ತರಕಾರಿ ಬೆಲೆಗಳಲ್ಲಿ ಏರಿಳಿತ ಸಾಮಾನ್ಯ. ಒಮ್ಮೊಮ್ಮೆ ಈರುಳ್ಳಿ ಗ್ರಾಹಕರ ಕಣ್ಣಲ್ಲಿ ನೀರು ಸುರಿಸಿದ್ರೆ, ಮತ್ತೊಮ್ಮೆ ಕೆಂಪು ಮೆಣಸಿನಕಾಯಿ ಘಾಟು ಭಾರಿ ಏರಿರುತ್ತದೆ. ಈ ಬಾರಿ ಟೊಮೆಟೋ ಬೆಲೆ ಏರಿಕೆಯ ಕಾಲ. ಬೆಲೆ ಜಾಸ್ತಿಯಾದಾಗಲೆಲ್ಲಾ ನಮ್ಮನ್ನು ಆಳುವ ಸರ್ಕಾರವೇ ಸಹಾಯಕ್ಕೆ ಬರಬೇಕೇ ವಿನಃ ಮತ್ತಾರು ಅಲ್ಲ. ಶತಕದ ಗಡಿ ದಾಟಿ ದ್ವಿಶತಕದತ್ತ ಮುನ್ನುಗ್ಗುತ್ತಿರುವ ಟೊಮೇಟೊ ಬೆಲೆ ಶ್ರೀಸಾಮಾನ್ಯನಿಗೆ ಹೊರೆಯಾಗಿ ಪರಿಣಮಿಸಿದೆ. ಗ್ರಾಹಕರ ಹೊರೆ ಇಳಿಸಲು ಇದೀಗ ಕೇಂದ್ರ ಸರ್ಕಾರ ಮುಂದಾಗಿದೆ.
ಕೇಂದ್ರ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯವು ಆಂಧ್ರಪ್ರದೇಶ, ಕರ್ನಾಟಕ ಮತ್ತು ಮಹಾರಾಷ್ಟ್ರದ ಮಂಡಿಗಳಿಂದ ಸಂಗ್ರಹಿಸಲಾದ ಟೊಮೆಟೊಗಳನ್ನು ಕಳೆದ ತಿಂಗಳಲ್ಲಿ ತೀವ್ರವಾಗಿ ಬೆಲೆ ಏರಿಕೆ ಆಗಿರುವ ಪ್ರದೇಶಗಳಲ್ಲಿ ವಿತರಿಸಲು ಸೂಚಿಸಿದೆ. ಈ ಶುಕ್ರವಾರದ ವೇಳೆಗೆ, ದೆಹಲಿ-ಎನ್ಸಿಆರ್ ಪ್ರದೇಶದ ಗ್ರಾಹಕರು ರಿಯಾಯಿತಿ ದರದಲ್ಲಿ ಟೊಮೆಟೊಗಳನ್ನು ಸಿಗಲಿವೆ.
ಕಳೆದ ತಿಂಗಳು ಭಾರತದಲ್ಲಿ ಚಿಲ್ಲರೆ ಬೆಲೆಗಳು ಸರಾಸರಿಗಿಂತ ಹೆಚ್ಚಿರುವ ಪ್ರದೇಶಗಳಿಗೆ ಟೊಮ್ಯಾಟೊಗಳನ್ನು ಸರಬರಾಜು ಮಾಡಲಾಗುವುದು ಎಂದು ಗ್ರಾಹಕ ವ್ಯವಹಾರಗಳ ಇಲಾಖೆ ತಿಳಿಸಿದೆ. ಕೇಂದ್ರ ಸರ್ಕಾರ ಗುರುತಿಸಿರುವ ಕೇಂದ್ರಗಳ ಪೈಕಿ ಅತಿ ಹೆಚ್ಚು ಟೊಮೆಟೊ ಬಳಕೆ ಇರುವ ಪ್ರದೇಶಗಳನ್ನು ಗುರುತಿಸಲು ಹೊರಟಿದೆ. ದೇಶದ ಎಲ್ಲಾ ರಾಜ್ಯಗಳಲ್ಲಿ ಟೊಮೆಟೊ ಬೆಳೆಯಲಾಗುತ್ತದೆ. ಆದಾಗ್ಯೂ, ಭಾರತದ ದಕ್ಷಿಣ ಮತ್ತು ಪಶ್ಚಿಮ ಭಾಗಗಳಲ್ಲಿ ಬೆಳೆ ಇಳುವರಿ ಹೆಚ್ಚಿರುತ್ತದೆ. ಇದು ಭಾರತದ ಒಟ್ಟು ಉತ್ಪಾದನೆಯ 56-58% ರಷ್ಟಿದೆ. ದಕ್ಷಿಣ ಮತ್ತು ಪಶ್ಚಿಮದ ರಾಜ್ಯಗಳು ಇತರೆ ರಾಜ್ಯಗಳು ಋತುವಿನ ಆಧಾರದ ಮೇಲೆ ಇತರ ಮಾರುಕಟ್ಟೆಗಳಿಗೆ ಟೊಮೆಟೊಗಳನ್ನು ಪೂರೈಸುತ್ತವೆ.
ಟೊಮೆಟೊ ಉತ್ಪಾದನೆಯ ಋತುಗಳು ಪ್ರದೇಶದಿಂದ ಪ್ರದೇಶಕ್ಕೆ ಭಿನ್ನವಾಗಿರುತ್ತವೆ. ಗರಿಷ್ಠ ಸುಗ್ಗಿಯ ಅವಧಿಯು ಡಿಸೆಂಬರ್ನಿಂದ ಫೆಬ್ರವರಿವರೆಗೆ ಇರುತ್ತದೆ. ಜುಲೈ-ಆಗಸ್ಟ್ ಮತ್ತು ಅಕ್ಟೋಬರ್-ನವೆಂಬರ್ ಸಾಮಾನ್ಯವಾಗಿ ಕಡಿಮೆ ಟೊಮೆಟೊ ಉತ್ಪಾದನೆಯ ತಿಂಗಳುಗಳಾಗಿವೆ. ಆದರೆ ಜುಲೈನಲ್ಲಿ ಮಳೆಯಾಗುವುದರಿಂದ ಬೆಳೆದ ಟೊಮೆಟೊ ಸಾಗಿಸಲು ಕಷ್ಟವಾಗುತ್ತದೆ. ಪರಿಣಾಮವಾಗಿ, ಉತ್ಪಾದನೆಯ ಹೊರತಾಗಿಯೂ ಬೆಲೆಗಳು ಏರಿಕೆ ಸಂಭವಿಸುತ್ತದೆ. ನಾಟಿ ಮತ್ತು ಕೊಯ್ಲು ಅವಧಿಗಳು ಪ್ರದೇಶದಿಂದ ಪ್ರದೇಶಕ್ಕೆ ಭಿನ್ನವಾಗಿರುತ್ತವೆ. ಇದೂ ಕೂಡ ಟೊಮೆಟೊ ಬೆಲೆ ಏರಿಕೆಗೆ ಕಾರಣ ಎನ್ನಲಾಗಿದೆ. ಟೊಮ್ಯಾಟೊ ಸಾಗಣೆಯಲ್ಲಿ ತಾತ್ಕಾಲಿಕ ಅಡಚಣೆಗಳು ಮತ್ತು ಪ್ರತಿಕೂಲ ಹವಾಮಾನ ಪರಿಸ್ಥಿತಿಗಳಿಂದ ಆಗುವ ಬೆಳೆ ನಷ್ಟವೂ ಸಹ ಬೆಲೆಯಲ್ಲಿ ಹಠಾತ್ ಏರಿಕೆಗೆ ಕಾರಣವಾಗಬಹುದು.
ಪ್ರಸ್ತುತ, ಗುಜರಾತ್, ಮಧ್ಯಪ್ರದೇಶ ಮತ್ತು ಇತರ ರಾಜ್ಯಗಳಲ್ಲಿನ ಮಾರುಕಟ್ಟೆಗಳಿಗೆ ಹೆಚ್ಚಾಗಿ ಮಹಾರಾಷ್ಟ್ರದಿಂದ ಸರಬರಾಜು ಮಾಡಲಾಗುತ್ತಿದೆ. ವಿಶೇಷವಾಗಿ ಸತಾರಾ, ನಾರಾಯಣಗಾಂವ್ ಮತ್ತು ನಾಸಿಕ್ನಿಂದ ಈ ತಿಂಗಳ ಅಂತ್ಯದವರೆಗೆ ಟೊಮೆಟೊಗಳು ಬರುವ ನಿರೀಕ್ಷೆಯಿದೆ. ಆಂಧ್ರಪ್ರದೇಶದ ಮದನಪಲ್ಲಿಯಲ್ಲೂ ಟೊಮೆಟೊ ಚೆನ್ನಾಗಿ ಬರುವ ನಿರೀಕ್ಷೆ ಇದೆ.
ಹಿಮಾಚಲ ಪ್ರದೇಶ ಮತ್ತು ಕರ್ನಾಟಕದ ಕೋಲಾರದಿಂದ ದೆಹಲಿ-ಎನ್ಸಿಆರ್ಗೆ ಟೊಮೆಟೊಗಳನ್ನು ಸಾಗಿಸಲಾಗುತ್ತದೆ. ನಾಸಿಕ್ ಜಿಲ್ಲೆಯಿಂದ ಶೀಘ್ರದಲ್ಲೇ ಹೊಸ ಬೆಳೆಗಳು ಬರುವ ಸಾಧ್ಯತೆಯಿದೆ. ಇದಲ್ಲದೆ, ಆಗಸ್ಟ್ನಲ್ಲಿ ನಾರಾಯಣಗಾಂವ್ ಮತ್ತು ಔರಂಗಾಬಾದ್ ಬೆಲ್ಟ್ನಿಂದ ಹೆಚ್ಚುವರಿ ಪೂರೈಕೆ ಬರುವ ಸಾಧ್ಯತೆಯಿದೆ. ಹಾಗಾಗಿ ಶೀಘ್ರದಲ್ಲಿ ಬೆಲೆ ಇಳಿಕೆಯಾಗುವ ನಿರೀಕ್ಷೆ ಇದೆ.
(ಕೃಪೆ :ಅಂತರ್ಜಾಲ )