ಕರಾವಳಿ ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ತಾಪಮಾನ ಏರಿಕೆಯಾಗುತ್ತಿದೆ.ಈ ನಡುವೆ ಬುಧವಾರ ಸಂಜೆ ಕರಾವಳಿ ಜಿಲ್ಲೆಯಲ್ಲಿ ಧಾರಾಕಾರ ಮಳೆಯಾಗಿದೆ. ಮಂಗಳೂರಿನ ಸುರತ್ಕಲ್ ಪ್ರದೇಶದಲ್ಲಿ 100 ಮಿಮೀಗಿಂತಲೂ ಅಧಿಕ ಮಳೆಯಾಗಿದೆ. ಹಲವು ಪ್ರದೇಶದಲ್ಲಿ 25 ಮಿಮೀಯಷ್ಟು ಮಳೆಯಾಗಿದೆ. ಗಾಳಿಯ ಕಾರಣದಿಂದ ಕೆಲವು ಪ್ರದೇಶದಲ್ಲಿ ಕೃಷಿಗೆ ಹಾನಿಯಾಗಿದೆ. ಅಡಿಕೆ ಮರ ಗಾಳಿಯ ಹೊಡೆತದಿಂದ ಉರುಳಿದೆ. ಬೇಸಗೆಯ ಮೊದಲ ಮಳೆ ಭರ್ಜರಿಯಾಗಿಯೇ ಸುರಿದಿದೆ.………ಮುಂದೆ ಓದಿ……..
ಕೃಷಿಕರ ಮಳೆ ಮಾಹಿತಿ ಗುಂಪಿನ ಸದಸ್ಯರ ಮಳೆ ಮಾಪಕದ ಪ್ರಕಾರ ಮಂಗಳೂರು ಬಳಿಯ ಸುರತ್ಕಲ್‌ನಲ್ಲಿ ಅಧಿಕ ಮಳೆಯಾಗಿದೆ. ಸುರತ್ಕಲ್ ನಲ್ಲಿ 105 ಮಿಮೀ ಮಳೆ ದಾಖಲಾಗಿದೆ. ಉಳಿದಂತೆ ಸುಳ್ಯದ ಕಲ್ಲಾಜೆ 41 ಮಿಮೀ, ಸುಬ್ರಹ್ಮಣ್ಯದಲ್ಲಿ 60 ಮಿಮೀ, ಪುತ್ತೂರಿನ ಬಂಗಾರಡ್ಕದಲ್ಲಿ 20 ಮಿಮೀ, ಕಡಬದ ಕೋಡಿಂಬಾಳದಲ್ಲಿ 23 ಮಿಮೀ, ಬಂಟ್ವಾಳದಲ್ಲಿ 31 ಮಿಮೀ, ಕುಂಬಳೆಯಲ್ಲಿ 5 ಮಿಮೀ, ಗುತ್ತಿಗಾರಿನ ಮೆಟ್ಟಿನಡ್ಕದಲ್ಲಿ 28 ಮಿಮೀ, ಬಜಗೋಳಿಯಲ್ಲಿ 13 ಮಿಮೀ, ಸುಳ್ಯದ ಬಾಳುಗೋಡಿನಲ್ಲಿ 30 ಮಿಮೀ, ಸುಳ್ಯ ನಗರದಲ್ಲಿ 5 ಮಿಮೀ, ಬಳ್ಪದಲ್ಲಿ 10 ಮಿಮೀ, ಬೆಳ್ತಂಗಡಿಯಲ್ಲಿ 50 ಮಿಮೀ, ಚೆಂಬು 18 ಮಿಮೀ ಮಳೆಯಾಗಿದೆ.
ಮಳೆಯ ಕಾರಣದಿಂದ ಬೆಳ್ತಂಗಡಿ ಹಾಗೂ ಕೆಲವು ಕಡೆ ಅಡಿಕೆ ಮರಗಳು ಗಾಳಿಯ ಹೊಡೆತದಿಂದ ಉರುಳಿದೆ. ಕೃಷಿಕರಿಗೆ ನಷ್ಟ ಸಂಭವಿಸಿದೆ. ಕೃಷಿಕ ಬಾಲ್ಯ ಶಂಕರ್ ಭಟ್ ಅವರು ಅಡಿಕೆ ಮರ ಉರುಳಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ.
ಮುನ್ಸೂಚನೆ ಪ್ರಕಾರ ತುಂತುರು ಮಳೆಯ ಸಾಧ್ಯತೆ ಇತ್ತು.ಆದರೆ ಧಾರಾಕಾರ ಮಳೆಯ ಸಾಧ್ಯತೆ ಇರಲಿಲ್ಲ. ಆದರೆ ಎಲ್ಲಾ ಹವಾಮಾನ ವಿಶ್ಲೇಷಣೆಗಳನ್ನೂ ಮೀರಿ ಮಳೆಯಾಗಿದೆ. ಈ ಬಗ್ಗೆ ಹವಾಮಾನ ವಿಶ್ಲೇಷಕ ಸಾಯಿಶೇಖರ್ ಕರಿಕಳ ಅವರ ಪ್ರಕಾರ ಪ್ರಕೃತಿಯ ಲೆಕ್ಕಾಚಾರವೇ ಬೇರೆ ಇರುತ್ತದೆ ಎನ್ನುತ್ತಾರೆ.

“ಮೋಡಗಳು ಸಮುದ್ರದಲ್ಲಿ ಉತ್ಪತ್ತಿಯಾಗಿ ಗಾಳಿಯ ಮೂಲಕ ಭೂ ಭಾಗಕ್ಕೆ ಬಂದು ಮಳೆಯಾಗುತ್ತೆ” ಅಂತ ನಾವು ಶಾಲಾ ಸಮಯದಲ್ಲಿ ಕಲಿತದ್ದು. ಆದರೆ ವಿಚಿತ್ರ ನಿನ್ನೆಯ ಮಳೆಯ ಕೇಂದ್ರ ಶಿರಾಡಿ ಹಾಗೂ ಮಡಿಕೇರಿ ಘಾಟಿಯ ಆಚೆ ಈಚೆ ಮಗ್ಗುಲ ಪ್ರದೇಶ. ಅಲ್ಲಿಂದ ಮೋಡಗಳ ಮೆರವಣಿಗೆ ಒಂದು ಭಾಗ ಅರಬ್ಬಿ ಸಮುದ್ರದ ತೀರದ ವರೆಗೆ ತಲುಪಿದರೆ ಇನ್ನೊಂದು ಭಾಗ ಹಾಸನ, ತಿಪಟೂರು, ತುಮಕೂರು ದಾಟಿ ಪಾವಗಢದ ತನಕವೂ ಸಾಗಿದ ರೀತಿ ಅದ್ಭುತ.
ರಾತ್ರಿ ಪಾವಗಡದಿಂದ ” ಸರ್ ಮಿಂಚುತ್ತಿದೆ. ಮಳೆ ಬರ್ಬಹುದಾ” ಅಂತ ಕೇಳುವಾಗಲೇ ಗೊತ್ತಾಗಿದ್ದು. ಮೋಡದ ಬಾಲ ಅಲ್ಲಿಯ ತನಕವೂ ಬೆಳೆದಿದೆ ಅಂತ.
ಒಮ್ಮೆ ಮಳೆ ಬಂದು ಮತ್ತೆ ಮತ್ತೆ ತೇವಾಂಶಗಳು ಸೇರಿ ಸೇರಿ ಮಳೆಯ ಸರಣಿಯೇ ಉಂಟಾಗಿದೆ. ಹಾಗಂತ ಪ್ರತಿ ಬಾರಿ ಹೀಗಾಗುತ್ತಿದೆಯೇ? ಇಲ್ಲ. ಮಳೆ ಮೋಡಗಳ ಉತ್ಪತ್ತಿ ಹಾಗೂ ಅದು ಮಳೆಯಾಗಿ ಪರಿವರ್ತನೆಗೊಳ್ಳವ ರೀತಿಯ ವಿಷಯದ ಅಧ್ಯಯನದಲ್ಲಿ ಇನ್ನೂ ನಾವು ಹಿಂದೆ ಉಳಿದಿದ್ದೇವೆ ಅಂತ ನನ್ನ ಅಭಿಪ್ರಾಯ. ಅದನ್ನು ಸಂಬಂಧ ಪಟ್ಟ ಇಲಾಖೆಗಳಾಗಲಿ ಅಥವಾ ವಿಜ್ಞಾನ ವಿಭಾಗಗಳಾಗಲಿ ವೈಜ್ಞಾನಿಕವಾಗಿ ಅಧ್ಯಯನ ಮಾಡಿದರೆ ಮಾತ್ರ ನಿಖರವಾದ ಮಳೆಯ ಮುನ್ಸೂಚನೆ ನೀಡಲು ಸಾಧ್ಯ ವಾಗಬಹುದು.