ಸಿಕ್ಕಿದ ಅವಕಾಶವನ್ನೇ ಬಳಸಿಕೊಂಡು ಬುಡಕಟ್ಟು – ಸಿದ್ದಿ ಸಮುದಾಯದ ವಿದ್ಯಾರ್ಥಿಯೊಬ್ಬರು ರಾಷ್ಟ್ರಮಟ್ಟದಲ್ಲಿ ಕ್ರೀಡಾ ಸಾಧನೆ ಮಾಡಿ ಗಮನ ಸೆಳೆದಿದ್ದಾರೆ.
ಉತ್ತರ ಕನ್ನಡ ಜಿಲ್ಲೆ ಹಳಿಯಾಳ ತಾಲೂಕಿನ ಸಿದ್ದಿ ಬುಡಕಟ್ಟು ಸಮುದಾಯದ ವಿದ್ಯಾರ್ಥಿನಿ ಮನಿಷಾ ಸಿದ್ದಿ ಕ್ರೀಡಾ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡುವ ಮೂಲಕ ಜಿಲ್ಲೆ, ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲೂ ತಮ್ಮ ಸಾಧನೆ ದಾಖಲಿಸುತ್ತಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ತಾಲೂಕಿನ ಕುಗ್ರಾಮ ಜಟ್ಕಾ ಹೊಸೂರಿನ ಮನಿಷಾ ಸಿದ್ದಿ, ಕುಸ್ತಿ ಕ್ರೀಡೆಯಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ಜಿಲ್ಲೆ, ರಾಜ್ಯ ತಮ್ಮ ಕಡೆಗೆ ನೋಡುವಂತೆ ಮಾಡಿದ್ದಾರೆ. ಮನಿಷಾ ಅವರಿಗೆ ಬಾಲ್ಯದಿಂದಲೇ ಕ್ರೀಡೆಯ ಬಗ್ಗೆ ಹೆಚ್ಚಿನ ಆಸಕ್ತಿ. ಇದನ್ನು ಗಮನಿಸಿದ ಜೋಯಿಡಾ ತಾಲೂಕಿನ ರಾಮನಗರದ ಬಾಪೂಜಿ ಕಾಲೇಜು ಮತ್ತು ಕೆಲ ದಾನಿಗಳ ಪ್ರೋತ್ಸಾಹದಿಂದ ಕುಸ್ತಿಯಲ್ಲಿ ಮತ್ತಷ್ಟು ಆಸಕ್ತಿಯನ್ನು ಹೆಚ್ಚಿಸಿದೆ. ಓದು ಮತ್ತು ಕ್ರೀಡೆ ಎರಡನ್ನೂ ನಿಯಮಿತವಾಗಿ ಅಭ್ಯಾಸ ಮಾಡುತ್ತಿರುವ ಅವರು ಹಳಿಯಾಳ ತಾಲೂಕಿನಲ್ಲಿ ಜನಪ್ರಿಯವಾಗಿರುವ ಕುಸ್ತಿ ಕ್ರೀಡೆಗೆ ಇನ್ನೊಂದು ಗರಿ ಮೂಡಿಸಿದ್ದಾರೆ. ಬಡತನ ಮತ್ತು ಶಿಕ್ಷಣದಲ್ಲಿ ಹಿಂದುಳಿದಿರುವ ಸಮುದಾಯದ ಮನಿಷಾ ಸಿದ್ದಿ, ಕುಸ್ತಿಯ ಮೂಲಕ ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವಂತಹ ಸಾಧನೆ ಮಾಡಬೇಕೆಂಬ ಛಲ ಹಾಗೂ ಮಹತ್ವಾಕಾಂಕ್ಷೆ ಹೊಂದಿದ್ದಾರೆ.
ಈಗಾಗಲೇ ರಾಷ್ರಮಟ್ಟದಲ್ಲಿ ಬೆಳ್ಳಿ ಪದಕ, ದಸರಾ ಕ್ರೀಡಾ ಕೂಟದಲ್ಲಿ ಮುಖ್ಯಮಂತ್ರಿ ಚಿನ್ನದ ಪದಕಗಳನ್ನು ಗಳಿಸಿ ಮುಂದೊಂದು ದಿನ ದೊಡ್ಡ ಸಾಧನೆ ಮಾಡುವ ವಿಶ್ವಾಸ ಮೂಡಿಸಿದ್ದಾರೆ. ಇತ್ತೀಚೆಗೆ ಉತ್ತರ ಪ್ರದೇಶದ ಮೀರತ್ ನಲ್ಲಿ ನಡೆದ 68ನೇ ರಾಷ್ಟ್ರೀಯ ಸ್ಕೂಲ್ ಗೇಮ್ ನ ಕುಸ್ತಿ ಚಾಂಪಿಯನ್ ಶಿಪ್ ನಲ್ಲಿ 72 ಕೆಜಿ ವಿಭಾಗದಲ್ಲಿ ಕಂಚಿನ ಪದಕ ಪಡೆದು ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ.