ವಿಧಾನಸಭಾ ಚುನಾವಣೆ ಸಮೀಪಿಸುವ ಹೊತ್ತಿನಲ್ಲಿ ಎಲ್ಲಾ ರಾಜಕೀಯ ಪಕ್ಷಗಳು ಚುರುಕಾಗಿವೆ. ಇದೀಗ ದಕ್ಷಿಣ ಕನ್ನಡದಲ್ಲಿ ಆಮ್ ಆದ್ಮಿ ಪಕ್ಷ ಮೊದಲ ಬಾರಿಗೆ ಸದ್ದು ಮಾಡಲು ಆರಂಭಿಸಿದೆ. ಸುಳ್ಯದಲ್ಲಿ ಪ್ರಚಾರ ಕಾರ್ಯ ಆರಂಭಿಸಿದ್ದು ಗ್ರಾಮೀಣ ಭಾಗದಲ್ಲೂ ಪ್ರಚಾರ ಕಾರ್ಯಕ್ಕೆ ವೇಗ ನೀಡಿದೆ. ಇದೇ ವೇಳೆ ಸಮಗ್ರ ಅಭಿವೃದ್ಧಿಯೇ ನಮ್ಮ ಗುರಿ ಎಂದು ಎಎಪಿ ರಾಜ್ಯ ಉಪಾಧ್ಯಕ್ಷ ವಿವೇಕಾನಂದ ಸಾಲಿನ್ಸ್ ಹೇಳಿದ್ದಾರೆ.
ದೆಹಲಿ ಬಳಿಕ ವಿವಿಧ ರಾಜ್ಯಗಳಲ್ಲೂ ಹರಡಿಕೊಂಡ ಆಮ್ ಆದ್ಮಿ ಪಕ್ಷವು ರಾಷ್ಟ್ರೀಯ ಪಕ್ಷವಾಗಿ ಸ್ಥಾನ ಪಡೆದುಕೊಂಡಿತ್ತು. ಇದೀಗ ರಾಜ್ಯದಲ್ಲೂ ಸ್ಫರ್ಧೆಗೆ ಇಳಿಯುತ್ತಿದೆ. ರಾಜ್ಯದ ಎಲ್ಲಾ ವಿಧಾನಸಭಾಕ್ಷೇತ್ರಗಳಲ್ಲೂ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲು ಸಿದ್ಧತೆ ನಡೆಸಿದೆ. ದಕ್ಷಿಣ ಕನ್ನಡದಲ್ಲೂ ಈಗ ಎಎಪಿ ಸದ್ದು ಮಾಡುತ್ತಿದೆ. ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ಆಮ್ ಆದ್ಮಿ ಪಕ್ಷ ಕೆಲಸ ಆರಂಭಿಸಿದೆ ಎಂದು ಎಎಪಿ ಜಿಲ್ಲಾಧ್ಯಕ್ಷ ಅಶೋಕ್ ಎಡಮಲೆ ಹೇಳಿದ್ದಾರೆ.
ದೇಶದ ರಾಜಕೀಯ ಶುದ್ದೀಕರಣವಾಗಬೇಕು, ವಿದ್ಯಾವಂತರು ಹೆಚ್ಚು ರಾಜಕೀಯ ಕ್ಷೇತ್ರದಲ್ಲಿ ತೊಡಗಿಸಿಕೊಂಡು, ಭ್ರಷ್ಟಾಚಾರ ರಹಿತ ಆಡಳಿತ ನೀಡುವಂತಾಗಬೇಕು, ಗ್ರಾಮೀಣ ಅಭಿವೃದ್ಧಿ ಹಾಗೂ ಮೂಲಭೂಸ ಸೌಲಭ್ಯಗಳನ್ನು ಜನರಿಗೆ ಒದಗಿಸುವುದು ಎಎಪಿ ಮುಖ್ಯ ಉದ್ದೇಶವಾಗಿದೆ ಎಂದು ಹೇಳಿತ್ತಾರೆ ಎಎಪಿ ರಾಜ್ಯ ಉಪಾಧ್ಯಕ್ಷ ವಿವೇಕಾನಂದ ಸಾಲಿನ್ಸ್.
ಸುಳ್ಯ ವಿಧಾನಸಭಾ ಕ್ಷೇತ್ರದಲ್ಲೂ ಎಎಪಿ ಕೆಲಸ ಆರಂಭಿಸಿದ್ದು, ವಿವಿದೆಡೆ ಪ್ರಚಾರ ಕಾರ್ಯ ಮನೆ ಮನೆ ಭೇಟಿ ಸೇರಿದಂತೆ ಸಂಘಟನೆಯನ್ನು ಬಲಗೊಳಿಸಿದೆ. ಸುಳ್ಯದಲ್ಲಿ ಸಾಕಷ್ಟು ಅಭಿವೃದ್ಧಿಯ ಕೊರತೆ, ಹಿನ್ನಡೆ ಇರುವುದು ಕಂಡುಬರುತ್ತಿದೆ. ಹೀಗಾಗಿ ಜನರಿಗೆ ಈಗ ಅಭಿವೃದ್ಧಿಯ ರಾಜಕಾರಣ ಬೇಕಾಗಿದೆ, ಇದನ್ನು ನಾವು ಮಾಡಿ ತೋರಿಸುತ್ತೇವೆ ಎಂದು ಎಎಪಿ ಅಭ್ಯರ್ಥಿ ಆಕಾಂಕ್ಷಿ, ಎಂಬಿಎ ಪದವೀಧರೆ ಸುಮನಾ ಬೆಳ್ಳಾರ್ಕರ್ ಹೇಳುತ್ತಾರೆ.