ಅಡಿಕೆಯ ನಾಡಿನಲ್ಲಿ ಉಪಬೆಳೆಯಾಗಿ ತರಕಾರಿ ಕೃಷಿ ಮಾಡಿದ ಯುವಕ

April 4, 2025
8:00 AM
ಕೃಷಿಕ ಯಶಸ್ವಿಯಾಗಬೇಕಾದರೆ , ಕೃಷಿ ಬೆಳೆಯಬೇಕಾದರೆ,ಉಳಿಯಬೇಕಾದರೆ ತಿಂಗಳಿಗೆ ಒಂದಷ್ಟು ಆದಾಯ ಸಿಗಲೇಬೇಕು. ಮುಖ್ಯ ಬೆಳೆಯ ಜೊತೆಗೆ ಇನ್ನೊಂದು ಆದಾಯವು ಪ್ರತೀ ತಿಂಗಳು ಸಿಗಲೇಬೇಕು. ಅದಕ್ಕೆ ಉಪಬೆಳೆ ಅಗತ್ಯ ಇದೆ. ಈ ತಿಂಗಳ ಆದಾಯದಲ್ಲಿಯೇ ಕೃಷಿಯ ಯಶಸ್ಸು ಇದೆ ಎನ್ನುತ್ತಾರೆ ಯುವ ಕೃಷಿಕ ಸುಬಹ್ಮಣ್ಯ ಪ್ರಸಾದ್‌ ಚಣಿಲ.

ಮಲೆನಾಡು ಎಂದರೆ ಅಡಿಕೆಯ ನಾಡು ಎನ್ನುವ ಸ್ಥಿತಿ ಇದೆ. ಈಚೆಗೆ ಧಾರಣೆಯ ಕಾರಣದಿಂದ ಅಡಿಕೆ ಬಯಲು ಸೀಮೆಗೂ ವಿಸ್ತರಣೆಯಾಗಿದೆ. ಧಾರಣೆಯ ಕಾರಣದಿಂದ ಮತ್ತಷ್ಟು ವಿಸ್ತರಣೆಯಾಗುತ್ತಿದೆ. ಆದರೆ ಮಾರುಕಟ್ಟೆಯ ಸ್ಥಿತಿ ಹೇಗೆ..? ಈ ಬಗ್ಗೆ ಇನ್ನೂ ಸರಿಯಾದ ನಿಲುವು, ಭವಿಷ್ಯದ ಯೋಚನೆಗಳು ಸದ್ಯಕ್ಕಿಲ್ಲ. ಹೀಗಿರುವಾಗ ಯುವ ಕೃಷಿಕರು ವಿಭಿನ್ನವಾಗಿ ಯೋಚಿಸಲು ಆರಂಭಿಸಿದ್ದಾರೆ. ಪರ್ಯಾಯ ಬೆಳೆ, ಅದರಲ್ಲೂ ಅಲ್ಪಾವಧಿ ಬೆಳೆಯೇ ಹೆಚ್ಚು ಸೂಕ್ತ ಎನ್ನುವುದು ಎಲ್ಲಾ ಕಡೆಯ ಸಲಹೆಯು ಕೂಡಾ. ಇಂತಹದೊಂದು ಪ್ರಯತ್ನದಲ್ಲಿದ್ದಾರೆ ಸುಳ್ಯ ತಾಲೂಕಿನ ಗುತ್ತಿಗಾರಿನ ಸುಬ್ರಹ್ಮಣ್ಯ ಪ್ರಸಾದ್‌ ಎಂಬ ಯುವಕ.……..ಮುಂದೆ ಓದಿ…..

