ದಕ್ಷಿಣ ಕನ್ನಡ ಜಿಲ್ಲೆಗೆ ಮುಂಗಾರು ಜೂನ್ 4ಕ್ಕೆ ಮುಂಗಾರು ಪ್ರವೇಶವಾಗಲಿದ್ದು, ಜೂನ್ 1ಕ್ಕೆ ಪ್ರಾಕೃತಿಕ ವಿಕೋಪ ಎದುರಿಸಲು ಎಲ್ಲಾ ರೀತಿಯ ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡು ಸನ್ನದ್ದ ಸ್ಥಿತಿಯಲ್ಲಿರಲಾಗುವುದು ಎಂದು ದಕ ಜಿಲ್ಲಾಧಿಕಾರಿ ರವಿಕುಮಾರ್ ಎಂ. ಆರ್ ಹೇಳಿದ್ದಾರೆ.
ಸೋಮವಾರ ಮಂಗಳೂರು ನಗರದ ಕದ್ರಿಯ ಸಕ್ರ್ಯೂಟ್ ಹೌಸ್ ನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮುಂಗಾರು ಪೂರ್ವ ಸಿದ್ಧತೆ ಕುರಿತಂತೆ ರಾಜ್ಯ ವಿಧಾನ ಸಭೆಯ ಸಭಾಧ್ಯಕ್ಷರಾದ ಯು.ಟಿ. ಖಾದರ್ ಅಧ್ಯಕ್ಷತೆಯಲ್ಲಿ ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾತನಾಡಿದರು.ಈ ಹಿಂದೆ ಜಿಲ್ಲೆಯಲ್ಲಿ ಜರುಗಿದ ಪ್ರಾಕೃತಿಕ ವಿಕೋಪ ವಿಕೋಪಗಳ ಆಧಾರದ ಮೇಲೆ ಈಗಾಗಲೇ 87 ಕಾಳಜಿ ಕೇಂದ್ರಗಳನ್ನು ಗುರುತಿಸಲಾಗಿದೆ, ಸಂತ್ರಸ್ತರ ಸ್ಥಳಾಂತರ ಸೇರಿದಂತೆ ಅಲ್ಲಿ ಊಟ, ಉಪಹಾರ ಸೇರಿದಂತೆ ಎಲ್ಲಾ ರೀತಿಯ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸಲು ವ್ಯವಸ್ಥೆ ಮಾಡಿಕೊಳ್ಳಲಾಗಿದೆ, ಎಸ್ ಡಿ ಆರ್ ಎಫ್ ನ ತಂಡಗಳು ಸಿದ್ದವಿದ್ದು, ಎನ್ ಡಿ ಆರ್ ಎಫ್ ತಂಡ ಆಗಮಿಸಬೇಕಿದೆ ಎಂದರು. ವಿಕೋಪ ಅಥವಾ ಪ್ರವಾಹದಿಂದ ಹಾನಿಯಾದರೆ ಕೂಡಲೇ ಪರಿಹಾರ ನೀಡಲು ಜಿಲ್ಲೆಯ ಎಲ್ಲಾ ತಹಶೀಲ್ದಾರರಿಗೆ ಮೂರುವರೆ ಕೋಟಿ ರೂ.ಗಳ ಅನುದಾನ ಬಿಡುಗಡೆ ಮಾಡಲಾಗಿದೆ ಎಂದರು.
ಸಭಾಧ್ಯಕ್ಷರಾದ ಯು.ಟಿ. ಖಾದರ್ ಮಾತನಾಡಿ, ಜಿಲ್ಲೆಯ ಗ್ರಾಮೀಣ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಗಳಲ್ಲೂ ತಳಮಟ್ಟದಲ್ಲಿ ಅಧಿಕಾರಿ, ಸಿಬ್ಬಂದಿಗಳ ತಂಡವನ್ನು ಈಗಲೇ ಸಿದ್ಧಪಡಿಸಬೇಕು, ಪ್ರಾಕೃತಿಕ ವಿಕೋಪಗಳಿಂದ ಒದಗಬಹುದಾದ ಸಂಭವನೀಯ ಅಪಾಯಗಳನ್ನು ತಡೆಗಟ್ಟುವ ಬಗ್ಗೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಹೇಳಿದರು.
