದ ಅಮೃತ ಮಹಲ್ ಇದೆ... ತೀರಾ ಬಡವರಿಗಾಗಿ ಐದು ಸಾವಿರ ಮೌಲ್ಯ ದ ಮಲೆನಾಡು ಗಿಡ್ಡ ತಳಿಯ ಹಸುಗಳೂ ಇವೆ ... ಎನ್ನುತ್ತಾ ಪೆಟ್ಟಿಗೆಯಿಂದ ಮಕ್ಕಳು ಆಟದ ಸಾಮಾನು ತೆಗೆಯುವಂತೆ ಒಂದೊಂದೇ ಬೆಳ್ಳಿಯ ಗೋವಿನ ವಿಗ್ರಹ ತೆಗೆಯ ತೊಡಗಿದರು.. ಇದನ್ನೋಡಿ ಆಘಾತಕ್ಕೊಳಾಗಿದ್ದು ಭಟ್ಟರ ಮಕ್ಕಳು...

ಅಲ್ಲ ಜೋಯಿಸರೇ ನಾವು ಜೀವಂತ ಹಸುಗಳನ್ನು ದಾನ ಕೊಡಬೇಕೆಂದು ಕೊಂಡಿದ್ದೇವೆ‌ . ಹಣ ಎಷ್ಟು ಖರ್ಚಾದರೂ ಪರವಾಗಿಲ್ಲ... ಒಂದು ಹಸುವಿನಿಂದ ಒಂದು ಕುಟುಂಬಕ್ಕೆ ಒಂದು ವರ್ಷಕ್ಕೆ ಜೀವನಕ್ಕೆ ಆಧಾರ ವಾಗಬೇಕು ಅಂತಹ ಹಸುದಾನ ಕೊಡಬೇಕೆಂದುಕೊಂಡಿದ್ದೇವೆ... ವಿಗ್ರಹಗಳನ್ನಲ್ಲ.... ಅಂದರು.
ಆಗ ಜೋಯಿಸರು ...." ನೋಡಿ ಪುರಾಣ ಕಾಲದಲ್ಲಿ ಋಷಿ ಮುನಿಗಳಿಗೆ ಸಾವಿರ ಸಾವಿರ ಹಸುದಾನ ಕೊಡ್ತಿದ್ರು. ಅದರಿಂದಲೇ "ಗೋತ್ರ" ಪ್ರಾರಂಭವಾಯಿತು. ಈಗ ಆ ಕಾಲವಲ್ಲ... ಈಗ ಗೋದಾನವೇ ಹಿಂಸೆ. ನೀವು ಎಪ್ಪತ್ತೈದು ಸಾವಿರ ಕೊಟ್ಟರೆ ವ್ಯಕ್ತಿ ಅದೇ ದುಡ್ಡಿನಲ್ಲಿ ಒಂದು ವರ್ಷ ಹಾಲು ಕೊಂಡು, ಕೃಷಿಗೂ ಗೊಬ್ಬರ ಕೊಂಡು ಬೇಸಾಯ ಮಾಡ್ತಾನೆ.... ಯಾರೂ ಈವಾಗ ಗೋದಾನ ಹಿಡಿಯುವವರಿಲ್ಲ " ಎಂದರು.
ಭಟ್ಟರ ಮಕ್ಕಳು - ನಾವು ಐದು ಸಾವಿರದ ಮೂರು ಮಲೆನಾಡು ಗಿಡ್ಡ ತಳಿಯ ಮಾಡೆಲ್ ನ ಬೆಳ್ಳಿಯ ಹಸುಗಳನ್ನು ದಾನ ಕೊಡ್ತೇವೆ ಎಂದರು. ಜೋಯಿಸರು ತೀವ್ರ ನಿರಾಸೆಯಿಂದ ಮನದಲ್ಲೇ ಭಟ್ಟರ ಮಕ್ಕಳಿಗೆ ಬಯ್ಯುತ್ತಾ ಇವಕ್ಕೆ ಕೋಟಿ ಕೋಟಿ ಹಣ ಇದ್ದರೂ ದಾನ ಮಾಡೋ ಗುಣ ಇರೋಲ್ಲ... ಅಂತ ಬೇಸರದಿಂದ ಪೆಟ್ಟಿಗೆಗೆ ಗೋ ವಿಗ್ರಹ ತುಂಬಿ ಮನೆಗೆ ಮರಳಿದರು. 

