ಸುಳ್ಯ ಹಲವು ಸಮಯಗಳಿಂದ ದೇಶಮಟ್ಟದಲ್ಲಿ ಸುದ್ದಿಯಾಗುತ್ತಿದೆ. ಅದು ಮೂಲಭೂತ ಸೌಲಭ್ಯದ ಕೊರತೆಯ ಕಾರಣದಿಂದಲೇ..!. ಈ ಬಾರಿ ಮಾತ್ರಾ ಸುಳ್ಯದ ನ್ಯಾಯಾಧೀಶರ ಗ್ರಾಮೀಣ ಭಾಗದ ಅಭಿವೃದ್ಧಿಯ ಕಾಳಜಿಯಿಂದ ಮತ್ತೆ ಸುದ್ದಿಯಾಗಿದೆ. ಬೆಳ್ಳಾರೆಯಲ್ಲಿ ಪುಟಾಣಿಗಳು ರಸ್ತೆ ದುರಸ್ತಿ ಮಾಡುವ ಮೂಲಕ ಇಡೀ ನಾಡಿನ ಗಮನ ಸೆಳೆದಿದ್ದರು, ಇದನ್ನು ಗಮನಿಸಿ ಸುಳ್ಯದ ನ್ಯಾಯಾಧೀಶರೇ ಖುದ್ದಾಗಿ ಸ್ಥಳಕ್ಕೆ ಭೇಟಿ ನೀಡುವ ಮೂಲಕ ಇಲ್ಲಿ ಗ್ರಾಮೀಣ ಕಾಳಜಿಯನ್ನು ವ್ಯಕ್ತಪಡಿಸಿದ್ದಾರೆ.
ಬೆಳ್ಳಾರೆ ಗ್ರಾಮದ ಮೂಡಾಯಿತೋಟ ಹಾಗೂ ಬೆಳ್ಳಾರೆ ಸಂಪರ್ಕದ ರಸ್ತೆ ಅವ್ಯವಸ್ಥೆಯಿಂದ ಕೂಡಿತ್ತು. ಸಂಪೂರ್ಣ ಕೆಸರಾಗಿತ್ತು. ಈ ರಸ್ತೆಯನ್ನು ಇಬ್ಬರು ಪುಟಾಣಿಗಳು ದುರಸ್ತಿ ಮಾಡಿದ್ದರು. ಹೆತ್ತವರ ಜೊತೆಗೆ ತಾವೂ ಹಾರೆ ಹಿಡಿದು ಕೆಲಸ ಮಾಡಿದ್ದರು. ಪುಟಾಣಿಗಳು ರಸ್ತೆ ದುರಸ್ತಿ ಮಾಡುವ ಫೋಟೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದನ್ನು ಗಮನಿಸಿದ ಸುಳ್ಯದ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶ ಸೋಮಶೇಖರ್ ಸ್ಥಳಕ್ಕೆ ಭೇಟಿ ನೀಡಿ ಗ್ರಾಪಂ ಹಾಗೂ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದರು.ಪುಟಾಣಿಗಳು ಹಾರೆ ಹಿಡಿದು ಕೆಲಸ ಮಾಡುವ ಸ್ಥಿತಿಯ ಬಗ್ಗೆ ವಿವರಣೆ ಕೇಳಿದ್ದು ಮಾತ್ರವಲ್ಲದೆ, ಕೇಸು ದಾಖಲಿಸಿಕೊಳ್ಳಲೂ ಸೂಚನೆ ನೀಡಿದ್ದರು.
ಆದರೆ ರಸ್ತೆ ದುರಸ್ತಿ ಮಾಡಿಸುವ ಪಂಚಾಯತ್ ಭರವಸೆಯ ಮೇರೆಗೆ ತಕ್ಷಣವೇ ರಸ್ತೆ ದುರಸ್ತಿ ಮಾಡಲು ನ್ಯಾಯಾಧೀಶರು ಸೂಚನೆ ನೀಡಿದ್ದರು. ಈ ಘಟನೆ ರಾಜ್ಯಾದ್ಯಂತ ಸುದ್ದಿಯಾಗಿತ್ತು. ಸುಳ್ಯದ ನ್ಯಾಯಾಧೀಶರ ಗ್ರಾಮೀಣ ಭಾಗದ ಕಳಕಳಿ ಈಗ ಎಲ್ಲೆಡೆಯೂ ಗಮನ ಸೆಳೆದಿದೆ. ಗ್ರಾಮೀಣ ಭಾಗದ ಹಾಗೂ ಪುಟಾಣಿಗಳ ಸಂಕಷ್ಟವನ್ನು ಖುದ್ದಾಗಿ ವೀಕ್ಷಣೆ ಮಾಡಿರುವ ನ್ಯಾಯಾಧೀಶರು ತಕ್ಷಣವೇ ದುರಸ್ತಿಗೆ ಸೂಚನೆ ನೀಡಿರುವುದು ಗ್ರಾಮೀಣ ಭಾಗದ ಜನರಲ್ಲಿ ಅಭಿವೃದ್ಧಿಯ ಭರವಸೆಗೆ ಕಾರಣವಾಗಿದೆ.
ಸುಳ್ಯವು ಕಳೆದ ಕೆಲವು ಸಮಯಗಳಿಂದ ಸುದ್ದಿಯಾಗುತ್ತಿದೆ. ಸುಳ್ಯದ ಮೂಲಭೂತ ಸೌಲಭ್ಯದ ಕೊರತೆಯೇ ಸುದ್ದಿಯಾಗಲು ಪ್ರಮುಖ ಕಾರಣ. ಸುಳ್ಯದ ಗುತ್ತಿಗಾರಿನ ಮೊಗ್ರದಲ್ಲಿ ಗ್ರಾಮಸ್ಥರಿಂದ ಹಾಗೂ ದಾನಿಗಳ ನೆರವಿನಿಂದ ಸೇತುವೆ ನಿರ್ಮಾಣ, ಮೊಬೈಲ್ ನೆಟ್ವರ್ಕ್ ಸಮಸ್ಯೆ, ಗ್ರಾಮೀಣ ಭಾಗದ ಸಂಪರ್ಕ ರಸ್ತೆ ಸಮಸ್ಯೆ, ಸೇತುವೆ ಸಮಸ್ಯೆ, ಕಾಡುಪ್ರಾಣಿಗಳ ಹಾವಳಿ, ಆನೆ ಹಾವಳಿ, ಕೃಷಿ ಸಮಸ್ಯೆ ಇಂತಹ ಮೂಲಭೂತ ಸಮಸ್ಯೆಗಳ ಕಾರಣದಿಂದಲೇ ರಾಜ್ಯ ಮಾತ್ರವಲ್ಲ ದೇಶಮಟ್ಟದಲ್ಲೂ ಸುದ್ದಿಯಾಗುತ್ತಿದೆ. ಈ ಬಾರಿ ಮತ್ತೆ ಸುದ್ದಿಯಾದ್ದು ಬೆಳ್ಳಾರೆಯ ಪುಟಾಣಿಗಳ ಮೂಲಕ.