ಕೊರೋನಾ ಅನೇಕರಿಗೆ ಸಂಕಷ್ಟ ಎಂದೆನಿಸಿತು. ಆದರೆ ಈ ಕುಟುಂಬ ಕಾಲೇಜು ವಿದ್ಯಾರ್ಥಿಗಳಿಗೆ ಕೊರೋನಾ ಉತ್ಸಾಹ ತಂದಿತು. ಮನೆಯಂಗಳಲ್ಲಿ ಭತ್ತದ ಕೃಷಿ ಮಾಡಿ ಕೃಷಿಯಲ್ಲೂ ವಿದ್ಯಾರ್ಥಿಗಳಿಗೆ ಆಸಕ್ತಿ ಬತ್ತಿಲ್ಲ ಎಂದು ತೋರಿಸಿದ್ದಾರೆ. ಈ ಕೊರೋನಾ ಪಾಸಿಟಿವ್ ಸ್ಟೋರಿ ನೀವು ಓದಬೇಕು. ಗ್ರಾಮೀಣ ಭಾಗದ ಬದಲಾವಣೆಯ ಈ ಪ್ರತಿಬಿಂಬ ನಿಮ್ಮ ಮುಂದೆ..
ಕೊರೋನಾ ಸಂಕಷ್ಟ ಎಂದು ಕುಳಿತಿದ್ದರೆ ಈ ವಿದ್ಯಾರ್ಥಿಗಳು ಮೊಬೈಲ್ ನೋಡುತ್ತಾ ಕಾಲ ಕಳೆಯುತ್ತಿದ್ದರೇನೋ. ಆದರೆ ‘ಮನಸ್ಸಿದ್ದರೆ ಮಾರ್ಗ’ ಎಂಬ ಗಾದೆ ಮಾತಿನಂತೆ ಮನಸ್ಸು ಮಾಡಿದರೆ ಏನು ಬೇಕಾದರೂ ಸಾಧಿಸಬಹುದು ಎನ್ನುವುದಕ್ಕೂ ಇದೊಂದು ಉದಾಹರಣೆ. ಓದಿನ ನಡುವೆಯೂ ಬಿಡುವು ಮಾಡಿಕೊಂಡು ಭತ್ತ ಬೆಳೆದಿದ್ದು, ಇನ್ನೇನು ಕಟಾವಿಗೆ ಸಿದ್ದಗೊಂಡಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಕೇಶವ ಗೌಡ ಹಾಗೂ ನಿರ್ಮಲ ದಂಪತಿಯ ಅವಳಿ ಪುತ್ರರು ಭುವನ್ ಹಾಗೂ ಭವನ್. ಪ್ರಸ್ತುತ ಸಂತ ಫಿಲೋಮಿನಾ ಕಾಲೇಜಿನಲ್ಲಿ ತೃತೀಯ ವರ್ಷದ ಬಿಎಸ್ಸಿ ವಿಧ್ಯಾಭ್ಯಾಸವನ್ನು ಮಾಡಿಕೊಂಡಿರುವ ಇವರು ಕೋವಿಡ್ 19 ನಂತಹ ಸಂಕಷ್ಟದ ಸಮಯವನ್ನು ಭತ್ತ ಬೆಳೆಯುವ ಮೂಲಕ ಸದುಪಯೋಗಪಡಿಸಿಕೊಂಡಿದ್ದಾರೆ. ಹೆಚ್ಚಾಗಿ ಭತ್ತದ ಕೃಷಿಯನ್ನೇ ಅವಲಂಬಿಸಿಕೊಂಡಿದ್ದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇತ್ತೀಚೆಗೆ ಭತ್ತದ ಬೆಳೆ ಮರೆಯಾಗಿ ವಾಣಿಜ್ಯ ಬೆಳೆಗಳು ತಲೆ ಎತ್ತುತ್ತಿವೆ. ಇದರಿಂದಾಗಿ ಹಲವು ಜನರಿಗೆ ಭತ್ತದ ಕೃಷಿಯ ಬಗ್ಗೆ ಅರಿವೇ ಇಲ್ಲದ ಪರಿಸ್ಥಿತಿ ನಿರ್ಮಾಣಗೊಂಡಿದೆ. ಹೊಸ ತಲೆಮಾರಿನ ಜನರಿಗೆ ಭತ್ತ ಎಲ್ಲಿ ಬೆಳೆಯುತ್ತಾರೆ ಎಂಬುದರ ಬಗ್ಗೆಯೇ ಸಂಶಯವಿದೆ. ಇಂತಹದ್ದೇ ಸಂಶಯ ತಮ್ಮಮನೆಯ ಪುಟ್ಟ ತಂಗಿಯಲ್ಲಿ ಮೂಡಿದಾಗ ಸ್ವತಃ ತಾವೇ ತಮ್ಮ ಮನೆಯ ಅಂಗಳದಲ್ಲಿ ಭತ್ತ ಬೆಳೆಯುವ ಮೂಲಕ ತಂಗಿಯ ಸಂಶಯವನ್ನು ದೂರಮಾಡಿದ್ದಾರೆ ಹಾಗೂ ಭತ್ತದ ಮಹತ್ವವನ್ನು ಯುವಜನತೆಗೆ ತಿಳಿಸಲು ಮುಂದಾಗಿದ್ದಾರೆ.
ಕಳೆದ ಮೂರು ವರ್ಷಗಳಿಂದ ಭತ್ತ ಬೆಳೆಯುವುದನ್ನು ಪ್ರಾರಂಭಿಸಿದ ಇವರು ಮನೆಯ ಅಂಗಳವನ್ನು ಸಮತಟ್ಟು ಮಾಡಿ, ಮಣ್ಣನ್ನು ಹದ ಮಾಡಿ, ಮಣ್ಣು ಕೊಚ್ಚಿ ಹೋಗದಂತೆ ಸುತ್ತಲೂ ಕಟ್ಟೆಯನ್ನು ಕಟ್ಟಿ ಭತ್ತದ ಕೃಷಿ ಮಾಡಿದ್ದಾರೆ. ಭತ್ತದ ಪೈರಿನ ಮಧ್ಯೆ ಹುಲ್ಲು ಬೆಳೆಯದಂತೆ ತೆಂಗಿನ ಗರಿ ಹಾಗೂ ಅಡಿಕೆ ಸಿಪ್ಪೆಗಳನ್ನು ಹಾಕಿದ್ದಾರೆ. ಇದೀಗ ಶ್ರಮಕ್ಕೆ ಪ್ರತಿಫಲ ಎಂಬಂತೆ ಬೆಳೆಗಳು ತಲೆಯೆತ್ತಿ ನಿಂತು ಕೊಯ್ಲಿಗೆ ಸಿದ್ದಗೊಂಡಿದೆ. ತಮ್ಮ ಮನೆಯ ಖರ್ಚು ಹಾಗೂ ತುಳುನಾಡಿನ ಧಾರ್ಮಿಕ ವಿಧಿವಿಧಾನಗಳಿಗೆ ಬೇಕಾದ ಭತ್ತವನ್ನು ಇವರು ಸ್ವತಃ ತಾವೇ ತಯಾರಿಸಿಕೊಂಡಿದ್ದಾರೆ.ಕೆಲಸ ಮಾಡಲು ಬೇರೆಯವರನ್ನು ಕರೆಯದೆ ತಾವಿಬ್ಬರೇ ಎಲ್ಲಾ ಸಿದ್ಧತೆ ಮಾಡಿಕೊಂಡ ಇವರಿಗೆ ತಮ್ಮ ಮನೆಯವರೂ ಸಂಪೂರ್ಣ ಸಹಕಾರ ನೀಡಿದ್ದಾರೆ.
ಇವರು ಯಾವುದೇ ಕೀಟನಾಶಕ ಬಳಸದೆ ದನದ ಕೊಟ್ಟಿಗೆ ತೊಳೆದ ನೀರನ್ನೇ ಬೆಳೆಗೆ ಬಿಡುತ್ತಿದ್ದಾರೆ. ಕರಾವಳಿ ಪ್ರದೇಶದಲ್ಲಿ ಭತ್ತ ಬೆಳೆಯುವವರ ಸಂಖ್ಯೆ ಕ್ಷೀಣಿಸುತ್ತಿದ್ದು, ಇದರ ಅನಿವಾರ್ಯತೆಯನ್ನು ತೋರಿಸುವ ಸಣ್ಣ ಪ್ರಯತ್ನವನ್ನೂ ಈ ಸಹೋದರರು ಮಾಡಿದ್ದಾರೆ. ನಾಣ್ಯ ಸಂಗ್ರಹಣೆ, ಕಬಡ್ಡಿ ಹಾಗೂ ಕೃಷಿ ಚಟುವಟಿಕೆಗಳಲ್ಲಿ ತೊಡೆಗುವುದು ಇವರ ಹವ್ಯಾಸ.
ಬರಹ : # ಲಾವಣ್ಯ. ಎಸ್.
ಪತ್ರಿಕೋದ್ಯಮ ವಿದ್ಯಾರ್ಥಿನಿ
ಸಂತ ಫಿಲೋಮಿನಾ ಕಾಲೇಜು ದರ್ಬೆ -ಪುತ್ತೂರು
ಅಭಿವೃದ್ಧಿ ಸವಾಲುಗಳ ನಡುವೆಯೂ ದೇಶದ ಎಲ್ಲ ತೈಲ ಉತ್ಪಾದನಾ ಕಂಪನಿಗಳು 2045ರ ವೇಳೆಗೆ…
ಕಾಫಿ ಸಂಶೋಧನೆ ಮತ್ತು ಅಭಿವೃದ್ಧಿ, ತಂತ್ರಜ್ಞಾನ ವಿಸ್ತರಣೆ, ಮಾರುಕಟ್ಟೆ ಅಭಿವೃದ್ಧಿಯಲ್ಲಿ ಕಾಫಿ ಮಂಡಳಿ…
ರೈತ ಉತ್ಪಾದಕ ಸಂಸ್ಥೆಗಳು ರೈತರು ಮತ್ತು ಇಲಾಖೆಯ ನಡುವೆ ಉತ್ತಮವಾಗಿ ಕಾರ್ಯನಿರ್ವಹಿಸುವ ಮೂಲಕ…
ದಕ್ಷಿಣ ಕನ್ನಡದ ಸುಳ್ಯದಲ್ಲಿ 40.4 ಡಿಗ್ರಿ ಸೆಲ್ಸಿಯಸ್, ಉಪ್ಪಿನಂಗಡಿಯಲ್ಲಿ 39.6, ಪಾಣೆ ಮಂಗಳೂರಿನಲ್ಲಿ …
ಕೃಷಿಯಲ್ಲಿ ತೊಡಗಿರುವವರಲ್ಲಿ ಶೇಕಡಾ 80ರಷ್ಟು ಮಂದಿ ಸಣ್ಣ ರೈತರು. ಈ ಸಮುದಾಯ ಮಾರುಕಟ್ಟೆ…
ಬೇಸಿಗೆ ಕಾಲ ಪ್ರಾರಂಭವಾಗಿರುವುದರಿಂದ ಜಿಲ್ಲೆಯಲ್ಲಿ ಕುಡಿಯುವ ನೀರಿನ ನಿರ್ವಹಣೆ ಹಾಗೂ ಕಾಡ್ಗಿಚ್ಚು ನಿರ್ವಹಣೆ…