ಪ್ರಾಕೃತಿಕ ವಿಕೋಪಗಳಿಂದಾಗುವ ಹಾನಿ, ಸಮಸ್ಯೆಗಳನ್ನು ಪರಿಹರಿಸುವ ಸಂದರ್ಭದಲ್ಲಿ ಸ್ಥಳೀಯ ಸಂಘ-ಸಂಸ್ಥೆಗಳ ಯುವಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅವರ ತಂಡವನ್ನು ಸಿದ್ಧಪಡಿಸಿ ಎಸ್ ಡಿ ಆರ್ ಎಫ್ ಹಾಗೂ ಎನ್ ಡಿ ಆರ್ ಎಫ್ ತಂಡದೊಂದಿಗೆ ನಿಯೋಜಿಸಬೇಕು ಇದಕ್ಕಾಗಿ ಎಲ್ಲಾ ಗ್ರಾಮ ಪಂಚಾಯತ್ ವ್ಯಾಪ್ತಿ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಅಧಿಕಾರಿಗಳು ಸಭೆಯೊಂದನ್ನು ನೆಡೆಸಿ ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.
ಪ್ರಮುಖವಾಗಿ ಮೆಸ್ಕಾಂನವರು ಅರಣ್ಯ ಇಲಾಖೆಯೊಂದಿಗೆ ಸೇರಿಕೊಂಡು ಅಪಾಯಕಾರಿ ಗಿಡ ಮರಗಳನ್ನು ತೆರವುಗೊಳಿಸುವುದು ಹಾಗೂ ವಿದ್ಯುತ್ ತಂತಿಗಳು ಹಾದು ಹೋಗಿರುವ ಕಡೆಗಳಲ್ಲಿರುವ ಮರ ಗಿಡಗಳ ಅಪಾಯಕಾರಿ ರಂಬೆ ಕೊಂಬೆಗಳನ್ನು ಕತ್ತರಿಸಬೇಕು, ವಿದ್ಯುತ್ ತಂತಿಗಳು ಬಿದ್ದು ಯಾವುದಾದರೂ ಪ್ರಾಣ ಹೋದಲ್ಲಿ ಸಂಬಂಧಪಟ್ಟ ಮೆಸ್ಕಾಂನ ಜೂನಿಯರ್ ಇಂಜಿನಿಯರ್ ಹಾಗೂ ಅರಣ್ಯ ಇಲಾಖೆಯ ರೇಂಜ್ ಆಫೀಸರ್ ಗಳನ್ನು ನೇರವಾಗಿ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಶಾಸಕರಾದ ಅಶೋಕ್ ಕುಮಾರ್ ರೈ, ವಿಧಾನ ಪರಿಷತ್ ಸದಸ್ಯರಾದ ಹರೀಶ್ ಕುಮಾರ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕುಮಾರ್, ಮಂಗಳೂರು ಪೊಲೀಸ್ ವಿಭಾಗದ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ಅನ್ಶುಕುಮಾರ್, ಅಪರ ಜಿಲ್ಲಾಧಿಕಾರಿ ಕೃಷ್ಣಮೂರ್ತಿ, ಸಹಾಯಕ ಆಯುಕ್ತರಾದ ರಾಜು, ಗಿರೀಶ್ ನಂದನ್ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಜಿಲ್ಲೆಯ ಎಲ್ಲಾ ತಹಶೀಲ್ದಾರರು ಸಭೆಯಲ್ಲಿ ಭಾಗವಹಿಸಿದ್ದರು.