ಕೃಷಿಕ ಯಾವತ್ತೂ ಸಂಕಷ್ಟ ಪಡಬೇಕಾದ ಸ್ಥಿತಿ. ಕೃಷಿಯಲ್ಲಿ ಲಾಭ ನಷ್ಟದ ಜೊತೆಗೆ ಕೃಷಿಕರಿಗೆ ಬೇಕಾದ ಅಗತ್ಯ ವಸ್ತುಗಳನ್ನೂ ಕೃಷಿ ಇಲಾಖೆಯಿಂದ ಪಡೆಯಲು ಲಂಚ ನೀಡಬೇಕೇ..? ಅಂತಹದ್ದೊಂದು ಸಂಗತಿ ವಿದ್ಯಾರ್ಥಿಯೊಬ್ಬನ ಬರಹದಿಂದ ತಿಳಿದಿದೆ. ಬಾಲಕ ಬರೆದ ಪತ್ರ ಭಾರೀ ವೈರಲ್ ಆಗಿದೆ. ಸುಳ್ಯದಂತಹ ಪ್ರದೇಶದಲ್ಲಿ 500 ರೂಪಾಯಿವರೆಗೂ ಲಂಚ ಇದೆ ಎಂದರೆ ಇಲ್ಲಿನ ಆಡಳಿತ, ಜನಪ್ರತಿನಿಧಿಗಳು ಮೌನವಾಗಿರುವುದು ಏಕೆ..? ಈ ಪ್ರಶ್ನೆ ಈಗ ದೊಡ್ಡದಾಗಿ ಕಾಡಿದೆ.
ಸುಳ್ಯದ ಗುತ್ತಿಗಾರು ಸರ್ಕಾರಿ ಶಾಲೆಯ ವಿದ್ಯಾರ್ಥಿ ಆಶಿಷ್ , ಸುಳ್ಯದ ಸುದ್ದಿಬಿಡುಗಡೆ ಪತ್ರಿಕೆ ಬರೆದ ಪತ್ರ ಪತ್ರಿಕೆಯ ಒಳ ಪುಟದ 14 ನೇ ಪುಟದಲ್ಲಿ ಪ್ರಕಟವಾಗಿತ್ತು. ಸೋಶಿಯಲ್ ಮೀಡಿಯಾದಲ್ಲಿ ಈ ಪತ್ರ ವೈರಲ್ ಆಗಿದೆ. ಆ ಪತ್ರದಲ್ಲಿ ಬಾಲಕ ಹೀಗೆ ಬರೆದಿದ್ದಾನೆ,
ಆಗ ಅಪ್ಪ 500 ರೂ. ಕೊಟ್ಟರು. ಪೈಪ್ ಲೋಡ್ ಮಾಡಿ ಮನೆಗೆ ಬರುವಾಗ ನಾನು ಅಪ್ಪನ ಹತ್ತಿರ ಕೇಳಿದೆ- “500 ರೂ.ಗೆ ಇಷ್ಟು ಪೈಪ್ ಸಿಕ್ಕಿತಾ?” “500 ಅವರಿಗೆ ಲಂಚ. ಪೈಪ್ ಗೆ 4000 ರೂ. ಮೊದಲೇ ಕಟ್ಟಿದ್ದೇನೆ” ಅಪ್ಪ ಉತ್ತರಿಸಿದರು. ಆಗ ನಾನು ನೆನೆಸಿಕೊಂಡೆ – ‘ ಅವತ್ತು ನಾನು ಭ್ರಷ್ಟಾಚಾರ ನಿರ್ಮೂಲನೆಯ ಬಗ್ಗೆ ಪ್ರಬಂಧ ಬರೆದಿದ್ದೆ. ಆಗ ಅಪ್ಪ ಹೇಳಿದ್ದರು- ‘ಭ್ರಷ್ಟಾಚಾರವಾಗುವಾಗ ಯುವ ಜನತೆ ಪ್ರಶ್ನಿಸಬೇಕು’. ಈಗ ನಾನು ಅಪ್ಪನ ಬಳಿ ಕೇಳಿದೆ “ಲಂಚ ಭ್ರಷ್ಟಾಚಾರ ಮಾಡಬಾರದು ತಾನೇ? ಅವತ್ತು ನೀವೇ ಹೇಳಿದ್ದಿರಿ.
