ಮುಕ್ಕೂರು ಹಾಲಿನ ಡಿಪೊ ಬಳಿ ಸ್ವಚ್ಛತಾ ಅಭಿಯಾನವನ್ನು ದೀಪ ಬೆಳಗಿಸಿ ಚಾಲನೆ ನೀಡಿದ ನ್ಯಾಯವಾದಿ ಗಣಪತಿ ಭಟ್ ನೀರ್ಕಜೆ ಮಾತನಾಡಿ, ಸ್ವಚ್ಛ ಪರಿಸರ ನಿರ್ಮಾಣ ನಮ್ಮೆಲ್ಲರ ಆದ್ಯ ಕರ್ತವ್ಯ. ಅದು ಅಭಿಯಾನದ ರೂಪದಲ್ಲಿ ಹಳ್ಳಿ ಹಳ್ಳಿಯಲ್ಲಿ ಜಾಗೃತಿ ಮೂಡಿಸುತ್ತಿರುವುದು ಉತ್ತಮ ಬೆಳವಣಿಗೆ. ಮುಕ್ಕೂರಿನಲ್ಲಿ ನೇಸರ ಯುವಕ ಮಂಡಲ, ಗಣೇಶೋತ್ಸವ ಸಮಿತಿ ಇದರ ನೇತೃತ್ವ ವಹಿಸಿರುವುದು ಪ್ರಶಂಸನೀಯ ಎಂದರು.
ಸಭಾಧ್ಯಕ್ಷತೆ ವಹಿಸಿದ ನೇಸರ ಯುವಕ ಮಂಡಲ ಹಾಗೂ ಶ್ರೀ ಸಾರ್ವಜನಿಕ ಗಣೇಶೋತ್ಸವ ಸಮಿತಿ ಗೌರವಧ್ಯಕ್ಷ ಜಗನ್ನಾಥ ಪೂಜಾರಿ ಮುಕ್ಕೂರು ಮಾತನಾಡಿ, ಸಾಮಾಜಿಕ ಅಭ್ಯುಧಯಕ್ಕೆ ಪೂರಕವಾಗಿ ನಮ್ಮ ಸಂಘಟನೆ ಹತ್ತಾರು ಕಾರ್ಯಕ್ರಮ ಅನುಷ್ಠಾನಿಸಿದೆ. ಕೊರೊನಾ ಸಂಕಷ್ಟ ಕಾಲದಲ್ಲಿಯು ಜನಪರವಾದ ನಾಲ್ಕು ಕಾರ್ಯಕ್ರಮ ರೂಪಿಸಿ ಯಶಸ್ವಿಯಾಗಿದೆ. ಭವಿಷ್ಯದಲ್ಲಿಯು ಇನ್ನಷ್ಟು ಹೊಸ ಹೊಸ ಯೋಚನೆಗಳಿದ್ದು, ಅದನ್ನು ಕಾರ್ಯರೂಪಕ್ಕೆ ತರಲಾಗುವುದು ಎಂದರು.
ಪೆರುವಾಜೆ ಗ್ರಾ.ಪಂ.ಅಭಿವೃದ್ಧಿ ಅ„ಕಾರಿ ಜಯಪ್ರಕಾಶ್ ಮಾತನಾಡಿ, ಸ್ವಚ್ಛ ಪರಿಸರದ ಭಾರತ ನಿರ್ಮಾಣ ಮಹಾತ್ಮ ಗಾಂಜಿ ಅವರ ಕನಸಾಗಿತ್ತು. ಅದು ಈಗ ನನಸು ಆಗುವ ನಿಟ್ಟಿನಲ್ಲಿ ಪ್ರಯತ್ನ ನಡೆಯುತ್ತಿದೆ. ಸ್ವಚ್ಛ ಪರಿಸರದ ಮೂಲಕ ಆರೋಗ್ಯಪೂರ್ಣ ಸಮಾಜ ನಿರ್ಮಾಣ ಸಾಧ್ಯ ಎಂದ ಅವರು, ಸರಕಾರಗಳು ಸ್ವಚ್ಛತೆಗಾಗಿ ಅನೇಕ ಯೋಜನೆ ಜಾರಿ ಮಾಡಿದೆ. ಪರಿಸರವನ್ನು ಮಲೀನಗೊಳಿಸುವುದು ಕಾನೂನಿನ ಪ್ರಕಾರ ಅಪರಾಧ ಎಂದರು.
