ವರ್ಷದ ಮೊದಲ ಚಂಡಮಾರುತ ದೇಶದ ಕರಾವಳಿ ಜಿಲ್ಲೆಗಳಿಗೆ ಅಪ್ಪಳಿಸಲಿದೆ. ಮ್ಯಾನ್ಮಾರ್ ಈ ಚಂಡಮಾರುತಕ್ಕೆ “ಟೌಕ್ಟೇ” (Tauktae) ಎಂದು ಹೆಸರು ಇರಿಸಿದೆ.
ಮೇ 16ರಂದು ಅರಬ್ಬಿ ಸಮುದ್ರದಲ್ಲಿ ಚಂಡಮಾರುತದ ಪ್ರಭಾವ ಹೆಚ್ಚಾಗಿ ಕರ್ನಾಟಕ, ಕೇರಳ, ತಮಿಳುನಾಡು ಸೇರಿದಂತೆ ಕರಾವಳಿ ಜಿಲ್ಲೆಗಳಲ್ಲಿ ಭಾರಿ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆಯನ್ನು ನೀಡಿದೆ. ಈಗಾಗಲೇ ಮ್ಯಾನ್ಮಾರ್ ತನ್ನ ದೇಶದಲ್ಲಿ ಹೈ ಅಲರ್ಟ್ ಘೋಷಣೆ ಮಾಡಿದ್ದು ಮಹಾರಾಷ್ಟ್ರ, ಗುಜರಾತ್ ಮತ್ತು ಕೇರಳದ ಕಡೆಗೆ ಈ ಚಂಡಮಾರುತ ಸಾಗುತ್ತಿದೆ ಎಂದು ತಿಳಿಸಿದೆ.
ಮೇ.13 ರಿಂದ ಮೇ 16 ರವರೆಗೆ ಲಕ್ಷದ್ವೀಪ, ಕೇರಳ, ಕರ್ನಾಟಕ ಮತ್ತು ತಮಿಳುನಾಡಿನಲ್ಲಿ ಮಳೆಯಾಗುವ ಸಾಧ್ಯತೆ ಇದ್ದು ಮೇ 14 ರ ಹೊತ್ತಿಗೆ ಆಗ್ನೇಯ ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತವಾಗಿ ಕಡಿಮೆ ಒತ್ತಡದ ಪ್ರದೇಶವಾಗುವ ಸಾಧ್ಯತೆ ಇದೆ. ಮೇ 16 ರ ಸುಮಾರಿಗೆ ಚಂಡಮಾರುತದ ಪ್ರಭಾವ ತೀವ್ರವಾಗಬಹುದು ಎಂದು ಭಾರತೀಯ ಹವಾಮಾನ ಇಲಾಖೆ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.
ಮೇ 15 ರಂದು ಗೋವಾ ಮತ್ತು ಮಹಾರಾಷ್ಟ್ರದಲ್ಲಿ ಸಮುದ್ರದ ಅಬ್ಬರ ಹೆಚ್ಚಾಗಲಿದ್ದು ಗಂಟೆಗೆ 40 ರಿಂದ 60 ಕಿ.ಮೀ ವೇಗದಿಂದ ಲಕ್ಷದ್ವೀಪ, ಮಾಲ್ಡೀವ್ಸ್ ಪ್ರದೇಶಗಳಿಗೆ ಅಪ್ಪಳಿಸಲಿದೆ. ಕೇರಳ, ಗೋವಾ, ಕರ್ನಾಟಕ ಮತ್ತು ಮಹಾರಾಷ್ಟ್ರದ ಕರಾವಳಿ ತೀರಗಳಲ್ಲಿ ಭಾನುವಾರದವರೆಗೆ ಇದೇ ರೀತಿಯಲ್ಲಿ ಗಾಳಿ ಬೀಸುತ್ತವೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.
ಹೀಗಾಗಿ ಕರಾವಳಿ ಭಾಗದಲ್ಲಿ ಮುಂದಿನ ಒಂದು ವಾರಗಳ ಕಾಲ ಸಮುದ್ರಕ್ಕಿಳಿಯದಂತೆ ಎಚ್ಚರಿಕೆ ನೀಡಲಾಗಿದೆ. ಮಹಾರಾಷ್ಟ್ರ, ಕರ್ನಾಟಕ, ಕೇರಳ, ಗೋವಾದ ಸಮುದ್ರ ತೀರಗಳಲ್ಲಿ ಗಾಳಿ ಬೀಸುವ ನಿರೀಕ್ಷೆ ಇದ್ದು ಮುಂದಿನ ಒಂದು ವಾರಗಳ ಕಾಲ ಮುಂಜಾಗ್ರತೆ ವಹಿಸಲು ಇಲಾಖೆ ಸೂಚಿಸಿದೆ.