ಯಾವುದೇ ಹಳ್ಳಿಗಳಿಗೆ ಹೋದರೆ ಕಾಡುವ ಸಮಸ್ಯೆ ಮೊಬೈಲ್ ನೆಟ್ವರ್ಕ್…!. ಅದರಲ್ಲೂ ಕಳೆದ ಕೊರೋನಾ ಸಮಯದಲ್ಲಿ ವರ್ಕ್ ಫ್ರಮ್ ಹೋಮ್ ಅಂತ ಹಳ್ಳಿಗೆ ಬಂದವರಿಗೆಲ್ಲಾ ತಲೆನೋವಾಗಿತ್ತು. ಆಗಲೇ ವಾಸ್ತವ ಬೆಳಕಿಗೆ ಬಂದಿತ್ತು ಕೂಡಾ.ಈಗ ಪ್ರತಿಯೊಂದು ಗ್ರಾಮಗಳಿಗೂ ಮೊಬೈಲ್ ನೆಟ್ವರ್ಕ್ ಕಲ್ಪಿಸುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಜಾರಿಗೆ ತಂದಿರುವ ನೂತನ ಯೋಜನೆ ಅನ್ವಯ ದೇಶಾದ್ಯಂತ ಲಕ್ಷಾಂತರ ಹಳ್ಳಿಗಳಲ್ಲಿ ನೆಟ್ವರ್ಕ್ ಸಮಸ್ಯೆಯನ್ನು ನಿವಾರಿಸಲು ಮುಂದಾಗಿದೆ. ಈ ಯೋಜನೆಯಡಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಗ್ರಾಮಗಳು ಸೇರಿದ್ದು, ಬಿಎಸ್ಎನ್ಎಲ್ 4ಜಿ ಟವರ್ ನಿರ್ಮಾಣಗೊಳ್ಳಲಿದೆ.
ಇದರಿಂದಾಗಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಗಳ ಕುಗ್ರಾಮಗಳಿಗೂ ಬಿಎಸ್ಎನ್ಎಲ್ ಸೇವೆ ಸಿಗಲಿದ್ದು, ಜೊತೆಗೆ 4ಜಿ ನೆಟ್ವರ್ಕ್ ಸೇವೆ ಸಿಗಲಿದೆ. ಎಲ್ಲೆಲ್ಲಾ ಅವಶ್ಯಕತೆ ಇದೆಯೋ ಅಲ್ಲೆಲ್ಲ ಖಾಸಗಿ ಕಂಪೆನಿ ಮೂಲಕ ಟವರ್ ನಿರ್ಮಾಣ ನಡೆಯಲಿದೆ. ಈಗಾಗಲೇ ಇದಕ್ಕೆ ಸಂಬಂಧಿಸಿದ ಪರಿಶೀಲನೆ ಎಲ್ಲವೂ ನಡೆದಿದ್ದು, ನಿರ್ಮಾಣ ಕಾಮಗಾರಿ ನಡೆಯಲಿದೆ. ಜೊತೆಗೆ ಈಗಾಗಲೇ ಇರುವ ಟವರ್ಗಳಿಗೆ ಮತ್ತೆ ಪುನರುಜ್ಜೀವನ ನೀಡಲಾಗುತ್ತದೆ. ಹೊಸದಾಗಿ 4ಜಿ ಟವರ್ ನಿರ್ಮಿಸಲಿರುವ ಕೇಂದ್ರ ಸರಕಾರ, ಮುಂದೆ ಅದನ್ನೇ 5ಜಿ ಗೆ ಪರಿವರ್ತಿಸಲಿದೆ ಎಂದು ಖಾಸಗಿ ಪತ್ರಿಕೆಯೊಂದು ವರದಿ ಮಾಡಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕೈಲಾರು, ಹಂಚಿಕಟ್ಟ, ಬೋಳಂತೂರು, ಕೇಶವ ನಗರ, ಕುರಿಯಾಲು, ಅಬ್ಬೆಟ್ಟು, ನಾಟೆಕಲ್. ಬೆಳ್ತಂಗಡಿ ತಾಲೂಕಿನ ಪೆರಾಡಿ, ಅಣಿಯೂರು, ಬದನಾಜೆ, ನಿಟ್ಟಡ್ಕ, ಬರೆಂಗಾಯ, ಚಾರ್ಮಾಡಿ ಕಾಂಜಾಲ್, ಮಾಲಾಡಿ ಕರಿಯಬೆ, ಕೆಮ್ಮಟೆ, ಕೊಡಿಯಾಲ್ ಬೈಲು, ಕೊಲ್ಪಾಡಿ, ಕುಪ್ಲೊಟ್ಟು, ಬೈಪಾಡಿ, ಮುಂಡೂರು, ಪೆರ್ನಡ್ಕ, ಮಿಯಲಾಜೆ, ಎಳನೀರು, ಪೆರ್ಲ. ಕಡಬ ತಾಲೂಕಿನ ಕುಡೂರು, ಒಲಕಡಮೆ, ಮಂಜುನಾಥ ನಗರ, ಉಳಿಪ್ಪು, ಕಲ್ಲಪ್ಪಾರು, ಮಂಜೋಲಿ ಮಲೆ, ಆಲಂತಾಯ, ಬೆತ್ತಾಡಿ, ಬೋಲ್ಪಾಡಿ, ಸುರುಳಿ, ಪುತ್ತಿಗೆ, ಸಿರಿಬಾಗಿಲು.
