ಕೃಷಿ ಪೈಪಿಗೆ 500 ರೂಪಾಯಿ ಲಂಚ….! | ಸುಳ್ಯದ ಕೃಷಿ ಇಲಾಖೆಯ ವೈಖರಿಯ ತೆರೆದಿರಿಸಿದ ವಿದ್ಯಾರ್ಥಿ..! | ಪತ್ರಿಕೆಗೆ ಬರೆದ ಬರಹ ವೈರಲ್ |

January 2, 2024
10:04 AM
ಶಾಲಾ ಬಾಲಕ ಆಶಿಷ್‌ ಬರಹ ಪತ್ರಿಕೆಯ ಮೂಲಕ ವೈರಲ್‌ ಆಗಿದೆ. ಈಗ ಇಲ್ಲಿನ ಜನಪ್ರತಿನಿಧಿಗಳು ಇಲಾಖೆಯ ವಿರುದ್ಧ, ಭ್ರಷ್ಟಾಚಾರದ ವಿರುದ್ಧ ಮಾತನಾಡುವ ಧೈರ್ಯ ತೋರಿಸಿಯಾರೇ..?

ಕೃಷಿಕ ಯಾವತ್ತೂ ಸಂಕಷ್ಟ ಪಡಬೇಕಾದ ಸ್ಥಿತಿ. ಕೃಷಿಯಲ್ಲಿ ಲಾಭ ನಷ್ಟದ ಜೊತೆಗೆ ಕೃಷಿಕರಿಗೆ ಬೇಕಾದ ಅಗತ್ಯ ವಸ್ತುಗಳನ್ನೂ ಕೃಷಿ ಇಲಾಖೆಯಿಂದ ಪಡೆಯಲು ಲಂಚ ನೀಡಬೇಕೇ..? ಅಂತಹದ್ದೊಂದು ಸಂಗತಿ ವಿದ್ಯಾರ್ಥಿಯೊಬ್ಬನ ಬರಹದಿಂದ ತಿಳಿದಿದೆ. ಬಾಲಕ ಬರೆದ ಪತ್ರ ಭಾರೀ ವೈರಲ್‌ ಆಗಿದೆ. ಸುಳ್ಯದಂತಹ ಪ್ರದೇಶದಲ್ಲಿ 500 ರೂಪಾಯಿವರೆಗೂ ಲಂಚ ಇದೆ ಎಂದರೆ ಇಲ್ಲಿನ ಆಡಳಿತ, ಜನಪ್ರತಿನಿಧಿಗಳು ಮೌನವಾಗಿರುವುದು ಏಕೆ..? ಈ ಪ್ರಶ್ನೆ ಈಗ ದೊಡ್ಡದಾಗಿ ಕಾಡಿದೆ.

Advertisement

ಸುಳ್ಯದ ಗುತ್ತಿಗಾರು ಸರ್ಕಾರಿ ಶಾಲೆಯ ವಿದ್ಯಾರ್ಥಿ ಆಶಿಷ್‌ , ಸುಳ್ಯದ ಸುದ್ದಿಬಿಡುಗಡೆ ಪತ್ರಿಕೆ ಬರೆದ ಪತ್ರ ಪತ್ರಿಕೆಯ ಒಳ ಪುಟದ 14 ನೇ ಪುಟದಲ್ಲಿ ಪ್ರಕಟವಾಗಿತ್ತು. ಸೋಶಿಯಲ್‌ ಮೀಡಿಯಾದಲ್ಲಿ ಈ ಪತ್ರ ವೈರಲ್‌ ಆಗಿದೆ. ಆ ಪತ್ರದಲ್ಲಿ ಬಾಲಕ ಹೀಗೆ ಬರೆದಿದ್ದಾನೆ,