Advertisement
Advertisement
ತೊಂಡೆ ಕೃಷಿ
ಅಲಸಂಡೆ ಕೃಷಿ

ಸುಳ್ಯ ತಾಲೂಕಿನ ಗುತ್ತಿಗಾರು ಬಳಿಯ ಚಣಿಲದ ಸುಬ್ರಹ್ಮಣ್ಯ ಪ್ರಸಾದ್‌ ಅವರು ಎಂಟೆಕ್‌ ಪದವೀಧರ. ಕೆಲವು ಸಮಯ ಬೆಂಗಳೂರಿನಲ್ಲಿ ಕಂಪನಿಯಲ್ಲಿ ಕೆಲಸ ಮಾಡಿ ಕೃಷಿ ಬಂದವರು. ಕೃಷಿಯಲ್ಲಿ ಯಶಸ್ವಿಯಾಗಿ ಬದುಕು  ಸಾಗಿಸುತ್ತಿರುವವರು ಮಾತ್ರವಲ್ಲ ನಗರದಿಂದಲೇ ಹಳ್ಳಿಗೆ ಬಂದಿರುವ ಅವರ ಪತ್ನಿಯೂ ಕೃಷಿಗೆ ಬೆಂಬಲಿಸುತ್ತಿರುವುದು ವಿಶೇಷ ಹಾಗೂ ಮಾದರಿ ಕೆಲಸ. ಅಡಿಕೆ, ರಬ್ಬರ್‌ ಅನೇಕ ಸಮಯಗಳಿಂದ ಪ್ರಮುಖವಾದ ಕೃಷಿ ಇಲ್ಲಿ. ಅದರ ಜೊತೆಗೆ ಜಾಯಿಕಾಯಿ ಇತ್ತು. ಕಳೆದ ಕೆಲವು ಸಮಯಗಳಿಂದ ಅಡಿಕೆಗೆ ವಿವಿಧ ರೋಗಗಳನ್ನು ಕಾಣುತ್ತಿರುವಾಗ ಪರ್ಯಾಯ ಕೃಷಿ ಬಗ್ಗೆ ಯೋಚಿಸಿದರು ಸುಬ್ರಹ್ಮಣ್ಯಪ್ರಸಾದ್.‌ ಅಲ್ಪಾವಧಿ ಬೆಳೆಯಲ್ಲಿ ಆಸಕ್ತರಾಗಿರುವ ಅವರು ತರಕಾರಿ ಕೃಷಿಯನ್ನು ಮಾಡಿದರು. ಮನೆಯ ಖಾಲಿ ಜಾಗದಲ್ಲಿ ತರಕಾರಿ ಕೃಷಿಯನ್ನು ಮಾಡಿ ಈಗ ಮಾರಾಟ ಆರಂಭಿಸಿದ್ದಾರೆ. ಸುಬ್ರಹ್ಮಣ್ಯ ಪ್ರಸಾದ್‌ ಅವರ ಜೊತೆಗೆ ನಡೆಸಿದ ಮಾತುಕತೆಯ ಸಾರಾಂಶ ಹೀಗಿದೆ..

ಅಲಸಂಡೆಯೊಂದಿಗೆ ಸುಬ್ರಹ್ಮಣ್ಯಪ್ರಸಾದ್

ಎಳವೆಯಿಂದಲೇ ಕೃಷಿ ನಮಗೆ ಅಭ್ಯಾಸ. ತಾಯಿಯ ಮೂಲಕ ಬಂದಿರುವ ಈ ಭೂಮಿಯನ್ನು ಕೃಷಿಯನ್ನು ಹಸನು ಮಾಡುವ ಪ್ರಯತ್ನ ಮಾಡಿದ್ದೇನಷ್ಟೆ. ಎಳವೆಯಲ್ಲಿಯೇ ಕೃಷಿ ನಮಗೆ ಅಭ್ಯಾಸ. ಯಾವತ್ತೂ ತೋಟಕ್ಕೆ ಇಳಿಯಲು ಉದಾಸೀನ ಮಾಡಿಲ್ಲ. ಶಾಲೆಯ ಪಾಠದ ಜೊತೆಗೆ ಕೃಷಿಯ ಕಡೆಗೂ ಮನಸ್ಸು ಮಾಡುತ್ತಿದ್ದೆ. ಹೀಗಾಗಿ ಉನ್ನತ ವಿದ್ಯಾಭ್ಯಾಸಕ್ಕೆ ಹೋದರೂ ಕೃಷಿಯ ಸಂಬಂಧ ಬಿಡಲಿಲ್ಲ.

