ಸುಳ್ಯ ಬಿಜೆಪಿಯೊಳಗೆ ಇದೇನಿದು ಮುಗಿಯದ ಗೊಂದಲ…! | ಬಿಜೆಪಿಯ ಸಂಘಟನೆಯ ತವರು ನೆಲದಲ್ಲಿ ಹೆಚ್ಚುತ್ತಿರುವ ಬಂಡಾಯದ ಬಾವುಟ ..? |

January 18, 2021
9:40 PM

ಬಿಜೆಪಿಯ, ಸಂಘಪರಿವಾರದ ಸಂಘಟನೆಯ ಗಟ್ಟಿ ನೆಲದಲ್ಲಿ  ಕಳೆದ ಒಂದೆರಡು ವರ್ಷಗಳಿಂದ ಬಂಡಾಯ ಬಾವುಟ ಹೆಚ್ಚಾಗಿದೆ. ಇದೀಗ ಚುನಾವಣೆಯಲ್ಲಿ ಸ್ಫರ್ಧಿಸುವವರೆಗೆ ತಲುಪಿದೆ. ಗ್ರಾಮ ಪಂಚಾಯತ್‌, ಸಹಕಾರಿ ಸಂಘಗಳ ಚುನಾವಣೆಯವರೆಗೆ ತಲುಪಿ ನಿಧಾನವಾಗಿ ಈ ಮನಸ್ಥಿತಿ ವಿಸ್ತರಣೆಯಾಗುತ್ತಿದೆ. ಈಗ ಇದೊಂದು ಚರ್ಚೆಯ ವಿಷಯವಾಗಿದೆ.

Advertisement
Advertisement
Advertisement
Advertisement

ಇಡೀ ರಾಜ್ಯದಲ್ಲಿ  ಸಂಘ ಪರಿವಾರ ಹಾಗೂ ಬಿಜೆಪಿ ಸಂಘಟನೆಗೆ ಸುಳ್ಯವನ್ನು ನೋಡಿ ಎನ್ನುತ್ತಿದ್ದ ಕಾಲ ಇತ್ತು. ಸುಮಾರು  25  ವರ್ಷಗಳಿಂದಲೂ ಇದೇ ವಾತಾವರಣ ಕಂಡುಬಂದಿತ್ತು. ಅದಕ್ಕೆ ಪೂರಕವಾಗಿ ಜಿಲ್ಲೆಯಲ್ಲಿ  ಎಲ್ಲಾ ಶಾಸಕ  ಸ್ಥಾನಗಳನ್ನೂ ಕಳೆದುಕೊಂಡ ಬಿಜೆಪಿ ಸುಳ್ಯವನ್ನು ಬಿಟ್ಟುಕೊಟ್ಟಿರಲಿಲ್ಲ.ಇದಕ್ಕೆ ಕಾರಣ ಇಲ್ಲಿನ ಸಂಘಟನೆ ಎಂದೇ ವಿಶ್ಲೇಷಣೆ ಮಾಡಲಾಗಿತ್ತು.

Advertisement

ಆದರೆ ಈಚೆಗೆ ಒಂದೆರಡು ವರ್ಷಗಳಿಂದ ಸುಳ್ಯದಲ್ಲಿಯೇ ಬಿಜೆಪಿ ಹಾಗೂ ಸಂಘಪರಿವಾರದಲ್ಲಿ ಬಂಡಾಯ ಹೆಚ್ಚಾಗುತ್ತಿದೆ ಮಾತ್ರವಲ್ಲ ಚುನಾವಣೆಯಲ್ಲಿ ಬಂಡಾಯದ ಗೆಲುವೂ ಆಗುತ್ತಿದೆ. ಇದು ಈಗ ಚರ್ಚೆಯ ವಿಷಯವಾಗಿದೆ. ಈ ಸಂಘಟನೆ ಹೀಗಾದದ್ದು ಏಕೆ ? ಪರ್ಯಾಯ ರಾಜಕೀಯ ಶಕ್ತಿ ಇಲ್ಲಿ ಸದ್ದಿಲ್ಲದೆ ಬಲಗೊಳ್ಳುತ್ತಿರುವುದು  ಹೇಗೆ ?

ಸುಳ್ಯದಲ್ಲಿ ಡಿಸಿಸಿ ಬ್ಯಾಂಕ್‌ ಚುನಾವಣೆಯವರೆಗೆ ಸಂಘಟನೆ ಪ್ರಶ್ನಾತೀತವಾಗಿ ಬೆಳೆಯುತ್ತಲೇ ಇತ್ತು. ಡಿಸಿಸಿ ಬ್ಯಾಂಕ್‌ ಚುನಾವಣೆಯ ನಂತರ ಅಡ್ಡಮತದಾನದ ಪರಿಣಾಮವಾಗಿ ಬಿಜೆಪಿ ಹಾಗೂ ಸಂಘಪರಿವಾರ, ಸಹಕಾರ ಭಾರತಿಯಲ್ಲಿ ಸುಳ್ಯದಲ್ಲಿ ಆರಂಭವಾದ ಗೊಂದಲ ನಿವಾರಣೆ ಆಗಿಲ್ಲ.

Advertisement

ಯಾವುದೇ ಪಕ್ಷ , ಸಂಘಟನೆ ಪ್ರಜಾಪ್ರಭುತ್ವದ ಆಧಾರದಲ್ಲಿ ಇದ್ದರೆ ಪಕ್ಷದೊಳಗಿನ ಬಿಕ್ಕಟ್ಟಿಗೆ ಉಪಸಮಿತಿಗಳನ್ನು ಮಾಡಿಕೊಂಡು ಸಮಸ್ಯೆ ಪರಿಹಾರ ಮಾಡುತ್ತವೆ. ಆದರೆ ಸುಳ್ಯದಲ್ಲಿ ಪ್ರಸಿದ್ಧ ದೈವಸ್ಥಾನವಾದ ಕಾನತ್ತೂರು ಕ್ಷೇತ್ರಕ್ಕೆ ತೆರಳಿ ಮತದಾನ ಮಾಡಿದವರಿಂದ ಪ್ರಮಾಣ ಮಾಡಿಸಲಾಗಿತ್ತು. ಇಲ್ಲಿಂದ ಆರಂಭವಾದ ಗೊಂದಲಗಳಿಂದ ಸಂಘಟನೆಯ ಗಟ್ಟಿತನ ಕಳೆದುಕೊಳ್ಳಲು ಆರಂಭಿಸಿತು. ಇದು ಪಂಚಾಯತ್‌ ಚುನಾವಣೆ, ಸಹಕಾರಿ ಸಂಘಗಳ ಚುನಾವಣೆಯಲ್ಲೂ ಪರಿಣಾಮ ಬೀರಿತು. ಈ ಬಾರಿಯ ಗ್ರಾಮ ಪಂಚಾಯತ್‌ ಚುನಾವಣೆಯಲ್ಲಿ ಕೂಡಾ ಬಿಜೆಪಿ ಬೆಂಬಲಿತರು ಅಧಿಕ ಸ್ಥಾನ ಪಡೆದರೂ  ಬಿಜೆಪಿಗೆ   ಶೇಕಡಾವಾರು ಮತಗಳು ಕಡಿಮೆಯಾಗಿದ್ದವು. ಇದೀಗ ಸಹಕಾರಿ ಸಂಘಗಳ ಚುನಾವಣೆಗಳೂ ಅದೇ ದಾರಿ ಹಿಡಿಯಲಾರಂಭಿಸಿದೆ.

ಎರಡು ದಿನಗಳ ಹಿಂದೆ ನಡೆದ ನೆಲ್ಲೂರು ಕೆಮ್ರಾಜೆ ಸಹಕಾರಿ ಸಂಘದಲ್ಲೂ ಅದೇ ಬೆಳವಣಿಗೆ ನಡೆಯಿತು. ಸಚಿವ ಅಂಗಾರ ಅವರ ತವರು ಕ್ಷೇತ್ರದ, ಬಿಜೆಪಿ ಮಂಡಲ ಅಧ್ಯಕ್ಷರ ಸಹಕಾರಿ ಸಂಘದಲ್ಲಿ ಈ ಪರಿಸ್ಥಿತಿ ನಡೆದಿರುವುದು  ಇನ್ನೊಂದು ಗಮನಾರ್ಹ ಸಂಗತಿ ಇದಾಗಿದೆ.

