ಎಲ್‌ನಿನೋ ಬಲಗೊಳ್ಳುತ್ತಿದ್ದು, ಮಳೆ ಕ್ಷೀಣವಾಗುತ್ತಿದೆ. ಇದರ ಎಫೆಕ್ಟ್ ಹಿಂಗಾರಿನ ಮೇಲೂ ಬಿದ್ದು ಮಳೆ ಕೊರತೆಯಾಗುವ ಸಾಧ್ಯತೆ ಹೆಚ್ಚಾಗಿದೆ ಎಂದು IMD ವರದಿ ತಿಳಿಸಿದೆ. ಸದ್ಯ ರಾಜ್ಯದಲ್ಲಿ ಇರುವ ಬರದ ನಡುವೆ ಇನ್ನಷ್ಟು ಬರ ಹೆಚ್ಚಳವಾಗುವ ಆತಂಕ ಎದುರಾಗಿದೆ. ಅಲ್ಲದೆ, ಈ ಬಾರಿಯ ಎಲ್‌ನಿನೋ ಇತಿಹಾಸದಲ್ಲೇ ಭೀಕರ ಎಲ್‌ನಿನೋ ಎಂದು ಜಾಗತಿಕ ಹವಮಾನ ಇಲಾಖೆಗಳು ಹೇಳುತ್ತಿದೆ. ಕೇವಲ ಒಂದು ತಿಂಗಳಲ್ಲಿ 2 ಡಿಗ್ರಿ ತಾಪಮಾನ ಏರಿಕೆಯಾಗಿರುವುದು ಆತಂಕಕ್ಕೆ ಕಾರಣವಾಗಿದೆ. ಸೆಪ್ಟೆಂಬರ್‌ನಿಂದ 2027 ರ ಆರಂಭದವರೆಗೂ ಎಲ್ ನಿನೊ ಮುಂದುವರಿಯುವ ಸಾಧ್ಯತೆ ಇದೆ. ತಾಪಮಾನ ಮತ್ತು ಮಳೆಯ ಮಾದರಿಯಲ್ಲಿ ಜಾಗತಿಕ ಬದಲಾವಣೆಯ ಆತಂಕ ತಂದಿದೆ.
ಜಾಗತಿಕ ಹವಾಮಾನ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆಯ ಮುನ್ಸೂಚನೆ ಹೊರಬಿದ್ದಿದೆ. 2026 ರ ಆಗಸ್ಟ್ ಮಧ್ಯಭಾಗದ ವೇಳೆಗೆ ಎಲ್ ನಿನೊ ಆರಂಭವಾಗಿದ್ದು, ಮುಂದಿನ ತಿಂಗಳಗಳಲ್ಲಿ ಮತ್ತಷ್ಟು ಬಲಗೊಳ್ಳುವ ಸಾಧ್ಯತೆಯಿದೆ ಎಂದು ವಿಶ್ವ ಹವಾಮಾನ ಸಂಸ್ಥೆ (WMO) ತಿಳಿಸಿದೆ. ಸೆಪ್ಟೆಂಬರ್ ನಿಂದ ನವೆಂಬರ್ 2026 ಹಾಗೂ ಡಿಸೆಂಬರ್ 2026–ಫೆಬ್ರವರಿ 2027 ಅವಧಿಯಲ್ಲೂ ಎಲ್ ನಿನೊ ಮುಂದುವರಿಯುವ ಸಾಧ್ಯತೆ ಸುಮಾರು ಶೇ.100ರಷ್ಟಿದೆ.
ಸಮುದ್ರದ ತಾಪಮಾನದಲ್ಲಿ ತೀವ್ರ ಏರಿಕೆ : ಮಧ್ಯ ಮತ್ತು ಪೂರ್ವ ಸಮಭಾಜಕ ಪೆಸಿಫಿಕ್ ಸಾಗರದ ಮೇಲ್ಮೈ ತಾಪಮಾನ ಸಾಮಾನ್ಯಕ್ಕಿಂತ ಗಣನೀಯವಾಗಿ ಹೆಚ್ಚಾಗಿದೆ. ಮೇ–ಜುಲೈ ಅವಧಿಯಲ್ಲಿ Niño 3.4 ತಾಪಮಾನ ವ್ಯತ್ಯಾಸ ಸುಮಾರು +1.5°C ಇದ್ದರೆ, ಜುಲೈನಲ್ಲಿ ಇದು +2.0°C ತಲುಪಿದೆ. ಜುಲೈ 29 ರಿಂದ ಆಗಸ್ಟ್ 19ರವರೆಗೆ ವಾರದ ಅಂಕಿಅಂಶಗಳಲ್ಲಿ ಇದು ಸುಮಾರು +2.2°Cರಿಂದ +2.6°Cವರೆಗೆ ಏರಿಕೆಯಾಗಿದೆ ಎಂದು ವಿಶ್ವ ಹವಾಮಾನ ಸಂಸ್ಥೆ ಹೇಳಿದೆ. ಸಾಗರದ ಮೇಲ್ಮೈ ಮಾತ್ರವಲ್ಲ, ಅದರ ಆಳದಲ್ಲಿಯೂ ಅಪಾರ ಪ್ರಮಾಣದ ಶಾಖ ಸಂಗ್ರಹವಾಗಿದೆ. ಜುಲೈ ಮತ್ತು ಆಗಸ್ಟ್ ಆರಂಭದಲ್ಲಿ ಕೆಲವು ಪ್ರದೇಶಗಳಲ್ಲಿ ಸಮುದ್ರದ ಆಳದಲ್ಲಿ ತಾಪಮಾನ ವ್ಯತ್ಯಾಸ +8°Cಗಿಂತಲೂ ಅಧಿಕ ದಾಖಲಾಗಿದೆ ಎಂದು ಹೇಳಿದೆ.
