ಕೊರೋನಾ ಸಂಕಷ್ಟ | ದ ಕ ಜಿಲ್ಲೆಯಲ್ಲಿ ಕೊರೋನಾ ನಿಯಂತ್ರಣಕ್ಕೆ ಹರಸಾಹಸ | ಸುಳ್ಯದಲ್ಲಿ ಹೆಚ್ಚುತ್ತಿದೆ ಪಾಸಿಟಿವ್‌ ಪ್ರಕರಣ | ಜನರಲ್ಲಿ ಹೆಚ್ಚುತ್ತಿರುವ ಆತಂಕ | ಜನನಾಯಕರು ಇನ್ನೂ ಏಕೆ ಮೌನ…. ? |

May 9, 2021
8:59 PM

ರಾಜ್ಯದಲ್ಲಿ  ಕೊರೋನಾ ಪಾಸಿಟಿವ್‌ ಸಂಖ್ಯೆ ಹೆಚ್ಚುತ್ತಿದೆ. ವಾರಗಳಿಂದ ಏರುಗತಿಯಲ್ಲಿ  ಸಾಗುತ್ತಿದೆ. ಸರಕಾರ ಕೊರೋನಾ ನಿಯಂತ್ರಣಕ್ಕೆ ಇನ್ನಿಲ್ಲದ ಪ್ರಯತ್ನ ಮಾಡುತ್ತಿದೆ. ಅಧಿಕಾರಿಗಳು ವಿವಿಧ ನಿಯಮಾವಳಿಗಳನ್ನು ಮಾಡುತ್ತಿದ್ದಾರೆ. ಹೀಗಾದರೂ ಕೊರೋನಾ ನಿಯಂತ್ರಣಕ್ಕೆ ಬರುತ್ತಿಲ್ಲ. ರಾಜ್ಯದಲ್ಲಿ ಇಂದು 47930  ಕೋವಿಡ್ ಪಾಸಿಟಿವ್ ಪ್ರಕರಣ ಕಂಡುಬಂದಿದ್ದು , 490 ಜನರು ಮೃತಪಟ್ಟಿದ್ದಾರೆ. ದ ಕ ಜಿಲ್ಲೆಯಲ್ಲಿ ಕೂಡಾ ಕೊರೋನಾ ನಿಯಂತ್ರಣಕ್ಕೆ ಬರುತ್ತಿಲ್ಲ. 1,694 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಸುಳ್ಯದಲ್ಲಿ ಕೂಡಾ ಏರುಗತಿಯಲ್ಲಿದೆ. ಹಾಗಿದ್ದರೂ ಈ ಬಾರಿ ಜನಪ್ರತಿನಿಧಿಗಳು ಹೆಚ್ಚು ಮೌನವಾಗಿರುವುದು  ಏಕೆ ಎಂಬುದೇ ಈಗಿರುವ ಪ್ರಶ್ನೆಯಾಗಿದೆ. ಸುಳ್ಯದ ಸಚಿವರೇ ಈಗ ಇರುವುದರಿಂದ ಈಗ ಯಾವುದೇ ಪರಿಣಾಮಕಾರಿ ಅನುಷ್ಟಾನಗಳು ಕಾಣುತ್ತಿಲ್ಲ.

Advertisement
Advertisement
Advertisement
Advertisement
Advertisement

ದಕ್ಷಿಣ ಕನ್ನಡ ಜಿಲ್ಲೆಯ ಏಕೈಕ ಸಚಿವರು ಇರುವುದು  ಸುಳ್ಯ ವಿಧಾನಸಭಾ ಕ್ಷೇತ್ರಕ್ಕೆ. ಉಸ್ತುವಾರಿ ಸಚಿವರು ಉಡುಪಿ ಜಿಲ್ಲೆಯವರಾದರೂ ಸುಳ್ಯದಿಂದ ಸಚಿವರಿದ್ದಾರೆ. ಈ ಬಾರಿಯ ಕೊರೋನಾ ನಿಯಂತ್ರಣ ಹಾಗೂ ಅದಕ್ಕೆ ಬೇಕಾದ ಸಾಕಷ್ಟು ಮುಂಜಾಗ್ರತಾ ಕ್ರಮಗಳು ಈ ಬಾರಿ ಸರಕಾರದ ಮಟ್ಟದಿಂದ ಸುಳ್ಯದಲ್ಲಿ ಹೆಚ್ಚು ಕಾಣಬೇಕಾಗಿತ್ತು. ಆದರೆ ಕಳೆದ ವರ್ಷದಷ್ಟೂ ಕೂಡಾ ಈ ಬಾರಿ ನಿಯಂತ್ರಣ ಕ್ರಮಗಳು, ಸಹಾಯಗಳು ಕಂಡುಬರುತ್ತಿಲ್ಲ. ಇಡೀ ದ ಕ ಜಿಲ್ಲೆಯಲ್ಲಿ ಜಿಲ್ಲಾಧಿ ಕಾರಿಗಳು, ಪೊಲೀಸ್‌ ಇಲಾಖೆ ಎರಡು ತಿಂಗಳಿನಿದಲೇ ವಿವಿಧ ಬಿಗಿ ನಿಯಮಗಳನ್ನು ಜಾರಿಗೆ ತರುತ್ತಿದ್ದರೆ ಸುಳ್ಯದಲ್ಲಿ ಆರೋಗ್ಯ ಇಲಾಖೆ ಹಾಗೂ ಪೊಲೀಸ್‌ ಇಲಾಖೆ ಮತ್ತು ಕಂದಾಯ ಇಲಾಖೆಗಳು ಕೆಲಸ ಮಾಡುತ್ತಿದ್ದರೆ ಉಳಿದ ಇಲಾಖೆಗಳೂ ಈ ಬಾರಿ ಅಷ್ಟೊಂದು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿರುವುದೂ ಕಂಡುಬರುತ್ತಿಲ್ಲ. ಈ ಬಗ್ಗೆ ಪ್ರಶ್ನಿಸಿದರೆ, ತಕ್ಷಣವೇ ಪ್ರಚಾರವಿಲ್ಲದೆ ಕೆಲಸ ಮಾಡುತ್ತಿದ್ದಾರೆ ಎಂಬ ಮಾತುಗಳು ಬರುತ್ತವೆ. ಕಳೆದ ಬಾರಿ ಗ್ರಾಮ ಪಂಚಾಯತ್‌ ಗಳು ಉತ್ತಮ ಕೆಲಸ ಮಾಡಿದ್ದವು, ಗ್ರಾಮೀಣ ಜನರಿಗೆ ಕೊರೋನಾ ಜಾಗೃತಿ ಅರಿವು ಸೇರಿದಂತೆ ಆಹಾರ, ಔಷಧಿ ಪೂರೈಕೆಗಳನ್ನೂ ವಿವಿದ ಸಂಘಟನೆಗಳು ಮಾಡುತ್ತಿದ್ದವು. ಈ ಬಾರಿ ಅದ್ಯಾವುದೂ ಕಾಣುತ್ತಿಲ್ಲ.

Advertisement

ಈಗ ಗ್ರಾಮೀಣ ಭಾಗಗಳಲ್ಲೂ ಕೊರೋನಾ ಪಾಸಿಟಿವ್‌ ಸಂಖ್ಯೆ ಏರಿಕೆಯಾಗುತ್ತಿದೆ. ಸಚಿವರು ಕೂಡಾ ಜನರಿಗೆ ಮುಂಜಾಗ್ರತೆ ಇಲ್ಲ, ಈಗಲೂ ರಸ್ತೆಯಲ್ಲಿ ಓಡಾಡುತ್ತಾರೆ, ಪೇಟೆಗೆ ಬರ್ತಾರೆ ಎಂದೇ ಹೇಳುವುದು  ಮಾಧ್ಯಮಗಳಲ್ಲಿ ವರದಿಯಾಗಿದೆ. ಆದರೆ ಅಗತ್ಯ ವಸ್ತುಗಳ ಖರೀದಿಯ ಸಮಯವನ್ನು ಬದಲು ಮಾಡುವಂತೆ ಸರಕಾರದ ಗಮನ ಸೆಳೆದರೆ ಈ ರೀತಿ ಅಡ್ಡಾಡುವುದು  ತಪ್ಪಬಹುದು. ಸುಳ್ಯದಲ್ಲಿ ಅಗತ್ಯವಾಗಿ ರೋಗಿಗಳಿಗೆ ತುರ್ತಾಗಿ ನೀಡುವ ಆಮ್ಲಜನಕ ಘಟಕವೊಂದು ಬೇಕಾಗಿತ್ತು, ಈ ಬಗ್ಗೆ ಈಗಾಗಲೇ ಅಂದಾಜುಪಟ್ಟಿ ಸಿದ್ಧವಾಗಿ ಸರಕಾರದ ಮಟ್ಟದವರೆಗೆ ಮಾತುಕತೆ ನಡೆದರೂ ಅನುಷ್ಟಾನವಾಗಿಲ್ಲ. ಸಚಿವರು, ಸಂಸದರು ಈ ಬಗ್ಗೆ ತಕ್ಷಣ ಕಾರ್ಯಪ್ರವೃತ್ತರಾಗಬೇಕಾಗಿತ್ತು. ಸಂಸದರ ಪ್ರದೇಶಾಭಿವೃದ್ಧಿ ನಿಧಿಯನ್ನೂ ಇದಕ್ಕೆ ಬಳಕೆ ಮಾಡಬಹುದು  ಎಂದು ಪ್ರಧಾನಿಗಳ ಕಚೇರಿ ಈ ಹಿಂದೆಯೇ ತಿಳಿಸಿತ್ತು. ಈ ಬಗ್ಗೆ ಫಾಲೋಅಪ್‌ ಕೊರತೆ ಕಂಡುಬಂತು , ಈಗ ಸುಳ್ಯಕ್ಕೆ ರೋಗಿಗಳಿಗೆ ತುರ್ತಾಗಿ ನೀಡುವ ಆಮ್ಲಜನಕ ಘಟಕ ವಿಳಂಬವಾಗುತ್ತಿದೆ.

