ಈ ಬಾರಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಬ್ಬರು ಹಾಲಿ ಶಾಸಕರಿಗೆ ಟಿಕೆಟ್ ನಿರಾಕರಣೆ ಮಾಡಲಾಗಿದೆ. ಅದರಲ್ಲೂ ಹಿರಿಯ ಬಿಜೆಪಿ ಶಾಸಕ , 6 ಬಾರಿ ಗೆದ್ದಿರುವ ಸುಳ್ಯದ ಶಾಸಕ ಎಸ್ ಅಂಗಾರ ಅವರಿಗೆ ಟಿಕಟ್ ನಿರಾಕರಣೆ ಮಾಡಲಾಗಿದೆ. ಅದಾದ ಬಳಿಕ ಅಂಗಾರ ಅವರು ಬೇಸರ ವ್ಯಕ್ತಪಡಿಸಿದ್ದರು, ಪಕ್ಷ ಸರಿಯಾಗಿ ನಡೆಸಿಕೊಂಡಿಲ್ಲ, ನನಗೆ ಟಿಕೆಟ್ ಇಲ್ಲ ಎಂದು ಹೇಳಿಲ್ಲ ಎಂದು ಹೇಳುವ ಮೂಲಕ ಬೇಸರ ವ್ಯಕ್ತಪಡಿಸಿದ್ದರು. ಈ ನಡುವೆಯೇ ಹೊಸ ಅಭ್ಯರ್ಥಿ ಘೋಷಣೆ ಮಾಡಿದ ಬಳಿಕ ರಾಜ್ಯದ ಬಿಜೆಪಿ ನಾಯಕರು ಹೊಸ ಅಭ್ಯರ್ಥಿಯ ಬಗ್ಗೆಯೇ ಧನಾತ್ಮಕವಾಗಿ ಹೇಳಿದ್ದಾರೆ ಕೂಡಾ. ಹಾಗಿದ್ದರೆ ಅಂಗಾರ ಅವರಿಗೆ ಬೇಸರ ಆಗಿದ್ದು ಏಕೆ, ರಾಜ್ಯ ನಾಯಕರು ಸುಳ್ಯವನ್ನು ವಿಶೇಷವಾಗಿ ಗಮನಿಸಿದ್ದು ಏಕೆ ?.ಈಗ ಅಂಗಾರ ಅವರು ನಿವೃತ್ತಿ ಹಿಂಪಡೆದದ್ದು ಏಕೆ?
ಸುಳ್ಯ ವಿಧಾನಸಭಾ ಕ್ಷೇತ್ರವು ಬಿಜೆಪಿಯ ದಕ್ಷಿಣ ಭಾರತದ ಹೆಬ್ಬಾಗಿಲು, ಹೀಗೆ ಹೇಳಿದವರು ಬಿಜೆಪಿ ಹಿರಿಯ ಮುಖಂಡ ಲಾಲ್ ಕೃಷ್ಣ ಅಡ್ವಾನಿ ಅವರು. ಹೀಗೆ ಹೇಳಿರುವ ಕ್ಷೇತ್ರದಲ್ಲಿ ಕಳೆದ 6 ಬಾರಿ ಶಾಸಕರಾದವರು ಎಸ್ ಅಂಗಾರ. ಈ ಕ್ಷೇತ್ರದ ಬಗ್ಗೆ ಬಿಜೆಪಿ ವಲಯದಲ್ಲಿ, ಸಂಘ ಪರಿವಾರದ ವಲಯದಲ್ಲಿ ಗೌರವ. ಇದ್ದರೆ ಅಂಗಾರ ಅವರಂತೆ ಇರಬೇಕು ಎಂದು ಪ್ರಖರ ಬರಹಗಾರ ಸಂತೋಷ್ ತಮ್ಮಯ್ಯ ಅವರೂ ಹೇಳಿದ್ದರು. ಇಂತಹ ಕ್ಷೇತ್ರದಲ್ಲಿ ಬೆಳೆದಿರುವ ಅಂಗಾರ ಅವರಿಗೆ ಟಿಕೆಟ್ ತಪ್ಪಿದಾಗ ಬೇಸರವಾಗಿರುವುದು ಅಚ್ಚರಿಯೇ. ಆದರೆ ಈಚೆಗಿನ ಕೆಲವು ವರ್ಷದ ಬದಲಾವಣೆಗಳನ್ನು ಅಂಗಾರ ಅವರು ಗಮನಿಸಲಿಲ್ಲ ಎನ್ನುವುದು ಕೂಡಾ ಅಷ್ಟೇ ಸತ್ಯ.
ಬಿಜೆಪಿ ಪಕ್ಷದಲ್ಲಿ ಆರ್ ಎಸ್ ಎಸ್ ಮಹತ್ವದ ಪಾತ್ರ ವಹಿಸುತ್ತದೆ.ಕಳೆದ ಬಾರಿಯ ಚುನಾವಣೆಯಲ್ಲಿ ಕೂಡಾ ಅಂಗಾರ ವಿರುದ್ಧ ವಿರೋಧದ ಅಲೆ ಇತ್ತು. ಆದರೆ ಚುನಾವಣೆಯ ಸುಮಾರು ಎರಡು ತಿಂಗಳು ಮೊದಲು ಅಂಗಾರ ಅವರೇ ಅಭ್ಯರ್ಥಿ ಎಂದು ನಿರ್ಧಾರ ಆಗಿತ್ತು. ಅದಾದ ಬಳಿಕ ಐದಾರು ತಂಡದ ಮೂಲಕ ಅಸಮಾಧಾನ ಇರುವ ಕಡೆ, ಸಮಸ್ಯೆ ಇರುವ ಕಡೆ ಈ ತಂಡ ತೆರಳಿ ಮನವೊಲಿಕೆ ಮಾಡಿತ್ತು. ಆಗ ಕಾಂಗ್ರೆಸ್ ಸರ್ಕಾರ ಇತ್ತು. ಪ್ರಚಾರವೂ ಭರ್ಜರಿಯಾಗಿ ನಡೆಯಿತು. ಈ ಬಾರಿ ಅಂತಹ ಯಾವ ಬೆಳವಣಿಗೆಯೂ ನಡೆಯಲಿಲ್ಲ.ಇಂದಿಗೂ ಬಿಜೆಪಿಯಲ್ಲಿ ಮೊದಲಿನ ಗಟ್ಟಿತನ ಇಲ್ಲ. ಅಂತಹ ಸಂಘಟನೆಯೂ ಇಲ್ಲ. ಸಭೆಗೂ ಜನ ಮೊದಲಿನಂತೆ ಬರುತ್ತಿಲ್ಲ. ಅಸಮಾಧಾನಗಳು ಇವೆ. ಈ ಅಸಮಾಧಾನಗಳನ್ನು ಇತರ ಪಕ್ಷ ಸೆಳೆಯುವಲ್ಲಿ ವಿಫಲವಾಗಿದೆ.ಹಾಗಾಗಿ ಈಗಲೂ ಬಿಜೆಪಿ ಬಾರ್ಡರ್ ಲೈನ್ ನಲ್ಲಿದೆ.
ಕಳೆದ ಚುನಾವಣೆ ಗೆಲುವಿನ ಬಳಿಕ ಸುಳ್ಯವನ್ನು ರಾಜ್ಯ ಬಿಜೆಪಿ ನಾಯಕರು ಗಮನಿಸುತ್ತಿದ್ದರು. ಕೆಲವು ವರ್ಷಗಳ ಹಿಂದೆಯೇ ಬಿಜೆಪಿ ರಾಷ್ಟ್ರೀಯ ನಾಯಕರು ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲರೂ ಸಕ್ರಿಯವಾಗಿರಬೇಕು ಎಂದು ಸೂಚನೆ ನೀಡಿತ್ತು. ಇದನ್ನು ಹಲವು ಮಂದಿ ಕಾರ್ಯಗತ ಮಾಡಿದರೆ ಅಂಗಾರ ಅವರು ಸಾಮಾಜಿಕ ಜಾಲತಾಣಗಳಿಂದ ದೂರ ಇದ್ದರು, ಅಂದರೆ ಅಪ್ಡೇಟ್ ಆಗಿರಲಿಲ್ಲ. ಸಚಿವರಾದ ಬಳಿಕ ಸೋಶಿಯಲ್ ಮೀಡಿಯಾದಲ್ಲಿ ಅವರ ಖಾತೆ ಸಕ್ರಿಯವಾಗಿತ್ತು. ಅವರ ನಿಕಟವರ್ತಿಗಳು ಅಪ್ಡೇಟ್ ಮಾಡುತ್ತಿದ್ದರೂ ಅಲ್ಲಿ ಬರುವ ಪ್ರತಿಕ್ರಿಯೆಗಳು ಕಾರ್ಯಗತ ಆಗುತ್ತಿರಲಿಲ್ಲ, ಅಂಗಾರ ಅವರು ಹೆಚ್ಚು ಗಮನಿಸುತ್ತಿರಲಿಲ್ಲ. ಇಂದಿನ ಅನೇಕ ಯುವ ಸಮುದಾಯ ಸಾಮಾಜಿಕ ಜಾಲತಾಣದಲ್ಲಿ ಮಾತನಾಡುತ್ತದೆ. ಸಾಮಾನ್ಯವಾಗಿ ಅಭಿಪ್ರಾಯ ಸಂಗ್ರಹ ಸುಲಭವೂ ಆಗುತ್ತದೆ. ಅಂಗಾರ ಅವರ ವಿರುದ್ಧ ಕಳೆದ ಕೆಲವು ಸಮಯಗಳಿಂದ ಸಾಮಾಜಿಕ ಜಾಲತಾಣದಲ್ಲಿ ವಿರೋಧದ ಅಲೆ ಆರಂಭ ಆಗಿತ್ತು. ಇದನ್ನು ರಾಷ್ಟ್ರೀಯ ನಾಯಕರಿಗೆ, ರಾಜ್ಯ ನಾಯಕರಿಗೆ ಟ್ಯಾಗ್ ಮಾಡಿ ಗಮನಸೆಳೆಯಲಾಗುತ್ತಿತ್ತು. ಈ ಬಗ್ಗೆಯೂ ಸುಳ್ಯದ ಬಿಜೆಪಿ ತಲೆಕೆಡಿಸಿಕೊಳ್ಳಲಿಲ್ಲ, ಅಂಗಾರ ಅವರಿಗೆ ಸೂಚನೆಯನ್ನೂ ನೀಡಲಿಲ್ಲ. ವಾಟ್ಸಪ್ ಲಿ, ಪೇಸ್ ಬುಕ್ಕಲ್ಲಿ ಬರೆದರೆ ಏನೂ ಆಗದು ಎಂದೇ ಭಾವಿಸಿತ್ತು. ಆದರೆ ಅದು ಪರೋಕ್ಷವಾಗಿ ಅಭಿಪ್ರಾಯವನ್ನು ಸೃಷ್ಟಿ ಮಾಡುತ್ತದೆ ಎನ್ನುವುದನ್ನು ಗಮನಿಸಲಿಲ್ಲ. ಏನೂ ಆಗುವುದಿಲ್ಲ ಎಂಬ ಭಾವನೆ ಬೆಳೆಯಿತು, ಮಾತನಾಡಿದವರನ್ನು ವಿರೋಧಿ ಎಂದರೆ, ಕೇಳಿದವರನ್ನು ಬದಿಗಿಟ್ಟರು. ಇದೆಲ್ಲವೂ ಆಕ್ರೋಶ ಹೆಚ್ಚಾಗಲು ಕಾರಣವಾಯಿತು. ಎಲ್ಲಾ ಪಕ್ಷಗಳಲ್ಲೂ ಇಂತಹ ಬೆಳವಣಿಗೆ ನಡೆಯುತ್ತದೆ. ಆದರೆ ಸುಳ್ಯವು ಸಂಘ ಪರಿವಾರದ ಪ್ರಯೋಗ ಶಾಲೆ ಆದ್ದರಿಂದ 2018 ರವರೆಗೆ ಅಂತಹ ಬೆಳವಣಿಗೆ ಇದ್ದಿರಲಿಲ್ಲ.
ಸಚಿವ ಸ್ಥಾನದ ಆಕಾಂಕ್ಷಿಗಳ ಪಟ್ಟಿಯಲ್ಲಿಯೂ ಮೊದಲ ಬಾರಿಗೆ ಅಂಗಾರ ಅವರಿಗೆ ಸ್ಥಾನ ಸಿಗಲಿಲ್ಲ, ಅದಕ್ಕೂ ಕಾರಣ ಹೇಳಿದ್ದರು. ಆದರೆ ಒತ್ತಡ ಹೆಚ್ಚಿತು, ಸುಳ್ಯ ಕಾರ್ಯಕರ್ತರ ನೆಲ ಎಂದು ಮತ್ತೆ ಒತ್ತಡ ತಂದ ಬಳಿಕ ಸಚಿವ ಸ್ಥಾನ ಲಭಿಸಿತ್ತು. ಆಗಲೂ ರಾಜ್ಯ ಹಾಗೂ ರಾಷ್ಟ್ರೀಯ ನಾಯಕರು ಎಚ್ಚರಿಸಿದ್ದರು. ಈ ಎಲ್ಲದರ ನಡುವೆಯೂ ಸಾಮಾಜಿಕ ಜಾಲತಾಣಗಳಲ್ಲಿ ವಿರೋಧ ಹೆಚ್ಚುತ್ತಲೇ ಹೋಗಿತ್ತು. ಇದನ್ನು ಸುಳ್ಯದಲ್ಲಿ ಅಂಗಾರ ಹಾಗೂ ಅವರ ಸುತ್ತಮುತ್ತ ಇದ್ದ ಕೆಲವು ಮಂದಿ ನಿರ್ಲಕ್ಷ್ಯ ಮಾಡಿದ್ದು ಮಾತ್ರವಲ್ಲ, ಅದರಿಂದ ಏನೂ ಆಗದು ಎನ್ನುತ್ತಲೇ ಹೋದರು. ಪ್ರಧಾನಿಗೆ ಪತ್ರ ಬರೆದರೆ ಏನು ಪ್ರಯೋಜನ, ನಾವೇ ಮಾಡಬೇಕು ಎನ್ನುವ ಅಹಂಕಾರವನ್ನೂ ಮೆರೆದರು…!. ಇದೆಲ್ಲಾ ಬೆಳವಣಿಗೆಯನ್ನು ರಾಜ್ಯ ಹಾಗೂ ರಾಷ್ಟ್ರೀಯ ನಾಯಕರು ಗಮನಿಸಿದರು, ಕೆಲವರಿಗೆ ಖುದ್ದು ಕರೆ ಮಾಡಿ “ಏನದು ಸಮಸ್ಯೆ” ಎಂದು ಮಾಹಿತಿ ಪಡೆದರು. ಅಂಗಾರ ಅವರನ್ನು ಕರೆದು “ಏನದು ಸಮಸ್ಯೆ” ಎಂದು ಕೇಳಿದ್ದರು. ಆದರೆ ರಾಜ್ಯದಲ್ಲಿ ಅಂಗಾರ ಹಾಗೂ ಸ್ಥಳೀಯ ನಾಯಕರು ಅದೆಲ್ಲಾ ಸರಿಯಾಗಿದೆ ಎಂದು ತಪ್ಪು ಮಾಹಿತಿ ನೀಡಿದರು…!
ಬಿಜೆಪಿಗೆ ಸುಳ್ಯ ವಿಧಾನಸಭಾ ಕ್ಷೇತ್ರವು ಪ್ರತಿಷ್ಟೆಯ ಕಣ. ಏಕೆಂದರೆ ಸುಳ್ಯ ಹಾಗೂ ಪುತ್ತೂರು ಸಂಘ ಪರಿವಾದ ಪ್ರಯೋಗಶಾಲೆ. ಇದು ಬಿಜೆಪಿ ಹೆಬ್ಬಾಗಿಲು ಎಂದೇ ಹೇಳಿದ ಕ್ಷೇತ್ರ. ಈ ಬಾರಿ ಅಂಗಾರ ಅವರ ವಿರುದ್ಧ ತೀವ್ರ ಅಸಮಾಧಾನ ಇರುವುದು ಜಗಜ್ಜಾಹೀರಾಯಿತು. ಸಾಮಾಜಿಕ ಜಾಲತಾಣ ಹಾಗೂ ಖುದ್ದು ಕರೆ, ಸರ್ವೆಯ ಮೂಲಕ ಮಾಹಿತಿ ತಿಳಿದಾಗ ಅಂಗಾರ ಬಗ್ಗೆ ಶೇ.50 ರಷ್ಟು ಅಸಮಾಧಾನ ಇದ್ದರೆ, ಶೇ.50 ರಷ್ಟು ಪಕ್ಷದ ಸ್ಥಳೀಯ ನಾಯಕರ ವರ್ತನೆಗಳ ವಿರುದ್ಧ ಅಸಮಾಧಾನಗಳು ಇರುವುದನ್ನು ತಿಳಿದ ಬಿಜೆಪಿ ರಾಜ್ಯ ಹಾಗೂ ರಾಷ್ಟ್ರೀಯ ನಾಯಕರು ಬದಲಾವಣೆ ಕಡೆಗೆ ಮನಸ್ಸು ಮಾಡಿದ್ದರು. ಸುಳ್ಯ ಸೋತರೆ ಪ್ರತಿಷ್ಟೆಯ ಪ್ರಶ್ನೆ ಎಂದು ಅಂದುಕೊಂಡರು. ದ ಕ ಜಿಲ್ಲೆಯ ಎಲ್ಲಾ ಕ್ಷೇತ್ರಗಳಲ್ಲೂ ಬಿಜೆಪಿ ಸೋತಾಗ ಸುಳ್ಯ ಗೆದ್ದಿತ್ತು. ಈಗ ಇಲ್ಲಿ ಸೋಲುವುದು ಅವಮಾನದ ಪ್ರಶ್ನೆಯಾಗಿತ್ತು. ಇದೆಲ್ಲಾ ಸರಿ ಮಾಡಬೇಕಾದ ಸುಳ್ಯದಲ್ಲಿ ಆರ್ ಎಸ್ ಎಸ್ ಕೂಡಾ ಸೋತಿದೆ. ಸುಳ್ಯದಲ್ಲಿಯೇ ಸಭೆ ನಡೆದು ಅಭ್ಯರ್ಥಿಗಳ ಪಟ್ಟಿ ಮಾಡಿ ಚರ್ಚೆ ಮಾಡಿದರೂ ಪ್ರಯೋಜನವಾಗಲಿಲ್ಲ. ಹಾಗೆಂದು ಇಂದೂ ಎಲ್ಲವೂ ಸರಿ ಇಲ್ಲ…!. ಈ ಬಾರಿ ಕಾಂಗ್ರೆಸ್ ಕೂಡಾ ಚಿನ್ನದ ಬಟ್ಟಲಿನ ಕೊಡುಗೆಯನ್ನುಆಂತರಿಕ ಜಗಳದ ಕಾರಣದಿಂದ ಕಳೆದುಕೊಳ್ಳುತ್ತಿದೆ. ಈಗ ಮೊದಲ ಪ್ರಯತ್ನದಲ್ಲಿ ಆಮ್ ಆದ್ಮಿ ಪಕ್ಷವು ಒಂದಷ್ಟು ಮತ ಸೆಳೆಯುವ ಹಂತದಲ್ಲಿದೆ.
ಬಿಜೆಪಿಯಲ್ಲಿ ಸಂಘಪರಿವಾರ ಮಹತ್ವದ ಸ್ಥಾನ ಪಡೆಯುತ್ತದೆ, ಅಭ್ಯರ್ಥಿ ಆಯ್ಕೆಯ ಮುನ್ನ ಪರಿಹಾರದ ಎಲ್ಲಾ ಸಂಘಟನೆಗಳ ಪ್ರಮುಖರ ನಡುವೆ ಹಲವು ಸುತ್ತಿನ ಚರ್ಚೆ ಮಾಡುತ್ತದೆ. ಹಾಲಿ ಶಾಸಕರಿಗೆ ಸ್ಥಾನ ಇಲ್ಲ ಎಂದಾದರೆ ಆರ್ ಎಸ್ ಎಸ್ ಸಭೆ ನಡೆದು ಪ್ರಮುಖರೊಬ್ಬರಲ್ಲಿ ಹಾಲಿ ಶಾಸಕರಿಗೆ ಈ ಬಾರಿ ಟಿಕೆಟ್ ಇಲ್ಲ ಎನ್ನುವುದನ್ನು ಅವರಿಗೆ ಮಾತ್ರವೇ ಮೊದಲೇ ತಿಳಿಸುತ್ತದೆ. ಅದನ್ನು ಆರ್ ಎಸ್ ಎಸ್ ಪ್ರಮುಖರ ನಿರ್ದೇಶನದ ಮೂಲಕ ಮಾಡಲಾಗುತ್ತದೆ. ಅದರ ಜೊತೆಗೆ ಅವರಿಗೆ ಮುಂದೆ ಯಾವ ಜವಾಬ್ದಾರಿ ಎಂದೂ ತಿಳಿಸಲಾಗುತ್ತದೆ. ಇದು ಅನೇಕ ವರ್ಷಗಳಿಂದ ನಡೆದುಕೊಂಡು ಬಂದಿತ್ತು. ಆದರೆ ಈ ಬಾರಿ ಸುಳ್ಯ ಮಾತ್ರವಲ್ಲ ಎಲ್ಲೂ ಕೂಡಾ ಅಂತಹ ಯಾವ ಸೂಚನೆಯನ್ನೂ ಹಾಲಿ ಶಾಸಕರಿಗೆ ನೀಡಲಿಲ್ಲ. ಇದು ಅಂಗಾರ ಸೇರಿದಂತೆ ಹಲವರಿಗೆ ಬೇಸರವಾಗಲು ಕಾರಣವಾಗಿದೆ.ಪಕ್ಷ ಸರಿಯಾಗಿ ನಡೆಸಿಕೊಂಡಿಲ್ಲ ಎನ್ನುವುದಕ್ಕೆ ಇದೂ ಕಾರಣ, ಅಂಗಾರ ಅವರೂ ಇದನ್ನೇ ಹೇಳಿದ್ದರು, ನನಗೆ ಹೇಳಲಿಲ್ಲ ಎಂದಿದ್ದರು.
ಇಂದು ಅಭ್ಯರ್ಥಿ ಆಯ್ಕೆಯ ಮುನ್ನವೇ ಸಾಮಾಜಿಕ ಜಾಲತಾಣಗಳಲ್ಲಿ ಗುಂಪುಗಾರಿಕೆ ಆರಂಭವಾಗುತ್ತದೆ. ಈ ಬಾರಿ ಸುಳ್ಯದಲ್ಲೂ ಅಂತಹ ಗುಂಪುಗಾರಿಕೆ ಆಗಿತ್ತು. ಬಿಜೆಪಿ ವಿಜಯ ಯಾತ್ರೆಯ ಸಂದರ್ಭ ಹಾಲಿ ಶಾಸಕರಿಗೆ ಅಂಗಾರ ಅವರೇ ನಮ್ಮ ಅಭ್ಯರ್ಥಿ ಎಂಬ ಒಂದು ಘೋಷಣೆ ಹಾಗೂ ಗುಂಪುಗಾರಿಕೆ ರಾಜ್ಯದವರೆಗೆ ವಿಡಿಯೋ ಸಹಿತ ತಲಪಿತ್ತು, ಅಂಗಾರ ಅವರು ಸಚಿವರಾದ ಮೇಲೆ ಅವರ ನಿಕಟ ವರ್ತಿಗಳ ಬಗ್ಗೆಯೂ ಆಗಾಗ ಮಾಹಿತಿ ಸಂಗ್ರಹ ಆಗುತ್ತಿತ್ತು. ಪ್ರತ್ಯೇಕವಾದ ಹಲವು ಸರ್ವೆ ನಡೆದಿದೆ ಕೂಡಾ. ಇದೆಲ್ಲದರ ಜೊತೆಗೇ ಸುಳ್ಯದಲ್ಲಿ ಎರಡು ಬಣಗಳ ಬಗ್ಗೆಯೂ ಮಾಹಿತಿ ಸಂಗ್ರಹವನ್ನೂ ರಾಜ್ಯ ನಾಯಕರು, ಆರ್ ಎಸ್ ಎಸ್ ಪ್ರಮುಖರು ಮಾಡುತ್ತಿದ್ದರು, ಏಕೆಂದರೆ ಬಿಜೆಪಿಗೆ ಸುಳ್ಯ ಪ್ರತಿಷ್ಟೆಯ ವಿಧಾನಸಭಾ ಕ್ಷೇತ್ರ.
ಈ ಎಲ್ಲಾ ಕಾರಣಗಳಿಂದಲೇ ಸುಳ್ಯವನ್ನು ರಾಜ್ಯ ಹಾಗೂ ರಾಷ್ಟ್ರೀಯ ನಾಯಕರು ಇಂದು ನಿರ್ವಹಣೆ ಮಾಡಿದರು. ಅಭ್ಯರ್ಥಿ ಆಯ್ಕೆಯಾದ ತಕ್ಷಣವೇ ಬಿಜೆಪಿ ರಾಜ್ಯಾಧ್ಯಕ್ಷರ ಸಹಿತ , ಸಂಘಟನಾ ಕಾರ್ಯದರ್ಶಿಗಳು ಬಿಜೆಪಿಯ ಸುಳ್ಯ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯ ಬಗ್ಗೆ ವಿಶೇಷವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಬರೆದು ಗಮನ ಸೆಳೆದರು.ಸಾಮಾನ್ಯ ಕಾರ್ಯಕರ್ತನಿಗೆ ಟಿಕೆಟ್ ನೀಡಿದೆ ಎಂದೂ ಹೇಳಿದ್ದರು.ಈಗಲೂ ಸುಳ್ಯದ ವಿದ್ಯಮಾನಗಳ ಬಗ್ಗೆ ವಿಶೇಷವಾಗಿ ಗಮನಿಸುತ್ತಿದ್ದಾರೆ.
ಇದೀಗ ಅಂಗಾರ ಅವರಿಗೂ ಪ್ರಮುಖರಿಂದ ಸೂಚನೆ ಬರುತ್ತಿದೆ, ಪಕ್ಷದ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಸೂಚನೆ ಬರಲು ಆರಂಭವಾಗಿದೆ. ಪ್ರಮುಖರು ಅವರ ಮನೆಗೂ ಭೇಟಿ ನೀಡುವರು. ಸಕ್ರಿಯವಾಗಲು ತಿಳಿಸುತ್ತಾರೆ. ಬಿಜೆಪಿ ಮತ್ತೆ ಸಂಘಟನಾತ್ಮಕವಾಗಿ ಕೆಲಸ ಮಾಡಲು ಅವರೇ ನೇತೃತ್ವ ವಹಿಸುವಂತೆ ಮಾಡುವ ತಂತ್ರಗಾರಿಕೆ ಬಿಜೆಪಿಯಲ್ಲಿದೆ. ಸುಳ್ಯದಲ್ಲೂ ಬಿಜೆಪಿ ಕಾರ್ಯಕರ್ತರಿಗೆ, ಮತದಾರರಿಗೆ ಬಿಜೆಪಿ ಬಗ್ಗೆ ಅಸಮಾಧಾನಗಳಿಗಿಂತಲೂ ಅಂಗಾರ ಬಗ್ಗೆ ಅಸಮಾಧಾನ ಹಾಗೂ ಅವರ ನಿಕಟವರ್ತಿಗಳ ಬಗ್ಗೆ ಅಸಮಾಧಾನಗಳು ಇದ್ದವು. ಒಂದೇ ಕಲ್ಲಿನಲ್ಲಿ ನಾಯಕರು ಕಂಟ್ರೋಲ್ ತೆಗೆದುಕೊಂಡಿದ್ದಾರೆ. ಇದೀಗ ಮೊದಲ ಹಂತದಲ್ಲಿ ಅಂಗಾರ ಅವರು ಈ ಬಾರಿಯ ಚುನಾವಣಾ ನಿವೃತ್ತಿ ಘೋಷಣೆ ಹಿಂಪಡೆದಿದ್ದಾರೆ.
ನೂತನ ಅಭ್ಯರ್ಥಿಯ ಜೊತೆ ಈಗ ಸೇರಿಕೊಂಡಿರುವ ನಿಕಟವರ್ತಿಗಳ ಬಗ್ಗೆಯೂ ಮಾಹಿತಿ ಸಂಗ್ರಹ ಆರಂಭವಾಗಿದೆ. ಕಮಿಶನ್ ಏಟಂಜರು, ಭ್ರಷ್ಟಾಚಾರ, ಅವ್ಯಹಾರದ ವಾಸನೆಯು ಕಂಡುಬಂದರೆ ಅದಕ್ಕೂ ತಂತ್ರಗಾರಿಕೆಗೆ ಸಿದ್ಧತೆ ನಡೆಸಿದೆ ಎನ್ನುವ ಮಾಹಿತಿಯೂ ಲಭ್ಯವಾಗಿದೆ.
ಇದೀಗ ನೂತನ ಬಿಜೆಪಿ ಅಭ್ಯರ್ಥಿ ಭಾಗೀರಥಿ ಅವರಿಗೆ ಈ ಎಲ್ಲಾ ಸವಾಲುಗಳನ್ನು ಎದುರಿಸಿ ಮುನ್ನಡೆಯುವ ಸವಾಲು ಇದೆ. ಸುಳ್ಯದ ಅಭಿವೃದ್ಧಿಯ ರೂಪುರೇಷೆಗಳನ್ನೂ ಸಿದ್ಧಪಡಿಸುವ ಸವಾಲು ಇದೆ.