ಅಡಿಕೆ ಧಾರಣೆ, ಅಡಿಕೆ ಭವಿಷ್ಯ ಇತ್ಯಾದಿಗಳ ಚರ್ಚೆಯ ನಡುವೆ, ಈಗ ಅಡಿಕೆ ಮರಕ್ಕೆ ಒಂದು ಬೆಲೆ ತರುವ ಪ್ರಯತ್ನ ನಡೆಯಬೇಕಾಗಿದೆ. ತೋಟದಲ್ಲಿ ಬಿದ್ದು ಮಣ್ಣಾಗುವ ಅಡಿಕೆ ಮರವನ್ನು ಸುಂದರವಾದ ಹೂಕುಂಡವಾಗಿ ಮಾಡುವ ಮೂಲಕ ಒಂದು ಮರದಿಂದ ಉತ್ತಮ ಆದಾಯವನ್ನೂ ರೈತರಿಗೆ ಪಡೆಯಬಹುದಾಗಿದೆ. ಅದೇ ವೇಳೆ ಪರಿಸರ ಪ್ರೇಮಿಗಳಿಗೆ ಉತ್ತಮವಾದ ಹೂಕುಂಡವೂ ಲಭ್ಯವಾಗಲಿದೆ.…..ಮುಂದೆ ಓದಿ….
ಸಾಮಾನ್ಯವಾಗಿ ಗಾಳಿ-ಮಳೆಗೆ ಅಡಿಕೆ ಮರ ಉರುಳಿ ಬೀಳುತ್ತದೆ, ವಿವಿಧ ಕಾರಣಗಳಿಂದ ಸಾಯುತ್ತದೆ. ಹೀಗೇ ವರ್ಷದಲ್ಲಿ ಒಬ್ಬ ಕೃಷಿಕನ ಮನೆಯಲ್ಲಿ ಏನಿಲ್ಲವೆಂದರೂ 25-30 ಅಡಿಕೆ ಸಾಯುತ್ತದೆ. ಇಂತಹ ಅಡಿಕೆ ಮರಗಳೆಲ್ಲಾ ಒಂದೋ ಉರುವಲಾಗಿ ಬಳಕೆಯಾಗುತ್ತದೆ ಅಥವಾ ಗೆದ್ದಲು ಹಿಡಿದು ತೋಟದಲ್ಲಿ ಮಣ್ಣಾಗುತ್ತದೆ. ಇನ್ನೂ ಕೆಲವು ಸಲ ತೋಟದಲ್ಲಿ ಸಮಸ್ಯೆಯಾಗುತ್ತದೆ ಎಂದಾಗ ಅತ್ಯಂತ ಕನಿಷ್ಟ ದರದಲ್ಲಿ ಮಾರಾಟವಾಗುತ್ತದೆ. ಸರ್ಕಾರಿ ಲೆಕ್ಕದ ಪ್ರಕಾರ ಒಂದು ಮರಕ್ಕೆ ಅಬ್ಬಬ್ಬಾ ಎಂದರೆ 20 ರೂಪಾಯಿ ಪರಿಹಾರ…!. ಹೀಗಾಗಿ ಬಹುತೇಕ ಕೃಷಿಕರ ತೋಟದಲ್ಲಿ ಸತ್ತಿರುವ ಅಡಿಕೆ ಮರದ ವಿಲೇವಾರಿಯೇ ಸಮಸ್ಯೆ. ಇಂತಹ ಸಮಯದಲ್ಲಿ ಇದಕ್ಕೊಂದು ಮೌಲ್ಯವರ್ಧನೆಯ ರೂಪ ಸಿಕ್ಕಿದರೆ, ಅದಕ್ಕೊಂದು ಮಾನ ಬಂದರೆ ಅಡಿಕೆ ಬೆಳೆಗಾರರಿಗೂ ಉಪ ಆದಾಯ. ಆದರೆ ಇಲ್ಲಿ ಪ್ರಯತ್ನ ಹಾಗೂ ಪರಿಶ್ರಮ ಅಗತ್ಯ ಇದೆ. ಇಂದು ಇಡೀ ದೇಶದಲ್ಲಿ ಪ್ಲಾಸ್ಟಿಕ್ ಪರ್ಯಾಯದ ಬಗ್ಗೆ ಚಿಂತನೆ ನಡೆಯುತ್ತಿದೆ. ಆದರೂ ಇದೊಂದು ಸವಾಲಿನ ಕೆಲಸ. ಗ್ರಾಮೀಣ ಭಾಗದಲ್ಲಿ ಸಣ್ಣ ಹಳ್ಳಿಯಲ್ಲಿ ಪ್ಲಾಸ್ಟಿಕ್ ದೊಡ್ಡ ಸಮಸ್ಯೆಯಲ್ಲ ಎನ್ನುವ ಭಾವನೆ ಇದೆ.
ಆದರೆ ಸಣ್ಣ ನಗರದಿಂದ ದೊಡ್ಡ ನಗರದವರೆಗೆ ಪ್ಲಾಸ್ಟಿಕ್ ಭೂತವಾಗಿ ಕಾಡುತ್ತದೆ. ವಿಲೇವಾರಿಯೇ ಕಷ್ಟವಾಗಿದೆ. ಮಣ್ಣಿಗೂ ಸೇರದೆ, ಉರಿಸಲೂ ಆಗದೆ, ಮರುಬಳಕೆಗೂ ಆಗದೆ ಕಾಡುತ್ತದೆ. ಹೀಗಾಗಿ ಪ್ಲಾಸ್ಟಿಕ್ ಗೆ ಪರ್ಯಾಯದ ಬಗ್ಗೆ ಸಾಕಷ್ಟು ಚಿಂತೆ-ಚಿಂತನೆ ನಡೆಯುತ್ತಿದೆ. ಪ್ಲಾಸ್ಟಿಕ್ ಪರ್ಯಾಯ ಬಳಕೆಯ ಬಗ್ಗೆ ಅನೇಕರು ಒಪ್ಪಿಕೊಳ್ಳುತ್ತಾರೆ, ಆದರೆ ಮಾರುಕಟ್ಟೆಗೆ ಹೋದಾಗ ಪರ್ಯಾಯಗಳು ಕಣ್ಣ ಮುಂದೆಯೇ ಇಲ್ಲವಾಗುತ್ತದೆ. ಇಂತಹದ್ದರಲ್ಲಿ ಪರಿಸರ ಪ್ರೇಮಿಗಳಿಗೆ, ನಗರದಲ್ಲಿ ಹೂವು, ಸಣ್ಣ ಸಣ್ಣ ಗಿಡ ಬೆಳೆಸುವವರಿಗೆ ಹೂಕುಂಡವಾಗಿ ಅಡಿಕೆಯ ಪಾಟ್ ಅಥವಾ ಹೂಕುಂಡವಾಗಿ ಬಳಕೆ ಮಾಡಬಹುದಾಗಿದೆ. ಇದಕ್ಕೊಂದು ಪ್ರಯತ್ನ ನಡೆದಿದೆ. ಇಂತಹದೊಂದು ಪ್ರಯತ್ನವನ್ನು ಕುಮಟಾದ ಶಶಿಧರ್ ಭಟ್ ಅವರು ಮಾಡುತ್ತಿದ್ದಾರೆ. ಪರಿಸರ ಪ್ರೇಮಿಯೂ ಆಗಿರುವ ಅವರು ಈ ಬಗ್ಗೆ ಸತತ ಪ್ರಯತ್ನ ಮಾಡಿದ್ದಾರೆ. ಸದ್ಯ ದೆಹಲಿಯಲ್ಲಿರುವ ಶಶಿಧರ್ ಭಟ್ ಅವರ ಜೊತೆಗೆ ನಡೆಸಿದ ಮಾತುಕತೆಯ ಸಾರಾಂಶ ಇಲ್ಲಿದೆ…
