ಮಳೆ ಕಡಿಮೆಯಾದ ತಕ್ಷಣವೇ ಸುಳ್ಯದ ಪ್ರಮುಖ ಗುಂಡಿಗಳಿಗೆ ಕೆವಿಜಿ ಇಂಜಿನಿಯರಿಂಗ್ ಕಾಲೇಜಿನ ಮಾಜಿ ಪ್ರಾಂಶುಪಾಲ ಡಾ.ಎನ್.ಎ.ಜ್ಞಾನೇಶ್ ಅವರ ನೇತೃತ್ವದಲ್ಲಿ ಕಾಂಕ್ರೀಟ್ ಮಿಕ್ಸ್ ಮೂಲಕ ತೇಪೆ ಹಾಕಲಾಯಿತು. ಇಚ್ಛಾ ಶಕ್ತಿ ಇದ್ದರೆ ಯಾವ ಕೆಲಸವನ್ನೂ ಮಾಡಬಹುದು ಎನ್ನುವುದನ್ನು ತೋರಿಸಿದ ಡಾ.ಜ್ಞಾನೇಶ್ ಅವರನ್ನು ಸಾರ್ವಜನಿಕರು ಶ್ಲಾಘಿಸಿದ್ದಾರೆ. ಗ್ರಾಮೀಣ ಭಾರತ ಮಾತ್ರವಲ್ಲ ಈಗ ನಗರ ಭಾರತವನ್ನೂ ಜನರೇ ದುರಸ್ತಿ ಮಾಡಬೇಕಾದ ಸ್ಥಿತಿ ಬಂದಿದೆ…!.
ಕಳೆದ ವಾರವಷ್ಟೇ ಸುಳ್ಯದ ನಗರದ ರಸ್ತೆ ಹೊಂಡಗಳು, ಸುಳ್ಯದ ಕಸದ ಸಮಸ್ಯೆ ಸೇರಿದಂತೆ ಹಲವು ರಸ್ತೆಗಳು ವಿವಾದಕ್ಕೆ ಕಾರಣವಾಗಿತ್ತು. ಸುಳ್ಯದ ರಸ್ತೆಯ ಸಮಸ್ಯೆ ಬಗ್ಗೆ ಆರ್ ಜೆ ತ್ರಿಶೂಲ್ ಗೌಡ ಕಂಬಳ ಅವರು ವಿಡಿಯೋ ಮೂಲಕ ಎಚ್ಚರಿಸಿದ್ದರು. ಇದಕ್ಕೆ ಕೀಬೋರ್ಡ್ ವಾರಿಯರ್ ಎಂದು ನಗರ ಪಂಚಾಯತ್ ಅಧ್ಯಕ್ಷರು ಟೀಕಿಸಿದ್ದರು. ಅದಕ್ಕೂ ಹಿಂದೆ ಸುಳ್ಯದ ಕಸದ ಸಮಸ್ಯೆಯ ಬಗ್ಗೆಯೂ ನಟ ಅನಿರುದ್ದ್ ಅವರು ಎಚ್ಚರಿಸಿದಾಗ ಲಾರಿ ಕಳುಹಿಸಿಕೊಡಿ ಎಂದು ನಗರ ಪಂಚಾಯತ್ ಅಧ್ಯಕ್ಷ ಛೇಡಿಸಿದ್ದರು. ಹೀಗಾಗಿ ಇದೆರಡೂ ವಿಷಯಗಳು ಸಾರ್ವಜನಿಕವಾಗಿ ಚರ್ಚೆಯಾಗಿತ್ತು. ಸುಳ್ಯ ನಗರದ ಹಲವು ಸಮಸ್ಯೆಗಳು ಗಮನ ಸೆಳೆದಿದ್ದವು.ಮುಂದುವರಿದು ಆರ್ ಜೆ ತ್ರಿಶೂಲ್ ವಿರುದ್ಧ ಪೊಲೀಸ್ ದೂರು ಕೂಡಾ ನೀಡಲಾಗಿತ್ತು. ಆದರೆ ಆಡಳಿತದ ನಿರ್ಲಕ್ಷ್ಯದ ಬಗ್ಗೆ ಸಾರ್ವಜನಿಕರೂ ಅಸಮಾಧಾನ ವ್ಯಕ್ತಪಡಿಸಿದ್ದರು. ಒಬ್ಬ ನಗರ ಪಂಚಾಯತ್ ಅಧ್ಯಕ್ಷ ಜನರ ಸಮಸ್ಯೆಗಳಿಗೆ ಧ್ವನಿಯಾಗಬೇಕೇ ಹೊರತು ರಚನಾತ್ಮಕ ಟೀಕೆಗಳನ್ನು ಹತ್ತಿಕ್ಕುವ ಪ್ರಯತ್ನ ಸಲ್ಲದು ಎಂದು ಹೇಳಿದ್ದರು.
ಇಷ್ಟೆಲ್ಲಾ ಚರ್ಚೆಗಳ ನಡುವೆಯೂ ಸುಳ್ಯದ ರಸ್ತೆಗಳಿಗೆ ಮುಕ್ತಿ ಸಿಕ್ಕಿರಲಿಲ್ಲ. ರಸ್ತೆ ಹೊಂಡಗಳಿಂದ ಸುಳ್ಯ ನಗರದಲ್ಲಿ ರಸ್ತೆಯಲ್ಲಿ ಜನರಿಗೆ ಸಂಚಾರಕ್ಕೆ ತೀವ್ರ ತೊಂದರೆ ಆಗಿರುವ ಹೊಂಡಗಳನ್ನುಕೂಡಾ ಮುಚ್ಚುವ ಕೆಲಸವನ್ನು ಆಡಳಿತವು ಮಾಡಿರಲಿಲ್ಲ. ಮಳೆ ಸ್ವಲ್ಪ ಕಡಿಮೆಯಾದ ತಕ್ಷಣವೇ ತೇಪೆ ಕಾರ್ಯ ಮಾಡಲು ಸಾಧ್ಯವಿತ್ತು. ಇದೀಗ ಈ ಕೆಲಸವನ್ನು ಕೆವಿಜಿ ಇಂಜಿನಿಯರಿಂಗ್ ಕಾಲೇಜಿನ ಮಾಜಿ ಪ್ರಾಂಶುಪಾಲ ಡಾ.ಎನ್.ಎ.ಜ್ಞಾನೇಶ್ ಅವರ ನೇತೃತ್ವದಲ್ಲಿ ತೇಪೆ ಹಾಕಲಾಗಿದೆ. ಸುಳ್ಯ ನಗರದ ಶ್ರೀರಾಂ ಪೇಟೆಯಲ್ಲಿ ಜ್ಯೂನಿಯರ್ ಕಾಲೇಜು ಕ್ರಾಸ್ ರಸ್ತೆಯಲ್ಲಿ ಮತ್ತು ರಥ ಬೀದಿಯಲ್ಲಿ ನಿರ್ಮಾಣವಾದ ಹೊಂಡಕ್ಕೆ ಸಿಮೆಂಟ್ ಜಲ್ಲಿ ಮಿಕ್ಸ್ ಹಾಕಿ ಹೊಂಡ ತುಂಬಿ ತೇಪೆ ಹಾಕಲಾಗಿದೆ. ಈ ಕಾರ್ಯಕ್ಕೆ ಸಾರ್ವಜನಿಕರು ಶ್ಲಾಘಿಸಿದ್ದಾರೆ.
ಅನೇಕ ಸಮಯಗಳಿಂದ ಸಾರ್ವಜನಿಕರಿಗೆ ಸಮಸ್ಯೆಯಾಗುತ್ತಿದ್ದ ಸುಳ್ಯ ನಗರದ ರಸ್ತೆ ಗುಂಡಿಯನ್ನು ಸುಳ್ಯ ಕೆವಿಜಿ ಇಂಜಿನಿಯರಿಂಗ್ ಕಾಲೇಜಿನ ಮಾಜಿ ಪ್ರಾಂಶುಪಾಲ ಡಾ.ಜ್ಞಾನೇಶ್ ನೇತೃತ್ವದಲ್ಲಿ ಮುಚ್ಚಲಾಯಿತು. ಸುಳ್ಯ ನಗರ ಪಂಚಾಯತ್ ಆಡಳಿತ ಅನೇಕ ಸಮಯಗಳಿಂದ ಮೌನವಾಗಿತ್ತು. pic.twitter.com/8jobwcNx4e
— theruralmirror (@ruralmirror) August 27, 2022
Advertisement
ಸುಳ್ಯ ನಗರದಲ್ಲಿ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಹೊಂಡ ಸೃಷ್ಠಿಯಾಗಿ ಸುಮಾರು ಒಂದೂವರೆ ತಿಂಗಳಿನಿಂದ ಸಾರ್ವಜನಿಕರಿಗೆ ತೀವ್ರ ತೊಂದರೆ ಉಂಟಾಗಿದ್ದರೂ, ಭಾರೀ ಚರ್ಚೆ, ವಿವಾದ ಉಂಟಾದರೂ ರಾಷ್ಟ್ರೀಯ ಹೆದ್ದಾರಿ ಇಲಾಖೆಯಾಗಲೀ ನಗರ ಪಂಚಾಯತ್ ಆಗಲೀ ರಸ್ತೆಯ ಗುಂಡಿಯನ್ನು ಮುಚ್ಚಿಸುವ ಗೋಜಿಗೆ ಹೋಗಿರಲಿಲ್ಲ. ಡಾ.ಜ್ಞಾನೇಶ್ ಅವರು ತಮ್ಮ ಕೆಲಸದವರೊಂದಿಗೆ ವಿವಿಧ ಕಡೆಗಳಲ್ಲಿರುವ ಹೊಂಡಗಳನ್ನು ಸಿಮೆಂಟ್ ಜಲ್ಲಿ ಮಿಕ್ಸ್ ಹಾಕಿ ಮುಚ್ಚಿಸಿದ್ದಾರೆ. ಸ್ವಲ್ಪ ಮಳೆ ಕಡಿಮೆಯಾದರೂ ಇಂತಹ ಕೆಲಸ ಮಾಡಲು ಸಾಧ್ಯವಿದೆ, ಜನಪರವಾಗಿ ಕೆಲಸ ಮಾಡಬಹುದು ಎನ್ನುವುದನ್ನು ಡಾ.ಜ್ಞಾನೇಶ್ ಅವರು ಆಡಳಿತಕ್ಕೆ ತೋರಿಸಿದ್ದಾರೆ.