ಈಚೆಗೆ ಅಡಿಕೆ ಬೆಳೆ ವಿಸ್ತರಣೆಯಾಗುತ್ತಿದೆ, ಅದರ ಜೊತೆಗೆ ರೋಗವೂ ವಿಸ್ತರಣೆಯಾಗುತ್ತಿದೆ. ವಿವಿಧ ರೋಗ ಕಾಡುತ್ತಿದೆ. ಅದು ಈಗ ಸುಳ್ಯದಂತಹ ಪ್ರದೇಶದಲ್ಲೂ ಇದೆ. ಹಳದಿ ಎಲೆರೋಗ, ಎಲೆಚುಕ್ಕಿ ರೋಗ ಹೆಚ್ಚಾಗುತ್ತಿದೆ. ಇದಕ್ಕೆ ಔಷಧಿಯೇ ಪರಿಹಾರವಲ್ಲ ಎಂದು ನಾವು ಭಾವಿಸಿದ್ದೇವೆ. ಅದಕ್ಕಾಗಿ ಎಲೆಚುಕ್ಕಿ ರೋಗಕ್ಕೆಂದು ಭಾರೀ ಔಷಧಿಯನ್ನು ಸಿಂಪಡಣೆ ಮಾಡಿಲ್ಲ. ಅಡಿಕೆಯ ರೋಗ ಬಾಧಿಸುತ್ತಿರುವಂತೆಯೇ, ವಿಸ್ತರಣೆಯಾಗುತ್ತಿರುವಂತೆಯೇ  ಪರ್ಯಾಯ ಕೃಷಿಯ ಬಗ್ಗೆ ಯೋಚಿಸುತ್ತಿದ್ದೆ. ಹೀಗಾಗಿ ನಮ್ಮ ಖಾಲಿ ಜಾಗದಲ್ಲಿ ಅಂದರೆ ಸುಮಾರು ಒಂದೆಕ್ರೆಯಲ್ಲಿ ತರಕಾರಿ ಕೃಷಿಯನ್ನು ಆರಂಭಿಸಿದೆ. ಅಡಿಕೆ, ರಬ್ಬರ್‌ ಇದೆ. ಅದರ ಜೊತೆಗೆ ಇದನ್ನೂ ಆರಂಭ ಮಾಡಿದೆ. ಸದ್ಯ ತೊಂಡೆಕಾಯಿ ಹಾಗೂ ಅಲಸಂಡೆ ಪ್ರಮುಖ ತರಕಾರಿ ಕೃಷಿಯಾಗಿದೆ.ನನಗೆ ಯಾವತ್ತೂ ಅಲ್ಪಾವಧಿ ಕೃಷಿಯಲ್ಲಿ ಹೆಚ್ಚು ಆಸಕ್ತಿ. ಅದು ಬಾಳೆ, ತರಕಾರಿ ಕೃಷಿಯಲ್ಲಿ ಸಾಧ್ಯವಿದೆ. ಈ ಹಿಂದೆ ನುಗ್ಗೆ ಕೃಷಿಯನ್ನೂ ಪ್ರಯತ್ನ ಮಾಡಿದ್ದೇನೆ. ನುಗ್ಗೆ ಕೃಷಿ ಇಲ್ಲಿನ ಹವಾಮಾನದ ಕಾರಣದಿಂದ ಇಳುವರಿ ಸಾಧ್ಯವಾಗಿಲ್ಲ.‌