Advertisement

ನೆಲ್ಲೂರು ಕೆಮ್ರಾಜೆ ಸಹಕಾರಿ ಸಂಘದ  13 ಸ್ಥಾನಗಳಲ್ಲಿ   10  ಸ್ಥಾನಗಳನ್ನು ಸಹಕಾರಿ ಬಳಗದ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದರು. ಕೇವಲ 3 ಸ್ಥಾನಗಳನ್ನು ಬಿಜೆಪಿ-ಸಹಕಾರ ಭಾರತಿ ಪಡೆದುಕೊಂಡಿತ್ತು. ಇದರಲ್ಲಿ ಮಂಡಲ ಬಿಜೆಪಿ ಅಧ್ಯಕ್ಷರ ವಿರುದ್ಧ ಸ್ಫರ್ಧೆ ಮಾಡದೆ ಅದೊಂದು ಸ್ಥಾನವನ್ನು ಬಂಡಾಯದ ಗುಂಪು ಬಿಜೆಪಿ-ಸಹಕಾರ ಭಾರತಿಗೆ ಬಿಟ್ಟುಕೊಡುವ ಮೂಲಕ ಬಿಜೆಪಿ-ಸಹಕಾರ ಭಾರತಿಯ ತೀವ್ರ ಮುಖಭಂಗವನ್ನು ತಪ್ಪಿಸಿದೆ.

ಸಂಘಟನೆಗಳು ಬಲವಾದಂತೆ ನಾಯಕರು ಹೆಚ್ಚಾಗುತ್ತಾರೆ. ಹೆಚ್ಚಿನ ಮಂದಿ ಪಕ್ಷದೊಳಗೆ ತೂರಿಕೊಳ್ಳುತ್ತಾರೆ. ಸುಳ್ಯದ ಬಿಜೆಪಿಯಲ್ಲೂ ನಾಯಕರಿಗೆ ಕೊರತೆ ಇಲ್ಲ. ಆದರೆ ಸಮರ್ಥರು ಯಾರು, ಭ್ರಷ್ಟಾಚಾರ ರಹಿತರು ಯಾರು ? ಸರ್ವ ಸಮ್ಮತ ನಾಯಕ ಯಾರು ಎಂಬುದನ್ನು ಆಯ್ಕೆ ಮಾಡುವಲ್ಲಿ ಬಿಜೆಪಿ ಹಾಗೂ ಸಂಘಪರಿವಾರ ಈಚೆಗೆ ಸೋಲುತ್ತಿದೆ. ಹೀಗಾಗಿ ರಾಜ್ಯ , ಜಿಲ್ಲಾ ಮಟ್ಟದ ನಾಯಕರು ಕೂಡಾ ಗ್ರಾಮದ ಸಹಕಾರಿ ಸಂಘಗಳಿಗೆ, ಗ್ರಾಮ ಪಂಚಾಯತ್‌ ಚುನಾವಣೆಗಳಿಗೆ ಸ್ಫರ್ಧೆ ಮಾಡುತ್ತಿದ್ದಾರೆ. ಹೊಸ ನಾಯಕರನ್ನು , ಯುವಕರನ್ನು ಬೆಳೆಸುವುದು  ಹಾಗೂ ಅವಕಾಶ ನೀಡುವುದು  ಕಡಿಮೆಯಾಗಿದೆ. ಹೀಗಾಗಿ ಒಳಗೊಳಗಿನ ಅಸಮಾಧಾನಗಳಿಂದ ಸಂಘಟನೆ ಶಿಥಿಲಗೊಳ್ಳಲು ಕಾರಣವಾಗುತ್ತಿದೆ ಎನ್ನುವುದು  ಸಂಘಪರಿವಾರದ ಮೂಲಗಳಿಂದ ಲಭ್ಯವಾಗುವ ಮಾಹಿತಿ.

Advertisement

ಇದೆಲ್ಲಾ ಬೆಳವಣಿಗೆಗಳು ಕಳೆದ ಹಲವು ಸಮಯಗಳಿಂದ ನಡೆಯುತ್ತಿದ್ದರೂ ಕ್ಷೇತ್ರದ ಶಾಸಕರು, ಈಗಿನ ಸಚಿವರೂ ಮೌನವಾಗಿದ್ದರು ಎನ್ನುವುದು ಇನ್ನೊಂದು ಗಮನಾರ್ಹವಾದ ಸಂಗತಿ. ಎಲ್ಲಾ ಗೊಂದಲಗಳ ನಿವಾರಣೆಗೆ ಮುಂಚೂಣಿಯಲ್ಲಿ ನಿಲ್ಲುವ ಸಂಘಪರಿವಾರವೂ ಇಲ್ಲಿ ಮೌನವಹಿಸಿರುವುದು  ಮೇಲ್ನೋಟಕ್ಕೆ ಕಾಣುತ್ತದೆ. ಹೀಗಾಗಿಯೇ ಸಂಘಟನೆಯ ಗಟ್ಟಿ ನೆಲದಲ್ಲಿ ಬದಲಾವಣೆಯ ಗಾಳಿ ಕಂಡುಬಂದಿದೆ. ಮಾದರಿ ಎನ್ನುವ ಕ್ಷೇತ್ರದಲ್ಲಿಯೇ ಗೊಂದಲಗಳು ಹೆಚ್ಚಾಗಿದೆ.

