2024-25 ನೇ ಸಾಲಿನ ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಗದಗ ಜಿಲ್ಲೆಯಲ್ಲಿ ಎಫ್.ಎ.ಕ್ಯೂ ಗುಣಮಟ್ಟದ ಶೇಂಗಾ ಹುಟ್ಟುವಳಿ ಖರೀದಿಸಲು ಪ್ರತಿ ಕ್ವಿಂಟಲ್ ಗೆ 6783 ರೂಪಾಯಿ ಬೆಂಬಲ ಬೆಲೆ ನಿಗದಿಪಡಿಸಲಾಗಿದೆ. ನೋಂದಣಿ ಪ್ರಕ್ರಿಯೆಯಲ್ಲಿ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕ್ರಮ ಕೈಗೊಳ್ಳಬೇಕೆಂದು ಗದಗ ಜಿಲ್ಲಾಧಿಕಾರಿ ಗೋವಿಂದರೆಡ್ಡಿ ತಿಳಿಸಿದ್ದಾರೆ.
ಗದಗ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶೇಂಗಾ ಖರೀದಿಸುವ ಕುರಿತು ಜರುಗಿದ ಜಿಲ್ಲಾ ಟಾಸ್ಕ್ ಫೋರ್ಸ ಸಮಿತಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜಿಲ್ಲೆಯ ಪ್ರತಿ ರೈತರಿಂದ ಪ್ರತಿ ಎಕರೆಗೆ 3 ಕ್ವಿಂಟಾಲ್ ಗರಿಷ್ಟ ಪ್ರಮಾಣ ಹಾಗೂ ಪ್ರತಿ ರೈತರಿಂದ ಗರಿಷ್ಟ 15 ಕ್ವಿಂಟಾಲ್ ಶೇಂಗಾ ಖರೀದಿಸಬಹುದಾಗಿದೆ. ಬೆಂಬಲ ಬೆಲೆಯಲ್ಲಿ ಶೇಂಗಾ ಹುಟ್ಟುವಳಿ ಖರೀದಿಯ ಕುರಿತು ರೈತರಿಗೆ ತಿಳುವಳಿಕೆ ನೀಡಲು ವ್ಯಾಪಕ ಪ್ರಚಾರ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಸೂಚಿಸಿದರು. ಜಿಲ್ಲೆಯ 10 ಕಡೆಗಳಲ್ಲಿ ಖರೀದಿ ಕೇಂದ್ರಗಳನ್ನು ತೆರೆಯಲು ಸರ್ಕಾರ ಅನುಮತಿ ನೀಡಲಾಗಿದೆ ಎಂದು ಅವರು ತಿಳಿಸಿದರು.