ಅಂತೂ ಬೊಜ್ಜ ಮುಗೀತು. ಭಟ್ಟರ ಮಕ್ಕಳು ತಾಯಿ ರಾಧಮ್ಮರಿಗೆ ಪರಸ್ಪರ ಭಟ್ಟರ ಸಾವಿಗೆ ನೋವೂ ನಾವೂ ಒತ್ತಡ ಕಾರಣವಾಯಿತಾ ಎಂಬುದು ಕಾಡತೊಡಗಿತು. ಮಾರನೆ ದಿನ ಭಟ್ಟರ ದೊಡ್ಡ ಮಗನ ನೇತೃತ್ವದಲ್ಲಿ ಊರ ಸಮೀಪದ ರಾಮಣ್ಣ ಪೂಜಾರ್ರು ಎಂಬ ಗೋ ಪ್ರೇಮಿಗಳ ಮನೆಗೆ ಹೋದರು. ರಾಮಣ್ಣ ಪೂಜಾರ್ರು ಇಲ್ಲಿಗೆ ದಕ್ಷಿಣ ಕನ್ನಡದ ಮಂದಾರ್ತಿಯಿಂದ ಸೇರೆಗಾರರ ಜೊತೆಗೆ ಬಂದವರು. ಕೂಲಿ‌ನಾಲಿ ಮಾಡಿ ಜೀವನ ಸಾಗಿ ಸುವವರಿಗೆ ಪೂಜಾರ್ರಿಗೆ ಭಟ್ಟರ ತರಹವೇ ವಿಪರೀತ ಗೋ ಪ್ರೀತಿ... ಅದೇ ಪ್ರೀತಿಯಲ್ಲಿ ತಮ್ಮ ಯೋಗ್ಯತೆಗೂ ಮೀರಿ ಹಸುಕರುಗಳನ್ನು ಕಟ್ಟಿ ಸಾಕಿ ಕಷ್ಟ ಪಟ್ಟು ಜೀವ ತೇಯ್ತಿದ್ದರು. ಭಟ್ಟರು ಇವರ ಮನೆಗೂ ಬಂದು ಜಾನುವಾರು ಸಾಕ್ತೀರ ಅಂತ ಕೇಳಿದ್ದರು. ಆದರೆ ಹಣ ಕಾಸು ಮತ್ತು ಜಾಗದ ಕೊರತೆಯ ಕಾರಣದಿಂದ ಜಾನುವಾರು ಸಾಕಲಾಗದೆ ನಿರಾಕರಣೆ ಮಾಡಿದ್ದರು. ಅವರೂ ಕೂಡ ಭಟ್ಟರ ತರಹವೇ ಎಲ್ಲಾ ದೇಸಿ ತಳಿಯ ಹಸು ಸಾಕಿದ್ದರು... ಇದರ ಜೊತೆಯಲ್ಲಿ ಇತ್ತಿಚೆಗೆ ಪೂಜಾರರ ಮನೆಯ ಬಳಿಯಲ್ಲಿ ಹೋರಿ ಮುದಿ ದನಗಳನ್ನು ನಾಯಿ ಮರಿಗಳನ್ನು ತಂದು ಬಿಟ್ಟಂತೆ ತಂದು ಬಿಡುವುದೂ ವಿಪರೀತ ವಾಗಿದೆಯಂತೆ....!!! ಪೂಜಾರ್ರು ಅಂತಹ ನತದೃಷ್ಟ ಜಾನುವಾರುಗಳಿಗೆ ತಮ್ಮೆಲ್ಲ ಬಡತನಾದಿ ಕಷ್ಟ ಕಾರ್ಪಣ್ಯಗಳ ನಡುವೆಯೇ ಆಸರೆ ಕೊಟ್ಟು ಸಾಕುತ್ತಿದ್ದಾರೆ. 

