– ಸ್ವರ್ಣಧಾರ ಕೋಳಿ(Swarbadhara Chicken) ಸಾಕಣೆ ಮಾಡಿ, ವರ್ಷಕ್ಕೆ 50ಲಕ್ಷ ಗಳಿಸಿ…!
– ಸ್ವರ್ಣಧಾರ ಮೊಟ್ಟೆ(Egg) ಕೋಳಿ ಸಾಕಿರಿ, ತಿಂಗಳಿಗೆ ಲಕ್ಷ ಲಕ್ಷ ಸಂಪಾದಿಸಿ..!
– ಸ್ವರ್ಣಧಾರ ಕೋಳಿ ಸಾಕಿರಿ, ದಿನ ನಿತ್ಯ ಆದಾಯ ಗಳಿಸಿರಿ..!
– ಕಡಿಮೆ ಆಹಾರ(Food), ಕಡಿಮೆ ರೋಗ(Deices), ಕಡಿಮೆ ಖರ್ಚು..!
– ಹೆಚ್ಚು ಮಾಂಸ ಉತ್ಪಾದನೆ, ಹೆಚ್ಚು ಮೊಟ್ಟೆ ಉತ್ಪಾದನೆ ಹಾಗೂ ಹೆಚ್ಚಿನ ಮಾರುಕಟ್ಟೆ..!
ಇಂತಹ ಆಕರ್ಷಕ ಜಾಹೀರಾತುಗಳನ್ನು(Advertisement) ನೀವೆಲ್ಲರೂ ಕೆಲ ವರ್ಷಗಳ ಹಿಂದೆ ಎಲ್ಲಾ ರೀತಿಯ ಮೀಡಿಯಾಗಳಲ್ಲಿ(Media) ಕೇಳಿದ್ದೀರಿ.. ನೋಡಿದ್ದೀರಿ.. ಅದೆಷ್ಟೋ ಜನ ಇಂತಹ ಆಕರ್ಷಕ ಹೇಳಿಕೆ ಹಾಗೂ ವೀಡಿಯೋಗಳನ್ನು ನೋಡಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಕೋಳಿ ಫಾರಂ(Poultry) ಆರಂಭಿಸಿ ಸೋತು ಹೋಗಿದ್ದಾರೆ..
ಎಲ್ಲೋ ಒಂದು ಹತ್ತು ಜನ ಅದೃಷ್ಟಶಾಲಿಗಳು ಇದರಲ್ಲಿ ಗೆದ್ದಿರಬಹುದು ಹಾಗೂ ಒಂದಿಪ್ಪತ್ತು ಜನ ಹೇಗಾದರೂ ಕಷ್ಟ ಪಟ್ಟು ಮಾರಾಟ ಮಾಡಿ ಹಾಕಿದ ಹಣ ವಾಪಸು ಪಡೆದಿರಬಹುದು. ಉಳಿದ ಎಪ್ಪತ್ತು ಭಾಗ ಜನ ಸಂಪೂರ್ಣ ಸೋತಿದ್ದಾರೆ.. ಇಷ್ಟೊಂದು ಒಳ್ಳೆಯ ಆಕರ್ಷಕ ಜಾಹೀರಾತಿನೊಂದಿಗೆ ಅತೀ ದೊಡ್ಡ ಪ್ರಮಾಣದಲ್ಲಿ ಶುರುವಾದ ಸ್ವರ್ಣಧಾರ ಕೋಳಿ ಸಾಕಾಣಿಕೆ ಈಗ ಕಡಿಮೆ ಆಗಿದ್ದು ಹೇಗೆ. ಹೆಚ್ಚಿನವರು ಸೋತಿದ್ದು ಹೇಗೆ….? ಕಾರಣಗಳು ಹಲವಾರು ಇರಬಹುದು. ಅದರಲ್ಲಿ ಕೆಲವನ್ನು ನನ್ನ ಸ್ವಂತ ಅನುಭವದ ಆಧಾರದ ಮೇಲೆ ವಿವರಿಸುತ್ತೇನೆ….
ಮುಖ್ಯವಾಗಿ ಇದು ಹೈಬ್ರಿಡ್ ತಳಿಯ ಕೋಳಿ. ಬೇಗನೇ ಬೆಳೆಯಲು ಮತ್ತು ಹೆಚ್ಚಿನ ಮೊಟ್ಟೆ ಉತ್ಪಾದನೆಗಾಗಿ ಈ ಕೋಳಿಯನ್ನು ಸೃಷ್ಟಿಸಿದ್ದಾರೆ. ವಿಪರೀತ ಹೊಟ್ಟೆ ಬಾಕ ಕೋಳಿ ಇದು. ನಾನು ನೋಡಿದ ಕೋಳಿಗಳಲ್ಲಿಯೇ ಅತೀ ಹೆಚ್ಚಿನ ಹೊಟ್ಟೆಬಾಕ ಕೋಳಿ ಇದು. ದಿನದ 24 ಗಂಟೆಯಲ್ಲಿ ಸತತ 22 ಗಂಟೆಗಳ ಅವಧಿಯಲ್ಲಿಯೂ ನಿರಂತರವಾಗಿ ಏನು ಸಿಕ್ಕಿದರೂ ಕಂಡದ್ದೆಲ್ಲವನ್ನೂ ಹಾಗೂ ಸಿಕ್ಕಿದ್ದೆಲ್ಲವನ್ನೂ ತಿನ್ನುವ ಬರೀ ಅಂಜುಬುರುಕ ಕೋಳಿ ಇದಾಗಿದೆ. ಆಹಾರ ಇಲ್ಲದಿದ್ದರೆ ಕಲ್ಲು, ಮಣ್ಣು ಮರದ ಎಲೆ, ಸಣ್ಣ ಗಿಡಗಳಾಗಿದ್ದರೆ ಬೇರು ಸಮೇತ ಕಿತ್ತು ತಿನ್ನುತ್ತದೆ. ಕೆಲವೊಮ್ಮೆ ತನ್ನದೇ ಹಿಕ್ಕೆ ಮಿಶ್ರಿತ ಗೊಬ್ಬರವನ್ನೂ ತಿನ್ನುತ್ತದೆ. ಅಂತೂ ಹಾಕಿದ ಆಹಾರವನ್ನು ಸ್ವಲ್ಪವೂ ಪೋಲು ಮಾಡದೇ ತಿನ್ನುವುದು ಇದರ ವಿಷೇಷತೆಯಾಗಿದೆ.
ಏನೂ ಸಿಗದಿದ್ದರೆ ತಮ್ಮಲ್ಲೇ ಒಂದು ಪಾಪದ ಕೋಳಿಯನ್ನು ಎಲ್ಲವೂ ಸೇರಿ ಗಾಯಗೊಳಿಸಿ ತಿಂದು ಮುಗಿಸುತ್ತದೆ. ಈ ಕೋಳಿಗಳು ಕೆಂಪಗಿನ ಯಾವುದೇ ವಸ್ತುವನ್ನು ಕಂಡರೂ ಕೂಡಲೇ ತಿನ್ನಲು ಧಾವಿಸುತ್ತದೆ. ನಮ್ಮ ಕಾಲುಗಳಲ್ಲಿ ಗಾಯವಿದ್ದರಂತೂ ಇವಿರುವ ಫಾರಂ ಒಳಗಡೆ ಹೋಗಲೇಬಾರದು. ಒಂದು ವೇಳೆ ಹೋಗುವುದಿದ್ದರೂ ಬಟ್ಟೆ ಅಥವಾ ಬೇರೇನನ್ನಾದರೂ ಗಟ್ಟಿಯಾಗಿ ಕಟ್ಟಿಕೊಂಡು ಫಾರಂ ಒಳಗಡೆ ಹೋಗಬೇಕು. ಇಲ್ಲದಿದ್ದರೆ ನಮ್ಮ ಶರೀರದ ಗಾಯಕ್ಕೇ ಎಲ್ಲಾ ಕೋಳಿಗಳು ಬಂದು ಕುಕ್ಕುತ್ತದೆ. ಒಂದು ವೇಳೆ ರಕ್ತ ಸೋರುತ್ತಿರುವ ಯಾವುದೇ ಹೊಸ ಅಥವಾ ಹಳೆ ಗಾಯದೊಂದಿಗೆ ಫಾರಂ ಒಳಗಡೆ ತಲೆತಿರುಗಿ ಬಿದ್ದರಂತೂ ಮತ್ತೆ ಕೇಳಬೇಡಿ. ಅದೃಷ್ಟ ಚೆನ್ನಾಗಿದ್ದರೆ ಹೊರಗೆ ಬರಬಹುದು. ಅಷ್ಟೊಂದು ಅಪಾಯಕಾರಿ ಕೋಳಿಗಳಿವು. ಯಾಕೆಂದರೆ ಅದರ ಸೃಷ್ಟಿಯಲ್ಲಿಯೇ ವಿಪರೀತ ಹೊಟ್ಟೆಬಾಕತನವನ್ನು ಸೇರಿಸಿದ್ದಾರೆ..
