ಆಧುನಿಕ ಯುಗದಲ್ಲಿ ತಂತ್ರಜ್ಞ ದಲ್ಲಾಳಿಗಳು

July 30, 2025
11:21 PM
ಅಮಾಯಕ ನಾಗರಿಕರನ್ನು ಬಲಿಗೆ ಹಾಕುವ ಕಾನೂನು ಡಿಜಿಟಲ್ ಸಿಗ್ನೇಜರಿದ್ದು ಮಾತ್ರವಲ್ಲ, ಇನ್ನು ಅನೇಕ ಕಾನೂನುಗಳಿವೆ. ಆದಾಯಕರ ಇಲಾಖೆಯ ಸೈಟ್, ರಿಜಿಸ್ಟ್ರಾರ್ ಆಫ್ ಕಂಪೆನೀಸ್‍ನ ಸೈಟ್, ಬೇಂಕಿಂಗ್ ಸಾಪ್ಟ್ ವೇರ್ ಇತ್ಯಾದಿ  ಸರಿಯಾಗಿ ಕೆಲಸ ಮಾಡದ ಸಾಪ್ಟ್ ವೇರ್ ಕಂಟ್ರಾಕ್ಟ್  ಗಳನ್ನು ರಾಜಕಾರಣಿಗಳು ಅಥವಾ ಅವರ ಕುಲಪುತ್ರರು ಯಜಮಾನರಾಗಿ ಉಳ್ಳ ಐಟಿ ಕಂಪೆನಿಗಳು ಪಡೆಯುವುದರ ಹಿಂದೆ ಭ್ರಷ್ಟಾಚಾರವಷ್ಟೇ ಅಲ್ಲ, ವ್ಯವಸ್ಥೆಯನ್ನು ದುರ್ಬಲಗೊಳಿಸುವ ಸಂಚು ನಡೆಯುತ್ತದೆ..
ದಲ್ಲಾಳಿಗಳೆಂದರೆ ಕಂಟಕ ಪ್ರಿಯರೇ. ಪಕ್ಕಾ ಸ್ವಾರ್ಥಿಗಳಾದ ಅವರು ಶ್ರೀಮಂತರಿಗೂ ಕಂಟಕವೇ. ಆದರೆ ಶ್ರೀಮಂತರು ಸುಧಾರಿಸಿಕೊಳ್ಳಬಲ್ಲರು. ಅವರು ಬಡವರಿಗೆ ಕಂಟಕ ಮಾತ್ರವಲ್ಲ ಬಡವರ ಸುಧಾರಣೆಯ ಸಾಧ್ಯತೆಗಳನ್ನು ಮಸಳಿಸಬಲ್ಲರು. ಈ ಹಿಂದಿನ ಕೃಷಿಮೂಲದ ಆರ್ಥಿಕ ವ್ಯವಸ್ಥೆಯಲ್ಲಿ ಶ್ರೀಮಂತ, ಮಧ್ಯಮ ಮತ್ತು ಬಡವರೆಂಬ ಆರ್ಥಿಕ ಸ್ತರಭೇದವನ್ನು ಗಟ್ಟಿಗೊಳಿಸುವಲ್ಲಿ ಶಾನುಭೋಗರಂತಹ ಅಧಿಕಾರಶಾಹಿ ವರ್ಗದವರು ಮತ್ತು ಕೆಲವು ಸ್ಥಳೀಯ ವ್ಯಾಪಾರಿಗಳು ಕೂಡಾ ಮಧ್ಯವರ್ತಿಗಳಾಗಿ ಪಾತ್ರ ನಿರ್ವಹಿಸಿದರು. ‘ಅವರಿಗೂ’ ಭರವಸೆಗಳನ್ನು ತುಂಬಿ ‘ಇವರಿಗೂ’ ಭರವಸೆ ನೀಡಿ ಅವರಿಂದಲೂ ಪಡೆದು ಇವರಿಂದಲೂ ಪಡೆದು ಸ್ವಂತ ಬದುಕನ್ನು ಶ್ರೀಮಂತಗೊಳಿಸಿಕೊಳ್ಳುತ್ತಿದ್ದ ಮಧ್ಯವರ್ತಿಗಳು ಯಾರೆಂಬ ಪರಿಚಯ ಸಮಾಜಕ್ಕ ಇರುತ್ತಿತ್ತು. ಆದರೆ ಆಧುನಿಕತೆಯ ಪ್ರಗತಿಯೆಂಬ ಪ್ರವಾಹದಲ್ಲಿ ಸಾಗುತ್ತಿರುವ ನಮಗೆ ಹೊಸ ದಲ್ಲಾಳಿಗಳು ಯಾರೆಂದೇ ತಿಳಿಯುತ್ತಿಲ್ಲ. ಅವರು ತಮ್ಮ ಅಸ್ತಿತ್ವವನ್ನು ಶಾಸನ ಬದ್ಧವಾಗಿಟ್ಟುಕೊಂಡೇ ತಮ್ಮ ಪಾತ್ರವನ್ನು ಅಡಗಿಸಿಕೊಂಡು ಲಾಭ ಮಾಡಬಲ್ಲವರಾಗಿದ್ದಾರೆ. ಅದಕ್ಕಾಗಿ ಅವರು ಉಪಯೋಗಿಸುತ್ತಿರುವುದು ಆಧುನಿಕ ಡಿಜಿಟಲ್ ತಾಂತ್ರಿಕತೆಯ ಸೌಲಭ್ಯಗಳನ್ನು ಮತ್ತು ಜನಸಾಮಾನ್ಯರ ಕಂಪ್ಯೂಟರ್ ಅನಕ್ಷರತೆಯನ್ನು ಆಡಳಿತ ಕೆಲವು ಕೀಲಿಮಣಿಗಳ ಕ್ಲಿಕ್‍ಗಳು ಕೆಲವೇ ಮಧ್ಯವರ್ತಿಗಳ ಬೆರಳುಗಳಲ್ಲಿ ಉಳಿದು ಬಿಡುತ್ತವೆ.
ಇದಕ್ಕೊಂದು ಉದಾಹರಣೆಯೆಂದರೆ ‘ಡಿಜಿಟಲ್ ಸಿಗ್ನೇಚರ್’. ಇದು ಅಮೇರಿಕಾದಲ್ಲಿ ಹುಟ್ಟಿದ ಒಂದು ತಾಂತ್ರಿಕತೆ. ಒಬ್ಬ ಉದ್ಯಮಿಯ ಸಹಿಯನ್ನು ಡಿಜಿಟಲೀಕರಣಗೊಳಿಸಿ ಅದನ್ನು ಆತನ ಆರ್ಥಿಕ ಲೆಕ್ಕಾಚಾರಗಳ ಪತ್ರಗಳಿಗೆ ಬಳಸುವ ವಿಧಾನವನ್ನು ಜಾರಿಗೆ ತರಲಾಯಿತು. ಇದೇನೂ ದೊಡ್ಡ ವೈಜ್ಞಾನಿಕ ಸಂಶೋಧನೆಯಲ್ಲ. ಇದರಿಂದಾಗಿ ಮಾನವಕುಲದ ದೊಡ್ಡ ಸಮಸ್ಯೆಯೇನೂ ಪರಿಹಾರವಾಗಿಲ್ಲ. ಬದಲಾಗಿ ಇದೇ ಒಂದು ಸಮಸ್ಯೆಯಾಗಿ ಈಗ ಕಾಡುತ್ತಿದೆ. ಐಟಿ ಕ್ಷೇತ್ರದ ದಿಗ್ಗಜರು ಅಮೇರಿಕಾದಲ್ಲಿ ಬಳಕೆಗೆ ತಂದ ಈ ಡಿಜಿಟಲ್ ಸಹಿಯನ್ನು ಸರಕಾರದ ಕಾನೂನಿನ ಮೂಲಕ ಭಾರತದಲ್ಲಿಯೂ ಐಟಿ ದಿಗ್ಗಜರು ಬಳಕೆಗೆ ತಂದರು. ಅದಕ್ಕಾಗಿ ಕೇಂದ್ರ ಸರಕಾರದ ಸಂಬಂಧಿತ ಸಚಿವಾಲಯದ ಭ್ರಷ್ಟ ಅಧಿಕಾರಿಗಳನ್ನು ಬಳಸಿಕೊಂಡರು. ಈ ಶಾಸನವು ಪಾರ್ಲಿಮೆಂಟ್ ಮೂಲಕ ಆಗಿದೆಯೇ ಅಥವಾ ಒಳದಾರಿಗಳಲ್ಲಿಯೇ ರೂಪುಗೊಂಡಿದೆಯೇ ಎಂಬುದು ಗೊತ್ತಿಲ್ಲ. ಆದರೆ ಜಾರಿಗೆ ಬಂದು ಕಟ್ಟುನಿಟ್ಟಾಗಿ ಪಾಲಿಸಲ್ಪಡುತ್ತಿದೆ. ಏಕೆಂದರೆ ಇದು ಸಂಘಸಂಸ್ಥೆಗಳ ಆಡಿಟ್ ವರದಿಗಳ ಅಂತಿಮ ಸ್ವೀಕೃತಿಗೆ ಅತ್ಯಗತ್ಯವೆಂಬ ಕಾನೂನು ಬಂದಿದೆ. ಆದ್ದರಿಂದ ಚಾರ್ಟರ್ಡ್ ಅಕೌಂಟೆಂಟ್‍ಗಳು ಇದು ಅನಿವಾರ್ಯ ಎನ್ನುತ್ತಾರೆ. ಕಾನೂನುಬದ್ಧವಾಗಿ ಕಾರ್ಯ ನಿರ್ವಹಿಸುವ ಸಂಘಸಂಸ್ಥೆಗಳು ಈ ದುಬಾರಿ ವೆಚ್ಚದ ಸಹಿ ನಿರ್ಮಾಣದ ತಾಂತ್ರಿಕತೆಯ ಉತ್ಪನ್ನಕ್ಕಾಗಿ ಅಪಾರ ಹಣ ವೆಚ್ಚ ಮಾಡಬೇಕಾಗುತ್ತದೆ. ಒಂದು ಚಿಲ್ಲರೆ ವೆಚ್ಚದ ಸಹಿಯ ಮುದ್ರಣಕ್ಕೆ ಸಾವಿರ-ಸಾವಿರಗಳ ಲೆಕ್ಕದಲ್ಲಿ ಮಧ್ಯವರ್ತಿ ಐಟಿ ದಿಗ್ಗಜರು ಹಣವನ್ನು ಪಡೆಯುತ್ತಾರೆ. ನಾನೂ ಇದರ ಬಲಿಪಶುವಾಗಿರುವುದರಿಂದಷ್ಟೇ ನನಗಿದು ಗೊತ್ತಾಗಿದೆ. ಇಲ್ಲವಾದರೆ ಸಾರ್ವಜನಿಕರಿಗೆ ಇದು ತಿಳಿಯದೇ ಅಮಾಯಕರನ್ನು ಸುಲಿಯುವ ಒಂದು ಗುಪ್ತ ವ್ಯವಸ್ಥೆ ಇದು.
ಭಾರತದಲ್ಲಿ ಈ ಕಾನೂನು ಎಲ್ಲಿ ಮೊದಲಿಗೆ ಜಾರಿಗೆ ಬಂತೆಂದು ಗೊತ್ತಿಲ್ಲ. ಅಂತೂ ನನಗೆ ತಿಳಿದ ಪ್ರಕಾರ ಪ್ರೊವಿಡೆಂಟ್ ಫಂಡ್ ಇಲಾಖೆಯವರು ಜಾರಿಗೆ ತಂದರು. ಸಂಸ್ಥೆಗಳನ್ನು ನಡೆಸುವ ಪ್ರತಿಯೊಬ್ಬ ಮಾಲಕರು ತಮ್ಮ ಸಹಿಯನ್ನು ಡಿಜಿಟಲ್ ಮಾದರಿಯಲ್ಲಿ ಬಳಸಬೇಕೆಂಬ ಕಾನೂನು ತಂದರು. ಒಂದು ಸಹಿಯನ್ನು ಡಿಜಿಟಲ್ ಮಾದರಿಯಲ್ಲಿ ಒಂದು ಪೆನ್ ಡ್ರೈವ್‍ನಲ್ಲಿ ಒದಗಿಸಲು ಅದರ ದಲ್ಲಾಳಿಗಳು ಸುಮಾರು ಒಂದೂವರೆ ಸಾವಿರ  ದರ ವಿಧಿಸಿದರು. ನಾನು ಇದನ್ನು ವಿರೋಧಿಸಿದೆ. ನೀವೇ ನಮ್ಮ ಸಹಿಗಳನ್ನು ಡಿಜಿಟಲೀಕರಣಗೊಳಿಸಿಕೊಳ್ಳಿ ಎಂಬುದಾಗಿ ವಿನಂತಿಸಿದೆ. ಆದರೆ ಅವರು ನನ್ನ ಮೇಲೆ ನಿರ್ದಿಷ್ಟ ಕಾನೂನಿನ ಉಲ್ಲೇಖಗಳನ್ನು ಹೇಳಿ ದಾವೆ ಹೂಡಿದರು. ನಾನೂ ಆಪಾದಿತನಾಗಿ ನ್ಯಾಯಾಲಯಕ್ಕೆ ಹೋಗತೊಡಗಿದೆ. ಆದರೆ ಕಾನೂನಿನ ಕುಣಿಕೆ ಎಷ್ಟು ಬಲವಾಗಿದೆಯೆಂದರೆ ನನ್ನ ಸಹಿಯನ್ನು ನಾನೇ ಹಾಕಿದರೆ ಆಗುವುದಿಲ್ಲ. ಅದು ಡಿಜಿಟಲ್ ಆಗಿರಲೇಬೇಕು. ಅದನ್ನು ಮಾಡದಿದ್ದರೆ ದಂಡ ಸಹಿತ ಜೈಲು ಶಿಕ್ಷೆಗೆ ಒಳಗಾಗಬೇಕು. ಈ ಶಿಕ್ಷೆಯನ್ನು ಅನುಭವಿಸುವುದಕ್ಕೆ ಸಿದ್ಧನಾದರೂ ಮತ್ತೆ ಡಿಜಿಟಲ್ ಸಿಗ್ನೇಚರ್ ಮಾಡಿಸಲೇ ಬೇಕು ಎಂಬುದು ತಿಳಿಯುವಲ್ಲಿಯವರೇಗೆ ನ್ಯಾಯಾಲಯದಲ್ಲಿ ಹೋರಾಡಿದೆ, ಕೊನೆಗೆ ನಾನೇ ಸೋಲಬೇಕಾಯಿತು. ಏಕೆಂದರೆ ಒಂದೆರಡು ಸಾವಿರ ರೂಪಾಯಿಗಳ ತಗಾದೆಗಾಗಿ ಜೈಲಿನಲ್ಲಿ ದಿನ ಕಳೆದು ಪ್ರಯೋಜನವೇನು? ಅಷ್ಟು ಮಾಡಿದ ಬಳಿಕವೂ ಡಿಜಿಟಲ್ ಸಿಗ್ನೇಚರ್ ಮಾಡಿಸಲೇ ಬೇಕೆಂದಾದರೆ ಹೋರಾಟ ವ್ಯರ್ಥವೆಂದು ತೀರ್ಮಾನಿಸಿ ಒಂದೂವರೆ ಸಾವಿರ ಕೊಟ್ಟು ಚಿಲ್ಲರೆ ತಂತ್ರಜ್ಞತೆಯ ಪೆನ್‍ಡ್ರೈವ್ ಪಡೆದೆ. ನನ್ನ ಹೋರಾಟ ಸುದ್ದಿಯಾಗಲಿಲ್ಲ. ಏಕೆಂದರೆ ಅದಕ್ಕೆ ವಾಣಿಜ್ಯ ವಲಯದಲ್ಲಿರುವವರ ಬೆಂಬಲ ಸಿಗಲಿಲ್ಲ. “ಮಣ್ಹಾಕಲಿ ಮಾರಾಯ್ರೇ. ಒಂದೂವರೆ ಸಾವಿರ ಅಲ್ಲೋ ಮಾಡಿಸಿಬಿಡಿ. ನಾವು ಮಾಡಿಸಿದ್ದೇವೆ” ಎಂದು ಬೋಧಿಸುವವರೇ ಜಾಸ್ತಿಯಾದರೂ ಸೇವೆ ಮತ್ತು ವಾಣಿಜ್ಯ ವಲಯಗಳಲ್ಲಿರುವವರ ಈ ಮನೋಭೂಮಿಕೆ ಕಾನೂನು ಮಾಡುವವರಿಗೆ ಅನುಕೂಲವಾಗಿದೆ. ಇಲ್ಲಿ ತಮಾಷೆಯೆಂದರೆ ಈ ಪೆನ್‍ಡ್ರೈವ್ ಸಹಿ ಹಾಕಿದ ಮಾಲಕರ ಬಳಿ ಇರುತ್ತದೆ ಎಂಬುದು ಬಿಟ್ಟರೆ ಅವರಿಗೆ ಅದರ ಮೇಲೆ ಏನೂ ಹಿಡಿತವಿಲ್ಲ. ಏಕೆಂದರೆ ಅದನ್ನು ಬಳಸಲು ಕಂಪ್ಯೂಟರ್ ತಾಂತ್ರಿಕತೆ ಗೊತ್ತಿರಬೇಕು. ಹಾಗಾಗಿ ಗೊತ್ತಿಲ್ಲದವರೆ ಹೆಚ್ಚು ಇರುವ ಮಾಲಕ ವರ್ಗದವರು ಅದನ್ನು ಚಾರ್ಟರ್ಡ್ ಎಕೌಂಟೆಂಟರಲ್ಲಿ  ಕೊಟ್ಟು ಬಿಡುತ್ತೇವೆ. ಅವರು ಉಪಯೋಗಿಸಿದ ಬಳಿಕ ಇಟ್ಟುಕೊಳ್ಳಲು ನಮ್ಮಲ್ಲೇ ಕೊಡುತ್ತಾರೆ. ಮುಂದಿನ ವರ್ಷದ ವಾರ್ಷಿಕ ಲೆಕ್ಕಾಚಾರದ ಸಮಯದಲ್ಲಿ ಅದನ್ನು ಮತ್ತೊಮ್ಮೆ ಅವರಿಗೆ ಕೊಡುತ್ತೇವೆ. ಎರಡು ವರ್ಷಗಳಲ್ಲಿ ಹೀಗೆ ನಡೆಯುತ್ತಿದ್ದ ವಿಧಾನದ ಮೇಲೆ ಐಟಿ ದಿಗ್ಗಜರು ಮತ್ತೊಂದು ಗದಾಪ್ರಹಾರ ಮಾಡಿದರು. ಅವರು ಸೂಕ್ತ ಸಚಿವಾಲಯದ ಅಧಿಕಾರಿಗಳನ್ನು ಖರೀದಿಸಿ ಮತ್ತೊಂದು ಶಾಸನ ಮಾಡಿದರು. ಅದರ ಪ್ರಕಾರ ಡಿಜಿಟಲ್ ಸಿಗ್ನೇಚರ್ ಗೆ ಒಂದೇ ವರ್ಷದ ಮಾನ್ಯತೆ ನೀಡಿದರು. ಆದರೆ ಎರಡು ಪಟ್ಟು ಶುಲ್ಕ ವಸೂಲು ಮಾಡಿ ಅದೇ ಪೆನ್‍ಡ್ರೈವ್‍ನಲ್ಲಿ ನಮ್ಮ ಸಹಿಯನ್ನು ನವೀಕರಿಸಿ ಕೊಡುವ ವ್ಯವಸ್ಥೆ ಮಾಡಿದರು. ಅದರಿಂದಾಗಿ ಅವರಿಗೆ ಕುಳಿತಲ್ಲಿಗೇ ಕೊಟ್ಯಾಂತರ ಹಣ ವಸೂಲಿಯಾಯಿತು. ಈ ವರ್ಷ ಇನ್ನು ಒಂದು ಹೆಜ್ಜೆ ಮುಂದೆ ಹೋಗಿ ರೂಪಾಯಿ ಒಂದು ಸಾವಿರದಷ್ಟು ದರ ಹೆಚ್ಚಿಸಿ ಚಿಲ್ಲರೆ ಕಾಸಿನ ಹೊಸ ಪೆನ್‍ಡ್ರೈವ್ ನೀಡುವ ವ್ಯವಸ್ಥೆಯನ್ನು ಜಾರಿಗೆ ತಂದಿದ್ದಾರೆ. ಮೂರು ಸಾವಿರ ಖರ್ಚು ಮಾಡಿ ಮಾಡಿಸಿರುವ ಇದು ಎರಡು ವರ್ಷಗಳಿಗೆ ಮಾನ್ಯತೆ ಪಡೆದಿದೆ. ಈ ಎರಡು ವರ್ಷಗಳು ಕಳೆಯುವಷ್ಟರಲ್ಲಿ ಮತ್ತೆ ಯಾವ ದಾಳವನ್ನು ಉರುಳಿಸುತ್ತಾರೋ  ಗೊತ್ತಿಲ್ಲ!
ಅಮೇರಿಕಾದಲ್ಲಿ ಕಂಡು ಹಿಡಿದ ತಂತ್ರಜ್ಞಾನವನ್ನು ಕದ್ದು ತಂದು ಭಾರತದಲ್ಲಿ ಅದಕ್ಕೆ ಭ್ರಷ್ಟತೆಯ ಗಲೀಜು  ಹಚ್ಚಿ ಕುಳಿತಲ್ಲೇ ಹಣ ಮಾಡುವ ಐಟಿ ದಿಗ್ಗಜರು ವಿದ್ಯಾವಂತರಲ್ಲವೆ? ಅವರು ಸಾಮಾನ್ಯ ಶಿಕ್ಷಣದಲ್ಲಿ ಈ ದೇಶದ ಬಡತನ ಅಜ್ಞಾನಗಳ ಅರಿವು ಪಡೆದವರಲ್ಲವೆ? ಈಗ ಜನರ ಕಂಪ್ಯೂಟರ್ ಅಜ್ಞಾನವನ್ನು ಬಳಸಿಕೊಂಡು ದುಡ್ಡು ಮಾಡುವ ನೀಚತನ ಅಸಹ್ಯವೆನ್ನಿಸುತ್ತದೆ. ತಮ್ಮದಲ್ಲದ ತಾಂತ್ರಿಕತೆಯನ್ನು ಬಳಸಿಕೊಂಡು ಲಾಭ ಮಾಡುವ ಮತ್ತು ದಾನಿಗಳೆಂದು ಸೋಗು ಹಾಕಿ ಸರಕಾರದಿಂದಲೂ ಜನರಿಂದಲೂ ಮನ್ನಣೆ ಪಡೆಯುವ ಐಟಿ ದಿಗ್ಗಜರು ದೇಶದ ಉದ್ಧಾರ ಮಾಡುತ್ತಾರೆಂದು ಹೇಳುವುದು ಹೇಗೆ? ಇಲ್ಲಿ ವಿಚಿತ್ರವೆಂದರೆ ಪೆನ್ ಡ್ರೈವ್ ನಲ್ಲಿ ಸುರಕ್ಷಿತವಾಗಿರುವ ನನ್ನ ಡಿಜಿಟಲ್ ಸಹಿಗೆ ಆಯುಸ್ಸು ಎರಡೇ ವರ್ಷ. ನಂತರ ಪುನಃ ನವೀಕರಿಸಬೇಕು. ಅದರ  ಬದಲು ಜೀವಂತ ಇರುವ ನಾನೇ ಸಹಿ ಮಾಡಿದರೆ ಆಗುವುದಿಲ್ಲವೇ ಎಂತ ಕೇಳಿದರೆ ಕಾನೂನು ಅವಕಾಶ ನೀಡುವುದಿಲ್ಲ ಎನ್ನುತ್ತಾರೆ ಲೆಕ್ಕ ಪರಿಶೋಧಕರು. ಅವರಿಗೂ ಇದು ಮೋಸ ಎಂಬುದು ಗೊತ್ತಿದೆ. ಆದರೆ ಅವರು ಡಿಜಿಟಲ್ ಸಹಿಯ ಹೊರತಾಗಿ ನಾವೇ ಹಾಕಿದ ಸಹಿಯೊಂದಿಗೆ ಕಡತ ಸಲ್ಲಿಸಿದರೆ ಮೇಲಾಧಿಕಾರಿಗಳು ಅದನ್ನು ಮಾನ್ಯ ಮಾಡುವುದಿಲ್ಲವಂತೆ. ಅಂದರೆ ಈ ಶೋಷಣೆಯ ಸರಪಳಿಯನ್ನು ಬಿಗಿಯುವಲ್ಲಿ ಇಡೀ ಆಡಳಿತ ವ್ಯವಸ್ಥೆಯೇ ಇದೆ. ಲಾಭ ಪಡೆಯುವ ದಲ್ಲಾಳಿಗಳು ಅಲ್ಲಲ್ಲಿ ಇದ್ದಾರೆ. ಈ ಬಗ್ಗೆ ಹೆಚ್ಚಿನ ವಿವರ ಪಡೆದಾಗ ತಿಳಿಯುವ ಸಂಗತಿ ಎಂದರೆ ಶೋಷಣೆಗಾಗಿ ಕಂಪ್ಯೂಟರ್ ತಂತ್ರಜ್ಞಾನದ ಬಳಕೆಯು  ನಮ್ಮ ಜಿ. ಎಸ್. ಟಿ ಆದಾಯ ತೆರಿಗೆ ಇತ್ಯಾದಿಗಳೆಲ್ಲದರಲ್ಲಿಯೂ ವ್ಯಾಪಿಸಿದೆ. ಇದರಲ್ಲಿ ಸಿಲುಕಿದ ಕೆಲವರ ಬಗ್ಗೆ ಕೋಟ್ಯಂತರ ಇರುವ ಸಾಮಾನ್ಯ ಜನರಿಗೆ ತಿಳಿಯುವುದೇ ಇಲ್ಲ. ಕೇನ್ಸರ್‍ನಂತೆ ರಕ್ತ ಹೀರುವಿಕೆಯು ಕಣಕಣಗಳಲ್ಲಿ ವ್ಯಾಪಿಸುತ್ತದೆ. ಅಂದರೆ ಕಂಪೆನಿಗಳ ಮಾಲಕರು ತಮ್ಮ ಮೇಲೆ ಬಂದಿರುವ ಹೊರೆಯನ್ನು ಪರೋಕ್ಷವಾಗಿ ತಮ್ಮ ನೌಕರರ ಮೇಲೆ ಹೊರಿಸುತ್ತಾರೆ. ಹೀಗೆ ಇತ್ತ ಸರಕಾರಕ್ಕೂ ಸಿಗದ ಜನಸಾಮಾನ್ಯರಿಗೂ ಕೈಯಲ್ಲಿ ಉಳಿಯದ ಮೊತ್ತವಾಗಿ ತಾಂತ್ರಿಕ ತಜ್ಞರ ಕಿಸೆ ತುಂಬಿಸುತ್ತದೆ.
ಪ್ರಸ್ತುತ ಅಮಾಯಕ ನಾಗರಿಕರನ್ನು ಬಲಿಗೆ ಹಾಕುವ ಕಾನೂನು ಡಿಜಿಟಲ್ ಸಿಗ್ನೇಜರಿದ್ದು ಮಾತ್ರವಲ್ಲ, ಇನ್ನು ಅನೇಕ ಕಾನೂನುಗಳಿವೆ. ಆದಾಯಕರ ಇಲಾಖೆಯ ಸೈಟ್, ರಿಜಿಸ್ಟ್ರಾರ್ ಆಫ್ ಕಂಪೆನೀಸ್‍ನ ಸೈಟ್, ಬೇಂಕಿಂಗ್ ಸಾಪ್ಟ್ ವೇರ್ ಇತ್ಯಾದಿ  ಸರಿಯಾಗಿ ಕೆಲಸ ಮಾಡದ ಸಾಪ್ಟ್ ವೇರ್ ಕಂಟ್ರಾಕ್ಟ್  ಗಳನ್ನು ರಾಜಕಾರಣಿಗಳು ಅಥವಾ ಅವರ ಕುಲಪುತ್ರರು ಯಜಮಾನರಾಗಿ ಉಳ್ಳ ಐಟಿ ಕಂಪೆನಿಗಳು ಪಡೆಯುವುದರ ಹಿಂದೆ ಭ್ರಷ್ಟಾಚಾರವಷ್ಟೇ ಅಲ್ಲ, ವ್ಯವಸ್ಥೆಯನ್ನು ದುರ್ಬಲಗೊಳಿಸುವ ಸಂಚು ನಡೆಯುತ್ತದೆ. ಇದರ ಅರ್ಥವೇನೆಂದರೆ ಹಿಂದೆ ಕಂದಾಯ ಇಲಾಖೆಯಲ್ಲಿ ಹಾಗೂ ಸಾರಿಗೆ ಇಲಾಖೆಯಲ್ಲಿ ಪ್ರಚಲಿತವಿದ್ದ ದಲ್ಲಾಳಿಗಳ ಕರಾಮತ್ತುಗಳು “ಸರ್ವಂ ಡಿಜಿಟಲೀಕರಣಂ” ಬಳಿಕ ಸುಮಾರಾಗಿ  ಎಲ್ಲಾ ಇಲಾಖೆಗಳಿಗೂ ವ್ಯಾಪಿಸಿದೆ. ಕಂಪ್ಯೂಟರ್‍ಗಳ ಮೂಲಕ ಕೆಲಸ ಎಂಬುದು ಭ್ರಷ್ಟಾಚಾರಕ್ಕೆ ಮೂಗುದಾರ ಹಾಕಿದಂತೆ ಎಂಬುದು ಕೇವಲ ಭ್ರಮೆ ಎಂಬುದು ಈಗ ಗುಟ್ಟಾಗಿ ಉಳಿದಿಲ್ಲ. ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಎಲ್ಲಾ ಬಗೆಯ ಪೇಮೆಂಟ್‍ಗಳು ಆಗುತ್ತಲೇ ಕಂಪ್ಯೂಟರ್ ಬಳಸಿಯೇ ಖಾತೆಗಳ ವರ್ಗಾವಣೆ ಆಗಿದ್ದರೂ ಅದು ಪೂರ್ಣವಾಗಲು ತಾಲೂಕು ಕಚೇರಿಯಲ್ಲಿ ಒಬ್ಬಾತ ಕೀಲಿಮಣೆಯ ಮೇಲೆ ಕೈಯಾಡಿಸಬೇಕು ಆತ ಅದನ್ನು ಸುಮ್ಮಸುಮ್ಮನೇ ಮಾಡೋದಿಲ್ಲ. ಅದಕ್ಕೂ ಕೈ ಬಿಸಿ ಮಾಡಬೇಕು ಅಂದರೆ ಕಡತಗಳ  ಡಿಜಿಟಲೀಕರಣವು ಜನಸಾಮಾನ್ಯರನ್ನು ಅಮುಕುವ ಕೀಲಿಕೈಗಳನ್ನು ಹೆಚ್ಚಿಸಿದೆ. ಆಧುನಿಕ ವಿಜ್ಞಾನ ಮತ್ತು ತಂತ್ರಜ್ಞಾನವು ಕೂಡಾ ವ್ಯಾವಹಾರಿಕ ಅನಿಷ್ಟಗಳನ್ನು ತೊಡೆದು ಹಾಕುವಲ್ಲಿ ಹೊಸ ಪರಿಹಾರಗಳನ್ನು ನೀಡಿಲ್ಲ. ಬದಲಾಗಿ ಹೊಸ ದಲ್ಲಾಳಿಗಳನ್ನು ಸೃಷ್ಟಿಸಿದ ವಾಸ್ತವವನ್ನು ಜನಸಾಮಾನ್ಯರು ಎದುರಿಸಬೇಕಾಗಿದೆ.
