ದೇಶದ ವಿವಿದೆಡೆ ಸ್ವಚ್ಛ ಸರ್ವೇಕ್ಷಣ್ ಅಭಿಯಾನ ನಡೆಯುತ್ತಿದೆ. ನಗರವನ್ನು ಸ್ವಚ್ಛಮಾಡುವುದು ಹಾಗೂ ತ್ಯಾಜ್ಯ ವಿಲೇವಾರಿಗೆ ಆದ್ಯತೆ ನೀಡುವುದು ಸೇರಿದಂತೆ ನಗರ ನೈರ್ಮಲ್ಯವನ್ನು ಸುಧಾರಿಸುವ ಕೆಲಸ ನಡೆಸಲಾಗುತ್ತಿದೆ. ಈ ಅಭಿಯಾನದ ಮೂಲಕ ಈ ವರ್ಷ 10 ಕೋಟಿ ಜನರನ್ನು ತಲಪುವ ನಿರೀಕ್ಷೆ ಇದೆ. ಇದು ವಿಶ್ವದ ಅತಿದೊಡ್ಡ ವಾರ್ಷಿಕ ನಗರ ಸ್ವಚ್ಛತಾ ಅಭಿಯಾನವಾಗಿದೆ.ಈ ಅಭಿಯಾನದ ಮೂಲಕ ಜನರನ್ನು ಸ್ವಚ್ಛತೆಯ ಕಡೆಗೆ ಉತ್ತೇಜಿಸುವುದು ಮುಖ್ಯ ಉದ್ದೇಶವಾಗಿದೆ. ಅದೇ ಮಾದರಿಯಲ್ಲಿ ಗ್ರಾಮೀಣ ಭಾಗದಲ್ಲಿ ಸ್ವಚ್ಛತಾ ಅಭಿಯಾನ ಆರಂಭವಾಗುತ್ತಿದೆ. ಇದಕ್ಕಾಗಿ ಟಾಸ್ಕ್ ಫೋರ್ಸ್ ರಚನೆಯನ್ನೂ ಮಾಡಲಾಗಿದೆ. ಈ ಮಾದರಿ ಇನ್ನೊಂದು ಕಡೆಗೂ ಮಾದರಿಯಾಗಬಹುದಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಗುತ್ತಿಗಾರು ಗ್ರಾಮದಲ್ಲಿ “ಸ್ವಚ್ಚ ಗ್ರಾಮ ಗುತ್ತಿಗಾರು” ಪರಿಕಲ್ಪನೆಯ ಟಾಸ್ಕ್ ಫೋರ್ಸ್ ಟೀಮ್ ರಚನೆ ಮಾಡಲಾಗಿದೆ. ಈಗಾಗಲೇ ಮೊದಲ ಹಂತದಲ್ಲಿ ಗುತ್ತಿಗಾರು ನಗರ ಸ್ವಚ್ಛತಾ ಅಭಿಯಾನ ನಡೆಸಿ ಜನರಿಗೆ ಒಂದು ಹಂತದ ಜಾಗೃತಿ ಮಾಡಲಾಗಿದೆ. ಮುಂದೆ ನಿರಂತರ ಸ್ವಚ್ಛತಾ ಅಭಿಯಾನ ನಡೆಯುತ್ತದೆ. ಜೊತೆಗೆ ಕಸ ಎಸೆದವರಿಗೆ ದಂಡ ವಿಧಿಸುವ ಪ್ಲಾನ್ ಸಿದ್ಧವಾಗಿದೆ. ಈ ಮೂಲಕ ಗುತ್ತಿಗಾರು ನಗರವನ್ನು ಸಂಪೂರ್ಣ ಸ್ವಚ್ಛ ಪೇಟೆಯನ್ನಾಗಿಸುವ ಯೋಜನೆ ಸಿದ್ಧ ಮಾಡಲಾಗಿದೆ. ಗ್ರಾಮೀಣ ಭಾಗವೊಂದರ ಈ ಯೋಜನೆಗೆ ಜನರಿಂದಲೂ ಸಹಕಾರ ಬೇಕಿದೆ.
ಗುತ್ತಿಗಾರಿನ ಅಮರ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ ಗುತ್ತಿಗಾರು, ಗ್ರಾ. ಪಂ. ಗುತ್ತಿಗಾರು, ಗುತ್ತಿಗಾರು ಗ್ರಂಥಾಲಯ, ವರ್ತಕ ಸಂಘ ಇವುಗಳ ನೇತೃತ್ವ ವಿವಿಧ ಸಂಘಟನೆಗಳ ಸಹಕಾರದೊಂದಿಗೆ ತಂಡ ರಚನೆ ಆಗಿದೆ. ಈಗಾಗಲೇ ಮೊದಲ ಹಂತದ ಜಾಗೃತಿಯ ಅಂಗವಾಗಿ ವತಿಯಿಂದ ವಿವಿಧ ಸಂಘ ಸಂಸ್ಥೆಗಳ ಸಹಕಾರದಲ್ಲಿ ಗುತ್ತಿಗಾರು ಪೇಟೆ ಸ್ವಚ್ಛತಾ ಕಾರ್ಯ ಮಾಡಲಾಯಿತು.
