ಬೆಳೆಯುವ ಸಿರಿ ಮೊಳಕೆಯಲ್ಲಿ ಅನ್ನೋ ಗಾದೆ ಮಾತನ್ನು ಬಳಸಿಕೊಂಡು ನಿಜ ಮಾಡಲು ಹೊರಟಿದೆ ಇಲ್ಲೊಂದು ಕಾಲೇಜು. ನಾವು ವಿದ್ಯಾರ್ಥಿಗಳಿಗೆ ಪ್ರಾಯೋಗಿಕವಾಗಿ ಹೇಳಿಕೊಟ್ಟು ಅವರ ಕೈಯಲ್ಲೇ ಮಾಡಿಸಿದರೆ, ಅದನ್ನು ಬೇಗನೆ ಕಲಿತುಕೊಳ್ಳುತ್ತಾರೆ ಮಕ್ಕಳು. ಅದನ್ನೇ ಮಾಡ ಹೊರಟಿದೆ ಉತ್ತರ ಕನ್ನಡದ ಶಿರಸಿಯ ಸರ್ಕಾರಿ ಅರಣ್ಯ ಮಹಾವಿದ್ಯಾಲಯ.
ಪ್ರತಿ ಹಸಿರು ಗಿಡಗಳಿಗೆ ನೀರುಣಿಸುವುದು ಇಲ್ಲಿನ ವಿದ್ಯಾರ್ಥಿಗಳಿಗೆ ಟಾಸ್ಕ್. ಚೆನ್ನಾಗಿ ನೀರುಣಿಸಿ ಗಿಡ ಬೆಳೆದ್ರೆ ಇಲ್ಲಿನ ಮಕ್ಕಳಿಗೆ ಸಿಗುತ್ತೆ ಹೆಚ್ಚುವರಿ ಅಂಕ. ಇದೊಂದು ವಿಶ್ವಸಂಸ್ಥೆಯ ಶೈಕ್ಷಣಿಕನ #Educational ಕಾರ್ಯಕ್ರಮ. ಅದರಂತೆ ಈ ನಿಯಮ ಜಾರಿಗೆ ತಂದಿದೆ ಈ ಶಿರಸಿಯ ಸರ್ಕಾರಿ ಅರಣ್ಯ ಮಹಾವಿದ್ಯಾಲಯ. ಇದು ಗ್ರೀನ್ ಗ್ರ್ಯಾಜುವೇಶನ್ #GreenGraduation ಒಂದು ಕಾರ್ಯಕ್ರಮ. ವಿಶ್ವಸಂಸ್ಥೆಯೇ ಇಂತಹ ಕಾರ್ಯಕ್ರಮಗಳಿಗಾಗಿ ಆಯ್ದ ಕಾಲೇಜುಗಳನ್ನ ಆಯ್ಕೆ ಮಾಡುತ್ತವೆ. ಅಂತಹ 500 ಕಾಲೇಜುಗಳಲ್ಲಿ ಶಿರಸಿಯ ಅರಣ್ಯ ಮಹಾವಿದ್ಯಾಲಯವೂ ಒಂದು. ಅದರಂತೆ ಇಲ್ಲಿ ಅಭ್ಯಸಿಸುತ್ತಿರುವ ವಿದ್ಯಾರ್ಥಿಗಳು ತಾವು ಇಷ್ಟಪಟ್ಟು ಗಿಡಗಳನ್ನ ನೆಟ್ಟು ಬೆಳೆಸಿದ್ದಾರೆ.
ಹೆಚ್ಚುವರಿ 5 ಅಂಕ : ಅಷ್ಟೇ ಅಲ್ಲದೇ ಅದರ ಪಾಲನೆ ಪೋಷಣೆಯನ್ನೂ ಮಾಡುತ್ತಿದ್ದಾರೆ. ಕೇವಲ ಇಷ್ಟೇ ಅಲ್ಲ, ತಮ್ಮ ಪದವಿ ಮುಗಿಯುವವರೆಗೂ ಬೆಳೆದ ಗಿಡಕ್ಕೆ ಏನೂ ಹಾನಿಯಾಗದಂತೆ ನೋಡಿಕೊಂಡರೆ ಅದಕ್ಕೆ 5 ಅಂಕ ದೊರೆಯಲಿದೆ. ಇದೇ ವರ್ಷ ಈ ಯೋಜನೆ ಶಿರಸಿಯ ಫಾರೆಸ್ಟ್ ಕಾಲೇಜಿಗೆ ಸಿಕ್ಕಿದ್ದು ಅಧ್ಯಾಪಕರು, ವಿದ್ಯಾರ್ಥಿಗಳು ಉತ್ಸಾಹದಿಂದ ಗಿಡ ನೆಟ್ಟು ಪೋಷಿಸುತ್ತಿದ್ದಾರೆ.
ಗಿಡದ ಪಾಲನೆ, ಪೋಷಣೆ – ಒಟ್ಟು 60 ವಿದ್ಯಾರ್ಥಿಗಳು ರಾಯನಕೆರೆಯ ದಡದಲ್ಲಿ 120 ಗಿಡಗಳನ್ನು ನೆಟ್ಟಿದ್ದು ಅದರ ಮೇಲೆಲ್ಲಾ ಆಯಾ ವಿದ್ಯಾರ್ಥಿಯ ಹೆಸರಿದೆ. ಇನ್ನು ನಾಲ್ಕು ವರ್ಷ ಅದು ಅವರ ಜವಾಬ್ದಾರಿ. ಇಲ್ಲಿ ಮಾವು, ಸಿಲ್ವರ್ ಓಕ್, ನೇರಳೆ, ನೆಲ್ಲಿ, ಬೇವು, ಗೇರು, ಚಿಕ್ಕು ಎಲ್ಲಾ ತರಹದ ಗಿಡಗಳನ್ನು ವಿದ್ಯಾರ್ಥಿಗಳು ನೆಟ್ಟಿದ್ದಾರೆ. ಒಂದು ವೇಳೆ ಗಿಡ ಸತ್ತು ಹೋದರೆ ಆ 5 ಅಂಕವನ್ನ ವಿದ್ಯಾರ್ಥಿಗಳು ಕಳೆದುಕೊಳ್ಳಲಿದ್ದಾರೆ.
ಪರಿಸರ ಸಂರಕ್ಷಣೆಯ ಧ್ಯೇಯ: ಇನ್ನೊಂದು ಕಡೆ ರಾಯನಕೆರೆ ಅಭಿವೃದ್ಧಿ ಸಮಿತಿ, ಕಾಲೇಜು ಆಡಳಿತ ಮಂಡಳಿ ಈ ಗಿಡಗಳನ್ನು ನಂತರವೂ ಕಾಯ್ದುಕೊಳ್ಳುವ ಸಂಕಲ್ಪ ತೊಟ್ಟಿದೆ. ಇವೆರೆಡರ ಸಹಯೋಗದಲ್ಲಿ ಈಗಾಗಲೇ ರಾಯನಕೆರೆ ಸುತ್ತಮುತ್ತ ಅರಣ್ಯದ ವಾತಾವರಣ ನಿರ್ಮಾಣವಾಗಿದೆ. ಕಾಲೇಜಿನ ವಿದ್ಯಾರ್ಥಿಗಳು ಇಲ್ಲಿಗೆ ಬಂದು ಗಿಡಗಳಿಗೆ ನೀರು ಹಾಕುತ್ತಾರೆ, ಕಳೆ ತೆಗೆಯುತ್ತಾರೆ, ಗೊಬ್ಬರ ಹಾಕುತ್ತಾರೆ. ಹಾಗೆಯೇ ಗಿಡದ ಬೆಳವಣಿಗೆಯ ರಿಪೋರ್ಟ್ ತೆಗೆದುಕೊಳ್ಳುತ್ತಾರೆ. ಇಂತಹ ಕಾರ್ಯಗಳು ಕೇವಲ ಅರಣ್ಯ ಕಾಲೇಜಿನಲ್ಲಿ ಬಂದರೆ ಸಾಲಾದು ಎಲ್ಲಾ ಶಾಲಾ- ಕಾಲೇಜುಗಳಲ್ಲಿ ಬಂದರೆ ನಮ್ಮ ದೇಶದ ಹಸಿರು ಹೆಚ್ಚುವುದಲ್ಲದೆ, ಮಕ್ಕಳು ತಮ್ಮ ಜವಾಬ್ದಾರಿಯನ್ನು ಅರಿಯಲು ಸಹಾಯವಾಗುತ್ತದೆ.
Source : Digital Media