ವಾತಾವರಣವೂ ಎಲ್ ನಿನೊವನ್ನು ದೃಢಪಡಿಸುತ್ತಿದೆ : ಸಾಗರದ ಬದಲಾವಣೆಗೆ ಪೂರಕವಾಗಿ ವಾತಾವರಣದಲ್ಲೂ ಎಲ್ ನಿನೊದ ಸ್ಪಷ್ಟ ಲಕ್ಷಣಗಳು ಕಂಡುಬಂದಿವೆ. ಜುಲೈನಲ್ಲಿ Southern Oscillation Index (SOI) ಸರಾಸರಿ -29.1 ಆಗಿದ್ದು, ಮಧ್ಯ ಮತ್ತು ಪೂರ್ವ ಸಮಭಾಜಕ ಪೆಸಿಫಿಕ್‌ನಲ್ಲಿ ಮೋಡ ರಚನೆ ಹೆಚ್ಚಾಗಿರುವುದನ್ನು ಹಾಗೂ ಪಶ್ಚಿಮ ಭಾಗದಲ್ಲಿ ಅದು ಕಡಿಮೆಯಾಗಿರುವುದನ್ನು ವಿಶ್ವ ಹವಾಮಾನ ಸಂಸ್ಥೆ ಉಲ್ಲೇಖಿಸಿದೆ.
2027ರ ಆರಂಭದವರೆಗೂ ಮುಂದುವರಿಯುವ ಸಾಧ್ಯತೆ : ವಿಶ್ವ ಹವಾಮಾನ ಸಂಸ್ಥೆಯ ಜಾಗತಿಕ ಹವಾಮಾನ ಮುನ್ಸೂಚನಾ ಕೇಂದ್ರಗಳ ಇತ್ತೀಚಿನ ಅಂದಾಜಿನ ಪ್ರಕಾರ, ಸೆಪ್ಟೆಂಬರ್–ನವೆಂಬರ್ 2026 ಮತ್ತು ಡಿಸೆಂಬರ್ 2026–ಫೆಬ್ರವರಿ 2027ರಲ್ಲಿ ಎಲ್ ನಿನೊ ಇರುವ ಸಾಧ್ಯತೆ ಸುಮಾರು ಶೇ.100ರಷ್ಟಿದೆ. ENSO-neutral ಪರಿಸ್ಥಿತಿಯ ಸಾಧ್ಯತೆ ಅತ್ಯಲ್ಪವಾಗಿದ್ದು, ಈ ಅವಧಿಯಲ್ಲಿ ಲಾ ನಿನೊಗೆ ಮರಳುವ ಯಾವುದೇ ಸೂಚನೆ ಇಲ್ಲ.
ಮುಂಬರುವ ತಿಂಗಳುಗಳಲ್ಲಿ ಎಲ್ ನಿನೊ ಮತ್ತಷ್ಟು ಬಲಗೊಂಡು ವರ್ಷಾಂತ್ಯದ ವೇಳೆಗೆ ಅತ್ಯಂತ ಪ್ರಬಲ ಹಂತ ತಲುಪುವ ಸಾಧ್ಯತೆ ಇದೆ ಎಂದು ವಿಶ್ವ ಹವಾಮಾನ ಸಂಸ್ಥೆ ಮುನ್ಸೂಚನೆ ನೀಡಿದೆ.