ಇಷ್ಟೆಲ್ಲಾ ಗೊಂದಲಗಳು ಇದ್ದರೂ ಮತದಾರರು ಮಾತ್ರ ಯಾವುದಕ್ಕೂ ಸೊಪ್ಪು ಹಾಕದೆ ತಮಗೆ ಯಾರು ಬೇಕೋ ಅವರಿಗೆ ಮತ ನೀಡಿ ಗೆಲ್ಲಿಸುತ್ತಿದ್ದಾರೆ. ಆದರೆ ಪಕ್ಷದೊಳಗಿನ ಗೊಂದಲಗಳು ಇಡೀ ಕ್ಷೇತ್ರದ ಜನರ ಮೇಲೂ ಸಣ್ಣ ರೀತಿಯ ಪರಿಣಾಮ ಬೀರುತ್ತವೆ. ಅಭಿವೃದ್ಧಿ ಕಾರ್ಯಗಳಿಗೆ ವೇಗ ಕಡಿಮೆಯಾಗುತ್ತದೆ, ಪರಸ್ಪರ ಚರ್ಚೆಯ ಕಾರಣದಿಂದ ಎಲ್ಲಾ ಕಡೆಗಳಲ್ಲೂ ಯೋಜನೆಗಳು ವೈಫಲ್ಯ ಕಾಣುತ್ತವೆ. ಕ್ರಮೇಣ ಬದಲಾವಣೆಯ ಕಡೆಗೆ ಮತದಾರರೇ ಒಲವು ತೋರಿದರೂ ಅಚ್ಚರಿ ಇಲ್ಲ.

Advertisement

 

 

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಸಾರಡ್ಕದಲ್ಲಿ ಕೃಷಿ ಹಬ್ಬ | ಅಡಿಕೆ ಮೌಲ್ಯವರ್ಧನೆಗೆ ಇನ್ನೊಂದು ಸೇರ್ಪಡೆ | ಕೃಷಿ ಗೋಷ್ಟಿಯಲ್ಲಿ ಹೊಸತನ |
January 28, 2025
11:25 PM
by: ವಿಶೇಷ ಪ್ರತಿನಿಧಿ
ಈ ಬಾರಿಯ ಬಜೆಟ್‌ನಲ್ಲಿ ಅಡಿಕೆ ಬೆಳೆ ರಕ್ಷಣೆಗೆ 67 ಕೋಟಿ ರೂಪಾಯಿ ನಿರೀಕ್ಷೆ | ಕರ್ನಾಟಕ ಸರ್ಕಾರದಿಂದಲೂ ತನ್ನ ಪಾಲನ್ನು ಮೀಸಲಿಡಲು ಒತ್ತಾಯ |
January 24, 2025
8:57 PM
by: ದ ರೂರಲ್ ಮಿರರ್.ಕಾಂ
ಫಾರೆಸ್ಟ್ ಸರ್ವೆ ಆಫ್ ಇಂಡಿಯಾ ಪ್ರಕಾರ ಭಾರತದಲ್ಲಿ ಅರಣ್ಯ ಹೆಚ್ಚಳ-ಗುಣಮಟ್ಟ ಕುಸಿತ |
January 8, 2025
11:00 PM
by: The Rural Mirror ಸುದ್ದಿಜಾಲ
ಹೆಚ್ಚುತ್ತಿರುವ ವಾಯುಮಾಲಿನ್ಯ ಹಾಗೂ ತಾಪಮಾನ | ಸೋಲಾರ್‌ ಇಂಧನದ ಮೇಲೆ ಪರಿಣಾಮ ಏನು..?
December 10, 2024
7:15 AM
by: ವಿಶೇಷ ಪ್ರತಿನಿಧಿ

You cannot copy content of this page - Copyright -The Rural Mirror