ಬಾಲಕ ಬರೆದ ಪತ್ರ....
ನಾನು ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಗುತ್ತಿಗಾರು ಇಲ್ಲಿ 5 ನೇ ತರಗತಿ ವಿದ್ಯಾರ್ಥಿ.  ನಿನ್ನೆ ನಾನು ಮತ್ತು ಅಪ್ಪ ಸ್ಲರಿ ಪೈಪು ತರಲು ಸುಳ್ಯ ಕೃಷಿ ಇಲಾಖೆಗೆ ಹೋಗಿದ್ದೆವು. ಅಲ್ಲಿ ಒಂದು ಚೀಟಿ ಕೊಟ್ಟರು. ಮತ್ತೆ ಅವರು ಮಡ್ಡು ಕೇಳಿದರು. ಅಪ್ಪ 200 ರೂ. ಕೊಟ್ಟರು. ಆಗ ಅವರು ಹೇಳಿದರು, ಈಗ 200 ಅಲ್ಲ 500 ಆಗಿದೆ.

ಆಗ ಅಪ್ಪ 500 ರೂ. ಕೊಟ್ಟರು. ಪೈಪ್ ಲೋಡ್ ಮಾಡಿ ಮನೆಗೆ ಬರುವಾಗ ನಾನು ಅಪ್ಪನ ಹತ್ತಿರ ಕೇಳಿದೆ- “500 ರೂ.ಗೆ ಇಷ್ಟು ಪೈಪ್‌ ಸಿಕ್ಕಿತಾ?” “500 ಅವರಿಗೆ ಲಂಚ. ಪೈಪ್‌ ಗೆ  4000 ರೂ. ಮೊದಲೇ ಕಟ್ಟಿದ್ದೇನೆ” ಅಪ್ಪ ಉತ್ತರಿಸಿದರು. ಆಗ ನಾನು ನೆನೆಸಿಕೊಂಡೆ – ‘ ಅವತ್ತು ನಾನು ಭ್ರಷ್ಟಾಚಾರ ನಿರ್ಮೂಲನೆಯ ಬಗ್ಗೆ ಪ್ರಬಂಧ ಬರೆದಿದ್ದೆ. ಆಗ ಅಪ್ಪ ಹೇಳಿದ್ದರು- ‘ಭ್ರಷ್ಟಾಚಾರವಾಗುವಾಗ ಯುವ ಜನತೆ ಪ್ರಶ್ನಿಸಬೇಕು’. ಈಗ ನಾನು ಅಪ್ಪನ ಬಳಿ ಕೇಳಿದೆ “ಲಂಚ ಭ್ರಷ್ಟಾಚಾರ ಮಾಡಬಾರದು ತಾನೇ? ಅವತ್ತು ನೀವೇ ಹೇಳಿದ್ದಿರಿ.

ಆಗ ಅಪ್ಪ “ನಾನು 500 ಕೊಟ್ಟದ್ದು ಯಾಕೆಂದರೆ ಅವರು ಪೈಪು ಕೊಡದಿದ್ದರೆ ಎಂದು ಹೆದರಿ” ಎಂದರು. ‘ಹಾಗಾದರೆ ನಾನು ಪೊಲೀಸರಿಗೆ ಹೇಳಲೇ? ಎಂದು ಕೇಳಿದಾಗ ಅಪ್ಪ, “ಅಂದು ದೇವಚಳ್ಳ ಶಾಲೆಯಲ್ಲಿ ಒಂದು ಲಕ್ಷ ಭ್ರಷ್ಟಾಚಾರ ಆಗಿ, ದೂರು ಕೊಟ್ಟಾಗ ಯಾರೂ ಬರಲಿಲ್ಲ, ಈಗ 500 ರೂ.ಗೆ ಬರುವರೇ?” ಎಂದು ಮರು ಪ್ರಶ್ನಿಸಿದರು. ಈಗ ಅಪ್ಪ ತೋಟಕ್ಕೆ ಹೋಗಿದ್ದಾರೆ. ಅದಕ್ಕೆ ಅಪ್ಪನಿಗೆ ತಿಳಿಯದ ಹಾಗೆ ಈ ಪತ್ರ ಬರೆಯುತ್ತಿದ್ದೇನೆ.