ಭಟ್ಟರ ಕುಟುಂಬವನ್ನು ನೋಡಿ ಪೂಜಾರರು ತುಂಬಾ ಖುಷಿ ಪಟ್ಟರು. ಭಟ್ಟರ ದೊಡ್ಡ ಮಗ ತಮ್ಮ ಕೈ ಚೀಲ ದಿಂದ ಒಂದು ನೋಟಿನ ಕಟ್ಟು ತೆಗೆದುಕೊಂಡು "ನೋಡಿ ಪೂಜಾರರೆ ಇದರಲ್ಲಿ ಒಂದು ಲಕ್ಷ ಹಣ ವಿದೆ. ನೀವು ಮಮತೆಯಿಂದ ಗೋ ಸಾಕುತ್ತೀರ ಅಂತ ತಿಳಿದುಬಂತು... ಇದೊಂದು ಸಾರಿಯಲ್ಲ ನಾವು ನಿಮ್ಮ ಈ ಸೇವೆಗಾಗಿ ಪ್ರತಿ ವರ್ಷವೂ ನಮ್ಮ ಕೈಲಾದ ಸಹಾಯ ಮಾಡಲಿದ್ದೇವೆ.. ಇದರ ಜೊತೆಗೆ ನಮ್ಮ ಮನೆ ಯ ಕೊಟ್ಟಿಗೆ ಕಟ್ಟಡವನ್ನು ನಿಮಗೆ ನೀಡುತ್ತಿದ್ದೇವೆ. ನಮ್ಮ ಕಟ್ಟಡವನ್ನು ಕಂಟ್ರಾಕ್ಟರ್ ಬಳಿ ಮಾತನಾಡಿ ನಿಮ್ಮ‌ಜಾಗಕ್ಕೆ ಶಿಫ್ಟ್ ಮಾಡುವ ವ್ಯವಸ್ಥೆ ಮಾಡ್ತೇವೆ.ಅದರ ಸಂಪೂರ್ಣ ಖರ್ಚು ನಮ್ಮದೇ... ನೀವು ಚೆನ್ನಾಗಿ ನೆಮ್ಮದಿಯಿಂದ ಗೋ ಸಾಕಿ... ಗೋವುಗಳು ಈ ಭೂಮಿಯ ಮೇಲಿನ ಜೀವಂತ ದೇವರುಗಳು... ನಾವು ಸ್ವಲ್ಪ ಎಚ್ಚೆತ್ತು ಕೊಂಡಿದ್ದರೆ ನಮ್ಮ ತಂದೆಯವರು ಉಳಿತಿದ್ದರು... ಅವರಿಗದೆಷ್ಟು ಗೋ ಪ್ರೀತಿ ಇತ್ತು ಎಂಬುದು ಆ ಆಘಾತದಿಂದ ತೀರಿಕೊಂಡ ಮೇಲಷ್ಟೆ ನಮಗೆ ತಿಳಿಯಿತು.... ನಾವಂತೂ ಗೋ ಸೇವೆ ಮಾಡಲಸಾದ್ಯ... ನೇರವಾಗಿ ಸೇವೆ ಮಾಡುವ ನಿಮ್ಮಂಥವರನ್ನು ಹೀಗೆ ಪ್ರೋತ್ಸಾಹಿಸಬೇಕು. ತುಂಬಾ ಜನ ಗೋ ಪ್ರೇಮಿಗಳು ಮಠ ದೇವಸ್ಥಾನದ ಗೋಶಾಲೆಗೆ ಗೋ ಸೇವೆಗೆ ಹಣ ಕೊಡ್ತಿದ್ದಾರೆ. ಆದರೆ ಅವರಿಗೆ ನಮ್ಮ ಸುತ್ತ !! ನಮ್ಮ ನಡುವಿನ ಸಾಮಾನ್ಯ ಗೋ ಸೇವೆಕರು ಸಾಕಣಿಕೆದರರಿಗೆ ಮಠ ಮಾನ್ಯಗಳಿಗೆ ಸಿಗುವ ಅನುದಾನ , ಸಾರ್ವಜನಿಕ ಕಾಣಿಕೆ ಗಳು ಸಿಗುತ್ತಿಲ್ಲ.

ನಿಮ್ಮಂಥ ಗೋ ಸೇವೆ ಮಾಡುವವರಿಗೂ ಸಹಾಯ ಹಸ್ತ ಸಿಗಬೇಕು. ನಿಮ್ಮಂಥವರ ಗೋ ಸೇವೆಗೆ ನಮ್ಮದೂ ಈ ಚಿಕ್ಕ ಕಾಣಿಕೆ ನೀಡುವುದರ ಮೂಲಕ ನಿಮ್ಮ‌ ಪುಣ್ಯಾರ್ಚನೆಯಲ್ಲಿ ನಾವೂ ಗುಲಗುಂಜಿಯಷ್ಟಾದರೂ ಗೋ ಸೇವೆಯ ಪುಣ್ಯ ದ ಫಲ ಪಡೆವಾಸೆ" ಎಂದರು.. ಪೂಜಾರರ ಹೃದಯ ತುಂಬಿ ಬಂತು.. ಅಲ್ಲೇ ಕೊಟ್ಟಿಗೆಯಲ್ಲಿ ಅಭದ್ರ ಸ್ಥಿತಿ ಯಲ್ಲಿ ದ್ದ ಹಸುಗಳಿಗೂ ಈ ಭಟ್ಟರ ಮಕ್ಕಳ ಧರ್ಮ ದ ಗುಣ ನೋಡಿ ಮೆಚ್ಚುಗೆಯಾಯಿತು. ಮಕ್ಕಳ ಈ ಸತ್ಪಾತ್ರ ದಾನ ಭಟ್ಟರ ಆತ್ಮವನ್ನು ಯಶಸ್ವಿಯಾಗಿ "ವೈತರಣಿ ನದಿ " ದಾಟಿಸಿ ವೈಕುಂಠ ಸೇರಸಿತು... ಗೋದೇವತಾ ಹಿತಾಯಚ...

Advertisement
Advertisement
Advertisement

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಪ್ರಬಂಧ ಅಂಬುತೀರ್ಥ

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಅಂಬುತೀರ್ಥದ ನಿವಾಸಿ ಪ್ರಬಂಧ. ಬಿ ಎ. ವಿಧ್ಯಾಭ್ಯಾಸ ಮುಗಿಸಿದ ಮೇಲೆ ಕೃಷಿ ಕೆಲಸ. ಕಥೆ , ಪರಿಸರ, ಕೃಷಿ , ವಿಜ್ಞಾನ , ಸಾಮಾಜಿಕ ಮತ್ತು ರಾಜಕೀಯ ವಿಚಾರಗಳ ಲೇಖನ ಬರೆಯುವ ಹವ್ಯಾಸ. ಮಲೆನಾಡು ಗಿಡ್ಡ ಗೋ ತಳಿ ಸಂವರ್ಧನೆ, ಜೀರಿಗೆ ಮೆಣಸಿನಕಾಯಿ ಬೆಳೆಯ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯ ನಿರ್ವಹಣೆ. ಮಲೆನಾಡು ಗಿಡ್ಡ ತಳಿ ಹಸುಗಳ ಸೆಗಣಿಯನ್ನು ಮೌಲ್ಯ ವರ್ಧನೆ ಮಾಡಿ ಕೃಷಿ ಸ್ನೇಹಿ ಸೂಕ್ಷ್ಮಾಣು ಜೀವಿಯುಕ್ತ ಸಾವಯವ ಗೊಬ್ಬರ ತಯಾರಿಸಿ ಮಾರಾಟ ಮಾಡುವ ಕೆಲಸವನ್ನೂ ಮಾಡುತ್ತಿದ್ದಾರೆ.

ಇದನ್ನೂ ಓದಿ

ಅಡಿಕೆ ಬೆಳೆಗಾರರು ಏಕೆ ಜಾಗ್ರತರಾಗಬೇಕಿದೆ..?
January 22, 2025
6:48 AM
by: ದ ರೂರಲ್ ಮಿರರ್.ಕಾಂ
ಮೊಗ್ರದಲ್ಲಿ ಕಾಲಾವಧಿ ನೇಮ
January 21, 2025
3:55 PM
by: ದ ರೂರಲ್ ಮಿರರ್.ಕಾಂ
ಮೊಗ್ರದಲ್ಲಿ ಕನ್ನಡ ದೇವತೆ ನೇಮ | ತುಳುನಾಡಿನಲ್ಲಿ ಈಗ ನೇಮ-ನಡಾವಳಿ ದಿನಗಳು |
January 21, 2025
3:50 PM
by: ದ ರೂರಲ್ ಮಿರರ್.ಕಾಂ
ಸಿರಿಧಾನ್ಯ  ಬಳಕೆ  ಕುರಿತು  ಕೃಷಿ ಇಲಾಖೆಯಿಂದ  ಸಿರಿಧಾನ್ಯ ಓಟ
January 19, 2025
10:13 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror