ಕರಾವಳಿ ಪ್ರದೇಶದಲ್ಲಿ ಉಷ್ಣಾಂಶ ಏರಿಕೆಯಾಗುತ್ತಿರುವ ಹಿನ್ನೆಲೆ ಜಾನುವಾರುಗಳು ಹಾಗೂ ಮಾಂಸ ಕೋಳಿಗಳಲ್ಲಿ ಉಷ್ಣ ಒತ್ತಡ (Heat Stress) ಹೆಚ್ಚಾಗುತ್ತಿರುವುದು ಕಂಡುಬಂದಿದೆ. ವಾತಾವರಣದ ಉಷ್ಣತೆ ಹಾಗೂ ಆದ್ರತೆಯ ಸಂಯುಕ್ತ ಪರಿಣಾಮದಿಂದ ಉತ್ಪಾದಕ ಪ್ರಾಣಿಗಳಾದ ದನಗಳು ಮತ್ತು ಕೋಳಿಗಳ ಆರೋಗ್ಯ, ಉತ್ಪಾದನೆ ಹಾಗೂ ಬದುಕು ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಎಚ್ಚರಿಸಿದೆ.
ಬೇಸಿಗೆಯಲ್ಲಿ ದನಗಳು ಆಹಾರ ಸೇವನೆ ಕಡಿಮೆ ಮಾಡುವುದರಿಂದ ಹಾಲಿನ ಇಳುವರಿ ಕುಸಿತ ಕಾಣಬಹುದು. ತೀವ್ರ ಬಿಸಿಲಿನ ಸಂದರ್ಭದಲ್ಲಿ ಸಾವಿನ ಅಪಾಯವೂ ಹೆಚ್ಚಾಗಬಹುದು. ಇದೇ ರೀತಿ ಮಾಂಸ ಕೋಳಿಗಳಲ್ಲಿ ಆಹಾರ ಸೇವನೆ ಕಡಿಮೆಯಾಗಿ ತೂಕ ಹೆಚ್ಚಳ ನಿಧಾನಗೊಳ್ಳುತ್ತದೆ. ಉಷ್ಣಾಂಶ 36°C ಗಿಂತ ಹೆಚ್ಚಾದರೆ ಕೋಳಿಗಳ ಸಾವಿನ ಸಾಧ್ಯತೆ ಹೆಚ್ಚುತ್ತದೆ. ಉಷ್ಣ ಒತ್ತಡದಿಂದ ರೋಗ ನಿರೋಧಕ ಶಕ್ತಿ ಕುಸಿದು ಸಾಂಕ್ರಾಮಿಕ ರೋಗಗಳ ಅಪಾಯವೂ ಹೆಚ್ಚಾಗುತ್ತದೆ.
ಜಾನುವಾರುಗಳ ನಿರ್ವಹಣೆಯಲ್ಲಿ ಮುನ್ನೆಚ್ಚರಿಕೆ ಕ್ರಮಗಳು
- ಬೆಳಗ್ಗೆ ಅಥವಾ ಸಂಜೆ ಮಾತ್ರ ಮೇಯಲು ಬಿಡಬೇಕು; ಬೆಳಗ್ಗೆ 11ರಿಂದ ಸಂಜೆ 4ರವರೆಗೆ ಹೊರಗಡೆ ಬಿಡಬಾರದು
- ದಿನದ 24 ಗಂಟೆಯೂ ತಂಪಾದ ಕುಡಿಯುವ ನೀರು ಲಭ್ಯವಾಗುವಂತೆ ನೋಡಿಕೊಳ್ಳಬೇಕು
- ನೆರಳಿನಲ್ಲಿ ಮಾತ್ರ ಕಟ್ಟಬೇಕು; ಶೆಡ್ ಮೇಲೆ ತೆಂಗಿನ/ಅಡಿಕೆ ಗರಿ ಅಥವಾ ಬಿಳಿ ಪೇಂಟ್ ಬಳಸಿ ತಾಪ ಕಡಿಮೆ ಮಾಡಬಹುದು
- ಸ್ಪ್ರಿಂಕ್ಲರ್ ಮೂಲಕ ನೀರು ಚಿಮುಕಿಸುವುದು ಅಥವಾ ಫ್ಯಾನ್ ಅಳವಡಿಸುವುದು ಸಹಾಯಕ
- ಒದ್ದೆಯಾದ ಗೋಣಿ ಚೀಲಗಳನ್ನು ಶೆಡ್ ಸುತ್ತ ಕಟ್ಟಬಹುದು
- ಪ್ರತಿ ಗಂಟೆಗೆ 1–2 ನಿಮಿಷ ಜಾನುವಾರುಗಳ ಮೈ ಮೇಲೆ ನೀರು ಚಿಮುಕಿಸಬೇಕು
- ಹೆಚ್ಚು ಆಹಾರವನ್ನು ಬೆಳಗ್ಗೆ ಬೇಗ ಅಥವಾ ರಾತ್ರಿ ಹೊತ್ತಿನಲ್ಲಿ ನೀಡಬೇಕು
- ಹಾಲಿನ ಇಳುವರಿಗನುಗುಣವಾಗಿ 20–100 ಗ್ರಾಂ ಲವಣ ಮಿಶ್ರಣ ನೀಡಬೇಕು
- ಪ್ರಜ್ಞೆ ತಪ್ಪುವುದು ಅಥವಾ ಹಾಲಿನ ಇಳುವರಿ ತೀವ್ರ ಕುಸಿತ ಕಂಡರೆ ತಕ್ಷಣ ಪಶುವೈದ್ಯರನ್ನು ಸಂಪರ್ಕಿಸಬೇಕು
ಮಾಂಸ ಕೋಳಿಗಳ ಸಾಕಾಣಿಕೆಯಲ್ಲಿ ಮುನ್ನೆಚ್ಚರಿಕೆ ಕ್ರಮಗಳು
- 24 ಗಂಟೆಯೂ ತಂಪಾದ ಮತ್ತು ಶುಚಿ ನೀರು ಲಭ್ಯವಾಗಬೇಕು; ಒಂದು ಗಂಟೆ ನೀರು ಇಲ್ಲದಿದ್ದರೂ ಸಾವಿನ ಅಪಾಯ
- ಕೋಳಿ ಮನೆಗಳಲ್ಲಿ ಗಾಳಿ ಹರಿವಿಗೆ ಅಡ್ಡಿ ಆಗುವ ತಡೆಗಳನ್ನು ತೆರವುಗೊಳಿಸಬೇಕು
- ಮಾಡಿನ ಮೇಲೆ ಸುಣ್ಣ ಬಳಿಯುವುದು ಅಥವಾ ಹುಲ್ಲು/ಗರಿಗಳಿಂದ ಹೊದಿಸುವುದು
- ಸ್ಪ್ರಿಂಕ್ಲರ್ ಮೂಲಕ ನೀರು ಸಿಂಪಡಿಸುವುದು, ಫ್ಯಾನ್ ಅಥವಾ ಫಾಗರ್ ಅಳವಡಿಸುವುದು
- ವಿಟಮಿನ್ C ಹಾಗೂ ಎಲೆಕ್ಟ್ರೋಲೈಟ್‌ಗಳು ನೀಡುವುದರಿಂದ ಬಿಸಿಲಿನ ಒತ್ತಡ ಕಡಿಮೆಯಾಗುತ್ತದೆ
- ಪರ್ಯಾಯವಾಗಿ 1 ಗ್ರಾಂ ಅಡುಗೆ ಸೋಡಾವನ್ನು 5 ಲೀಟರ್ ನೀರಿಗೆ ಬೆರೆಸಿ ಕೊಡಬಹುದು
- ನೀರಿನ ಟ್ಯಾಂಕ್ ಹೊರಭಾಗಕ್ಕೆ ಬಿಳಿ ಬಣ್ಣ ಬಳಿಯುವುದು ಅಥವಾ ಗೋಣಿ ಕಟ್ಟಿ ಒದ್ದೆ ಮಾಡುವುದು
- ಮಧ್ಯಾಹ್ನ 1ರಿಂದ ಸಂಜೆ 5ರವರೆಗೆ ಕೋಳಿಗಳ ಮೇಲೆ ವಿಶೇಷ ನಿಗಾ ಇರಬೇಕು
- ತಂಪಾದ ಸಮಯದಲ್ಲಿ (ಬೆಳಗ್ಗೆ 4–8 ಅಥವಾ ರಾತ್ರಿ) ಆಹಾರ ನೀಡುವುದು ಉತ್ತಮ
- ಕೋಳಿ ಮನೆಗಳ ಸುತ್ತಲೂ ಸ್ವಚ್ಛತೆ ಕಾಪಾಡಿ ಸೋಂಕು ನಿವಾರಕ ದ್ರಾವಣ ಸಿಂಪಡಿಸಬೇಕು
ಬೇಸಿಗೆ ಅವಧಿಯಲ್ಲಿ ಇತರೆ ಪ್ರಾಣಿ–ಪಕ್ಷಿಗಳಿಗೂ ತೋಟ ಅಥವಾ ಮನೆ ಸುತ್ತ ಸ್ವಚ್ಛ ಕುಡಿಯುವ ನೀರು ಲಭ್ಯವಾಗುವಂತೆ ವ್ಯವಸ್ಥೆ ಮಾಡಬೇಕು ಎಂದು ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಗೆ ಇಲ್ಲಿ ಕ್ಲಿಕ್ ಮಾಡಿ
Rising summer temperatures and humidity in coastal Karnataka are increasing heat stress among dairy cattle and broiler chickens, affecting productivity and survival. Authorities have issued detailed management guidelines to help farmers reduce economic losses.