ಒಂದು ಪ್ರಶ್ನೆ ನಿಮ್ಮಲ್ಲಿ – ‘ಈ ಭ್ರಷ್ಟಾಚಾರ ನಾವು ದೊಡ್ಡದಾದ ಮೇಲೂ ಇರುತ್ತದೆಯೇ? ಇದಕ್ಕೆ ಸಾವಿಲ್ಲವೇ? ಆ ದಿನ ಅಲ್ಲಿಗೆ ಪೈಪು ತರಲು 130 ಜನ ಬಂದಿದ್ರು. ಅದನ್ನು ಚೀಟಿಯಲ್ಲಿ ನೋಡಿದೆನು, ಪ್ರತಿ ಜನರ ಬಳಿಯೂ 500ರೂ. ಕೇಳಿದರೆ ದಿನಕ್ಕೆ 65,000 ವಾಗುತ್ತದೆ. ಇದಕ್ಕೆ ಅಂತ್ಯ ಹೇಗೆ? ದಯವಿಟ್ಟು ತಿಳಿಸಿ.

ಐದನೇ ತರಗತಿಯ ಈ ಬಾಲಕನ ಪ್ರಶ್ನೆ ಬಹಳ ಗಂಭೀರವಾಗಿದೆ. ಸುಳ್ಯದ ವ್ಯವಸ್ಥೆಗೆ ಹಿಡಿದ ಕೈಗನ್ನಡಿಯಾಗಿದೆ. ಕೃಷಿ ಇಲಾಖೆಯಲ್ಲಿ 500 ರೂಪಾಯಿ ಲಂಚವೂ ನಡೆಯುತ್ತದೆ..!. ಹಾಗಿದ್ದರೂ ಸುಳ್ಯದ ಜನಪ್ರತಿನಿಧಿಗಳಿಗೆ ಈ ಲಂಚಾವತಾರದ ಮಾಹಿತಿ ಇಲ್ಲ..!. ಈಗ ಈ ಪತ್ರ ವೈರಲ್‌ ಆಗಿದೆ. ಮಾಜಿ ಸಚಿವ, ಶಾಸಕ ಸುರೇಶ್‌ ಕುಮಾರ್‌ ಅವರು ಕೂಡಾ ಈ ಪತ್ರವನ್ನು ಶೇರ್‌ ಮಾಡಿದ್ದಾರೆ.ಮಾತ್ರವಲ್ಲ ಅವರು ಉಲ್ಲೇಖಿಸಿದ್ದಾರೆ, ” ಈ ಬಾಲಕನ ಪತ್ರ ಸರ್ಕಾರಿ ಯಂತ್ರಕ್ಕೆ ಒಂದು ಸವಾಲು!”.

ಸ್ಥಳೀಯ ಆಡಳಿತಗಳು ಏಕೆ ಮೌನವಾಗಿವೆ. ಕೃಷಿಕರ ಅದರಲ್ಲೂ ಸುಳ್ಯದಂತಹ ಪ್ರದೇಶದಲ್ಲಿ ಅಡಿಕೆ ಬೆಳೆಯೇ ಪ್ರಮುಖ. ಈಗಾಗಲೇ ಬಹುತೇಕ ಕಡೆ ಹಳದಿ ಎಲೆರೋಗ, ಎಲೆಚುಕ್ಕಿ ರೋಗದಿಂದ ಕೃಷಿಕರೂ ಕಂಗಾಲಾಗಿದ್ದಾರೆ. ಇಂತಹ ಸಂದರ್ಭದಲ್ಲೂ 500 ರೂಪಾಯಿ ಲಂಚ ನಡೆಯುತ್ತದೆ ಎಂದರೆ, ಆಡಳಿತ ಜನಪರವಾಗಿಲ್ಲ ಎಂಬುದೇ ಅರ್ಥ. ಇದೇ ಪತ್ರದಲ್ಲಿ ಬಾಲಕ ಉಲ್ಲೇಖಿಸಿದ್ದಾನೆ, ದೇವಚಳ್ಳ ಶಾಲೆಯಲ್ಲಿ ಒಂದು ಲಕ್ಷದ ಭ್ರಷ್ಟಾಚಾರ ಆಗಿರುವ ಬಗ್ಗೆಯೂ ಇದೆ. ಅದು ಏಕೆ ಮುಚ್ಚಿ ಹೋಯಿತು…!. ಎಲ್ಲೂ ಕಾಣದೆ ಮಾಯವಾದ್ದು ಹೇಗೆ..? ಇದೆಲ್ಲವೂ ಸುಳ್ಯದ ವ್ಯವಸ್ಥೆಯ ಕೈಗನ್ನಡಿ ಎನ್ನಬಹುದೇ ?

ಈಗ ಸುಳ್ಯದ ಜನಪ್ರತಿನಿಧಿಗಳು ಲಂಚ ಪಡೆದ ಅಧಿಕಾರಿಯನ್ನು ಕರೆಯಿಸಿ ಈ ಬಾಲಕನನ್ನೂ ಆತನ ತಂದೆಯನ್ನೂ ಕರೆಯಿಸಿ 500 ರೂಪಾಯಿ ವಾಪಾಸ್‌ ಮಾಡಿಸಿದರೆ ಬಹುಶ: ಸುಳ್ಯದ ಲಂಚಾವತಾರದ ಮೊದಲ ಬ್ರೇಕ್‌ ಆದೀತು. ಆದರೆ ಈ ಬಗ್ಗೆ ಮಾತನಾಡುವ ಜನಪ್ರತಿನಿಧಿ ಯಾರು..?

 

Advertisement

Advertisement

ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಮಹೇಶ್ ಪುಚ್ಚಪ್ಪಾಡಿ

ಕೃಷಿಕ ಹಾಗೂ ಕೃಷಿ ಪತ್ರಕರ್ತ | 2007 ರಿಂದ ವಿವಿಧ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ. ಉಷಾಕಿರಣ, ಹೊಸದಿಗಂತ, ವಿಜಯವಾಣಿ ಹಾಗೂ ಸುವರ್ಣ ನ್ಯೂಸ್‌ ಚಾನೆಲ್‌ನಲ್ಲಿ ವರದಿಗಾರರಾಗಿ, ವಿಭಾಗ ಮುಖ್ಯಸ್ಥರಾಗಿ ಕೆಲಸ ಮಾಡಿದ್ದಾರೆ. ಗ್ರಾಮೀಣಾಭಿವೃದ್ಧಿ ಹಾಗೂ ಕೃಷಿ ಇವರ ಆಸಕ್ತಿಯ ವಿಷಯವಾಗಿದೆ.  

ಇದನ್ನೂ ಓದಿ

ಭದ್ರ ಜಲಾಶಯದಿಂದ ತುಂಗಭದ್ರಾ ನದಿಗೆ 8 ಸಾವಿರ ಕ್ಯೂಸೆಕ್ ನೀರು | ನದಿಪಾತ್ರದ ಜನರಿಗೆ ಜಿಲ್ಲಾಡಳಿತ ಎಚ್ಚರಿಕೆ
April 1, 2025
9:38 PM
by: The Rural Mirror ಸುದ್ದಿಜಾಲ
ಮನ್ರೇಗಾ ಕೂಲಿ ದರ ದಿನಕ್ಕೆ 370 ರೂಪಾಯಿಗೆ ಏರಿಕೆ
April 1, 2025
9:28 PM
by: The Rural Mirror ಸುದ್ದಿಜಾಲ
ನಾಳೆಯಿಂದ ರಾಜ್ಯದ ಹಲವೆಡೆ ಮಳೆ | ಹವಾಮಾನ ಇಲಾಖೆ ಎಚ್ಚರಿಕೆ |
April 1, 2025
8:46 PM
by: The Rural Mirror ಸುದ್ದಿಜಾಲ
15 ದಶಲಕ್ಷ ಮಹಿಳೆಯರಿಗೆ ಸ್ತನ ಕ್ಯಾನ್ಸರ್ ತಪಾಸಣೆ | 200 ಡೇ-ಕೇರ್ ಕ್ಯಾನ್ಸರ್ ಕೇಂದ್ರ ಸ್ಥಾಪನೆ
April 1, 2025
8:20 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group