ಸ್ವಚ್ಛತೆಗಾಗಿ ಹಾಗೂ ಗ್ರಾಮದ ಸುರಕ್ಷತೆಗಾಗಿ ಜನರೇ ಸಿಸಿಟಿವಿ ಅಳವಡಿಕೆ ಮಾಡಲು ಗ್ರಾಮಪಂಚಾಯತ್‌ಗೆ ಮನವಿ ಮಾಡಿದ್ದಾರೆ. ಅಷ್ಟೇ ಅಲ್ಲ, ತ್ಯಾಜ್ಯ ಎಸೆಯುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದೂ ಜನರು ಒತ್ತಾಯಿಸಿದ್ದಾರೆ…!. ಇಂತಹದ್ದೊಂದು ಮನವಿಯನ್ನು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಗುತ್ತಿಗಾರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನಡೆದಿದೆ.
ದೇಶದೆಲ್ಲೆಡೆ ಸ್ವಚ್ಛಭಾರತದ ( SwachchBharath) ಅಭಿಯಾನ ಸದ್ದು ಮಾಡುತ್ತಲೇ ಇದೆ. ಗ್ರಾಮ ಮಟ್ಟದಲ್ಲೂ ಸ್ವಚ್ಛತಾ ಅಭಿಯಾನ ನಡೆಯುತ್ತಿದೆ. ಹಾಗಿದ್ದರೂ ತ್ಯಾಜ್ಯ ಎಸೆಯುವವರ ಸಂಖ್ಯೆ ಕಡಿಮೆಯಾಗಿಲ್ಲ, ಸ್ವಚ್ಛತಾ ಜಾಗೃತಿ ಇನ್ನೂ ನಿರೀಕ್ಷಿತ ಮಟ್ಟದಲ್ಲಿ ಆಗಿಲ್ಲ. ಈ ನಡುವೆಯೇ ಹಲವು ಕಡೆಗಳಲ್ಲಿ ಜನರು ಸ್ವಚ್ಛತಾ ಅಭಿಯಾನದ ಮೂಲಕ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಲೇ ಇದ್ದಾರೆ. ಹೀಗೆ ಜಾಗೃತಿ ಮೂಡಿಸುವ ಗ್ರಾಮಗಳಲ್ಲಿ ಗುತ್ತಿಗಾರು ಕೂಡಾ ಒಂದು.ಕಳೆದ 15 ವಾರಗಳಿಂದ ನಿರಂತರವಾಗಿ ಪ್ರತೀ ವಾರ ಸ್ವಚ್ಛತಾ ಅಭಿಯಾನ ಹಾಗೂ ಜಾಗೃತಿ ಮೂಡಿಸುವ ಕೆಲಸ ನಡೆಯುತ್ತಿದೆ. ಈ ಅಭಿಯಾನದಲ್ಲಿ ಸಂಜೀವಿನಿ ಮಹಿಳಾ ಒಕ್ಕೂಟ, ವರ್ತಕ ಸಂಘ, ಗ್ರಾಮ ಪಂಚಾಯತ್ ಹಾಗೂ ಇತರ ಸಂಘಸಂಸ್ಥೆಗಳು ಕೈಜೋಡಿಸಿದ್ದವು.
ಪ್ರತೀ ವಾರದ ಸ್ವಚ್ಛತಾ ಕಾರ್ಯದ ನಂತರವೂ ತ್ಯಾಜ್ಯ ಎಸೆಯುವವರ ಸಂಖ್ಯೆ ಕಡಿಮೆಯಾಗಿಲ್ಲ. ಹೀಗಾಗಿ ಇದೀಗ ಗುತ್ತಿಗಾರು ವರ್ತಕ ಸಂಘವು ಗ್ರಾಮದ ಸುರಕ್ಷತೆ ಹಾಗೂ ಸ್ವಚ್ಛತಾ ಕಾರ್ಯದ ಉದ್ದೇಶದಿಂದ ಸಿಸಿಟಿವಿ ಅಳವಡಿಕೆ ಮಾಡಲು ಗ್ರಾಮ ಪಂಚಾಯತ್ ಗೆ ಮನವಿ ಮಾಡಿದೆ. ಇದರ ಜೊತೆಗೆ ತ್ಯಾಜ್ಯ ಎಸೆಯುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದೂ ಮನವಿಯಲ್ಲಿ ತಿಳಿಸಿದೆ.
Guthigar Vartaka Sangha has requested the Gram Panchayat to install CCTV for the purpose of safety and cleanliness of the village.