ಸ್ವಚ್ಚ ಗ್ರಾಮ ಟಾಸ್ಕ್ ಫೋರ್ಸ್ ಗುತ್ತಿಗಾರಿನಲ್ಲಿ ರಚನೆಯಾಗಿದೆ. ಗ್ರಾಮದಲ್ಲಿ, ರಸ್ತೆಗಳಲ್ಲಿ ಕಸ ಎಸೆಯದಂತೆ ಜಾಗೃತಿ ಮೂಡಿಸುವುದು ಹಾಗೂ ಆ ಬಳಿಕ ದಂಡ ವಿಧಿಸುವ ಬಗ್ಗೆ ಚಿಂತನೆ ನಡೆದಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಗುತ್ತಿಗಾರಿನಲ್ಲಿ ಸ್ವಚ್ಚ ಗ್ರಾಮ ಟಾಸ್ಕ್ ಫೋರ್ಸ್ ಸಮಿತಿ ರಚನೆ ಮಾಡಲಾಗಿದೆ. ಈ ಸಮಿತಿ ಸಭೆಯು ಈಚೆಗೆ ನಡೆಯಿತು. ಸಭೆಯಲ್ಲಿ ಗುತ್ತಿಗಾರು ಗ್ರಾಮ ಪಂಚಾಯತ್, ಅಮರ ಸಂಜೀವಿನಿ ಒಕ್ಕೂಟ ಹಾಗೂ ವರ್ತಕರ ಸಂಘದದ ವತಿಯಿಂದ ಎಲ್ಲಾ ಸಂಘ ಸಂಸ್ಥೆಗಳ ಜೊತೆಗೂಡಿ ಗುತ್ತಿಗಾರು ಪೇಟೆಯ ಸ್ವಚ್ಛತೆ ಹಾಗೂ ಸ್ವಚ್ಛತಾ ಅಭಿಯಾನದ ಮುಂದುವರಿದ ಭಾಗವಾಗಿ ಸಭೆ ನಡೆಸಲು ತೀರ್ಮಾನಿಸಲಾಗಿದೆ.
ಪ್ರತೀ ಗುರುವಾರ ಗುತ್ತಿಗಾರು ಪೇಟೆಯಲ್ಲಿ ಸ್ವಚ್ಛತಾ ಜಾಗೃತಿ ಮೂಡಿಸುವುದು, ಅಲ್ಲಲ್ಲಿ ಭಿತ್ತಿ ಪತ್ರದ ಮೂಲಕ ಹಾಗೂ ಇತರ ಮಾಧ್ಯಮಗಳ ಮೂಲಕ ಜನರಿಗೆ ಮಾಹಿತಿ ನೀಡಿ ಎಲ್ಲೆಂದರಲ್ಲಿ ಕಸ ಎಸೆಯದಂತೆ ಜಾಗೃತಿ ಮೂಡಿಸುವ ಕಾರ್ಯ ಮಾಡುವುದು.ಅದಾದ ಬಳಿಕ ಕಸ ಎಸೆದರೆ ದಂಡ ಪ್ರಯೋಗದಂತಹ ಕೆಲಸವನ್ನೂ ಪಂಚಾಯತ್ ಸಹಕಾರದೊಂದಿಗೆ ನಡೆಸುವುದಾಗಿ ನಿರ್ಧರಿಸಲಾಗಿದೆ.