ಮಂಗಳೂರು ತಾಲೂಕಿನ ಒಡೂರು, ಮೂಡುಬಿದಿರೆ ತಾಲೂಕಿನ ಕೇಮಾರು, ಪಡುಮಾರ್ನಾಡಿನ ಮೂರುಗೋಳಿ. ಪುತ್ತೂರು ತಾಲೂಕಿನ ಕೊರಂಬಡ್ಕ, ಕುವೆಚ್ಚಾರು, ದೂಮಡ್ಕ, ಎಟ್ಯಡ್ಕ, ಗುತ್ತಿಕಲ್ಲು, ನೆಟ್ಟಣಿಗೆ.
ಸುಳ್ಯ ತಾಲೂಕಿನ ಕಂದ್ರಪಾಡಿ, ದೇವ, ಗಬ್ಬಲಡ್ಕ, ಸೋಣಂಗೇರಿ, ಪೆರಂಗೋಡಿ, ದೇರಾಜೆ, ಪೇರಾಲು, ಮಡಪ್ಪಾಡಿ ಗುಡ್ಡೆ ಮನೆ, ಬಾಳುಗೋಡು, ಆಚಳ್ಳಿ, ಚಿಕ್ಕಿನಡ್ಕ, ಬಡ್ಡಡ್ಕ, ಬಾಂಜಿಕೋಡಿ, ಬೊಳ್ಳಾಜೆ, ಜೀರ್ಮುಕ್ಕಿ, ಕಟ್ಟ, ಕೊಪ್ಪಡ್ಕ, ಕೋನಡ್ಕ, ಕೂರ್ನಡ್ಕ, ಕೂತ್ಕುಂಜ, ಕುತ್ತಮೊಟ್ಟೆ, ಅಜ್ಜಾವರ, ಮುಳ್ಯ, ನಾರ್ಣಕಜೆ ಸ್ಥಳಗಳಲ್ಲಿ ಟವರ್ ನಿರ್ಮಾಣಗೊಳ್ಳಲಿದೆ.
ಉಡುಪಿ ಜಿಲ್ಲೆಯ ಪಂಚನಬೆಟ್ಟು, ಕಾರ್ಕಳ ತಾಲೂಕಿನ ಕೌಡೂರು, ಮಾಳ ಹುಕ್ರಟ್ಟೆ, ಮುಟ್ಲುಪಾಡಿ, ನೂರಾಲ್ಬೆಟ್ಟು, ಕಾಂತಾವರದ ಬೆಲ್ಲಾಡಿ, ಬೈಂದೂರಿನ ನಾಗರಮಕ್ಕಿ, ಗಂಗನಾಡು, ಮೂಡನಗದ್ದೆ, ಬೊಳ್ಳಂಬಳ್ಳಿ, ಚುಚ್ಚಿ, ಕೊಲ್ಲೂರು ದಳಿ, ಜಡ್ಕಲ್ ಬಸ್ರಿಬೇರು, ಇಡೂರು ಕುಕ್ಕಡ, ಬರದಕಲ್ಲು, ಬೆಳ್ಳಾಲ ಊರುಬೈಲ್, ನಂದೊಳ್ಳಿ, ಹಳ್ಳಿಹೊಳೆಯ ಇರಿಗೆ, ಕುಂದನ ಬೈಲು, ಕಬ್ಬಿನಾಲೆ.
ಕುಂದಾಪುರ ತಾಲೂಕಿನ ಆರ್ಗೋಡು, ಎಳೆಬೇರು, ಬೆಚ್ಚಳ್ಳಿ, ಸಿದ್ದಾಪುರದ ಐರಬೈಲು, ಸೋಣಿ, ಹೆಬ್ರಿಯ ಬೆರ್ಪಿ, ಮಡಾಮಕ್ಕಿ, ಕರ್ಜೆ ಕುರ್ಪಾಡಿ, ಕಾಸನಮಕ್ಕಿಗಳಲ್ಲಿ ಟವರ್ ಸ್ಥಾಪನೆ ಆಗಲಿದೆ. ಹೀಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 66 ಹಾಗೂ ಉಡುಪಿ ಜಿಲ್ಲೆಯಲ್ಲಿ 36 ಕಡೆಗಳಲ್ಲಿ ಟವರ್ ನಿರ್ಮಾಣ ಕಾಮಗಾರಿ ನಡೆಯಲಿದೆ. ಅರಣ್ಯ ಪ್ರದೇಶದ ಅಂಚಿನ ಪ್ರದೇಶಗಳಲ್ಲಿಯೇ ಬಹುತೇಕ ಟವರ್ ನಿರ್ಮಾಣ ಕಾಮಗಾರಿ ನಡೆಯಲಿದೆ. ಈಗಾಗಲೇ ಉಡುಪಿಯಲ್ಲಿ 27 ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 2 ಬಿಎಸ್ಎನ್ಎಲ್ 4ಜಿ ಟವರ್ಗಳು ಪೂರ್ಣಗೊಂಡಿದೆ ಎಂದು ವರದಿಯು ತಿಳಿಸಿದೆ.
ಒಟ್ಟಿನಲ್ಲಿ ಕರಾವಳಿ ಅಷ್ಟೇ ಅಲ್ಲದೇ ದೇಶಾದ್ಯಂತ ಬಿಎಸ್ಎನ್ಎಲ್ ಮತ್ತೆ ತನ್ನ ಗತ ವೈಭವಕ್ಕೆ ಮರಳಲು ಸಿದ್ಧವಾಗಿದೆ. ಅನೇಕ ಹಳ್ಳಿಗಳಲ್ಲಿ ಇಂದಿಗೂ ಸರಿಯಾದ ನೆಟ್ವರ್ಕ್ ಇಲ್ಲ. ಖಾಸಗಿ ಸಂಸ್ಥೆಗಳು ಲಾಭ ರಹಿತವಾಗಿದ್ದರೆ ಸೇವೆಯನ್ನೂ ಸ್ಥಗಿತಗೊಳಿಸುತ್ತವೆ. ಆದರೆ ಗ್ರಾಮೀಣ ಭಾಗಗಳಲ್ಲಿ ಅರಣ್ಯ ಹಾಗೂ ಕೃಷಿ ಪ್ರದೇಶಗಳು ಹೆಚ್ಚಿರುವುರಿಂದ ನಿರೀಕ್ಷಿತ ಪ್ರಮಾಣದ ಆದಾಯ ಇರುವುದಿಲ್ಲ. ಹೀಗಾಗಿ ಇಲ್ಲಿ ಸೇವೆಯ ಭಾಗವೂ ಅಗತ್ಯವಿದೆ. ಹೀಗಾಗಿ ಹಳ್ಳಿಗಳಲ್ಲಿ ಬಿಎಸ್ ಎನ್ಎಲ್ ಸೇವೆಗೆ ಹೆಚ್ಚಿನ ಮಹತ್ವ ಇದೆ. ಈಗ ಕೇಂದ್ರ ಸರ್ಕಾರದ ಈ ನಿರ್ಧಾರವು ಹಳ್ಳಿ ಪ್ರದೇಶದಲ್ಲಿ ನಿರೀಕ್ಷೆಯನ್ನು ಹೆಚ್ಚಿಸಿದೆ.