ಕೇರಳವು ಭಾರತದ ಅತಿದೊಡ್ಡ ರಬ್ಬರ್ ಉತ್ಪಾದಿಸುವ ರಾಜ್ಯವಾಗಿದ್ದಾರೆ. ರಬ್ಬರ್ ಬೆಳೆಗಾರರು ಈ ಬಾರಿಯೂ ಸಂಕಷ್ಟ ಅನುಭವಿಸುತ್ತಿದ್ದಾರೆ. ಈ ಬಾರಿ ಟ್ಯಾಪಿಂಗ್ ಕೊರತೆ ಹಾಗೂ ಬೇಗನೆ ಮುಂಗಾರು ಆರಂಭವಾದ ಹಿನ್ನೆಲೆಯಲ್ಲಿ ಪ್ಲಾಸ್ಟಿಕ್ ಹೊದಿಕೆ ಹಾಕಿಸಲಾಗದೆ ಸಂಕಷ್ಟ ಅನುಭವಿಸಿದ್ದಾರೆ. ಕೇರಳದಲ್ಲಿ ಸುಮಾರು ಒಂದು ಲಕ್ಷ ಹೆಕ್ಟೇರ್ ಪ್ರದೇಶದ ರಬ್ಬರ್ ತೋಟದಲ್ಲಿ ಟ್ಯಾಪಿಂಗ್ ಸ್ಥಗಿತವಾಗಿದೆ.
ರಬ್ಬರ್ ಉದ್ಯಮವು ಇಂದು ಸಾಕಷ್ಟು ವಿಸ್ತರಣೆಯಾಗುತ್ತಿದೆ, ಬೆಳೆಯುತ್ತಿದೆ. ದೇಶೀಯ ರಬ್ಬರ್ ಬೆಳೆಗಾರರಿಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ಪ್ರಯತ್ನ ನಡೆಯುತ್ತಿದೆ. ಇನ್ನೊಂದು ಕಡೆ ಈಶಾನ್ಯ ರಾಜ್ಯಗಳಲ್ಲೂ ರಬ್ಬರ್ ಬೆಳೆಗೆ ಪ್ರೋತ್ಸಾಹ ನೀಡಲಾಗುತ್ತಿದೆ. ದೇಶದ ಒಟ್ಟು ರಬ್ಬರ್ ಉತ್ಪಾದನೆಯಲ್ಲಿ 90% ಕ್ಕಿಂತ ಹೆಚ್ಚು ಕೊಡುಗೆ ಕೇರಳದಿಂದ ನೀಡಲಾಗುತ್ತಿದೆ. ಕೇರಳದಲ್ಲಿ ದೊಡ್ಡ ಪ್ಲಾಂಟೇಶನ್‌ನಿಂದ ತೊಡಗಿ ಸಣ್ಣ ರಬ್ಬರ್ ಹಿಡುವಳಿದಾರರವರೆಗೂ ಕೃಷಿಕರು ಇದ್ದಾರೆ. ಕಳೆದ ಎರಡು ವರ್ಷಗಳಿಂದ ರಬ್ಬರ್ ಬೆಳೆಗಾರರು ಸಂಕಷ್ಟ ಅನುಭವಿಸುತ್ತಿದ್ದಾರೆ. ಬೇಸಗೆಯಲ್ಲಿ ಹವಾಮಾನ ವೈಪರೀತ್ಯದ ಕಾರಣದಿಂದ ರಬ್ಬರ್ ಹಾಲಿನ ಇಳುವರಿಯಲ್ಲಿ ಕೊರತೆ ಕಂಡುಬಂದಿತ್ತು. ಅದಾದ ಬಳಿಕ ಮಳೆಗಾಲದಲ್ಲೂ ಹಾಲಿನ ಇಳುವರಿ ಕಡಿಮೆಯಾಗಿತ್ತು. ಈ ಬಾರಿ ಮುಂಗಾರು ಬೇಗನೆ ಆರಂಭವಾದ್ದರಿಂದ ಹಲವು ಕಡೆ ಪ್ಲಾಸ್ಟಿಕ್ ಹೊದಿಕೆ ಹಾಕಲು ಸಾಧ್ಯವಾಗಲಿಲ್ಲ. ಅದರ ಜೊತೆಗೆ ವಯಸ್ಸಾದ ಮರಗಳು ಮತ್ತು ಟ್ಯಾಪರ್‌ಗಳ ಕೊರತೆಯ ಕಾರಣದಿಂದ ಕೇರಳದಲ್ಲಿ ಹೆಚ್ಚಿನ ಪ್ರಮಾಣದ ರಬ್ಬರ್ ತೋಟಗಳು ಟ್ಯಾಪಿಂಗ್ ಮಾಡದೆ ಉಳಿದಿವೆ. ಆಟೋಮೋಟಿವ್ ಟೈರ್ ತಯಾರಕರ ಸಂಘ (ಎಟಿಎಂಎ) ಪ್ರಕಾರ, ಕೇರಳದಲ್ಲಿ ಸುಮಾರು 100,000 ಹೆಕ್ಟೇರ್ ರಬ್ಬರ್ ತೋಟಗಳು ರಬ್ಬರ್ ಟ್ಯಾಪಿಂಗ್ ಮಾಡದೇ ಉಳಿದಿವೆ. ಇದಕ್ಕೆ ಪ್ರಮುಖ ಕಾರಣ ಹಳೆಯದಾಗಿರುವ ರಬ್ಬರ್ ಮರಗಳು, ರಬ್ಬರ್ ತೋಟದ ಮಾಲೀಕರು ವಿದೇಶಗಳಿಗೆ ವಲಸೆ ಹೋಗಿರುವುದು ಮತ್ತು ರಬ್ಬರ್ ಟ್ಯಾಪರ್‌ಗಳ ಕೊರತೆ ಪ್ರಮುಖ ಕಾರಣವಾಗಿದೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ. ಈಗ ಕರ್ನಾಟಕ ಸೇರಿದಂತೆ ದೇಶದ ವಿವಿದೆಡೆ ಸುಮಾರು 2,00,000 ಹೆಕ್ಟೇರ್ ರಬ್ಬರ್ ಕೃಷಿ ಪ್ರದೇಶವು ಟ್ಯಾಪಿಂಗ್ ಮಾಡದೇ ಉಳಿದುಕೊಂಡಿದೆ.
ದೇಶವು ವಾರ್ಷಿಕವಾಗಿ ರಬ್ಬರ್ ಬೇಡಿಕೆಯ 40-45% ಆಮದು ಮಾಡಿಕೊಳ್ಳುತ್ತಿದೆ, ಅಂದರೆ ಸುಮಾರು 1.4 ಮಿಲಿಯನ್ ಟನ್‌ಗಳೆಂದು ಅಂದಾಜಿಸಲಾಗಿದೆ ಎಂದು ಆರು ಪ್ರಮುಖ ಭಾರತೀಯ ಟೈರ್ ಕಂಪನಿಗಳ ಪ್ರತಿನಿಧಿ ಸಂಸ್ಥೆಯ ಅಧಿಕಾರಿಗಳು ಹೇಳುತ್ತಾರೆ. ಈ ಕೊರತೆಯನ್ನು ನೀಗಿಸಲು ನಾಲ್ಕು ಪ್ರಮುಖ ಎಟಿಎಂಎ ಸದಸ್ಯ ಕಂಪನಿಗಳಿಂದ 1,100 ಕೋಟಿ ರೂ.ಗಳ ಬೆಂಬಲದೊಂದಿಗೆ ರಬ್ಬರ್ ತೋಟಗಳ ವಿಸ್ತರಣೆಗೆ ಮುಂದಾಗಿದ್ದವು. ಸುಮಾರು 2, 00,000 ಹೆಕ್ಟೇರ್‌ಗಳಷ್ಟು ವಿಸ್ತರಿಸುವ ಮತ್ತು ಮೂಲಸೌಕರ್ಯ ಒದಗಿಸುವ ಗುರಿಯನ್ನು ಹೊಂದಿದೆ. ಈ ಪ್ರಯತ್ನಗಳ ಹೊರತಾಗಿಯೂ, ಭವಿಷ್ಯದಲ್ಲಿ ರಬ್ಬರ್ ಬೇಡಿಕೆಯನ್ನು ಪೂರೈಸಲು ಹೆಚ್ಚಿಸಲು ಪ್ರಯತ್ನ ನಡೆಯಬೇಕಾಗಿದೆ. ರಬ್ಬರ್ ಬೇಡಿಕೆಯು 2030 ರ ವೇಳೆಗೆ 2 ಮಿಲಿಯನ್ ಟನ್‌ಗಳನ್ನು ತಲುಪುವ ನಿರೀಕ್ಷೆಯಿದೆ. ಇದಕ್ಕಾಗಿ ಈಗಲೇ ಪ್ರಯತ್ನಗಳು ನಡೆಯುತ್ತಿದೆ. ಈ ನಡುವೆ ಹವಾಮಾನ ಹಾಗೂ ಟ್ಯಾಪರ್ ಕೊರತೆಯು ರಬ್ಬರ್ ಉದ್ಯಮದ ಮೇಲೂ ಪರಿಣಾಮ ಬೀರುತ್ತಿದೆ.