2016 ರಲ್ಲಿ ಇಂಜಿನಿಯರಿಂಗ್‌ ಮುಗಿಸಿ ಬೆಂಗಳೂರಿಗೆ ಉದ್ಯೋಗಕ್ಕೆ ಹೋಗಿದ್ದೆ. ನಂತರ ಮನೆಯಲ್ಲಿ ಅಮ್ಮ ಮಾತ್ರಾ ಇರುವ ಕಾರಣದಿಂದ ಮನೆಗೆ  ಬರಬೇಕಾಯಿತು. ಮನೆಗೆ ಬಂದವನೇ ಮತ್ತೆ ಉನ್ನತ ವ್ಯಾಸಾಂಗ ಸುಳ್ಯದಲ್ಲಿ ಮಾಡಿದೆ. ಎಂಟೆಕ್‌ ಪದವಿಯನ್ನು ಮಾಡುವ ವೇಳೆ ಕೃಷಿ ಮತ್ತೆ ಪುನಃ ಲಿಂಕ್‌ ಆಯಿತು. ಕೃಷಿಯನ್ನು ಮತ್ತೆ ಬೆಳೆಸಿದೆ. ಪದವಿ ಮುಗಿದ ತಕ್ಷಣವೇ ಕೃಷಿಯ ಕಡೆಗೆ ಮನಸ್ಸು ಮಾಡಿದ್ದೆ.ಆಗ ಬಾಳೆ ಕೃಷಿಯನ್ನು ಆಸಕ್ತಿಯಿಂದ ಮಾಡಿದ್ದೆ. ಸುಮಾರು 100 ಬಾಳೆ ಗಿಡ ಹಾಕಿದ್ದೆ. ಬಹಳ ಚೆನ್ನಾಗಿ ಬಾಳೆ ಬಂದಿತ್ತು. ಆದರೆ ಗಾಳಿಗೆ ಶೇ.70 ರಷ್ಟು ಬಾಳೆ ಬಿದ್ದು ನಷ್ಟವಾಯ್ತು. ಆ ಕ್ಷಣ ತೀರಾ ಬೇಸರವಾಗಿತ್ತು. ಇಳುವರಿ ಇಲ್ಲವಾಯ್ತು, ನಷ್ಟವಾಯ್ತು. ಆದರೆ ಪ್ರಯತ್ನ ಬಿಡಲಿಲ್ಲ. ಮತ್ತೆ ಪುನ: ಪ್ರಯತ್ನ ಮಾಡಿ ಯಶಸ್ವಿಯಾಗಿ ಬಾಳೆ ಕೃಷಿ ಮಾಡಿದೆ. ಆ ಸಂದರ್ಭ ಒಂದು ಬಾಳೆಗೊನೆ ಸುಮಾರು 40 ಕೆಜಿವರೆಗೂ ಬಂದಿತ್ತು. ಅದನ್ನು ಮಾರಾಟಕ್ಕೆ ತೆಗೆದುಕೊಂಡು ಹೋದಾಗ ಫೋಟೊ ತೆಗದರು. ಅನೇಕರು ಪ್ರೋತ್ಸಾಹದ ಮಾತುಗಳನ್ನಾಡಿದರು. ಆಗ ಖುಷಿಯಾಯ್ತು, ಹಿಂದೆ ಆಗಿದ್ದ ನಷ್ಟವೂ ಮರೆಯಾಯ್ತು. ಬಾಳೆ ಕೃಷಿಯಲ್ಲಿ ನಷ್ಟ ಹೆಚ್ಚಾಗುತ್ತದೆ. 100 ನೆಟ್ಟರು ಸುಮಾರು 60 ಬಾಳೆಗೊನೆ ಮಾತ್ರಾ ಸರಿಯಾದ ತೂಕ ಹಾಗೂ ಉತ್ತಮವಾಗಿ ಬರುತ್ತದೆ. ಉಳಿದವು ಅಷ್ಟೊಂದು ಫಲಿತಾಂಶ ನೀಡುವುದಿಲ್ಲ ಎನ್ನುವುದು ನನ್ನ ಅಭಿಪ್ರಾಯ. ಇದರ ಜೊತೆಗೆ ನಮಗೆ ಮಂಗ ಹಾಗೂ ಇತರ ಕಾಡುಪ್ರಾಣಿಗಳ ಹಾವಳಿಯೂ ಇದೆ. ಹೀಗಾಗಿ ನಮಗೆ ಬಾಳೆ ಕೃಷಿ ಸ್ವಲ್ಪ ಕಷ್ಟವೇ ಆಗಿದೆ.

ಮುಂದೇನು ಎಂದು ಯೋಚಿಸಿದಾಗ ತರಕಾರಿ ಕೃಷಿ  ಕಣ್ಣೆದುರು ಬಂತು. ಆರಂಭದಲ್ಲಿ ಬೆಂಡೆ ಕೃಷಿ ಮಾಡಿದ್ದೆ. ಉತ್ತಮವಾಗಿ ಬಂತು. ನಂತರ ಖಾಲಿ ಜಾಗದಲ್ಲಿ ಹಣ್ಣಿನ ಗಿಡ, ತರಕಾರಿ ಕೃಷಿಯನ್ನು ಮಾಡುವ ಆಸಕ್ತಿಯಿಂದ ತೊಂಡೆಕಾಯಿ, ಅಲಸಂಡೆ ಇತ್ಯಾದಿಗಳನ್ನು ನಾಟಿ ಮಾಡಲಾಯಿತು. ಅಡಿಕೆಯ ಜೊತೆಗೆ ತರಕಾರಿ ಕೃಷಿಯೂ ಜೊತೆ ಸೇರಿತು. ಕೇವಲ 3 ತಿಂಗಳ ಬೆಳೆ ಇದು. ಕಡಿಮೆ ಅವಧಿಯಲ್ಲಿ ಕೃಷಿಯೂ ಮುಗಿಯುತ್ತದೆ. ಹೀಗಾಗಿ ಆಸಕ್ತಿಯೂ ಹೆಚ್ಚಾಯಿತು. ಇದೀಗ ಇಡೀ ದಿನದ ಚಟುವಟಿಕೆಯಲ್ಲಿ ತರಕಾರಿ ಕೃಷಿಯೂ ಸೇರಿಕೊಂಡಿದೆ.