ಮುಕ್ಕೂರು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಕುಂಬ್ರ ದಯಾಕರ ಆಳ್ವ, ಪೆರುವಾಜೆ ಗ್ರಾ.ಪಂ.ಮಾಜಿ ಸದಸ್ಯ ಉಮೇಶ್ ಕೆಎಂಬಿ ಮಾತನಾಡಿದರು. ಈ ಸಂದರ್ಭದಲ್ಲಿ ಪ್ರಗತಿಪರ ಕೃಷಿಕರಾದ ಜಯಸೂರ್ಯ ರೈ ಬೋರಡ್ಕ, ಧರ್ಮಸ್ಥಳ ಗ್ರಾ.ಯೋ.ಪ್ರಗತಿಬಂಧು ಸಂಘಗಳ ಪೆರುವಾಜೆ ಒಕ್ಕೂಟದ ಉಪಾಧ್ಯಕ್ಷ ನಾರಾಯಣ ರೈ ಪೂವಾಜೆ, ಮುಕ್ಕೂರು ಯುವಸೇನೆ ಅಧ್ಯಕ್ಷ ಸಚಿನ್ ರೈ ಪೂವಾಜೆ, ಪ್ರಗತಿಪರ ಕೃಷಿಕ ಗುಡ್ಡಪ್ಪ ಗೌಡ ಅಡ್ಯತಕಂಡ, ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷ ಪೂವಪ್ಪ ನಾಯ್ಕ ಕೊಂಡೆಪ್ಪಾಡಿ, ನೇಸರ ಯುವಕ ಮಂಡಲ ಅಧ್ಯಕ್ಷ ರಮೇಶ್ ಕಾನಾವು ಉಪಸ್ಥಿತರಿದ್ದರು.
ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಕಾರ್ಯದರ್ಶಿ ರಕ್ಷಿತ್ ಗೌಡ ಒರುಂಕು ಸ್ವಾಗತಿಸಿ, ಸದಸ್ಯ ರಾಮಚಂದ್ರ ಚೆನ್ನಾವರ ವಂದಿಸಿದರು. ನೇಸರ ಯುವಕ ಮಂಡಲ ಕಾರ್ಯದರ್ಶಿ ಶಶಿಕುಮಾರ್ ಬಿ.ಎನ್.ನಿರೂಪಿಸಿದರು.
ಮುಕ್ಕೂರು ಶಾಲಾ ಬಳಿಯಿಂದ ಆರಂಭಗೊಂಡ ಸ್ವಚ್ಛತಾ ಕಾರ್ಯವು ಮುಕ್ಕೂರು-ಕುಂಡಡ್ಕ-ಕಾಪುಕಾಡು ಮೂಲಕ ಸಾಗಿ ಸಂಜೆ 5.30 ಕ್ಕೆ ಪುದ್ಧೊಟ್ಟು ಸೇತುವೆ ಬಳಿ ಸಮಾಪ್ತಿಗೊಂಡಿತು. ಈ ಸಂದರ್ಭದಲ್ಲಿ ನೇಸರ ಯುವಕ ಮಂಡಲ, ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ, ಯುವ ಸೇನೆ ಮುಕ್ಕೂರು, ಇಂಚರ ಪ್ರಗತಿಬಂಧು ಸ್ವಸಹಾಯ ಸಂಘ, ಪ್ರಗತಿಬಂಧು ಸಂಘ ಪೆರುವಾಜೆ ಒಕ್ಕೂಟದ ಸದಸ್ಯರು ಹಾಗೂ ಊರವರು ಪಾಲ್ಗೊಂಡರು.
ಸ್ವಚ್ಛೋತ್ಸವ-ನಿತ್ಯೋತ್ಸವ: ಇದೇ ಸಂದರ್ಭದಲ್ಲಿ ಗ್ರಾಮೀಣಾಭಿವೃದ್ಧಿ ಪಂಚಾಯತ್ ಇಲಾಖೆ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ದ.ಕ.ಜಿ.ಪಂ., ಸುಳ್ಯ ತಾ.ಪಂ.,ಪೆರುವಾಜೆ ಗ್ರಾ.ಪಂ. ಆಶ್ರಯದಲ್ಲಿ ಸ್ವಚ್ಛ ಭಾರತ ಮಿಷನ್‍ನಡಿ ಸ್ವಚ್ಛೋತ್ಸವ-ನಿತ್ಯೋತ್ಸವ ಮಾಸಾಚರಣೆ ಆಚರಿಸಲಾಯಿತು. ಸ್ವಚ್ಛತೆ ಪಾಲನೆ ಕುರಿತು ಪ್ರತಿಜ್ಞೆ ಬೋಧಿಸಲಾಯಿತು.