ಗುಜರಾತ್‌ನ ಅಮ್ರೇಲಿ ಜಿಲ್ಲೆಯ ಸಾವರ್ಕುಂಡ್ಲಾದಲ್ಲಿ ಪಾನ್ ಬೀಡಾಕ್ಕೆ ಬಳಕೆ ಮಾಡುವ ಅಡಿಕೆ ಬೆಲೆ ಹೆಚ್ಚಾಗಿದೆ. ಕಳೆದ ಒಂದು ದಶಕದಲ್ಲಿ ಇತಿಹಾಸದಲ್ಲೇ ಕಾಣದಷ್ಟು ಜಿಗಿತ ಕಂಡಿದ್ದು, ಮಾರುಕಟ್ಟೆಯಲ್ಲಿ ಈಗ ಚರ್ಚೆಯ ವಿಷಯವಾಗಿದೆ. 10 ವರ್ಷಗಳ ಹಿಂದೆ ಕೇವಲ ₹70 ಪ್ರತಿ ಕೆಜಿಗೆ ದೊರೆಯುತ್ತಿದ್ದ ಅಡಿಕೆ ಇದೀಗ ಸರಾಸರಿ ₹800ಕ್ಕೆ ಮಾರಾಟವಾಗುತ್ತಿವೆ. ಕಳೆದ ಒಂದೇ ವರ್ಷದಲ್ಲಿ ಅಡಿಕೆ ಬೆಲೆ ₹400 ರಿಂದ ನೇರವಾಗಿ ₹800ಕ್ಕೆ ಏರಿಕೆಯಾಗಿದೆ. ಇದು ಶೇ.100ರಷ್ಟು ಹೆಚ್ಚಳವಾಗಿದೆ. ಇದು ಬೇಡಿಕೆ ಹಾಗೂ ಪೂರೈಕೆಯಲ್ಲಿ ಒಮ್ಮೆಲೇ ವ್ಯತ್ಯಾಸ ಆಗಿರುವುದು ಕಾರಣವಾಗಿದೆ. ಹೀಗಾಗಿ ಬೆಲೆ ಅಸ್ಥಿರತೆಗೆ ಕಾರಣವಾಗಿದೆ.
ಬೇಡಿಕೆ–ಪೂರೈಕೆ ಅಸಮತೋಲನವೇ ಬೆಲೆ ಏರಿಕೆಗೆ ಪ್ರಮುಖ ಕಾರಣ : ಸಾವರ್ಕುಂಡ್ಲಾದ ವ್ಯಾಪಾರಿ ಧರ್ಮೇಶ್ ತರೈಯಾ ಅವರ ಪ್ರಕಾರ, ಅಡಿಕೆ ಬೆಲೆ ಏರಿಕೆಗೆ ಪ್ರಮುಖ ಕಾರಣವಾಗಿ ಹಠಾತ್ ಹೆಚ್ಚಿದ ಬೇಡಿಕೆ ಮತ್ತು ಗುಣಮಟ್ಟದ ಮೇಲಿನ ಹೆಚ್ಚಿದ ಆಸಕ್ತಿ ಕಾಣಿಸುತ್ತಿದೆ.
“ಹಿಂದೆ ಜನರು ಅಗ್ಗದ ಅಡಿಕೆಗಳತ್ತ ಹೆಚ್ಚು ಗಮನ ಕೊಡುತ್ತಿದ್ದರು. ಆದರೆ ಈಗ ಗ್ರಾಹಕರು ಗುಣಮಟ್ಟಕ್ಕೆ ಹೆಚ್ಚಿನ ಮಹತ್ವ ನೀಡುತ್ತಿದ್ದಾರೆ. ಉತ್ತಮ ಗುಣಮಟ್ಟದ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಿದಂತೆ, ಪೂರೈಕೆ ಕಡಿಮೆಯಾಗಿದ್ದು ಬೆಲೆ ಏರಿಕೆ ಸಹಜವಾಗಿದೆ,” ಎಂದು ಅವರು ಹೇಳಿದ್ದಾರೆ.
ಗ್ರಾಮೀಣ ಮಾರುಕಟ್ಟೆಯಲ್ಲೂ ಬದಲಾಗುತ್ತಿರುವ ಗ್ರಾಹಕ ನಡವಳಿಕೆ : ಈ ಹಿಂದೆ ಹಳ್ಳಿಗಳು ಮತ್ತು ಸಣ್ಣ ಪಟ್ಟಣಗಳಲ್ಲಿ ಅಗ್ಗದ ಅಡಿಕೆಗಳಿಗೆ ಹೆಚ್ಚು ಬೇಡಿಕೆ ಇತ್ತು. ಆದರೆ ಈಗ ಆ ಚಿತ್ರಣ ಸಂಪೂರ್ಣವಾಗಿ ಬದಲಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿಯೂ ಜನರು ಉತ್ತಮ ಗುಣಮಟ್ಟದ, ದುಬಾರಿ ಅಡಿಕೆಗಳನ್ನು ಖರೀದಿಸಲು ಮುಂದಾಗುತ್ತಿದ್ದಾರೆ. ಸಾವರ್ಕುಂಡ್ಲಾ ಮಾರುಕಟ್ಟೆಯಲ್ಲಿ ₹400ರಿಂದ ₹1,200ರವರೆಗೆ ವಿವಿಧ ಗುಣಮಟ್ಟದ ಅಡಿಕೆಗಳು ಲಭ್ಯವಿದ್ದು, ಅತ್ಯಂತ ದುಬಾರಿ ಪ್ರಭೇದಗಳಿಗೂ ಉತ್ತಮ ಬೇಡಿಕೆ ಇದೆ ಎನ್ನಲಾಗಿದೆ.
ವ್ಯಾಪಾರಿಗಳಿಗೂ ಸವಾಲು : ಧರ್ಮೇಶ್ ತರೈಯಾ ಅವರು ಕಳೆದ ಎಂಟು ವರ್ಷಗಳಿಂದ ಈ ವ್ಯಾಪಾರದಲ್ಲಿ ತೊಡಗಿಸಿಕೊಂಡಿದ್ದು, ಗ್ರಾಹಕರೊಂದಿಗೆ ನೇರವಾಗಿ ವ್ಯವಹರಿಸುತ್ತಿದ್ದಾರೆ. 36 ವರ್ಷದ ಧರ್ಮೇಶ್‌ಭಾಯ್ ಪದವಿ ಪಡೆದ ಬಳಿಕ ಕುಟುಂಬದ ವ್ಯವಹಾರವನ್ನು ವಹಿಸಿಕೊಂಡಿದ್ದಾರೆ. ಇಷ್ಟೊಂದು ವೇಗದಲ್ಲಿ ಬೆಲೆ ಏರಿಕೆ ಕಂಡಿರುವುದು ತಮಗೂ ಅಚ್ಚರಿ ತಂದಿದೆ ಎನ್ನುತ್ತಾರೆ. “ಹಣದುಬ್ಬರ ಮತ್ತು ಕಚ್ಚಾ ವಸ್ತುಗಳ ಕೊರತೆ ನಮ್ಮ ವ್ಯಾಪಾರಕ್ಕೂ ಒತ್ತಡ ತಂದಿದೆ,” ಎಂದು ಅವರು ಹೇಳಿದ್ದಾರೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಗೆ ಇಲ್ಲಿ ಕ್ಲಿಕ್ ಮಾಡಿ
ಮಸಾಲೆ ಮಾರುಕಟ್ಟೆಯ ಮೇಲೂ ಬೀರುವ ಪರಿಣಾಮ : ಅಡಿಕೆ ಬೆಲೆ ಏರಿಕೆಯ ಪರಿಣಾಮ ಕೇವಲ ವೀಳ್ಯದೆಲೆಗೆ ಮಾತ್ರ ಸೀಮಿತವಾಗಿಲ್ಲ. ಇದು ಮಸಾಲೆ ಮಾರುಕಟ್ಟೆಯ ಮೇಲೂ ನೇರ ಪರಿಣಾಮ ಬೀರುವ ಸಾಧ್ಯತೆ ಇದೆ. ಗುಟ್ಕಾ ಮಸಾಲೆ, ಅಡಿಕೆ ಮಸಾಲೆ ಮತ್ತು ಇತರ ಆಹಾರ ಉತ್ಪನ್ನಗಳ ತಯಾರಿಕೆಗೆ ಅಡಿಕೆ ಪ್ರಮುಖ ಕಚ್ಚಾ ವಸ್ತುವಾಗಿರುವುದರಿಂದ, ಇದರ ಬೆಲೆ ಏರಿಕೆಯು ಸಿದ್ಧ ಮಸಾಲೆಗಳ ಬೆಲೆ ಹೆಚ್ಚಳಕ್ಕೂ ಕಾರಣವಾಗಬಹುದು. ಸದ್ಯ ಅಮ್ರೇಲಿ ಜಿಲ್ಲೆಯಲ್ಲಿ ಕೆಲವು ಮಸಾಲೆಗಳು ಕೆಜಿಗೆ ₹30ರ ಆಸುಪಾಸಿನಲ್ಲಿ ಲಭ್ಯವಿದ್ದರೂ, ಮುಂದಿನ ದಿನಗಳಲ್ಲಿ ಕಚ್ಚಾ ವಸ್ತುಗಳ ಬೆಲೆ ಏರಿಕೆಯ ಪರಿಣಾಮವಾಗಿ ಈ ದರಗಳು ಕೂಡ ಹೆಚ್ಚಾಗುವ ಸಾಧ್ಯತೆ ಇದೆ ಎಂದು ವ್ಯಾಪಾರಿಗಳು ಎಚ್ಚರಿಸಿದ್ದಾರೆ.
ಮಾರುಕಟ್ಟೆಯ ಪಾಠ : ಸಾವರ್ಕುಂಡ್ಲಾದ ಅಡಿಕೆ ಮಾರುಕಟ್ಟೆ ಇಂದು ಕೇವಲ ಸ್ಥಳೀಯ ಸುದ್ದಿ ಮಾತ್ರವಲ್ಲ. ಇದು ಬೇಡಿಕೆ–ಪೂರೈಕೆ ತತ್ವಗಳು ಹೇಗೆ ಬೆಲೆಗಳನ್ನು ಪ್ರಭಾವಿಸುತ್ತವೆ ಎಂಬುದಕ್ಕೆ ಉದಾಹರಣೆಯಾಗಿದೆ. ಆರ್ಥಿಕತೆ ಮತ್ತು ಮಾರುಕಟ್ಟೆಗಳ ಕಾರ್ಯವೈಖರಿಯನ್ನು ಅರ್ಥಮಾಡಿಕೊಳ್ಳಲು ಬಯಸುವ ಯುವಕರಿಗೆ ಇದು ಅಧ್ಯಯನವಾಗಲಿದೆ. ಅಡಿಕೆ ಬೆಳೆಯುವ ಪ್ರದೇಶದಲ್ಲಿ ವಿಪರೀತವಾಗಿ ಧಾರಣೆ ಏರಿಕೆಯ ನಿರೀಕ್ಷೆ ಹಾಗೂ ಈ ಧಾರಣೆಯ ಆಸೆಯಿಂದ ಕಳಪೆ ಗುಣಮಟ್ಟದ ಅಡಿಕೆ ಮಿಕ್ಸಿಂಗ್ ಹಾಗೂ ಗ್ರಾಹಕ ವಲಯದಲ್ಲಿ ಈ ವಿಪರೀತ ಧಾರಣೆಯ ಕಾರಣದಿಂದ ಗುಣಮಟ್ಟದ ಅಡಿಕೆಯ ಕಡೆಗೆ ಮುಖ ಮಾಡುವುದು ಹಾಗೂ ಮಾರುಕಟ್ಟೆ ಅಸ್ಥಿರತೆಗೆ ಕಾರಣವಾಗುತ್ತದೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಗೆ ಇಲ್ಲಿ ಕ್ಲಿಕ್ ಮಾಡಿ