ಕೃಷಿಕರು ಈಗ ಆದಾಯದ ದೃಷ್ಟಿಯಿಂದ ಮಾರುಕಟ್ಟೆಯ ಕಡೆಗೂ ಯೋಜನೆ ಮಾಡಬೇಕಾಗಿದೆ. ಅಡಿಕೆ ಕೂಡಾ ಹಾಗೆಯೇ, ಬೆಳೆದು ಮಾರಾಟಕ್ಕೆ ತೆಗೆದುಕೊಂಡ ಹೋದಾಗಲೇ ಸಮಸ್ಯೆ ಆರಂಭವಾಗುವುದು. ತರಕಾರಿ ಕೃಷಿಯೂ ಹಾಗೇ. ಮಾರುಕಟ್ಟೆಯ ಕಡೆಗೆ ಹೆಚ್ಚಿನ ಗಮನ ಅಗತ್ಯ ಇದೆ. ಇಲ್ಲಿ ತರಕಾರಿ ಕೊಯ್ಲು ಆದ ಬಳಿಕ ಒಂದು ದಿನದಲ್ಲಿ ಮಾರಾಟವಾಗಬೇಕು ಅಥವಾ ಮಾರುಕಟ್ಟೆ ಪ್ರವೇಶವಾಗಬೇಕು. ಹೀಗಾಗಿ ಕೃಷಿಕರು ಮಾರುಕಟ್ಟೆಗೆ ಕೂಡಾ ಪ್ರಯತ್ನ ಮಾಡಬೇಕಾಗುತ್ತದೆ.

 

ಇಷ್ಟು ಸಮಯದ ಕೃಷಿಯ ಬಳಿಕ ಅನಿಸಿದೆ, ಕೃಷಿಕ ಯಶಸ್ವಿಯಾಗಬೇಕಾದರೆ , ಕೃಷಿ ಬೆಳೆಯಬೇಕಾದರೆ,ಉಳಿಯಬೇಕಾದರೆ ತಿಂಗಳಿಗೆ ಒಂದಷ್ಟು ಆದಾಯ ಸಿಗಲೇಬೇಕು. ಮುಖ್ಯ ಬೆಳೆಯ ಜೊತೆಗೆ ಇನ್ನೊಂದು ಆದಾಯವು ಪ್ರತೀ ತಿಂಗಳು ಸಿಗಲೇಬೇಕು. ಅದಕ್ಕೆ ಉಪಬೆಳೆ ಅಗತ್ಯ ಇದೆ. ಈ ತಿಂಗಳ ಆದಾಯದಲ್ಲಿಯೇ ಕೃಷಿಯ ಯಶಸ್ಸು ಇದೆ. ಹೀಗೆ ತಿಂಗಳ ಆದಾಯ ಬರಬೇಕಾದರೆ ಅಲ್ಪಾವಧಿ ಕೃಷಿಯ ಅಗತ್ಯ ಇದೆ. ತರಕಾರಿ, ಕೊಕೋ ಇತ್ಯಾದಿಗಳು ಬೇಕು. ತರಕಾರಿ ಕೃಷಿಯಲ್ಲಿ ಸಾಕಷ್ಟು ಆದಾಯ ಇದೆ.ಆದರೆ ಮಾರುಕಟ್ಟೆ ಕೂಡಾ ಸರಿಯಾಗಿ ಮಾಡಬೇಕಿದೆ.ಹೀಗಿದ್ದರೆ ಕೃಷಿಯಲ್ಲಿ ಯಶಸ್ಸು ಇದೆ, ಕೃಷಿ ನಮ್ಮನ್ನು ಉಳಿಸುತ್ತದೆ. ದಿನಕ್ಕೆ 2-3 ಗಂಟೆ ತರಕಾರಿ ಕೃಷಿಯಲ್ಲಿ ದುಡಿದರೆ 40 ದಿನದಲ್ಲಿ ಆದಾಯ ಆರಂಭವಾಗುತ್ತದೆ. ಪ್ರತೀ ಎರಡು ದಿನಗಳಿಗೊಮ್ಮೆ ಮಾರಾಟವೂ ಸಾಧ್ಯವಿದೆ. ಹೀಗಾಗಿ ನಿರಂತರ ಕೆಲಸ-ಶ್ರಮಜೀವಿಗಳಾದರೆ ಎಲ್ಲಾ ಉದ್ಯೋಗದಂತೆಯೇ ಕೃಷಿಯೂ ಉತ್ತಮ ಆದಾಯ ತರುವ, ನೆಮ್ಮದಿ ತರುವ ಉದ್ಯೋಗವಂತೂ ಖಂಡಿತಾ.