ಇಷ್ಟೆಲ್ಲಾ ಇದ್ದರೂ ಸುಳ್ಯದಲ್ಲಿ  ಒಂಬಿಬ್ಬರು ಜನನಾಯಕರು ಪ್ರಯತ್ನ ಮಾಡುತ್ತಿದ್ದರೆ ಇತರ ಯಾವುದೇ ಪಕ್ಷಗಳೂ ಜನರಿಗೆ ಧ್ವನಿಯಾಗುತ್ತಿಲ್ಲ. ಗ್ರಾಮೀಣ ಭಾಗದ ಜನರ ಸಂಕಷ್ಟಕ್ಕೂ ಧ್ವನಿಯಾಗುತ್ತಿಲ್ಲ. ಸರಕಾರದ ಸಚಿವರೇ ಇಲ್ಲಿರುವಾಗ ಸುಳ್ಯವೂ ಗ್ರಾಮೀಣ ಭಾಗವಾಗಿರುವುದರಿಂದ ಜನರ ಸಂಕಷ್ಟವು ಸರಕಾರಕ್ಕೆ ತಕ್ಷಣವೇ ರವಾನೆಯಾಗಬೇಕಿತ್ತು. ಈಗ ಮಾಡಿರುವ ನಿಯಮಗಳ ಬಗ್ಗೆಯೂ ಗ್ರಾಮೀಣ ಭಾಗದ ಜನರು ಸ್ವಾಗತಿಸುತ್ತಾರೆ, ಆದರೆ ಅಗತ್ಯ ವಸ್ತುಗಳ ಖರೀದಿಯ ಸಮಯದ ಬಗ್ಗೆ ಗಮನ ಸೆಳೆದಿದ್ದಾರೆ. ಆದರೆ ಸಚಿವರು, ಸರಕಾರ ಈ ಬಗ್ಗೆ ಮಾತೆತ್ತುತ್ತಿಲ್ಲ.

Advertisement

ಕಳೆದ ವರ್ಷದ ಕೋವಿಡ್‌ ಕಾರ್ಯಪಡೆಯನ್ನು  ಗ್ರಾಮಮಟ್ಟದಲ್ಲಿ  ರಚನೆ ಮಾಡಲಾಗಿತ್ತು. ಈ ಬಾರಿಯೂ ರಚನೆಯಾಗಿದೆ. ಆದರೆ ಕಳೆದ ವರ್ಷದಷ್ಟು ಈ ಬಾರಿ ಚಟುವಟಿಕೆಯಲ್ಲಿಲ್ಲ ಎನ್ನುವುದು  ಈಗ ಸ್ಪಷ್ಟವಾಗಿದೆ. ಈಗ ಒಂದೆರಡು ದಿನಗಳಿಂದ ಕೆಲವು ಗ್ರಾಮ ಪಂಚಾಯತ್‌ ಗಳಲ್ಲಿ  ಕೆಲಸ ಆರಂಭವಾಗಿದೆ.

ಸುಳ್ಯದಲ್ಲಿ ಇದುವರೆಗೂ ಕೊರೋನಾ ಸಂಬಂಧವಾಗಿ ಸಭೆ ನಡೆದರೂ ಪರಿಣಾಮಕಾರಿಯಾಗಿ ಗ್ರಾಮೀಣ ಭಾಗದವರೆಗೂ ಅನುಷ್ಟಾನವಾಗಿಲ್ಲ ಎಂದು ಹೆಸರು ಹೇಳಲಿಚ್ಚಿಸದ ಅಧಿಕಾರಿ ಹೇಳುತ್ತಾರೆ. ಹಾಗಿದ್ದರೂ ಕೆಲವು ಗ್ರಾಮ ಪಂಚಾಯತ್‌ ಗಳು, ಗ್ರಾ ಪಂ ಸದಸ್ಯರುಗಳು ಗ್ರಾಮೀಣ ಭಾಗದಲ್ಲಿ ಜನರಿಗೆ ಅರಿವು, ಮುಂಜಾಗ್ರತಾ ಕ್ರಮಗಳ ಬಗ್ಗೆ ಮಾಹಿತಿ ನೀಡುತ್ತಿವೆ. ಕೊರೋನಾ ಬಿಗಿ ನಿಯಮಗಳು ಹೆಚ್ಚಾದಂತೆಯೇ ಬೆಂಗಳೂರು ಸೇರಿದಂತೆ ವಿವಿದೆಡೆಯಿಂದ ಗ್ರಾಮೀಣ ಭಾಗಗಳಿಗೆ ಜನರು ಬರುವ ಸಂಖ್ಯೆ ಹೆಚ್ಚಾಗಿದೆ. ‌ಬೆಂಗಳೂರು ಸೇರಿದಂತೆ ವಿವಿಧ ನಗರಗಳು ಕೊರೋನಾ ಹಾಟ್‌ ಸ್ಫಾಟ್‌ ಆಗಿತ್ತು. ಇಂತಹ ಜನರ ಆರೋಗ್ಯ ತಪಾಸಣೆ ಹಾಗೂ ಪರೀಕ್ಷೆ ಪರಿಣಾಮಕಾರಿಯಾಗಿ ಆಗದ ಕಾರಣ ಗ್ರಾಮೀಣ ಭಾಗದಲ್ಲಿ ಕೊರೋನಾ ಹೆಚ್ಚಾಗುವುದಕ್ಕೆ ಕಾರಣವಾಗಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

Advertisement

ಈ ಕಡೆ ಸುಳ್ಯದಲ್ಲಿ ಕಾಂಗ್ರೆಸ್ ಸೇರಿದಂತೆ ಇತರ ಪಕ್ಷಗಳು ಮೌನವಾಗಿವೆ. ಜನ ಸೇವೆಗಿಂತಲೂ ಯಾವ ಕಾರ್ಯಗಳು ಆಗಬೇಕಾಗಿದೆ ಎಂಬುದರ ಬಗ್ಗೆಯೂ ಸರಕಾರದ ಗಮನ ಸೆಳೆಯುತ್ತಿಲ್ಲ. ಕಾಂಗ್ರೆಸ್‌ ಪಕ್ಷದ ವತಿಯಿಂದ ಅಂಬುಲೆನ್ಸ್‌ ಸೇವೆ ಇದೀಗ ಆರಂಭವಾಗುತ್ತಿದೆ. ‌ ಯಾವುದೇ ರಚನಾತ್ಮಕ ಸಲಹೆಗೂ ಸಾಮಾಜಿಕ ಕಾರ್ಯಕರ್ತರು ಮುಂದಾಗುತ್ತಿಲ್ಲ, ಮುಂದಾದರೆ ಸಾಮಾಜಿಕ ಜಾಲತಾಣದಲ್ಲಿ ನಿಂದನೆ ಬರುತ್ತದೆ ಎಂಬ ಭಯವನ್ನು ಸಾಮಾಜಿಕ ಕಾರ್ಯಕರ್ತರು ಹೇಳುತ್ತಾರೆ.

ಸುಳ್ಯದಲ್ಲಿ ಕೊರೋನಾ ಜಾಗೃತಿ ಹಾಗೂ ಅಗತ್ಯ ಕ್ರಮಗಳನ್ನು ರಾಜಕೀಯ, ಪಕ್ಷಬೇಧ ಮರೆತು ಒಂದಾಗಿ ಕೆಲಸ ಮಾಡಿದರೆ ಕೊರೋನಾ ಓಡಿಸಲು ಸುಲಭವಿದೆ, ಇನ್ನೂ ಜಾಗೃತಿಯಾಗದೇ ಇದ್ದಲ್ಲಿ  ಸಂಕಷ್ಟದ ದಿನಗಳನ್ನು ಎದುರಿಸಬೇಕಾದೀತು ಎಂಬ ಎಚ್ಚರಿಕೆಯ ಗಂಟೆ ಈಗಾಗಲೇ ಎದುರಾಗಿದೆ. ಜನರೂ ಕೂಡಾ ಈ ಬಾರಿ ಲಾಕ್ಡೌನ್‌ ಸೇರಿದಂತೆ ಸರಕಾರ, ಜಿಲ್ಲಾಡಳಿತ ಜಾರಿ ಮಾಡುವ ಕೊರೋನಾ ಲಾಕ್ಡೌನ್‌ ನಿಯಮಗಳನ್ನೂ ಸರಿಯಾಗಿ ಪಾಲನೆ ಮಾಡದೇ ಇರುವುದು ಕಂಡುಬರುತ್ತಿದೆ. ಮುಂಜಾಗ್ರತೆ ಹಾಗೂ ಎಚ್ಚರಿಕೆ ವಹಿಸಬೇಕಾದ್ದೂ ಜನರ ಕರ್ತವ್ಯವಾಗಿದೆ.

Advertisement

ಕಳೆದ ವರ್ಷ ವಿವಿಧ ಸಾಮಾಜಿಕ ಸಂಘಟನೆಗಳು ಕೊರೋನಾ ಸಮಯದಲ್ಲಿ  ಉತ್ಸಾಹದಿಂದ ಕೆಲಸ ಮಾಡಿದ್ದರು. ಈ ಬಾರಿ ಸುಳ್ಯದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಅಂಗ ಸಂಸ್ಥೆಯಾದ ಸೇವಾ ಭಾರತಿ ಸಹಿತ ಎಸ್‌ ಎಸ್‌ ಎಫ್, ಎಸ್‌ ಡಿ ಪಿ ಐ‌, ಯೂತ್‌ ಕಾಂಗ್ರೆಸ್ ಮೊದಲಾದ ಕೆಲವು ಸಂಘಟನೆಗಳು ಕೊರೋನಾ ಸಂಕಷ್ಟದಲ್ಲಿ ಕೆಲಸ ಮಾಡುತ್ತಿವೆ. ಪುತ್ತೂರಿನಲ್ಲಿ  ಸೇವಾ ಭಾರತಿ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿದ್ದು ಬಸ್‌ ಚಾಲಕರು ಸಹಿತ ಬಸ್‌ ನಿಲ್ದಾಣಗಳಲ್ಲಿ  ಬಾಕಿಯಾದವರಿಗೆ ಆಹಾರ ಪೊಟ್ಟಣ ಸಹಿತ ಅಗತ್ಯ ಸಹಾಯ ಲಭ್ಯವಾಗುತ್ತಿದೆ ಎಂದು ಸುಳ್ಯದ ಬಸ್‌ ಚಾಲಕರೊಬ್ಬರು ತಮ್ಮ ಅನುಭವ ಹೇಳುತ್ತಾರೆ.

 

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಅಡಿಕೆ ಎಲೆಚುಕ್ಕಿ ರೋಗ | ಸರ್ಕಾರದಿಂದ ಪ್ರತ್ಯೇಕ ಪರಿಹಾರ ಇಲ್ಲ | ಡಿಸೀಸ್‌ ಫಾರ್ಕಾಸ್ಟ್‌ ಮಾಡಲು ವಿಧಾನ ಪರಿಷತ್‌ ಸದಸ್ಯ ಕಿಶೋರ್‌ ಕುಮಾರ್‌ ಬೊಟ್ಯಾಡಿ ಒತ್ತಾಯ |
March 4, 2025
3:30 PM
by: ದ ರೂರಲ್ ಮಿರರ್.ಕಾಂ
ಬಿಸಿಗಾಳಿ ಪರಿಸ್ಥಿತಿಗೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಿ
March 4, 2025
2:33 PM
by: The Rural Mirror ಸುದ್ದಿಜಾಲ
ಹವಾಮಾನ ವರದಿ | 04-03-2025 | ಮಾ.8 ರವರೆಗೆ ಮಳೆ ಲಕ್ಷಣ ಇಲ್ಲ | ಬಿಸಿಲಿನ ವಾತಾವರಣ ಮುಂದುವರಿಕೆ |
March 4, 2025
12:55 PM
by: ಸಾಯಿಶೇಖರ್ ಕರಿಕಳ
ಹವಾಮಾನ ವರದಿ | 03-03-2025 | ಬಿಸಿಲಿನ ವಾತಾವರಣ ಮುಂದುವರಿಕೆ | ಮಾ.6 ರ ನಂತರ ಅಲ್ಲಲ್ಲಿ ತುಂತುರು ಮಳೆ ನಿರೀಕ್ಷೆ |
March 3, 2025
11:46 AM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror