ಬದುಕಿಗೆ ಹಣ ಅನಿವಾರ್ಯವೇ..? ಬದುಕಿನಲ್ಲಿ ಹಣವೇ ಅನಿವಾರ್ಯವೇ..? ಇದು ಅನೇಕ ಬಾರಿ ಕಾಡುವ ಪ್ರಶ್ನೆ. ಹಣವಿಲ್ಲದೆ ಬದುಕು ಸಾಧ್ಯವಿಲ್ಲ, ಹಣವೇ ಬದುಕಾಗಿ ಬಿಟ್ಟರೆ ಸಾಧ್ಯವಿರುವ ಎಲ್ಲವೂ ಮಸಿಯಾಗಿಬಿಡುತ್ತದೆ. ಹಣದ ಹಿಂದೆ.. ಕೀರ್ತಿಯ ಹಿಂದೆ ಹೋದವರ ಕತೆಯೂ ಹಾಗೇ ಆಗಿದೆ ಕೂಡಾ. ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಾಡೊಂದರ ಸಾಲಿನಲ್ಲಿ ಹಿಂದೆಯೇ ಬಹಳವಾಗಿ ಎಚ್ಚರಿಸಿದ್ದಾರೆ..”ಹಣದ ಮೋಹ ಕೀರ್ತಿದಾಹ ತರದೆಂದಿಗು ಮೆರಗು..” “ಧ್ಯೇಯ ಪಥದಿ ನೇರ ಪಯಣ ತೊರೆದು ಅರಿಗಳಂಜಿಕೆ…” ಆ ಇಡೀ ಹಾಡಿನ ಸಾಹಿತ್ಯ ಬಹಳ ಸುಂದರವಾಗಿದೆ. ಪದೇ ಪದೇ ಎಚ್ಚರಿಸುವ , ಜಾಗೃತಿಯ ಹಾಡು ಅದು. ಹಣ ಹಾಗೂ ಕೀರ್ತಿಯ ದಾಹ ಇದೆರಡೂ ಯಾವತ್ತೂ ವ್ತಕ್ತಿಗೂ ಅಪಾಯ, ಸಂಘಟನೆಗೂ ಅಪಾಯವೇ ಆಗಿದೆ. ಆದರೆ ಇಂದು ಇದೆರಡು ಬಿಟ್ಟು ಯಾವುದೂ ಇಲ್ಲ…!……..ಮುಂದೆ ಓದಿ…..
ಹಾಗಿದ್ದರೆ ಹಣ ಏನು ಮಾಡುತ್ತದೆ..? ಹಣ ಪ್ರತೀ ವ್ಯಕ್ತಿಯ ಬದುಕಿಗೆ ಅಗತ್ಯವೇ ಆಗಿದೆ. ಎಲ್ಲಾ ವಿಷಯಕ್ಕೂ ಹಣ, ಸಂಪತ್ತು ಅಗತ್ಯ. ಅದು ಮಿತಿಯಲ್ಲಿದ್ದರಷ್ಟೇ ನೆಮ್ಮದಿ. ಹಣ ಅಥವಾ ಸಂಪತ್ತು ಅಧಿಕವಾದರೆ ಒಂದು ತಲೆನೋವು, ಹಣ ಅಥವಾ ಸಂಪತ್ತು ಇಲ್ಲದವನಿಗೆ ಬೇರೊಂದು ತಲೆನೋವು. ಆದರೆ ಸಂಪತ್ತು ಕಡಿಮೆ ಇದ್ದವನ ನೆಮ್ಮದಿಗೆ, ನಿದ್ರೆಗೆ ಭಂಗವಿಲ್ಲ. ಸಂಪತ್ತಿದ್ದೂ ನಿದ್ರೆ ಮಾಡಲಾಗದ, ನೆಮ್ಮದಿ ಇಲ್ಲದ ಸಂಪತ್ತು ಇದ್ದೂ ಏನು ಪ್ರಯೋಜನ..? ಹಾಗಿದ್ದರೆ ಹಣ ಮಾಡುವುದು ಏನನ್ನು..?. ಹಣ ನಿದ್ರೆಗೆ, ನೆಮ್ಮದಿಗೆ ಭಂಗ ತರುವುದಂತೂ ಸತ್ಯ. ಅಂದರೆ ಹಣವು ಮಾನಸಿಕವಾದ ಅಮಲನ್ನು ಏರಿಸುತ್ತದೆ ಹಾಗೂ ಅದೇ ಅಮಲನ್ನೂ ಇಳಿಸುತ್ತದೆ ಕೂಡಾ. ಹಾಗಾಗಿಯೇ ಅದಕ್ಕೊಂದು ಮಿತಿ ಬೇಕು.
ಒಂದು ಘಟನೆ ನಡೆಯಿತು, ಹಣದ ಅಮಲಿದ್ದ ವ್ಯಕ್ತಿಯೊಬ್ಬ ಸಣ್ಣ ಅಂಗಡಿಗೆ ತೆರಳಿ 10 ರೂಪಾಯಿಯ ವ್ಯವಹಾರ ಮಾಡಿದ, 500 ರೂಪಾಯಿ ನೀಡಿದ. ಅಂಗಡಿಯಾತನಲ್ಲಿ ಅದಕ್ಕೆ 490 ರೂಪಾಯಿ ನೀಡಲು ಚಿಲ್ಲರೆ ಇರಲಿಲ್ಲ. ಅಂಗಡಿಯಾತ ಹೇಳಿದ 10 ರೂಪಾಯಿ ನೀಡಿ, ಚಿಲ್ಲರೆ ಇಲ್ಲ ಎಂದಾಗ, ಹಣದ ಅಮಲಿನವ ದರ್ಪದಿಂದ ಹೇಳಿದ, “ಇಲ್ಲ ಚಿಲ್ಲರೆ”. ಅಂಗಡಿಯಾತ ಹೇಳಿದ, 10 ರೂಪಾಯಿಗೆ 490 ರೂಪಾಯಿ ಎಲ್ಲಿಂದ ತರಲಿ, ಚಿಲ್ಲರೆ ಇಲ್ಲದ ಕಾರಣ ವ್ಯಾಪಾರ ಬೇಡ ಅಂದ… ವಾದವಾಯಿತು… ಚರ್ಚೆ ನಡೆಯಿತು, ಚರ್ಚೆಯ ವೇಳೆ ಅಂಗಡಿಯಾತ ಹೇಳಿದ, “10 ರೂಪಾಯಿ ಇಲ್ಲದೆ ವ್ಯವಹಾರಕ್ಕೆ ಏಕೆ ಬಂದಿರಿ” ಹಣದ ಅಮಲಿನವನ ತಕ್ಷಣದ ಉತ್ತರ,”ನಿನ್ನ ಅಂಗಡಿಯ ರೇಟೆಷ್ಟು”. ನಂತರ ಚರ್ಚೆ ನಡೆಯುತ್ತಿತ್ತು, ಅದರ ಫಲಿತಾಂಶ ಹೇಳಬೇಕಾಗಿಲ್ಲ, ಅದು ಉದ್ದೇಶವೂ ಅಲ್ಲ. ಹಣ ಯಾವತ್ತೂ ಹಾಗೆಯೇ, ಹೆಚ್ಚುತ್ತಾ ಹೋದಂತೆ ಅಮಲೂ ತಲೆಗೆ ಏರಿ ಬಿಡುತ್ತದೆ, ಮಾತನಾಡುವ ಧಾಟಿಯಲ್ಲೇ ಅರಿವಾಗುತ್ತದೆ ವ್ಯಕ್ತಿಯ ನಡವಳಿಕೆ. ಹಣ ಇದ್ದರೆ ಎಲ್ಲವೂ ಸಾಧ್ಯ ಎನ್ನುವ ಧೈರ್ಯ ಬಂದಿರುತ್ತದೆ. ಇನ್ನು ಹಣವೇ ಮಾಡುವುದು ಉದ್ದೇಶವಾದಾಗ, ಹೇಗಾದರೂ ಸರಿ ಎನ್ನುವ ಮನಸ್ಥಿತಿ ಬಂದಿರುತ್ತದೆ. ನಿರ್ದಾಕ್ಷಿಣ್ಯವಾದ ವರ್ತನೆ ಹೆಚ್ಚಾಗುತ್ತದೆ. ಇಂತಹ ಸಮಯದಲ್ಲಿ ಯಾರೇ ಆಗಲಿ, ಸತ್ಯವೇ ಇರಲಿ, ನ್ಯಾಯವೇ ಇರಲಿ , ನೀತಿ-ನಿಯಮ, ಸಿದ್ದಾಂತವೇ ಇರಲಿ. ಯಾವುದೂ ಕಣ್ಣ ಮುಂದೆ, ತಲೆಯಲ್ಲಿ, ಹೃದಯಲ್ಲಿ ಇರುವುದೇ ಇಲ್ಲ. ಹೇಗಾದರೂ ಸರಿ ಹಣವೇ ಕಣ್ಣಮುಂದೆ ಇರುತ್ತದೆ, ಸಿದ್ದಾಂತಗಳ “ಮುಖವಾಡ” ಅಷ್ಟೇ. ಸಿದ್ದಾಂತಗಳ ಹೆಸರಿನಲ್ಲಿ ಕೂಡಾ ಇಂದು ನಡೆಯುವುದು “ಹಣ ಮಾಡುವ ಸಿದ್ದಾಂತ” ಹೀಗಾಗಿಯೇ ಇಂದು ಹಲವು ಕಡೆ ಸಮಸ್ಯೆಗಳ ಸುಳಿಯೂ ಹೆಚ್ಚಾಗಿದೆ. ಇದು ಅಪಾಯಕಾರಿಯಾಗಿದೆ ಎಂದು ಅರಿವಾಗುವುದು ಒಂಟಿಯಾದಾಗ, ಒಬ್ಬನೇ ಕುಳಿತು ಯೋಚಿಸಿದಾಗ. ಸಮಾಜವೂ ಕೂಡಾ ಹಣಕ್ಕೆ ಮಾನ್ಯತೆ ನೀಡುತ್ತದೆ, ಹಣವಂತ ಮಾತುಗಳು ತಪ್ಪಾದರೂ,”ಸರಿ..ಸರಿ..” ಎಂದೇ ಹೇಳುತ್ತದೆ. ನ್ಯಾಯ, ಸತ್ಯಕ್ಕೂ ಅಲ್ಲಿ ವ್ಯಾಲ್ಯೂ ಇರುವುದೇ ಇಲ್ಲ..!. ಹಣದ ಮುಂದೆ ಗುಣ, ಮಾನ, ಮನುಷ್ಯತ್ವ, ಸ್ನೇಹ ಎಲ್ಲವೂ ಮೌನವಾಗಿ ಬಿಡುತ್ತದೆ.
ಹಣ ಇನ್ನೇನು ಮಾಡುತ್ತದೆ..? ಹಣವು ಸ್ನೇಹವನ್ನು ತುಂಡರಿಸುತ್ತದೆ, ಹಣ ಸಂಬಂಧವನ್ನು ಒಡೆಯುತ್ತದೆ, ಹಣ ಆಸೆಯನ್ನು ಹೆಚ್ಚಿಸುತ್ತದೆ.. ಹಣದ ಅಮಲು ವ್ಯಂಗ್ಯ ಮಾಡಿಸುತ್ತದೆ, ಹಣದ ಆಸೆ ತುಳಿಯುತ್ತದೆ-ಕಾಲೆಳೆಯುತ್ತದೆ, ಹಣದ ಬಯಕೆ ಉಡಾಫೆ ಹೆಚ್ಚಿಸುತ್ತದೆ.. ಹೀಗೇ ಎಲ್ಲಾ ಕಡೆಯೂ ಹಣದ ಆಟ ಇರುತ್ತದೆ. ಮಿತಿಯಲ್ಲಿದ್ದರೆ ಹಣ ಸಂಬಂಧವನ್ನು ಉಳಿಸುತ್ತದೆ, ಬೆಳೆಸುತ್ತದೆ, ಆಸೆಯನ್ನು ಮಿತಿಯಲ್ಲಿಡುತ್ತದೆ ಇಷ್ಟೇ. ಅಂದರೆ ಎಲ್ಲದಕ್ಕೂ ಮಿತಿಯಲ್ಲಿರಬೇಕು.
ಹಣ ಅಥವಾ ಸಂಪತ್ತು ಹೆಚ್ಚಿದಂತೆ ಆಗುವ ಬದಲಾವಣೆ ಗಮನಿಸಿ, ಸಂಪತ್ತು ಕೂಡಿದಂತೆ ಬದುಕಿನ ಮೂಲಭೂತ ಆವಶ್ಯಕತೆಗಳು ಪೂರ್ಣಗೊಳ್ಳುತ್ತದೆ. ಮುಂದೆ ಐಷಾರಾಮಿ ವ್ಯವಸ್ಥೆ ಪೂರ್ತಿಯಾಗುತ್ತದೆ. ಮುಂದೆ ಅನಗತ್ಯ ವಿಷಯಗಳ ಚರ್ಚೆ ಮುನ್ನೆಲೆಗೆ ಬರುತ್ತದೆ, “ಹಣ ಬಿಸಾಕಿದರೆ ಮುಗಿಯಿತು” ಎನ್ನುವ ಭಾವ ಬರುತ್ತದೆ. ಮುಂದೆ ಹೋದರೆ ಹೆಸರಿನ ಬಯಕೆ ಹೆಚ್ಚಾಗುತ್ತದೆ, ಅದಕ್ಕಾಗಿ ಖರ್ಚು ಆರಂಭವಾಗುತ್ತದೆ. ಮುಂದೆ ಹೋದರೆ, ಹೆಸರಿಗಾಗಿ ಇನ್ನೊಬ್ಬನ ಕಾಲೆಳೆಯುವುದು ಆರಂಭವಾಗುತ್ತದೆ, ಮತ್ಸರ ಹೆಚ್ಚುತ್ತದೆ… ಹೀಗೇ ಒಂದೊಂದೇ ಬೆಳೆಯುತ್ತಲೇ ಹೋಗುತ್ತದೆ. ಬದುಕಿನ ಅಂತ್ಯದಲ್ಲಿ ಕೋಟಿ ಒಡೆಯನೂ, ಕೋಟಿ ಬೆಲೆಯ ಕಾರಿನ ಒಡೆಯನೂ , ಬಡವನೂ ಸಾಗುವುದು ಒಂಟಿಯಾಗಿ 4 ಜನರ ಹೆಗಲ ಮೇಲೆಯೇ…! ಎನ್ನುವ ಪರಿವೆ ಇದ್ದರೆ ಹಣ ತಲೆಗೆ ಏರದು, ಹೃದಯಲ್ಲಿರುತ್ತದೆ..!.
ಹಣ ಅಥವಾ ಸಂಪತ್ತು ಹೆಚ್ಚುತ್ತಾ ಸಾಗಿದಂತೆ, ಏನು ಮಾಡಬೇಕು ಹಾಗೂ ಮಾಡಬಹುದು..?. ಸಮಾಜದಲ್ಲಿ ಭ್ರಷ್ಟಾಚಾರ ರಹಿತವಾದ ಸೇವೆಗಳ ಅಗತ್ಯ ಇಂದು ಇದೆ. ಪ್ರತೀ ದಿನವೂ ನೊಂದವರ ಪಟ್ಟಿ ಸಾಕಷ್ಟಿದೆ. ಒಂದು ಕಡೆ ವಿಪರೀತವಾದ ಸಂಪತ್ತು ಕೂಡಿದರೆ, ಇನ್ನೊಂದು ಕಡೆ ಅದೇ ಸಂಪತ್ತಿಲ್ಲದೆ ಆರೋಗ್ಯ ಸೇರಿದಂತೆ ಬದುಕಿನ ಅಗತ್ಯಗಳಿಗಾಗಿ ಪರದಾಟ ಮಾಡುವವರು ಇರುತ್ತಾರೆ. ಇಂತಹವರಿಗಾಗಿ ಸೇವೆ ಅಗತ್ಯ ಇದೆ. ಅದಕ್ಕಾಗಿ ಹೆಚ್ಚುವರಿ ಸಂಪತ್ತುಗಳನ್ನು ಇಲ್ಲಿ ವಿನಿಯೋಗಿಸಿದರೆ ಬದುಕು ಕೂಡಾ ನೆಮ್ಮದಿಯೇ. ಹಣ ಕೂಡಿಟ್ಟ ಬದುಕಿನಲ್ಲಿ ನೆಮ್ಮದಿ ಕೂಡುವುದಿಲ್ಲ, ದಾನ, ಸೇವೆ ಮಾಡಿದ ಸಂಪತ್ತಿನಲ್ಲಿ ನೆಮ್ಮದಿಯೂ ಜೊತೆಯಾಗಿ ಬರುತ್ತದೆ. ಹಾಗಿದ್ದರೆ ನೆಮ್ಮದಿಯ ವ್ಯಾಖ್ಯಾನವೂ ಬಹಳ ಅರ್ಥವತ್ತಾಗಿರುತ್ತದೆ. ನೆಮ್ಮದಿ ಎನ್ನುವುದು ಅವರವರ ಭಾವದಲ್ಲಿದೆ. ಕೆಲವರಿಗೆ ಸೇವೆ ನೆಮ್ಮದಿ, ಕೆಲವರಿಗೆ ದಾನ ನೆಮ್ಮದಿ… ಹಾಗೆಯೇ ಕೆಲವರಿಗೆ ಸಂಪತ್ತು ಕೂಡಾ ನೆಮ್ಮದಿ…!, ಈ ನೆಮ್ಮದಿ ಆಸೆಯ ನೆಮ್ಮದಿಯಷ್ಟೇ. ಉದಾಹರಣೆಗಳನ್ನು ತೆಗೆದು ನೋಡಿ.
ಹಾಗಂತ, ಹಣ ಇಲ್ಲದೆ ಬದುಕುವುದು ಹೇಗೆ, ಸಂಪತ್ತು ಇಲ್ಲದೇ ಇದ್ದರೆ ಬದುಕು ಸಾಗುವುದು ಹೇಗೆ..? ಪ್ರತೀ ವ್ಯಕ್ತಿಯ ದುಡಿಮೆ ಇರುವುದು ಏಕೆ..? ದೇಶದ ಪ್ರಗತಿ ಗಮನಿಸುವುದು ಕೂಡಾ ಆರ್ಥಿಕವಾಗಿಯೇ. ಅಂದರೆ, ಪ್ರತೀ ವ್ಯಕ್ತಿಗೂ ಸಂಪತ್ತು ಅಥವಾ ಹಣ ಅಗತ್ಯ ಇದೆ. ದುಡಿಮೆಯ ಮೂಲಕ ಪ್ರಗತಿ, ದುಡಿಮೆಯ ಮೂಲಕ ಸಂಪತ್ತು. ಆ ದುಡಿಮೆಯಲ್ಲಿ ಮಾನ ಇರಬೇಕು, ಅವಮಾನ ಇರಬಾರದು ಎನ್ನುವ ವ್ಯಕ್ತಿ ಸಿದ್ಧಾಂತವು ಇದಕ್ಕೆಲ್ಲಾ ಪರಿಹಾರ. ಸಂಪತ್ತಿಗೆ ಒಂದು ಗುರಿ ಇರಲಿ, ಸಾಲ ಮಾಡದೇ, ಮೋಸ ಮಾಡದೇ ಬದುಕುವ ಗುರಿ. ಆ ಗುರಿಗಿಂತ ಹೆಚ್ಚಾದ್ದು ಸೇವೆಗೆ ವಿನಿಯೋಗವಾದರೆ ಮನಸ್ಸು ನಿರ್ಮಲವಾಗಿರುತ್ತದೆ.
ಅನೇಕ ಬಾರಿ ಸಂಪತ್ತು ಇದ್ದೂ ಸರಳತೆಯ ಬಗ್ಗೆ ಚರ್ಚೆಯಾಗುತ್ತದೆ. ಶ್ರೀಮಂತನೊಬ್ಬ ಗೂಡಂಗಡಿಯಲ್ಲಿ ಚಹಾ ಕುಡಿದರೆ ಸುದ್ದಿಯಾಗುತ್ತದೆ. ಅದನ್ನು ಸರಳತೆ ಎಂದು ಬಿಂಬಿಸಲಾಗುತ್ತದೆ. ಪ್ರತೀ ವ್ಯಕ್ತಿ ಇರಬೇಕಾದ್ದೇ ಹಾಗೇ ಎಂದು ಅನಿಸುವುದೇ ಇಲ್ಲ. ಅನೇಕ ಬಾರಿ ಜನ ಉದ್ಗರಿಸುತ್ತಾ” ಎಂತಹ ಸರಳತೆ, ಹಣದ ಅಹಂಕಾರವೇ ಇಲ್ಲ” ಅಂತ. ವ್ಯಕ್ತಿ ಇರಬೇಕಾದ್ದೇ ಹಾಗೆ ಎಂದು ಅನಿಸುವುದೇ ಇಲ್ಲ..!. ನಾವೂ ಇರಬೇಕಾದ್ದು ಹಾಗೆ ಅಂತ ಅನಿಸುವುದೇ ಇಲ್ಲ..!. ಅಂದರೆ ಸಮಾಜದ ಬಹುಪಾಲು ಮಂದಿಯಲ್ಲಿ ಇಂತಹ ನಿಯಮ ಅಳವಡಿಸಿಕೊಂಡವರು ತೀರಾ ಕಡಿಮೆ ಎನ್ನುವುದು ಇದರ ಸಂದೇಶ. ಅಂದರೆ ಇರಬೇಕಾದ ಹಾಗೆ ಇರದೇ ಇರುವುದೇ ಇಂದಿನ ಬದುಕು ಎನ್ನುವುದು ಸಂದೇಶವಾಗಿದೆ.
ಇದಕ್ಕೆಲ್ಲಾ ಪ್ರಕೃತಿಯ ಸಂದೇಶ ನಮ್ಮ ಮುಂದೆ ಇದೆ, ಫಲಭರಿತ ಮರವೊಂದು, ಹಣ್ಣು ಬಿಟ್ಟಿರುವ ಗಿಡವೊಂದು ತನಗಾಗಿ ಉಳಿಸಿಕೊಳ್ಳುವುದಿಲ್ಲ, ಮತ್ತೆ ಗಿಡವಾಗಲು ಒಂದಷ್ಟು ಇರಿಸಿಕೊಳ್ಳುತ್ತದೆ, ಹಣ್ಣಾದಂತೆ ಅದು ಬಾಗುತ್ತದೆ-ಬೀಗುವುದಿಲ್ಲ. ಹಣ್ಣಾದಂತೆ ಅದು ಇನ್ಯಾರಿಗೋ ನೀಡುತ್ತದೆ. ಉಳಿದವುಗಳನ್ನು ಮತ್ತೆ ಗಿಡವಾಗಿ ಸೃಷ್ಟಿಸಿಕೊಳ್ಳುತ್ತದೆ. ಬದುಕಿನಲ್ಲಿ ತಿರುವು ಆಗಬೇಕಾದ್ದು ಇಷ್ಟೇ……
ಅದಕ್ಕೇ ಆ ಹಾಡು ಹೇಳಿರುವುದು, “ಹಣದ ಮೋಹ ಕೀರ್ತಿದಾಹ ತರದೆಂದಿಗು ಮೆರಗು… ಧ್ಯೇಯ ಪಥದಿ ನೇರ ಪಯಣ ತೊರೆದು ಆರಿಗಳಂಜಿಕೆ… ಸತ್ಯನಿಷ್ಠೆ ಸ್ವಾಭಿಮಾನದಿಂದ ಸಫಲ ಗಳಿಕೆ…. ಯತ್ನವೆಂದು ವ್ಯರ್ಥವಲ್ಲ ಯಶದ ಹಾದಿ ಗೋಚರ…. ಸ್ಪೂರ್ತಿ ಚಿಲುಮೆ ಚಿಮ್ಮುತಿರಲು ಕಾರ್ಯಸಿದ್ಧಿ ಸಾಸಿರ…. ನಿಂದೆ ಸ್ತುತಿಗೆ ಕಿವುಡು ಮನವು ಸ್ವಾರ್ಥ ಬರದು ಹತ್ತಿರ…..