ಇಷ್ಟೆಲ್ಲಾ ಇದ್ದರೂ ಈ ಕೋಳಿಗಳು ನೋಡಲು ತುಂಬಾ ಆಕರ್ಷಕ. ಸಾಧಾರಣ ಎತ್ತರದೊಂದಿಗೆ ಅಗಲವಾದ ಭುಜ ಹಾಗೂ ಒಳ್ಳೆಯ ಸುಂದರ ರೆಕ್ಕೆ ಪುಕ್ಕಗಳೊಂದಿಗೆ ಒಮ್ಮೆ ನೋಡಿದರೆ ಮತ್ತೊಮ್ಮೆ ತಿರುಗಿ ನೋಡಬೇಕೆನಿಸುವಷ್ಟು ಸುಂದರ. ಒಮ್ಮೆಯಾದರೂ ಎತ್ತಿ ಹಿಡಿದುಕೊಳ್ಳಲು ಎಂಥವರಿಗಾದರೂ ಮನಸ್ಸು ಬಾರದೇ ಇರಲಾರದು. ತುಂಬಾ ಬುದ್ಧಿವಂತ ಹಾಗೂ ಮನುಷ್ಯನೊಂದಿಗೆ ಒಳ್ಳೆಯ ರೀತಿಯಲ್ಲಿ ಬೆರೆಯುವ ಕೋಳಿ. ಉಳಿದ ಜಾತಿಯ ಕೋಳಿಗಳ ಮದ್ಯೆ ತಾನೊಬ್ಬನೇ ಎದ್ದು ಕಾಣುವಂತಹ ಸುಂದರ ನಿಲುವಿನ ಕೋಳಿ ಇದು. ನೂರು ರೂಪಾಯಿಯ ಆಹಾರ ಕೊಟ್ಟರೆ 150 ರೂಪಾಯಿಯ ಮಾಂಸವನ್ನು ನಮಗೆ ಮರಳಿ ನೀಡುತ್ತದೆ.
ಮೊಟ್ಟೆಯೂ ಅಷ್ಟೇ, ದೊಡ್ಡ ಗಾತ್ರದ ಸಾಧಾರಣ ಕೆಂಬಣ್ಣದ ಒಳ್ಳೆಯ ಮೊಟ್ಟೆ. ಅಂಗಡಿ ಬಿಳಿ ಮೊಟ್ಟೆಯ ಆಮ್ಲೆಟ್ ಮತ್ತು ಇದರ ಆಮ್ಲೆಟ್ ಮಾಡಿದಾಗ ನಮಗೆ ಈ ಕೋಳಿ ಮೊಟ್ಟೆಯ ಆಮ್ಲೆಟ್ ದಪ್ಪವಾಗಿ ಮತ್ತು ರುಚಿಕರವಾಗಿ ಮತ್ತು ಒಳ್ಳೆಯ ಬಣ್ಣದೊಂದಿಗೆ ಬರುತ್ತದೆ. ಆದರೆ ಅದಕ್ಕೆ ಹಾಕುವ ಕಂಪೆನಿ ಆಹಾರದ ಖರ್ಚು ತಾಳೆ ನೋಡಿದರೆ ಇದರ ಮೊಟ್ಟೆ ವ್ಯಾಪಾರ ಲಾಭದಾಯಕವಲ್ಲ. ಒಂದು ವೇಳೆ ಹೆಂಟೆ ಕೋಳಿಯನ್ನು ಕಂಪನಿ ಆಹಾರವಲ್ಲದೆ ಹಿತ್ತಲಲ್ಲಿ ಬಿಟ್ಟು – ಕಾಳು ಮುಂತಾದ ಆಹಾರವನ್ನು ಸ್ವಲ್ಪವೇ ಹಾಕಿ ಸಾಕಿದರೆ ಇದಕ್ಕೆ ಆಯುಷ್ಯ ಜಾಸ್ತಿ ಹಾಗೂ ಶರೀರ ಧಾರಣೆಯೂ ಚೆನ್ನಾಗಿರುತ್ತದೆ. ಆದರೆ ನಮಗೆ ವ್ಯವಹಾರಕ್ಕೆ ಬೇಕಾದಷ್ಟು ಪ್ರಮಾಣದಲ್ಲಿ ಮತ್ತು ಗಾತ್ರದಲ್ಲಿ ಮೊಟ್ಟೆಗಳು ಸಿಗದ ಕಾರಣ ಹಾಗೆಯೂ ಸಾಕಾಣಿಕೆ ಕಷ್ಟವೇ..
ಈ ಕೋಳಿಗಳ ಮಾಂಸದ ವಿಷಯಕ್ಕೆ ಬಂದರೆ ಇದರಲ್ಲಿ ಹೇಳಿಕೊಂಡಷ್ಟು ರುಚಿಕರವಾದ ಮಾಂಸ ಸಿಗುವುದಿಲ್ಲ. ನೀರಿನಂಶ ಮಿಶ್ರಿತ ಸಾಧಾರಣ ಗಟ್ಟಿತನದ ಮಾಂಸ. ಬಣ್ಣ ಕೂಡಾ ಅಷ್ಟಕಷ್ಟೇ.. ಮಾಂಸದ ಪರಿಮಳ ಕೂಡಾ ಚೆನ್ನಾಗಿಲ್ಲ. 3 ಕೆಜಿಯ ಕೋಳಿಯಾದರೇ 1 ಕೆಜಿ ಯಷ್ಟು ಕೊಬ್ಬು ಇರೋದು. ಸಾಧಾರಣವಾಗಿ ಕಡಿಮೆ ದರದ ಬ್ರಾಯಿಲರ್ ಮಾಂಸದಂತೆಯೇ ಇದು ಕೂಡಾ ಇರೋದು. ಅದಕ್ಕಿಂತ ಸ್ವಲ್ಪ ಮಟ್ಟಿಗೆ ಒಳ್ಳೆಯದಿದೆ. ನಾಟಿ ಕೋಳಿಯ ರುಚಿ ಇದರಲ್ಲಿ ಇಲ್ಲವೇ ಇಲ್ಲ. ಒಮ್ಮೆ ತಿಂದವರು ಮತ್ತೊಮ್ಮೆ ಕೇಳುವುದಿಲ್ಲ. ಹೆಂಟೆ ಕೂಡಾ ಅಷ್ಟೇ. ವಿಪರೀತವಾಗಿ ಬೆಳೆಯುತ್ತದೆ. ಮಾಂಸದಲ್ಲಿ ಹುಂಜಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಚರ್ಬಿ ಇರುತ್ತದೆ.
ಈ ಕೋಳಿಗಳ ಶರೀರ ಮಾತ್ರ ವಿಪರೀತ ಬೆಳೆಯುವ ಕಾರಣ ಕಾಲುಗಳಲ್ಲಿ ಬಲ ಕಡಿಮೆ. ಸ್ವಲ್ಪ ಓಡಿದರೂ ಅಥವಾ ಒಮ್ಮೆಲೇ ಹಾರಿದರೂ ತೊಡೆ ಮುರಿದು ಬಿದ್ದು ಸಾಯುವ ಸಂಖ್ಯೆ ಹೆಚ್ಚು. ರೋಗಗಳೂ ಹಾಗೆಯೇ.. ಇಲಾಖೆಯವರು ಹೇಳುವಂತೆ ಇಲ್ಲ. ಕೆಲವೊಮ್ಮೆ ಬಂದರೆ ನಿಯಂತ್ರಣಕ್ಕೇ ಸಿಗುವುದಿಲ್ಲ. ಒಂದೆರಡು ದಿನ ಆಹಾರ ಸೇವಿಸದಿದ್ದರೆ ತೂಕದಲ್ಲಿ ವಿಪರೀತ ನಷ್ಟವಾಗುತ್ತದೆ. ಸಕಾಲದಲ್ಲಿ ಮಾರಿ ಹೋಗದಿದ್ದರೆ ಇದರಿಂದಾಗುವ ನಷ್ಟವನ್ನು ಭರಿಸಲು ಸಾಧ್ಯವಾಗದ ಮಾತು. ಕೂತು ತಿನ್ನುವವನಿಗೆ ಕುಡಿಕೆ ಹೊನ್ನು ಸಾಲದು ಎಂಬಂತೆ ಈ ಕೋಳಿಯ ಸಾಕಾಣಿಕೆ ಇದೆ.
ಈ ಕೋಳಿಗಳನ್ನು ಒಂದು ಕೇಜಿ ಬಂದಾಗಿನಿಂದ ಶುರುವಾಗಿ ಎರಡು ಕೇಜಿ ಬರುವ ಒಳಗೆ ಮಾರಿ ಮುಗಿಸಿದರೆ ಮಾತ್ರ ಒಳ್ಳೆಯ ಲಾಭ. ಎರಡು ಕೇಜಿ ನಂತರ ಕೇವಲ ಮಾಂಸಕ್ಕಿಂತ ಹೆಚ್ಚು ಚರ್ಬಿಯೇ ತುಂಬಿಕೊಳ್ಳುತ್ತದೆ. ಹಿತ್ತಲಲ್ಲಿ ಬಿಟ್ಟು ಸಾಕಿದರೆ ಸಾಧಾರಣ ತೂಕ ಬರುತ್ತದೆ. ಮತ್ತು ಚರ್ಬಿ ಕೂಡಾ ಕಡಿಮೆ. ಆದರೆ ಫಾರಂ ರೀತಿಯಲ್ಲಿ ಸಾಕುವವರಿಗೆ ಮಾರಾಟಕ್ಕೆ ತೂಕವೇ ಪ್ರದಾನವಾದ ಕಾರಣ ಬಿಟ್ಟು ಸಾಕಿದರೆ ಏನೂ ಲಾಭ ಸಿಗುವುದಿಲ್ಲ. ಬೇಸಿಗೆಯಲ್ಲಿ ಈ ಕೋಳಿಗಳಿಗೆ ಬಿಸಿ ತಾಳಲು ಆಗುವುದಿಲ್ಲ. ಇದ್ದಕ್ಕಿದ್ದಂತೆಯೇ ಬಿದ್ದು ಸಾಯುತ್ತದೆ. ಸಾಗಿಸುವಾಗ ಕೂಡಾ ಸ್ವಲ್ಪ ಗಮನ ತಪ್ಪಿದರೂ ಅರ್ಧದಲ್ಲಿಯೇ ಸಾಯುತ್ತದೆ.
ಪಳಗಿದ ಫಾರಂ ಮಾಲೀಕರಿಗೆ ಒಳ್ಳೆಯ ಮಾರುಕಟ್ಟೆ ಇದ್ದರೆ ಮಾತ್ರ ಇದರಲ್ಲಿ ಈಜಬಹುದು. ಹೊಸಬರಿಗೆ ಈ ಕೋಳಿಯಿಂದ ಲಾಭ ಗಳಿಸಿಲು ಸಾಧ್ಯವೇ ಇಲ್ಲ. ಅದರಲ್ಲೂ ದೊಡ್ಡ ಮಟ್ಟದಲ್ಲಿ ಶುರು ಮಾಡಿದರೆ ಸಿಗುವ ನಷ್ಟದ ಹೊಡೆತವನ್ನು ತಾಳಿಕೊಳ್ಳಲು ಹಲವು ವರ್ಷಗಳೇ ಬೇಕಾಗಬಹುದು. ಧೈರ್ಯ ಮತ್ತು ಮಾರುಕಟ್ಟೆ ಇದ್ದರೆ ಹಾಗೂ 2 ಕೆಜಿ ಬರುವುದರ ಒಳಗೆ ಮಾರಿ ಮುಗಿಸುವ ಭರವಸೆ ಇದ್ದರೆ ಮಾತ್ರ ಇದರ ಸಾಕಾಣಿಕೆಗೆ ಕೈ ಹಾಕಬಹುದು. ದೊಡ್ಡದಾದ ನಂತರ ಮಾರುಕಟ್ಟೆ ಹುಡುಕಲು ಶುರುಮಾಡಿದರೆ ಕೋಳಿ ಮುಗಿಯುವಾಗ ಲಾಭ ಅಸಲು ದೂರದ ಮಾತು, ಕಷ್ಟ ಕಾಲಕ್ಕೆಂದು ತೆಗೆದಿಟ್ಟದ್ದು ಕೂಡ ಮುಗಿಯುತ್ತದೆ. ಇಲ್ಲವೇ ಸಾಲಗಾರರಾಗುತ್ತೀರಿ.
ಹೊಸದಾಗಿ ಶುರು ಮಾಡುವವರು ಯಾವತ್ತೂ 50 ಕೋಳಿಗಳಿಗಿಂತ ಮೇಲೆ ಸಾಕಬೇಡಿ. ಅದರಲ್ಲಿ 25 ಮಾರಿದ ನಂತರವೇ ಮತ್ತೆ 50 ತೆಗೆದುಕೊಳ್ಳಿ. ಇದೇ ರೀತಿಯಲ್ಲಿ ಜಾಣ್ಮೆಯಿಂದ ಮುಂದುವರಿದರೆ ಮಾತ್ರ ಹೆಚ್ಚಿನ ಲಾಭ ಇಲ್ಲದಿದ್ದರೂ ನಷ್ಟ ಅಂತೂ ಆಗಲಿಕ್ಕಿಲ್ಲ. ಹಾಗಾಗಿ ಬಣ್ಣ ಬಣ್ಣದ ಹೇಳಿಕೆ ನೋಡಿ ಮರುಳಾಗಬೇಡಿ. ಜಾಗ್ರತೆಯಿಂದ ಆಲೋಚಿಸಿ ಮುನ್ನಡೆಯಿರಿ. ಒಳ್ಳೆಯ ರೀತಿಯಲ್ಲಿ ಸಾಕಾಣಿಕೆ ಮಾಡುವುದು ಒಂದು ವಿಷಯವೇ ಅಲ್ಲ. ಆದರೆ ನಂತರ ಮಾರಾಟ ಮಾಡಲು ಮುಂದುವರಿಯುವಾಗ ನಿಜವಾದ ಸವಾಲುಗಳು ಎದುರಾಗುತ್ತದೆ. ಆಗ ನಿಮ್ಮನ್ನು ಕಾಪಾಡಲು ಬಣ್ಣ ಬಣ್ಣದ ಹೇಳಿಕೆಯವರು ಬರುವುದಿಲ್ಲ.
ಯಾಕೆಂದರೆ ಅವರು ಸಾಕಾಣಿಕೆ ಬಗ್ಗೆ ಮಾತ್ರ ಹೇಳೋದು. ಹೆಚ್ಚಿನ ಮಾರುಕಟ್ಟೆಗಾಗಿ ನೀವು ಸೋಷಿಯಲ್ ಮೀಡಿಯಾವನ್ನು ಯಾವುದೇ ಹಿಂಜರಿಕೆ ಇಲ್ಲದೆ ಒಳ್ಳೆಯ ರೀತಿಯಲ್ಲಿ ಬಳಸಿರಿ. ಉದಾಹಣೆಗೆ ವಾಟ್ಸಾಪ್ ಫೇಸ್ಬುಕ್ ಹಾಗೂ ಇವೆರಡರ ಸ್ಟೇಟಸ್…