ಸುಬ್ರಹ್ಮಣ್ಯ ಪ್ರಸಾದ್‌ ಅವರ ಸಂಪರ್ಕ : 7760905887

 

In order for a farmer to achieve success, for agriculture to flourish, and for it to endure, it is essential that the farmer receives a regular monthly income. In addition to cultivating the primary crop, acquiring additional income monthly is imperative. To achieve this, cultivating a supplementary crop is necessary. According to young farmer Subahmanya Prasad Chanila, the key to agricultural success lies in securing this monthly income.

 

 

Advertisement
Advertisement
Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಮಹೇಶ್ ಪುಚ್ಚಪ್ಪಾಡಿ

ಕೃಷಿಕ ಹಾಗೂ ಕೃಷಿ ಪತ್ರಕರ್ತ | 2007 ರಿಂದ ವಿವಿಧ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ. ಉಷಾಕಿರಣ, ಹೊಸದಿಗಂತ, ವಿಜಯವಾಣಿ ಹಾಗೂ ಸುವರ್ಣ ನ್ಯೂಸ್‌ ಚಾನೆಲ್‌ನಲ್ಲಿ ವರದಿಗಾರರಾಗಿ, ವಿಭಾಗ ಮುಖ್ಯಸ್ಥರಾಗಿ ಕೆಲಸ ಮಾಡಿದ್ದಾರೆ. ಗ್ರಾಮೀಣಾಭಿವೃದ್ಧಿ ಹಾಗೂ ಕೃಷಿ ಇವರ ಆಸಕ್ತಿಯ ವಿಷಯವಾಗಿದೆ.  

ಇದನ್ನೂ ಓದಿ

ಸರ್ಕಾರಿ ಶಾಲೆ ಮಕ್ಕಳಿಗೆ ಚೆಸ್ ಪಾಠ | ದ.ಕ ದಲ್ಲಿ “ಚೆಸ್ ಇನ್ ಸ್ಕೂಲ್” ಆರಂಭ | ಗ್ರಾಮೀಣ ಮಕ್ಕಳಿಗೆ ಬೌದ್ಧಿಕ ಅವಕಾಶ
January 29, 2026
2:18 PM
by: ದ ರೂರಲ್ ಮಿರರ್.ಕಾಂ
ಕೊಳೆ ರೋಗ ನಿಯಂತ್ರಣಕ್ಕೂ ತೆರಿಗೆ…? ಮೈಲುತುತ್ತಿಗೆ ಸುಂಕ – ಅಡಿಕೆ ರೈತನಿಗೆ ಮತ್ತೊಂದು ಹೊರೆ..!
January 29, 2026
7:39 AM
by: ಕುಮಾರಸುಬ್ರಹ್ಮಣ್ಯ ಮುಳಿಯಾಲ
ದೇಶದಲ್ಲಿ ರಬಿ ಋತು ಬಿತ್ತನೆ ದಾಖಲೆ ಹೆಚ್ಚಳ | 660.48 ಲಕ್ಷ ಹೆಕ್ಟೇರ್‌ಗೆ ಏರಿದ ಒಟ್ಟು ವಿಸ್ತೀರ್ಣ
January 29, 2026
7:18 AM
by: ದ ರೂರಲ್ ಮಿರರ್.ಕಾಂ
ಯೂರಿಯಾ ಮಾರಾಟ 3.8% ಏರಿಕೆ | ದೇಶೀಯ ಉತ್ಪಾದನೆ ಕುಸಿತ, ಆಮದು 85% ಹೆಚ್ಚಳ
January 29, 2026
7:08 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror