ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಫಾರ್ಮ್‌ಗೆ ಬಂದಿದೆ. ಈಗಾಗಲೇ ಗ್ರಾಮ ಮಟ್ಟದಲ್ಲಿ ಚುರುಕಾಗಿರುವ ಕಾಂಗ್ರೆಸ್ ಈಗ ಸುದ್ದಿಗೋಷ್ಟಿ ಮೂಲಕ ಸುಳ್ಯದಲ್ಲಿ ಬಿಜೆಪಿ ವೈಫಲ್ಯಗಳನ್ನು ಬೊಟ್ಟು ಮಾಡಿ ತೋರಿಸಿದೆ. ಸುಳ್ಯದಲ್ಲಿ ಅಭಿವೃದ್ಧಿ ಕುಂಠಿತ, ಪ್ರಾಕೃತಿಕ ವಿಕೋಪದಂತಹ ಸಂದರ್ಭದಲ್ಲಿಯೂ ಮೌನವಾಗಿರುವುದು ಕಂಡುಬಂದಿದೆ. ಪ್ರಾಕೃತಿಕ ವಿಕೋಪದಿಂದ ಆಗಿರುವ ಹಾನಿಗಳಿಗೆ ಮತ್ತು ಆ ಊರನ್ನು ಮತ್ತೆ ಕಟ್ಟಿಕೊಡುವುದಕ್ಕೆ ಶಾಸಕ, ಈಗ ಸಚಿವರಾಗಿರುವ ಅಂಗಾರರು ಏನು ಮಾಡಿದ್ದಾರೆ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
ಕೆ.ಪಿ.ಸಿ.ಸಿ. ವಕ್ತಾರ ಭರತ್ ಮುಂಡೋಡಿ ಸುಳ್ಯದಲ್ಲಿ ಸುದ್ದಿಗೋಷ್ಟಿ ನಡೆಸಿದ್ದಾರೆ. ಸುಳ್ಯದ ಕೊಲ್ಲಮೊಗ್ರ, ಹರಿಹರ, ಕಲ್ಮಕಾರು, ಸಂಪಾಜೆ ಭಾಗದಲ್ಲಿ ಹಲವು ಹಾನಿಗಳು ಸಂಭವಿಸಿದೆ. ಗ್ರಾ.ಪಂ., ತಾ.ಪಂ, ಜಿ.ಪಂ, ಶಾಸಕರು ಸರ್ಕಾರದ ಯಾವ ಪ್ರತಿನಿಧಿಗಳೂ ಭೇಟಿ ನೀಡಿ ಪರಿಹಾರ ಕಾರ್ಯ ಮಾಡಿಲ್ಲ.ಅಲ್ಲಿನ ಜನ ಹಲವು ಜನರಿಗೆ ಮನವಿ ಮಾಡಿದೂ ಸ್ಪಂದನೆ ದೊರೆತಿಲ್ಲ. ಹೀಗಾಗಿ ಕಾಂಗ್ರೆಸ್ ವತಿಯಿಂದ ಕೆ.ಪಿ.ಸಿ.ಸಿ. ಸಂಯೋಜಕ ನಂದಕುಮಾರ್ ಹಾಗೂ ನಾವು ಸ್ಥಳಕ್ಕೆ ತೆರಳಿ ಜನರ ಸಮಸ್ಯೆ ತಿಳಿದೆವು. ಅದಾದ ಬಳಿಕ ಅದುವರೆಗೂ ಸುಮ್ಮನಿದ್ದ ಶಾಸಕ, ಸಚಿವರು ತಕ್ಷಣವೇ ಅಲ್ಲಿಗೆ ತೆರಳಿದ್ದಾರೆ, ಅಷ್ಟೂ ಅಲ್ಲದೆ ಕಾಂಗ್ರೆಸ್ ನಾಟಕ ಮಾಡಿದೆ, ರಾಜಕೀಯ ಮಾಡುತ್ತಿದೆ ಎಂದು ಆರೋಪ ಮಾಡುತ್ತಿದ್ದಾರೆ. ನಾಟಕ ಎಂದರೆ ಯಾವುದು ಎಂಬುದು ಪ್ರಶ್ನೆಯಾಗಿದೆ. ಕೊಲ್ಲಮೊಗ್ರ, ಹರಿಹರ, ಕಲ್ಲುಗುಂಡಿ, ಸಂಪಾಜೆ ಭಾಗದಲ್ಲಿ ಪ್ರಾಕೃತಿಕ ವಿಕೋಪದಿಂದ ಆಗಿರುವ ಹಾನಿ ಬಗ್ಗೆ ಉಳ್ಳಾಲ ಶಾಸಕ ಯು.ಟಿ.ಖಾದರ್ ಪ್ರಸ್ತಾಪಿಸಿದ್ದಾರೆ. ಶಾಸಕರು ಸುಳ್ಯಕ್ಕೆ ಪರಿಹಾರ ತರುವಲ್ಲಿ ಕೆಲಸವೇ ಮಾಡುತ್ತಿಲ್ಲ ಎಂದು ಕೆ.ಪಿ.ಸಿ.ಸಿ. ವಕ್ತಾರ ಭರತ್ ಮುಂಡೋಡಿ ಹೇಳಿದರು.
ಸುಳ್ಯ ಕ್ಷೇತ್ರದಲ್ಲಿ ಪಾಕೃತಿಕ ವಿಕೋಪದಿಂದ ಹಾನಿಗೊಂಡ ಪ್ರದೇಶದ ಪರಿಹಾರಕ್ಕಾಗಿ ಸಚಿವ ಅಂಗಾರರು ವಿಶೇಷ ಅನುದಾನ ತರಿಸಿ ಸೇತುವೆ, ರಸ್ತೆ ಸೇರಿ ಊರು ಕಟ್ಟುವ ಕೆಲಸ ಮಾಡಬೇಕಿತ್ತು.ಬಿಜೆಪಿಗರು ಅಭಿವೃದ್ಧಿ ಕೆಲಸ ಮಾಡುವುದೂ ಇಲ್ಲ. ನಾವು ಮಾಡಲು ಹೋದರೆ ಇದು ನಾಟಕ ಎಂದು ಹೇಳುತ್ತಿದ್ದಾರೆ ಎಂದು ಭರತ್ ಮುಂಡೋಡಿ ಹೇಳಿದರು.
ಸುಳ್ಯ ತಾಲೂಕಿನಲ್ಲಿ ವಿಪರೀತವಾಗಿ ಅಡಿಕೆ ಹಳದಿ ರೋಗ ಇದೆ. ಈ ಬಾರಿ ಕೊಳೆ ರೋಗವೂ ವ್ಯಾಪಕವಿದೆ. ಕೃಷಿಕರಿಗೆ ಸರ್ಕಾರದಿಂದ ಏನು ಪರಿಹಾರ ದೊರೆತಿದೆ ಎಂದು ಪ್ರಶ್ನಿಸಿದ ಭರತ್ ಮುಂಡೋಡಿ, ಬಜೆಟ್‌ನಲ್ಲಿ ಅಡಿಕೆ ಹಳದಿ ಎಲೆರೋಗಕ್ಕೆ 25 ಕೋಟಿ ಘೋಷಣೆಯಾದರೂ ಅದು ಎಲ್ಲಿದೆ ಎಂದು ಪ್ರಶ್ನಿಸಿದರು. ಮಾಜಿ ಮುಖ್ಯಮಂತ್ರಿ ಡಿ ವಿ ಸದಾನಂದ ಗೌಡ ಅವರೇ ಅಡಿಕೆ ಹಳದಿ ರೋಗ ಪರಿಹಾರ ಮಾಡದಿರುವ ತಮ್ಮ ವೈಫಲ್ಯವನ್ನು ಒಪ್ಪಿಕೊಂಡಿದ್ದಾರೆ ಎಂದರು.
ಸುಳ್ಯದಲ್ಲಿ ಯಾವುದೇ ಅಭಿವೃದ್ಧಿ ಪರವಾದ ಪ್ರಶ್ನೆಗಳು ಕೇಳಿದರೆ ಕೆಂಡಾಮಂಡಲವಾಗುವುದು ಕಳೆದ ಕೆಲವು ಸಮಯಗಳಿಂದ ನಡೆದು ಬಂದಿದೆ. ಸುಳ್ಯ ನಗರದ ಕಸದ ಸಮಸ್ಯೆಯ ಕುರಿತು ಚಿತ್ರನಟ ಅನಿರುದ್ಧ್ ಜಾಗೃತಿಯ ಹೇಳಿಕೆ ನೀಡಿದರೆ ಇಲ್ಲಿಯ ಪಂಚಾಯತ್ ಅಧ್ಯಕ್ಷರು ಕೆಂಡಾ ಮಂಡಲ ಆಗುತ್ತಾರೆ. ರಸ್ತೆಯಲ್ಲಿ ಹೊಂಡ ಇದೆ. ಅಪಾಯ ಆಗುತ್ತಿದೆ ಎಂದು ಯುವಕ ತ್ರಿಶೂಲ್ ಸಲಹೆ ನೀಡಿದರೂ ಸಿಟ್ಟಾಗುತ್ತಾರೆ. ಇಂತಹ ಕೆಂಡಾಮಂಡಲವಾಗುವುದರ ಬದಲು, ಅಭಿವೃದ್ಧಿ ಪರವಾದ ಕೆಲಸ ನಡೆಯಲಿ ಎಂದು ಭರತ್ ಮುಂಡೋಡಿ ಹೇಳಿದರು.
ಸುಳ್ಯದ ಅನೇಕ ರಸ್ತೆಗಳು, ಸೇತುವೆಗಳು ಇನ್ನೂ ಅಭಿವೃದ್ಧಿಯಾಗಿಲ್ಲ. ಭರವಸೆಗಳು ಸಿಗುತ್ತವೆ, ಅನುದಾನ ಇದೆ ವಾರದಲ್ಲಿ ಕೆಲಸವಾಗುತ್ತದೆ ಎನ್ನುತ್ತಾರೆ. ಆದರೆ ಇನ್ನೂ ಹಲವು ರಸ್ತೆಗಳು, ಸೇತುವೆಗಳು ನಿರ್ಮಾಣವಾಗಿಲ್ಲ ಭರವಸೆಯಲ್ಲಿಯೇ ಉಳಿದಿದೆ ಎಂದು ಆರೋಪಿಸಿದರು. ಬಿಜೆಪಿಗರು ಜನರನ್ನು ಮೋಸ ಮಾಡುತ್ತಾರೆಯೇ ಹೊರತು ಅಭಿವೃದ್ಧಿಯ ಚಿಂತನೆ ಇಲ್ಲ. ಇದೆಲ್ಲ ನಮ್ಮ ಎದುರಿರುವ ನಿದರ್ಶನಗಳು ಎಂದು ಭರತ್ ಮುಂಡೋಡಿ ಹೇಳಿದರು. ಚುನಾವಣೆ ಬಂದಾಗ ಭಾವನಾತ್ಮಕ ವಿಷಯ ಮುಂದಿಟ್ಟುಕೊಂಡು ಚುನಾವಣೆಗೆ ಹೋಗುತ್ತಾರೆ, ಆದರೆ ಕಾಂಗ್ರೆಸ್ ಅಭಿವೃದ್ಧಿ ವಿಚಾರದಲ್ಲಿ ಜನರ ಮುಂದೆ ಹೋಗುತ್ತದೆ ಎಂದರು.
ಸುದ್ದಿಗೋಷ್ಟಿಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ.ಜಯರಾಮ್, ಪ್ರಮುಖರಾದ ಪಿ.ಎಸ್.ಗಂಗಾಧರ್, ಮಹಮ್ಮದ್ ಕುಂಞಿ ಗೂನಡ್ಕ, ಸಚಿನ್ ಶೆಟ್ಟಿ ಪೆರುವಾಜೆ, ಸುರೇಶ್ ಎಂ.ಎಚ್., ಡೇವಿಡ್ ಧೀರಾ ಕ್ರಾಸ್ತ, ಸದಾನಂದ ಮಾವಜಿ, ಭವಾನಿಶಂಕರ ಕಲ್ಮಡ್ಕ, ಶಶಿಧರ್ ಎಂ.ಜೆ. ಮೊದಲಾದವರು ಇದ್ದರು.