ಆಗ ಅಪ್ಪ “ನಾನು 500 ಕೊಟ್ಟದ್ದು ಯಾಕೆಂದರೆ ಅವರು ಪೈಪು ಕೊಡದಿದ್ದರೆ ಎಂದು ಹೆದರಿ” ಎಂದರು. ‘ಹಾಗಾದರೆ ನಾನು ಪೊಲೀಸರಿಗೆ ಹೇಳಲೇ? ಎಂದು ಕೇಳಿದಾಗ ಅಪ್ಪ, “ಅಂದು ದೇವಚಳ್ಳ ಶಾಲೆಯಲ್ಲಿ ಒಂದು ಲಕ್ಷ ಭ್ರಷ್ಟಾಚಾರ ಆಗಿ, ದೂರು ಕೊಟ್ಟಾಗ ಯಾರೂ ಬರಲಿಲ್ಲ, ಈಗ 500 ರೂ.ಗೆ ಬರುವರೇ?” ಎಂದು ಮರು ಪ್ರಶ್ನಿಸಿದರು. ಈಗ ಅಪ್ಪ ತೋಟಕ್ಕೆ ಹೋಗಿದ್ದಾರೆ. ಅದಕ್ಕೆ ಅಪ್ಪನಿಗೆ ತಿಳಿಯದ ಹಾಗೆ ಈ ಪತ್ರ ಬರೆಯುತ್ತಿದ್ದೇನೆ.
ಒಂದು ಪ್ರಶ್ನೆ ನಿಮ್ಮಲ್ಲಿ – ‘ಈ ಭ್ರಷ್ಟಾಚಾರ ನಾವು ದೊಡ್ಡದಾದ ಮೇಲೂ ಇರುತ್ತದೆಯೇ? ಇದಕ್ಕೆ ಸಾವಿಲ್ಲವೇ? ಆ ದಿನ ಅಲ್ಲಿಗೆ ಪೈಪು ತರಲು 130 ಜನ ಬಂದಿದ್ರು. ಅದನ್ನು ಚೀಟಿಯಲ್ಲಿ ನೋಡಿದೆನು, ಪ್ರತಿ ಜನರ ಬಳಿಯೂ 500ರೂ. ಕೇಳಿದರೆ ದಿನಕ್ಕೆ 65,000 ವಾಗುತ್ತದೆ. ಇದಕ್ಕೆ ಅಂತ್ಯ ಹೇಗೆ? ದಯವಿಟ್ಟು ತಿಳಿಸಿ.
ಐದನೇ ತರಗತಿಯ ಈ ಬಾಲಕನ ಪ್ರಶ್ನೆ ಬಹಳ ಗಂಭೀರವಾಗಿದೆ. ಸುಳ್ಯದ ವ್ಯವಸ್ಥೆಗೆ ಹಿಡಿದ ಕೈಗನ್ನಡಿಯಾಗಿದೆ. ಕೃಷಿ ಇಲಾಖೆಯಲ್ಲಿ 500 ರೂಪಾಯಿ ಲಂಚವೂ ನಡೆಯುತ್ತದೆ..!. ಹಾಗಿದ್ದರೂ ಸುಳ್ಯದ ಜನಪ್ರತಿನಿಧಿಗಳಿಗೆ ಈ ಲಂಚಾವತಾರದ ಮಾಹಿತಿ ಇಲ್ಲ..!. ಈಗ ಈ ಪತ್ರ ವೈರಲ್ ಆಗಿದೆ. ಮಾಜಿ ಸಚಿವ, ಶಾಸಕ ಸುರೇಶ್ ಕುಮಾರ್ ಅವರು ಕೂಡಾ ಈ ಪತ್ರವನ್ನು ಶೇರ್ ಮಾಡಿದ್ದಾರೆ.ಮಾತ್ರವಲ್ಲ ಅವರು ಉಲ್ಲೇಖಿಸಿದ್ದಾರೆ, ” ಈ ಬಾಲಕನ ಪತ್ರ ಸರ್ಕಾರಿ ಯಂತ್ರಕ್ಕೆ ಒಂದು ಸವಾಲು!”.
ಸ್ಥಳೀಯ ಆಡಳಿತಗಳು ಏಕೆ ಮೌನವಾಗಿವೆ. ಕೃಷಿಕರ ಅದರಲ್ಲೂ ಸುಳ್ಯದಂತಹ ಪ್ರದೇಶದಲ್ಲಿ ಅಡಿಕೆ ಬೆಳೆಯೇ ಪ್ರಮುಖ. ಈಗಾಗಲೇ ಬಹುತೇಕ ಕಡೆ ಹಳದಿ ಎಲೆರೋಗ, ಎಲೆಚುಕ್ಕಿ ರೋಗದಿಂದ ಕೃಷಿಕರೂ ಕಂಗಾಲಾಗಿದ್ದಾರೆ. ಇಂತಹ ಸಂದರ್ಭದಲ್ಲೂ 500 ರೂಪಾಯಿ ಲಂಚ ನಡೆಯುತ್ತದೆ ಎಂದರೆ, ಆಡಳಿತ ಜನಪರವಾಗಿಲ್ಲ ಎಂಬುದೇ ಅರ್ಥ. ಇದೇ ಪತ್ರದಲ್ಲಿ ಬಾಲಕ ಉಲ್ಲೇಖಿಸಿದ್ದಾನೆ, ದೇವಚಳ್ಳ ಶಾಲೆಯಲ್ಲಿ ಒಂದು ಲಕ್ಷದ ಭ್ರಷ್ಟಾಚಾರ ಆಗಿರುವ ಬಗ್ಗೆಯೂ ಇದೆ. ಅದು ಏಕೆ ಮುಚ್ಚಿ ಹೋಯಿತು…!. ಎಲ್ಲೂ ಕಾಣದೆ ಮಾಯವಾದ್ದು ಹೇಗೆ..? ಇದೆಲ್ಲವೂ ಸುಳ್ಯದ ವ್ಯವಸ್ಥೆಯ ಕೈಗನ್ನಡಿ ಎನ್ನಬಹುದೇ ?
ಈಗ ಸುಳ್ಯದ ಜನಪ್ರತಿನಿಧಿಗಳು ಲಂಚ ಪಡೆದ ಅಧಿಕಾರಿಯನ್ನು ಕರೆಯಿಸಿ ಈ ಬಾಲಕನನ್ನೂ ಆತನ ತಂದೆಯನ್ನೂ ಕರೆಯಿಸಿ 500 ರೂಪಾಯಿ ವಾಪಾಸ್ ಮಾಡಿಸಿದರೆ ಬಹುಶ: ಸುಳ್ಯದ ಲಂಚಾವತಾರದ ಮೊದಲ ಬ್ರೇಕ್ ಆದೀತು. ಆದರೆ ಈ ಬಗ್ಗೆ ಮಾತನಾಡುವ ಜನಪ್ರತಿನಿಧಿ ಯಾರು..?
ಸಹಕಾರಿ ಕ್ಷೇತ್ರದಲ್ಲಿ ಹೆಸರುವಾಸಿಯಾಗಿರುವ ಅಂತರಾಷ್ಟ್ರೀಯ ಮಟ್ಟದ ಕ್ಯಾಂಪ್ಕೊ ಸಂಸ್ಥೆ "ಕಲ್ಪ" ಕೊಬ್ಬರಿ ಎಣ್ಣೆ…
ಮುಂಜಾನೆಯ ಸಮಯದಲ್ಲಿ ಸ್ಥಬ್ಧವೆನ್ನಿಸುವ ವಾತಾವರಣದಲ್ಲೂ ಸಾಕಷ್ಟು ಹಕ್ಕಿಗಳ ಚಿಲಿಪಿಲಿ ಶಬ್ದ ಕೇಳುತ್ತಿರುತ್ತದೆ. ಆದರೆ…
ದಕ್ಷಿಣ ಬಂಗಾಳಕೊಲ್ಲಿಯಲ್ಲಿ ಸಣ್ಣ ಪ್ರಮಾಣದ ತಿರುಗುವಿಕೆ ಉಂಟಾಗುವ ಸಾಧ್ಯತೆಗಳಿದ್ದು, ಜನವರಿ 18 ರಂದು…
ಸಾರ್ವಜನಿಕ ಪಡಿತರ ವಿತರಣಾ ವ್ಯವಸ್ಥೆಗೆ ರಾಜ್ಯದಿಂದ 3.5 ಲಕ್ಷ ಮೆಟ್ರಿಕ್ ಟನ್ ಹೆಚ್ಚುವರಿ…
ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ದೇವಲಾಪುರ ಗ್ರಾಮದಲ್ಲಿ ಸಂಕ್ರಾಂತಿ ಸಂಭ್ರಮ ವಿಶೇಷ ಕಾರ್ಯಕ್ರಮ…
ನಾಗರಿಕತೆ ಬೆಳವಣಿಗೆ, ಅಭಿವೃದ್ಧಿ ಅಂದರೆ ವ್ಯಕ್ತಿತ್ವಗಳೂ ಬೆಳೆಯಬೇಕು. ಅಭಿವೃದ್ಧಿಯ ಸೂಚ್ಯಂಕವೇ ವ್ಯಕ್ತಿತ್ವದ ಬೆಳವಣಿಗೆ…