ಅದೊಂದು ದೊಡ್ಡ ಮಾಲ್(Mall). ಅಲ್ಲೊಬ್ರು ಬಿಳಿಕೂದಲಿನ ವ್ಯಕ್ತಿಯೊಬ್ಬರು ಮಾವಿನಹಣ್ಣಿನ(Mango) ಆಯ್ಕೆ ಮಾಡುತ್ತಿದ್ದರು. ಅವರ ಆಯ್ಕೆ ಹೇಗಿತ್ತೆಂದರೆ ಮಾವಿನ ರಾಶಿಯನ್ನು ನೂರು ಸಲ ಮಗುಚಿ ಬಣ್ಣ(Color), ಪರಿಮಳ(Aroma), ಗಾತ್ರ(Size), ಹಾಳಾಗದಿರಲೆಂದು ಹಾಕಿದ ಪೌಡರ್(Powder), ಎಲ್ಲವೂ ತಾಳೆಹಾಕಿ ಅಪೂರ್ವ ರೀತಿಯಲ್ಲಿ ಯಾವ ಸೆನ್ಸಾರ್ ಮೆಷಿನ್ ಗೂ ಸಾಧ್ಯವಾಗದ ರೀತಿಯಲ್ಲಿ ಮಾವಿನ ಹಣ್ಣುಗಳ ಅಯ್ಕೆ ಮಾಡುತ್ತಿದ್ದರು. ಮಾಲ್‌ಗಳಲ್ಲಿ ಅದಕ್ಕೆ ಅವಕಾಶವೂ ಇದೆ.
ಒಳ್ಳೆಯದೆ, ಕೊಟ್ಟ ದುಡ್ಡಿಗೆ ಉತ್ತಮ ವಸ್ತುಗಳನ್ನು ಪಡೆಯುವುದು ಗ್ರಾಹಕನ ಹಕ್ಕು ಆಗಿರುತ್ತದೆ. ಬಿಲ್ ಗಿಲ್ ಆದನಂತರ ನಿಧಾನಕ್ಕೆ ಪಕ್ಕದಲ್ಲಿರುವ ಜ್ಯೂಸ್ ಸೆಂಟರ್ ಗೆ ಬಂದು ಒಂದು ಮ್ಯಾಂಗೊ ಜ್ಯೂಸ್ ವಿದ್ ಐಸ್ಕ್ರೀಂ ಗೆ ಆರ್ಡರ್ ಮಾಡ್ತಾರೆ. ಆಕರ್ಷಕ ಹಳದಿ ಬಣ್ಣದ ಜ್ಯೂಸ್ ಕುಡಿದು ಮನಸೋತು ಒಂದೆರಡು ಜ್ಯೂಸ್ ಪಾರ್ಸೆಲ್ ಕೂಡಾ ಮಾಡಿಸ್ತಾರೆ. ತುಂಬಾನೇ ಖುಷಿಯಿಂದ ಮನೆಗೆ ತೆರಳುತ್ತಾರೆ.
ಮೇಲೆ ತಿಳಿಸಿದ ವಿಷಯಗಳು ಪಾರ್ಟ್ ‘ಟು’. ಈಗ ಅದೇ ವಿಷಯದ ಪಾರ್ಟ್ ‘ವನ್’ ಗೆ ಬರೋಣ. ಮಾರ್ಕೆಟಿಂಗ್ ನಲ್ಲಿ ಕಸ್ಟಮರ್ ನ್ನು ಆಕರ್ಷಿಸುವುದು ಪ್ರಮುಖ ಅಂಗ. ಅವರು ಆಯ್ಕೆ ಮಾಡಿದ ಮಾವಿನ ಹಣ್ಣುಗಳ ಮರಕ್ಕೆ ಸರಿಯಾಗಿ ವಿವಿಧ ರೀತಿಯ ಕೆಮಿಕಲ್ಸ್ ಗಳನ್ನು ಎರಡೊ ನಾಲ್ಕೊ ಡೋಸ್ ಹೊಡೆದು, ನುಸಿ, ಕೀಟ ಬರದಂತೆ ಪೆಸ್ಟಿಸೈಡ್ ಹೊಡೆದು, ಅರೆ ಬೆಳೆದ ಕಾಯಿಯನ್ನು ಕೊಯಿಲುಮಾಡಿ, ಸ್ಟೊರೇಜ್ ಗೋಡೌನ್ ಗಳಲ್ಲಿ ಹಾಳಾಗದಂತೆ ಒಂದೋ ಎರಡೋ ತಿಂಗಳು ಸ್ಟೋರ್ ಮಾಡಿ ನಂತರ ಡಿಮಾಂಡ್ ಗನುಸಾರ ಟ್ರೇಗಳಲ್ಲಿ ಹಣ್ಣಾಗಲು ಮತ್ತೆ ಪೌಡರ್ ಹಾಕಿ ಮಾಲ್ ಗೆ ಬಂದು ಸಿಂಗರಿಸಿ ಸ್ಟಿಕ್ಕರ್ ಅಳವಡಿಸಿ ಫೋಕಸ್ ಲೈಟ್ ನ ಅಡಿಯಲ್ಲಿ ಇಟ್ಟ ಮಾವುಗಳಾಗಿದ್ದವು. ಪಾಪ ತಾತನಿಗೆ ಅದೆಲ್ಲ ಗೊತ್ತಿಲ್ಲ.
ಬಿಡಿ. ಇನ್ನು ಜ್ಯೂಸ್ ನ ವಿಷಯಯಕ್ಕೆ ಬರೋಣ. ಹೀಗೇ ಒಂದು ದಿನ ಹಣ್ಣಿನಂಗಡಿಯ ಪಕ್ಕದ ಕಲ್ಲುಬೆಂಚಲ್ಲಿ ಕುಳಿತು ಗಮನಿಸುತ್ತಿದ್ದೆ. ಒಂದೊಂದು ಬಟ್ಟಿಗಳಲ್ಲೂ ಅತ್ಯಾಕರ್ಷಕವಾಗಿ ಜೋಡಣೆಗೊಂಡ ಬಣ್ಣ ಬಣ್ಣದ ವಿವಿಧ ಹಣ್ಣುಗಳು. ಎಲ್ಲರ ಆಕರ್ಷಕ ಕೇಂದ್ರಬಿಂದು ಆ ಬುಟ್ಟಿಯಲ್ಲಿದ್ದ ಹಣ್ಣುಗಳಾಗಿದ್ದವು. ನಾನು ಕುಳಿತ ಪಕ್ಕದಲ್ಲೇ ಒಂದು ಬುಟ್ಟಿಯಲ್ಲಿ ಒಂದರ್ಥದಲ್ಲಿ ರಿಜೆಕ್ಟೆಡ್ ಎಂದು ಹೇಳಬಹುದಾದ ಹಣ್ಣುಗಳಿದ್ದವು. ಹೀಗೆ ಅದು ಇದು ಅಂತ ಅಂಗಡಿಯವನಲ್ಲಿ ಮಾತಾಡಿ ಈ ರಿಜೆಕ್ಟೆಡ್ ಹಣ್ಣುಗಳನ್ನು ಯಾಕೆ ಇಲ್ಲಿ ಇಟ್ಟಿದ್ದಿರಿ ಅಂತ ಪ್ರಶ್ನೆ ಮಾಡಿದೆ. ಆತನ ಉತ್ತರ ಕೇಳಿ ಸತ್ಯದರ್ಷನವಾಯಿತು. “ದನಿಕ್ಕುಲೆ ಅವು ಪೋಪುಂಡು. ಅರ್ಧ ರೇಟ್ ಗ್ ಕೊರ್ಪ. ಕೆಲವು ಜ್ಯೂಸ್ದ ಅಂಗಡಿದಕುಲು ಕೇನ್ದ್ ಕೊನೊಪೆರ್” ಅಂದ. (ಅಂದ್ರೆ ಅದರಲ್ಲಿದ್ದ ಹಣ್ಣುಗಳಿಗೆ ಅರ್ಧ ಕ್ರಯ. ಅದಕ್ಕಂತಲೇ ಗಿರಾಕಿಗಳಿದ್ದಾರೆ. ಕೆಲವು ಜ್ಯೂಸ್ ಅಂಗಡಿಯವರು ಕೊಂಡು ಹೋಗುತ್ತಾರೆ. ಹಾಗೆ ಒಂದು ಬದಿಯಲ್ಲಿಇಟ್ಟಿದ್ದೇವೆ ಅಂದ.) ಇದುನಿಜ. ಇದು ವಾಸ್ತವ. ಇಲ್ಲಿ ಜ್ಯೂಸ್ ಅಂಗಡಿಯವನಿಗೆ ಸಂಜೆ ಇಂತಿಷ್ಟು ಹಣ ಕೈಗೆ ಬರಬೇಕು. ಲಾಭ ನಷ್ಟದ ಲೆಕ್ಕಾಚಾರದಲ್ಲಿ ಬುಟ್ಟಿಯಲ್ಲಿದ್ದ ಹಣ್ಣಿಗೆ ಮರ್ಯಾದೆ ಬಂದಿದೆ.(ಗಮನಿಸಿ, ಎಲ್ಲಾ ಹಣ್ಣುಗಳಿಗೂ ಈ ಮರ್ಯಾದೆ ಇದೆ) ಏಕೆಂದರೆ ರೂಪಪರಿವರ್ತನೆಗೊಂಡು ಸ್ವಲ್ಪ ಸಿಹಿ ಚಿಲ್ಡ್ ಥಿಕ್ ಜ್ಯೂಸ್ ಆಗಿಬಿಟ್ಟರೆ ಹಿಸ್ಟರಿ ಹುಡುಕಿಕೊಂಡು ಯಾರು ಹೋಗುತ್ತಾರೆ ಸ್ವಾಮೀ….. ಇಲ್ಲಿ ಬಡವಾಗುವದು ಗ್ರಾಹಕ. ಆರೋಗ್ಯ ಕೆಡುವುದು ಗ್ರಾಹಕನದ್ದು. ನಾಳೆ ಹೊಟ್ಟೆ ಹಾಳಾಗಿ ವಾಂತಿ ಭೇದಿಯಾಗಿ ಎರಡುದಿನ ರಜೆಯಾಗಿ ಮನೆಮಂದಿಗೆಲ್ಲಾ ಸಾಂಕ್ರಾಮಿಕವಾಗಿ ಹೈರಾಣಾಗುವುದು ಗ್ರಾಹಕನೇ.
ನನಗೊಂದು ಮನಸ್ಸಲ್ಲೆ ಪ್ರಶ್ನೆ ಎದ್ದಿತ್ತು. ಯಾವುದೊ ದೇಶದಲ್ಲಿ ನಾವು ಕಳಿಸಿದ ಹಣ್ಣುಗಳಲ್ಲಿ ವಿಷಾಂಶ ಲೆಕ್ಕಕ್ಕಿಂತ ಅಧಿಕವಾದುದರಿಂದ ಎಲ್ಲಾ ಮಾಲುಗಳನ್ನು ವಾಪಸ್ಸು ಕಳಿಸಲಾಯಿತು ಅಂತ. ಹಾಗಾದರೆ ನಮ್ಮವರು ಅದೇ ವಸ್ತುವನ್ನು ತಿನ್ನಲು ಯೋಗ್ಯವಾದವರೇ? ನಾವು ವಿಷಕಂಠರೇ, ಅಥವಾ ಇಲ್ಲೂ ಯಾರಲ್ಲಾದರೂ ವ್ಯಾಪಾರದ ಹೊಂದಾಣಿಕೆ ಇದೆಯೇ. ಅಥವಾ ಸರಕಾರದ ಮಂತ್ರಾಲಯದಲ್ಲಿರುವವರು ನರಸತ್ತವರೇ, ಅಥವಾ ಕೇವಲ ಸಂಬಳಕ್ಕಾಗಿ ದುಡಿಯುವವರೇ? ನನಗೊಂದೂ ಅರ್ಥವಾಗುತ್ತಿಲ್ಲ.
ಇತ್ತೀಚೆಗೆ ‘ಅಮೇರಿಕಾದ ಅನುಭವಗಳು’ ಅಂತ ಒಂದು ಹುಡುಗಿ ತನ್ನ ಬ್ಲಾಗ್ ನಲ್ಲಿ ಎಲ್ಲವನ್ನೂ ವಿವರಿಸುತ್ತಿದ್ದಳು.
ಮಾತನಾಡುತ್ತಾ ಅವಳು ಭಾರತದಲ್ಲಿದ್ದಂತೆ ಇಲ್ಲಿ ಸ್ರ್ಟೀಟ್ ಫುಡ್ ಎಲ್ಲೂ ಕಾಣಿಸೋದೇ ಇಲ್ಲ. ಏನಿದ್ದರೂ ಡ್ರೈವ್ ಥ್ರೂ ಕಂಪನಿ ಅಂಗಡಿಗಳಿರುತ್ತವೆ, ಕೆಲವೊಂದು ಜನನಿಬಿಡ ಪ್ರದೇಶದಲ್ಲಿ ಫುಡ್ ಕಾರ್ಟ್ಸ್, ಫಡ್ ಟ್ರಕ್ಸ್ ಇರುತ್ತವೆ. ಏನಿದ್ದರೂ ಸ್ವಚ್ಛ ಪರಿಸರ, ಸ್ವಚ್ಛ ಪ್ರಸ್ತುತಿಗೆ ಆದ್ಯತೆ ಅಂತಾಳೆ.
ನಮ್ಮ ಕತೇನೇ ಬೇರೆ. ಕೆಲವು ಹೊಟಲ್ ಗಳಲ್ಲಿ ತಮ್ಮ ಸರ್ವಿಂಗ್ ಏರಿಯಾ ಎಷ್ಟು ಸ್ವಚ್ಛ ವಾಗಿದೆಯೋ ಅದರ ನೇರ ವಿರುಧ್ಧ ಅಡುಗೆ ಕೋಣೆಯಿರುತ್ತದೆ. ಒಂದು ಹಳ್ಳಿಯ ಹೋಟಲ್ ನವರ ಬಲದ ಕೈಯಲ್ಲಿ ಸ್ವಲ್ಪವೂ ಕೂದಲಿರಲಿಲ್ಲವಂತೆ. ಎಡಗೈಯಲ್ಲಿ ಇತ್ತು. ಒಬ್ಬ ಕುತೂಹಲ ತಡೆಯಲಾಗದೆ ಕೇಳಿಯೇ ಬಿಟ್ಟನಂತೆ ನಿಮ್ಮ ಬಲಗೈ ಶೇವಿಂಗ್ ಮಾಡಿದಹಾಗಿದೆ, ಎಡಗೈ ಹಾಗ್ಯಾಕಿಲ್ಲ ಅಂತ. ಅದಕ್ಕವನ ಉತ್ತರ ಹೀಗಿದೆ. ಅದೇನು ಗೊತ್ತಾ… ನಾನು ಗೋಳಿಬಜೆಗೆ ಹಿಟ್ಟು ಕಲಸುವಾಗ ಕೈಎಲ್ಲಾ ಹಿಟ್ಟು ಹಿಡಿದಿರುತ್ತೆ. ಚಾಕು ತೆಗೆದುಕೊಂಡು ಎಡಗೈಯಿಂದ ನಿಧಾನವಾಗಿ ಹಿಟ್ಟನ್ನು ತಪಲೆಗೆ ಹಾಕುವಾಗ ಅದು ಜಾರಿ ಜಾರಿ ಹೋಗಿದೆಯಣ್ಣ ಅಂದಾಗ ಗಿರಾಕಿ ಎದ್ದೊ ಬಿದ್ದೋ ಅಲ್ಲಿಂದ ಓಡಿಹೋದನಂತೆ.
ನಮ್ಮ ಕೆಲ ಆಹಾರ ತಯಾರಿಕಾ ಘಟಕಗಳಲ್ಲಿ ಕಾಲಲ್ಲಿ ಮೆಟ್ಟಿ ಬ್ರೆಡ್ ಹಿಟ್ಟು ಕಲಸುವುದು, ಕುಂಡೆ ತುರಿಸುತ್ತಾ ಪಾನೀ ಪೂರಿಯ ಪೂರಿಯ ತಲೆಗೆ ತೂತುಕೊರೆಯುವುದು, ಬ್ರೆಡ್ ನೊಳಗಡೆ ಅದೇನೋ ಸೀಕ್ರೆಟ್ ಅತಿ ಸೀಕ್ರೆಟ್ ಮಸಾಲಾ ತುಂಬುವುದು, ಪ್ರಿಂಟಿಂಗ್ ಪೇಪರ್ ಗಳಲ್ಲಿ ಕೇಕ್ ತಯಾರಿಸುವುದು, ಬಾಯಿ ಚಪ್ಪರಿಸಿ ನಾವು ತಿನ್ನುವುದು. ಕೇರಳದ ಯಾವುದೋ ಹೂವನ್ನು ಪ್ರಸಾದದೊಂದಿಗೆ ಬೆರೆಸುತ್ತಿದ್ದರಂತೆ. ಇದರಿಂದ ಕೆಲಜನರಿಗೆ ಸಮಸ್ಯೆಗಳಾಗುತ್ತಿದ್ದುದು, ಮತ್ತು ಪ್ರಾಣವೇ ಕಳಕೊಂಡ ಪರಿಸ್ಥಿತಿ ಬಂದಾಗ ಸರಕಾರ ಆ ಹೂವನ್ನು ಪ್ರಸಾದಕ್ಕೆ ಸೇರಿಸಬಾರದೆಂದು ನಿರ್ಧಾರ ಕೈಗೊಂಡಿತು.
ನಮಗೂ ಇಂಥಹಾ ಕೆಲವೊಂದು ನಿರ್ಧಾರಗಳನ್ನು ತೆಗೆದುಕೊಳ್ಳುವ, ಕಾರ್ಯಗತಗೊಳಿಸುವ, ನಿರ್ದಾಕ್ಷಿಣ್ಯವಾಗಿ ಕ್ರಮ ತೆಗೆದುಕೊಳ್ಳುವ ಅಧಿಕಾರಿಗಳು ಬೇಕಾಗಿದ್ದಾರೆ. ಅಂಥವರು ಕಾಣಸಿಕ್ಕರೆ ಹೂಮಾಲೆ ಹಾಕಿ ಗೌರವಿಸಬೇಕು ಅಲ್ಲವೇ.
ಅಡಿಕೆ ನಮ್ಮ ಆರ್ಥಿಕ, ಸಾಂಸ್ಕೃತಿಕ, ಮತ್ತು ಸಾಮಾಜಿಕ ಜೀವತಂತ್ರದ ಒಂದು ಅವಿಭಾಜ್ಯ ಭಾಗವಾಗಿದೆ.…
WHO ನಿಲುವನ್ನುಮರುಪರಿಶೀಲಿಸುವಂತೆ ಮಾಡಲು ICMR, ICAR, AIUMS, CSIR, CFTRI ಮೈಸೂರು ಅಥವಾ…
ಸುಳ್ಯ ತಾಲೂಕಿನ ಗುತ್ತಿಗಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಶತಮಾನೋತ್ಸವ ಕಾರ್ಯಕ್ರಮ…
ರಾಜ್ಯದಲ್ಲಿ ಅತಿ ಹೆಚ್ಚು ನಕಲಿ ವೈದ್ಯರು ಕೋಲಾರ ಜಿಲ್ಲೆಯಲ್ಲಿದ್ದಾರೆ. ಇಂತಹ ನಕಲಿ ವೈದ್ಯರ…
ನಬಾರ್ಡ್ ಸಾಲದ ಮಿತಿ ಹೆಚ್ಚಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ದೆಹಲಿಯಲ್ಲಿ ಕೇಂದ್ರ ಹಣಕಾಸು…