ಗ್ರಾಮೀಣ ಭಾಗದಲ್ಲಿ ಸ್ವಂತ ಉದ್ಯಮಗಳನ್ನು ಆರಂಭಿಸುವವರಿಗೆ ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಕಿರು ಆಹಾರ ಸಂಸ್ಕರಣಾ ಉದ್ಯಮಗಳ ನಿಯಮಬದ್ಧಗೊಳಿಸುವ ಯೋಜನೆಯ ಅಡಿಯಲ್ಲಿ ರೂ 15 ಲಕ್ಷ ಸಹಾಯಧನ ನೀಡಲು ಮುಂದಾಗಿದೆ. ಈ ಯೋಜನೆಯು ರಾಗಿ ಹಿಟ್ಟು, ಗಾಣದ ಎಣ್ಣೆ, ಬೆಲ್ಲದ ಪಾಕ, ಮೆಣಸಿನ ಪುಡಿ, ಹಣ್ಣಿನ ಜಾಮ್, ಸಿರಿಧಾನ್ಯದ ಉತ್ಪನ್ನಗಳು ಇಂತಹ ಕಿರು ಆಹಾರ ಸಂಸ್ಕರಣಾ ಘಟಕ ಸ್ಥಾಪಿಸುವವರಿಗೆ ನೀಡಲಾಗುವುದು. ಇಂತಹ ಕಿರು ಆಹಾರ ಸಂಸ್ಕರಣಾ ಘಟಕ ಸ್ಥಾಪಿಸಲು ಗರಿಷ್ಠ ₹15 ಲಕ್ಷ ಸಹಾಯಧನ ಲಭ್ಯವಿದೆ. ಈ ಯೋಜನೆಯು 2020ರಲ್ಲಿ ಆರಂಭವಾಗಿ 2026 ರವರೆಗೆ ವಿಸ್ತರಣೆಯಾಗಿದ್ದು, ಕರ್ನಾಟಕದಲ್ಲಿ ಈಗಾಗಲೇ ಸಾವಿರಾರು ಘಟಕಗಳು ಯಶಸ್ವಿಯಾಗಿ ನಡೆಯುತ್ತಿವೆ.
ಒಟ್ಟು ಸಹಾಯಧನ: ಯೋಜನಾ ವೆಚ್ಚದ 35% ಅಥವಾ ಗರಿಷ್ಠ ₹15 ಲಕ್ಷ ಆಗಿರುತ್ತದೆ. ಇದರಲ್ಲಿ ಕೇಂದ್ರ ಪಾಲು ₹10 ಲಕ್ಷದವರೆಗೆ 35% . ಉಳಿದಂತೆ ರಾಜ್ಯ ಪಾಲು ಹೆಚ್ಚುವರಿಯಾಗಿ ₹9 ಲಕ್ಷದವರೆಗೆ ಅಂದರೆ ಕರ್ನಾಟಕದ ವಿಶೇಷ ನೆರವು.
ಈ ಯೋಜನೆಗೆ 18 ವರ್ಷ ತುಂಬಿದ ಯಾವುದೇ ವ್ಯಕ್ತಿ ಅರ್ಜಿ ಸಲ್ಲಿಸಬಹುದು. ರೈತರು, ಮಹಿಳೆಯರು, ಯುವಕರು, ಸ್ವ-ಸಹಾಯ ಗುಂಪುಗಳು , ರೈತ ಉತ್ಪಾದಕ ಸಂಘಗಳು, ಸಹಕಾರಿ ಸಂಘಗಳು, ಖಾಸಗಿ ಸಂಸ್ಥೆಗಳು , ಈಗಾಗಲೇ ಬ್ಯಾಂಕ್ ಸಾಲ ಪಡೆದವರಿಗೂ ಅರ್ಜಿ ಸಲ್ಲಿಸಲು ಅವಕಾಶವಿದೆ
ಸಿರಿಧಾನ್ಯ ಸಂಸ್ಕರಣಾ ಘಟಕಗಳು (ರಾಗಿ, ಜೋಳ, ನವಣೆ, ಸಾಮೆ), ಗಾಣದ ಎಣ್ಣೆ (ಕೋಲ್ಡ್ ಪ್ರೆಸ್ಡ್ ಆಯಿಲ್) ಘಟಕಗಳು, ಬೆಲ್ಲ ಮತ್ತು ಸಕ್ಕರೆ ಆಧಾರಿತ ಉತ್ಪನ್ನ ಘಟಕಗಳು, ಮಸಾಲಾ ಪುಡಿ ಘಟಕಗಳು, ಹಣ್ಣು-ತರಕಾರಿ ಸಂಸ್ಕರಣಾ ಘಟಕಗಳು , ಬೇಕರಿ ಮತ್ತು ಸ್ನ್ಯಾಕ್ಸ್ ಘಟಕಗಳು, ಮೀನು, ಕೋಳಿ ಸಂಸ್ಕರಣಾ ಘಟಕಗಳು, ಸಾವಯವ ಉತ್ಪನ್ನ ಘಟಕಗಳಿಗೆ ಸಹಾಯಧನ ಸಿಗುತ್ತದೆ.
ಕರ್ನಾಟಕದಲ್ಲಿ ಸುಮಾರು 22,000ಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿದೆ. 7,000ಕ್ಕೂ ಹೆಚ್ಚು ಘಟಕಗಳಿಗೆ ಸಹಾಯಧನ ಮಂಜೂರಾತಿಯಾಗಿದೆ. ಇದರಲ್ಲಿ 1,800ಕ್ಕೂ ಹೆಚ್ಚು ಸಿರಿಧಾನ್ಯ ಘಟಕಗಳು, 800ಕ್ಕೂ ಹೆಚ್ಚು ಗಾಣದ ಎಣ್ಣೆ ಘಟಕಗಳು, 400ಕ್ಕೂ ಹೆಚ್ಚು ಬೆಲ್ಲ ಘಟಕಗಳು ಸೇರಿವೆ.
ಹೆಚ್ಚಿನ ಮಾಹಿತಿಗೆ – https://pmfme.mofpi.gov.in ಅಥವಾ ಕರ್ನಾಟಕ ಮಾಹಿತಿ: https://kappec.karnataka.gov.in