ಕೃಷಿಗೆ ಏನು ಎಚ್ಚರ..? : ಎಲ್ ನಿನೊ ಬಲಗೊಳ್ಳುವುದರಿಂದ ಜಗತ್ತಿನ ಹಲವು ಭಾಗಗಳಲ್ಲಿ ತಾಪಮಾನ ಮತ್ತು ಮಳೆಯ ಮಾದರಿಯಲ್ಲಿ ಗಮನಾರ್ಹ ಬದಲಾವಣೆಗಳ ಸಾಧ್ಯತೆ ಹೆಚ್ಚುತ್ತದೆ ಎಂದು ವಿಶ್ವ ಹವಾಮಾನ ಸಂಸ್ಥೆ ಹೇಳಿದೆ. ಆದರೆ ಎಲ್ ನಿನೊ ಎಷ್ಟು ಪ್ರಬಲವಾಗಿದೆ ಎಂಬುದನ್ನೇ ಆಧರಿಸಿ ನಿರ್ದಿಷ್ಟ ಪ್ರದೇಶದಲ್ಲಿ ಎಷ್ಟು ಮಳೆ ಅಥವಾ ಎಷ್ಟು ಬರ ಉಂಟಾಗುತ್ತದೆ ಎಂದು ನೇರವಾಗಿ ನಿರ್ಧರಿಸಲು ಸಾಧ್ಯವಿಲ್ಲ.
ಹೀಗಾಗಿ ಕರ್ನಾಟಕ ಸೇರಿದಂತೆ ಭಾರತದ ಕೃಷಿಗೆ ನೇರ ಪರಿಣಾಮದ ನಿರ್ದಿಷ್ಟ ಮುನ್ಸೂಚನೆಯನ್ನು ಈ ವಿಶ್ವ ಹವಾಮಾನ ಸಂಸ್ಥೆ ವರದಿ ನೀಡಿಲ್ಲ. ಸ್ಥಳೀಯ ಮಳೆ, ತಾಪಮಾನ ಮತ್ತು ಕೃಷಿ ಪರಿಣಾಮವನ್ನು ಅಂದಾಜಿಸಲು ಭಾರತೀಯ ಹವಾಮಾನ ಇಲಾಖೆ (IMD) ಸೇರಿದಂತೆ ರಾಷ್ಟ್ರೀಯ ಹಾಗೂ ಪ್ರಾದೇಶಿಕ ಹವಾಮಾನ ಮುನ್ಸೂಚನೆಗಳನ್ನು ಎಲ್ ನಿನೊ ಪರಿಸ್ಥಿತಿಯೊಂದಿಗೆ ಒಟ್ಟಾಗಿ ಪರಿಗಣಿಸಬೇಕಾಗುತ್ತದೆ. ವಿಶ್ವ ಹವಾಮಾನ ಸಂಸ್ಥೆ ವರದಿ ಸಿದ್ಧಪಡಿಸುವ ಪ್ರಕ್ರಿಯೆಯಲ್ಲಿ IMD ಮತ್ತು IITM ಸೇರಿದಂತೆ ಭಾರತೀಯ ಸಂಸ್ಥೆಗಳೂ ಭಾಗವಹಿಸಿವೆ.
ಏಕೆ ಗಮನಿಸಬೇಕು? : ಎಲ್ ನಿನೊ ಸಂದರ್ಭದಲ್ಲಿ ಮಧ್ಯ ಮತ್ತು ಪೂರ್ವ ಪೆಸಿಫಿಕ್ ಸಾಗರದ ನೀರು ಸಾಮಾನ್ಯಕ್ಕಿಂತ ಹೆಚ್ಚು ಬೆಚ್ಚಗಾಗುತ್ತದೆ. ಈ ಸಾಗರ–ವಾತಾವರಣದ ಪರಸ್ಪರ ಕ್ರಿಯೆ ಜಗತ್ತಿನ ವಿವಿಧ ಭಾಗಗಳ ಹವಾಮಾನ ಮಾದರಿಗಳ ಮೇಲೆ ಪರಿಣಾಮ ಬೀರುತ್ತದೆ. ಆದರೆ ಪ್ರತಿ ಎಲ್ ನಿನೊ ಘಟನೆಯ ಪರಿಣಾಮ ಒಂದೇ ರೀತಿಯಾಗಿರುವುದಿಲ್ಲ. ಹೀಗಾಗಿ ರೈತರು ಮುಂದಿನ ತಿಂಗಳುಗಳಲ್ಲಿ ಕೇವಲ ಎಲ್ ನಿನೊ ಸುದ್ದಿಯನ್ನೇ ಆಧರಿಸಿ ಮಳೆ ಅಥವಾ ಬೆಳೆ ಪರಿಸ್ಥಿತಿಯ ಬಗ್ಗೆ ತೀರ್ಮಾನಿಸುವುದಕ್ಕಿಂತ, ಸ್ಥಳೀಯ ಹವಾಮಾನ ಮುನ್ಸೂಚನೆ, ಮಳೆಯ ವಿತರಣೆ ಮತ್ತು ಮಣ್ಣಿನ ತೇವಾಂಶದ ಪರಿಸ್ಥಿತಿಯನ್ನು ನಿರಂತರವಾಗಿ ಗಮನಿಸುವುದು ಮುಖ್ಯ.
The WMO says El Niño is firmly established and strengthening, with a near-100% probability of persistence through September–November 2026 and December 2026–February 2027. The event could reach very strong intensity and peak towards the end of 2026, increasing the likelihood of significant shifts in global temperature and rainfall patterns, although regional impacts will vary.


