ಸುಳ್ಯದಲ್ಲಿ ಸಾಕಷ್ಟು ಮೂಲಭೂತ ಸಮಸ್ಯೆಗಳು ಇವೆ. ಅನೇಕ ಸಮಯಗಳಿಂದಲೂ ಸಾಕಷ್ಟು ಸಮಸ್ಯೆಗಳು ಇದೆ. ಇದೀಗ ಅಂತಹ ಸಮಸ್ಯೆಯೊಂದನ್ನು ಆರ್ ಜೆ ತ್ರಿಶೂಲ್ ಗೌಡ ಕಂಬಳ ಅವರು ಬೊಟ್ಟು ಮಾಡಿ ತೋರಿಸಿದ್ದಕ್ಕೆ ಸುಳ್ಯ ನಗರಪಂಚಾಯತ್ ಅಧ್ಯಕ್ಷರು ಸಾಮಾಜಿಕ ಜಾಲತಾಣದಲ್ಲಿ “ಕೀಬೋರ್ಡ್ ವಾರಿಯರ್” ಎಂಬ ಪದ ಬಳಕೆ ಮಾಡಿರುವುದು ಈಗ ಚರ್ಚೆಗೆ ಕಾರಣವಾಗಿದೆ. ಆರ್ ಜೆ ತ್ರಿಶೂಲ್ ಗೌಡ ಅವರು ಸುಳ್ಯದ ಸಮಸ್ಯೆ ಜೊತೆ ಬರುತ್ತೇನೆ ಅಲ್ಲೇ ಉತ್ತರಿಸಿ ಎಂದು ನಗರಪಂಚಾಯತ್ ಅಧ್ಯಕ್ಷರಿಗೆ ಪೇಸ್ ಬುಕ್ ಮೂಲಕ ಸವಾಲು ಹಾಕಿದ್ದಾರೆ.
ಕೆಲವು ಸಮಯಗಳ ಹಿಂದೆ ಸುಳ್ಯದ ಕಸದ ಸಮಸ್ಯೆ ಬಗ್ಗೆ ಇಡೀ ರಾಜ್ಯದಲ್ಲಿ ಸುದ್ದಿಯಾಗಿತ್ತು. ಪ್ರಧಾನಿ ನರೇಂದ್ರ ಮೋದಿ ಅವರು ಸ್ವಚ್ಛತಾ ಅಭಿಯಾನದ ಬಗ್ಗೆ ಕರೆ ನೀಡಿದ್ದರು. ಇದನ್ನೇ ಅಭಿಯಾನ ರೂಪದಲ್ಲಿ ಕಳೆದ ಕೆಲವು ಸಮಯಗಳಿಂದ ರಾಜ್ಯದ ಪ್ರಸಿದ್ಧ ನಟ ಅನಿರುದ್ಧ ಅವರು ವಿಡಿಯೋ ಮಾಡಿ ಸುಳ್ಯದ ಕಸದ ಬಗ್ಗೆ ಹಾಗೂ ಜನರಿಗೆ ಜಾಗೃತಿ ಮೂಡಿಸಿದ್ದರು. ಈ ಸಮಯದಲ್ಲಿ ಸುಳ್ಯ ನಗರ ಪಂಚಾಯತ್ ಅಧ್ಯಕ್ಷರು ಉದ್ದಟತನದ ಉತ್ತರ ನೀಡಿದ್ದರು. ಇದಕ್ಕೆ ಖಾರವಾಗಿಯೇ ನಟ ಅನಿರುದ್ಧ ಅವರು ಪ್ರತಿಕ್ರಿಯೆ ನೀಡಿದ್ದರು. ಅದಾಗಿ ಮೊದಲೇ ಸಿದ್ಧತೆಯಾದಂತೆ ಕಸ ವಿಲೇವಾರಿಯೂ ನಡೆಯಿತು. ಆದರೆ ಸುಳ್ಯದ ಕಸದ ಸಮಸ್ಯೆ ಸಂಪೂರ್ಣ ನಿವಾರಣೆಗೆ ಇನ್ನೊಮ್ಮೆ ಜಾಗೃತಿ ಆಗಬೇಕಾಗುತ್ತದೆ.
ಇದೆಲ್ಲಾ ತಣ್ಣಗಾದ ಬಳಿಕ ಸುಳ್ಯ ರಸ್ತೆಯ ಬಗ್ಗೆ ಆರ್ ಜೆ ತ್ರಿಶೂಲ್ ಗೌಡ ಅವರು ಸುಳ್ಯದ ರಸ್ತೆ ಸಮಸ್ಯೆಯೊಂದನ್ನು 3 ದಿನಗಳ ಹಿಂದೆ ಪೇಸ್ ಬುಕ್ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಬೊಟ್ಟು ಮಾಡಿ ಆಡಳಿತದ ಗಮನ ಸೆಳೆದಿದ್ದರು. ಇದನ್ನು ಪೇಸ್ ಬುಕ್ ನಲ್ಲಿ ಸುಮಾರು 71 ಜನರು ಶೇರ್ ಮಾಡಿದ್ದರು, 14 ಸಾವಿರ ಜನ ವೀಕ್ಷಣೆ ಮಾಡಿದ್ದರು. ರೇಡಿಯೋ ಜಾಕಿ, ಅನೇಕ ಸಾಮಾಜಿಕ ಕಾರ್ಯಗಳ ಮೂಲಕ, ರೇಡಿಯೋದಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಜಾಗೃತಿ, ಜನರ ಮೂಲಭೂತ ಸಮಸ್ಯೆಗಳನ್ನು ಬೊಟ್ಟು ಮಾಡಿ ತೋರಿಸುತ್ತಿದ್ದ ಆರ್ ಜೆ ತ್ರಿಶೂಲ್ ಕಂಬಳ ಅವರು ರಾಜ್ಯದಲ್ಲಿ ತನ್ನದೇ ಆದ ಛಾಪು ಮಾಡಿಸಿದ್ದಾರೆ.
ಇದೀಗ ಸುಳ್ಯದ ರಸ್ತೆಯ ಬಗ್ಗೆಯೂ ವಿಡಿಯೋ ಮಾಡಿ ಪೇಸ್ ಬುಕ್ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದರು. ಇದರ ಹಿಂದೆ ಉತ್ತಮ ಉದ್ದೇಶವೂ ಇದೆ. ಸುಳ್ಯ ಮೂಲಕ ಹಾದು ಹೋಗುವ ಮಾಣಿ-ಮೈಸೂರು ಹೆದ್ದಾರಿಯಲ್ಲಿ ಸುಳ್ಯದ ಶ್ರೀರಾಮ ಪೇಟೆಯ ಜಂಕ್ಷನ್ ಬಳಿ ರಸ್ತೆ ಹದಗೆಟ್ಟಿತ್ತು. ಇದನ್ನು ಫೋಟೊ ಹಾಗೂ ವಿಡಿಯೋ ಮಾಡಿ ಆಡಳಿತದ ಗಮನಸೆಳೆದಿದ್ದರು. ಸಹಜವಾಗಿಯೇ ಜನಪರವಾದ ಕಾರ್ಯ ಇದು. ವಾರದ ಹಿಂದೆ ಮಂಗಳೂರಿನಲ್ಲಿ ರಸ್ತೆಯ ಹೊಂಡದ ಕಾರಣದಿಂದ ಬೈಕ್ ಸವಾರನೊಬ್ಬ ಅಪಘಾತವಾಗಿ ಅಸುನೀಗಿದ್ದ ಕೂಡಾ. ಇದಕ್ಕಾಗಿ ಜಾಗೃತಿ ಅನಿವಾರ್ಯವೂ ಆಗಿತ್ತು. ಆದರೆ ಈ ಜಾಗೃತಿಗೆ ಸುಳ್ಯ ನಗರ ಪಂಚಾಯತ್ ಅಧ್ಯಕ್ಷರು “ಕೀಬೋರ್ಡ್ ವಾರಿಯರ್” ಎಂದು ಪ್ರತಿಕ್ರಿಯೆ ನೀಡಿದ್ದರು. ಇದಕ್ಕೆ ಹಲವರು ವಾಸ್ತವ ಸತ್ಯ ಅಲ್ಲವೇ ಎಂದೂ ಪ್ರಶ್ನೆ ಮಾಡಿದ್ದರು. ಇದೀಗ ಆರ್ ಜೆ ತ್ರಿಶೂಲ್ ಅವರು ಪೇಸ್ ಬುಕ್ ಮೂಲಕ “ಸುಳ್ಯದ ನಗರ ಪಂಚಾಯತ್ ಅಧ್ಯಕ್ಷರಿಗೆ ಒಪನ್ ಚಾಲೆಂಜ್ ಹಾಕಿದ್ದಾರೆ. ನಾನು ಸುಳ್ಯದ ಸಮಸ್ಯೆಗಳ ಪಟ್ಟಿಗಳ ಜೊತೆ ಬರ್ತೇನೆ, ನೀವು ಅವುಗಳಿಗೆ LIVE ಅಲ್ಲಿ ಉತ್ತರಿಸಿ..!. ಕೀಬೋರ್ಡ್ ನಿಂದ ಸೀದಾ ಸ್ಕ್ರೀನ್ ಗೇ ಬರೋಣ ಎಂದು ಸವಾಲು ಹಾಕಿದ್ದಾರೆ.
ಸುಳ್ಯದಲ್ಲಿ ಇಂತಹದ್ದೊಂದು ಬೆಳವಣಿಗೆ ಕಳೆದ ಕೆಲವು ಸಮಯಗಳಿಂದ ಇದೆ. ಯಾವುದೇ ಮಾಧ್ಯಮಗಳು ಗ್ರಾಮೀಣ ಸಮಸ್ಯೆ, ಜನರ ಮೂಲಭೂತ ಸಮಸ್ಯೆ, ನಗರದ ಸಮಸ್ಯೆಯನ್ನು ಬೆಳಕಿಗೆ ತಂದರೆ ಮಾಧ್ಯಮಗಳ ಮೇಲೇಯೇ ಕಿಡಿಕಾರುವ , ಮಾಧ್ಯಮಗಳೇ ಮಾಡಲಿ ಎನ್ನುವ ಉತ್ತರ, ಸಾಮಾಜಿಕ ಜಾಲತಾಣದಲ್ಲಿ ಹಾಕಿದರೆ ಆಗುವುದಿಲ್ಲ ಎಂಬ ಉಡಾಫೆ, ಪ್ರಧಾನಿಗೆ ಬರೆದರೆ ಆಗುವುದಿಲ್ಲ ಎಂಬ ಲೇವಡಿ, ನಾವೇ ಎಂಬ ಅಹಂಕಾರ, ನಿಮ್ಮೂರಿಗೆ ಸಾಕಷ್ಟು ಮಾಡಿದೆ ಎಂಬ ಉತ್ತರ.. ಹೀಗೇ ಎಲ್ಲವೂ ಇಲ್ಲಿ ನಡೆಯುತ್ತಿದೆ. ಇತ್ತೀಚೆಗೆ ಉಪ್ಪುಕಳ ಸೇತುವೆ ಬಗ್ಗೆಯೂ ಅದೇ ರೀತಿಯಾಗಿ ಮಾಧ್ಯಮಗಳ ಮೇಲೆ ಕಿಡಿಕಾರಲಾಗಿತ್ತು, ಅರಂತೋಡು ರಸ್ತೆ ಅಗಲೀಕರಣ ಹೋರಾಟದ ಸಂದರ್ಭ, ದುಗಲಡ್ಕ-ಉಬರಡ್ಕ ರಸ್ತೆ ಸಮಸ್ಯೆ, ಮೊಗ್ರ ಸೇತುವೆ ಹೋರಾಟದ ಸಂದರ್ಭದಲ್ಲೂ ಇದೇ ಮಾದರಿಯ ಉಡಾಫೆ ವ್ಯಕ್ತವಾಗಿತ್ತು. ಸುಳ್ಯದಲ್ಲಿ ಸಾಕಷ್ಟು ಅಗತ್ಯ ಮೂಲಭೂತ ವ್ಯವಸ್ಥೆಗಳ ಕೊರತೆ ಇದೆ. ಜನರು ಅನೇಕ ವರ್ಷಗಳಿಂದ ಈ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಬೇಡಿಕೆಗಳನ್ನು ಸಲ್ಲಿಸುತ್ತಲೇ ಇದ್ದಾರೆ. ಈಗ ಮಾಧ್ಯಮಗಳೂ ಈಗ ಮೌನವಹಿಸಿದರೆ ಸ್ವಾತಂತ್ರ್ಯ ಅಮೃತಮಹೋತ್ಸವ ಕಳೆದರೂ ಅಭಿವೃದ್ಧಿ ಮರೀಚಿಕೆಯೇ ಆದೀತು ಎಂಬ ಮಾತುಗಳು ಇವೆ.
ಸುಳ್ಯದ ನಗರದಲ್ಲಿಯೂ ಸಾಕಷ್ಟು ಸಮಸ್ಯೆಗಳು ಇವೆ. ಇದೆಲ್ಲವನ್ನೂ ತಿಳಿಸುವ , ಎಚ್ಚರಿಸುವ ಕೆಲಸ ಮಾಧ್ಯಮಗಳು, ಸಾಮಾಜಿಕ ಜಾಲತಾಣಗಳು ನಡೆಸಬಾರದೇ ಎಂಬ ಪ್ರಶ್ನೆ ಈಗ ಇದೆ. ವಾಸ್ತವ ಸಂಗತಿಗಳನ್ನು ಬೊಟ್ಟು ಮಾಡಿ ತೋರಿಸುವ ಮಾಧ್ಯಮಗಳ ಮೇಲೆ, ಸಾಮಾಜಿಕ ಕಾರ್ಯಕರ್ತರ ಮೇಲೆ ಸಿಟ್ಟಾಗುವ, ಲೇವಡಿ ಮಾಡುವ ಬದಲಾಗಿ ಆ ಸಮಸ್ಯೆಗಳ ಪರಿಹಾರದ ಕಡೆಗೆ ಏಕೆ ಧ್ವನಿಗೂ ಕೇಳುತ್ತಿಲ್ಲ ? ಸುಳ್ಯದಲ್ಲಿಯೂ ಈಗ ಅಂತಹದ್ದೇ ಹಲವಾರು ಸಮಸ್ಯೆಗಳ ಪಟ್ಟಿ ಇದೆ. ಆರ್ ತ್ರಿಶೂಲ್ ಈ ಪಟ್ಟಿಗಳ ಜೊತೆ ಸವಾಲು ಹಾಕಿದ್ದಾರೆ, “ಕೀಬೋರ್ಡ್ ವಾರಿಯರ್” ಮೂಲಕವಾದರೂ ಸಮಸ್ಯೆ ಬಗೆಹರಿಯಲಿ.