ಈ ಸಂದರ್ಭ ಪ್ರತೀ ಅಂಗಡಿಗಳಿಗೆ ತೆರಳಿ ಜಾಗೃತಿ ಮೂಡಿಸಲಾಯಿತು. ಅಂಗಡಿಗಳ ಮುಂದೆ ಗ್ರಾಹಕರು ಕಸ ಎಸೆಯದಂತೆ ವರ್ತಕರೂ ಎಚ್ಚರಿಕೆ ನೀಡಬೇಕು. ಸಾರ್ವಜನಿಕರೂ ಎಲ್ಲೆಂದರಲ್ಲಿ ಕಸ ಎಸೆಯದಂತೆ ಮನವಿ ಮಾಡಿದರು. ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡುವಂತೆ ಹಾಗೂ ಒಕ್ಕೂಟದ ದೀಪ ಸಂಜೀವಿನಿ ಸಂಘದ ಸದಸ್ಯರು ಹೊಲಿದ ಬಟ್ಟೆ ಚೀಲಗಳನ್ನು ಬಳಕೆ ಮಾಡುವಂತೆ ಮನವಿ ಮಾಡಿ, ಕೆಲವು ಅಂಗಡಿಗಳಿಗೆ ಬಟ್ಟೆ ಚೀಲ ವಿತರಣೆ ಮಾಡಲಾಯಿತು.
ಮುಂದೆ ವಾರದಲ್ಲಿ ಒಂದು ದಿನ ಟಾಸ್ಕ್ ಫೋರ್ಸ್ ತಂಡವು ಗುತ್ತಿಗಾರು ಪೇಟೆಯಲ್ಲಿ ತೆರಳಿ ಜಾಗೃತಿ ಮೂಡಿಸುತ್ತದೆ. ಅದರ ಜೊತೆಗೆ ಗ್ರಾಪಂ ನೇತೃತ್ವದಲ್ಲಿ ಕಸ ಎಸೆಯುವ ಮಂದಿಗೆ ದಂಡ ವಿಧಿಸುವ ಬಗ್ಗೆಯೂ ಯೋಜನೆ ಸಿದ್ಧವಾಗಿದೆ. ಈ ನಿಟ್ಟಿನಲ್ಲಿ ಹೆಚ್ಚಿನ ಅರಿವನ್ನೂ ಜನರಿಗೆ ಮೂಡಿಸುವ ಯೋಜನೆ ಸಿದ್ಧವಾಗಿದೆ. ವರ್ಷ ಪೂರ್ತಿ ಗುತ್ತಿಗಾರು ಪೇಟೆ ಸ್ವಚ್ಚವಾಗಿಡುವುದು ಇದೆಲ್ಲದರ ಉದ್ದೇಶವಾಗಿದೆ.
ಗುತ್ತಿಗಾರು ವರ್ತಕರ ಸಂಘದ ಅಧ್ಯಕ್ಷ ಶಿವರಾಮ ಕರುವಜೆ ನೇತೃತ್ವದಲ್ಲಿ “ಸ್ವಚ್ಚ ಗ್ರಾಮ ಗುತ್ತಿಗಾರು” ಪರಿಕಲ್ಪನೆಯ ಟಾಸ್ಕ್ ಫೋರ್ಸ್ ಟೀಮ್ ರಚಿಸಲಾಗಿದೆ.
ಒಂದು ಗ್ರಾಮೀಣ ಭಾಗದಲ್ಲಿ ಸ್ವಚ್ಛ ಪೇಟೆಯ ಅಭಿಯಾನವು ಯಶಸ್ವಿಯಾಗಲು ಆಯಾ ಪಂಚಾಯತ್ ಆಡಳಿತದ ಉತ್ಸಾಹದ ಜೊತೆಗೆ ನಾಗರಿಕರ ಸಹಕಾರವೂ ಅಗತ್ಯ ಇದೆ. ಸ್ವಚ್ಛ ಪೇಟೆ, ಸ್ವಚ್ಛ ಭಾರತವು ಪ್ರತೀ ನಾಗರಿಕನ ಜವಾಬ್ದಾರಿಯಾಗಿದೆ.