Advertisement
Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಡಾ.ಚಂದ್ರಶೇಖರ ದಾಮ್ಲೆ

ಡಾ. ಚಂದ್ರಶೇಖರ ದಾಮ್ಲೆಯವರು ಸುಳ್ಯದ ನೆಹರು ಮೆಮೋರಿಯಲ್ ಕಾಲೇಜ್ ನಲ್ಲಿ ಸಮಾಜಶಾಸ್ತ್ರ ಪ್ರಾಧ್ಯಾಪಕರಾಗಿ 35 ವರ್ಷಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದವರು. ವೃತ್ತಿಯಲ್ಲಿರುವಾಗಲೇ ರಾಷ್ಟ್ರೀಯ ಸೇವಾ ಯೋಜನಾಧಿಕಾರಿಯಾಗಿ ಸಮಾಜಸೇವೆಯಲ್ಲಿ ತೊಡಗಿಕೊಂಡವರು. ಸಾಂಸ್ಕೃತಿಕ ಸಂಘದ ಮೂಲಕ ಮಕ್ಕಳಿಗೆ ಯಕ್ಷಗಾನ ನಿರ್ದೇಶಕನ, ಸುಳ್ಯದಲ್ಲಿ ಯಕ್ಷಗಾನ ಹಿತರಕ್ಷಣಾ ವೇದಿಕೆಯ ಸ್ಥಾಪನೆ, ಸಂಪೂರ್ಣ ಸಾಕ್ಷರತಾ ಆಂದೋಲನದಲ್ಲಿ ಸಂಪನ್ಮೂಲ ವ್ಯಕ್ತಿ, ಕನ್ನಡಮಾಧ್ಯಮದಲ್ಲಿ ಸ್ನೇಹ ಶಿಕ್ಷಣ ಸಂಸ್ಥೆಯ ಸ್ಥಾಪನೆ ಮುಂತಾದ ಸಮಾಜಮುಖಿ ಕಾರ್ಯಗಳಲ್ಲಿ ಸೇವೆ ನೀಡಿದವರು. ಶಿಕ್ಷಣದಲ್ಲಿ ಸೃಜನಶೀಲತೆಗೆ ಒತ್ತು ನೀಡುವ ದಾಮ್ಲೆಯವರು ಸಂಶೋಧಕರಾಗಿದ್ದು ಕನ್ನಡ ಇಂಗ್ಲಿಷ್ ಭಾಷೆಗಳಲ್ಲಿ ಕೃತಿ ರಚನೆ ಮಾಡಿದವರು. 'ನೆಲದನಂಟು' ಮತ್ತು "ಶಾಲೆ ಎಲ್ಲಿದೆ?" ಇವು ಇವರ ಪ್ರಸಿದ್ಧ ಕಾದಂಬರಿಗಳು. ಅನೇಕ ಪ್ರಶಸ್ತಿ ಸಮ್ಮಾನಗಳಿಂದ ಗೌರವಿಸಲ್ಪಟ್ಟ ದಾಮ್ಲೆಯವರಿಗೆ ಅಸಾಮಾನ್ಯ ಕನ್ನಡಿಗ ಪ್ರಶಸ್ತಿ, ಯಕ್ಷಮಂಗಳ ಪ್ರಶಸ್ತಿ, ಅರಣ್ಯಮಿತ್ರ ಮತ್ತು ಜಲಮಿತ್ರ ಪ್ರಶಸ್ತಿ, Nation Builder ಪ್ರಶಸ್ತಿ ಮುಂತಾದುವು ಲಭಿಸಿವೆ. ಹೊಸದಿಗಂತ ಪತ್ರಿಕೆಯಲ್ಲಿ "ಇದ್ಯಾಕೆ ಹೀಗೆ " ಅಂಕಣವನ್ನು ಬರೆಯುತ್ತಿದ್ದರು.

ಇದನ್ನೂ ಓದಿ

ಅಡಿಕೆ ತೋಟಗಳಿಗೆ ಸವಾಲಾಗಿರುವ ಎಲೆಚುಕ್ಕಿ ರೋಗ – ವಿಜ್ಞಾನ ಏನು ಹೇಳುತ್ತದೆ?
January 9, 2026
7:43 AM
by: ಮಹೇಶ್ ಪುಚ್ಚಪ್ಪಾಡಿ
ಕನ್ನಡದಲ್ಲಿ ಕಲಿತರೆ ಹಿನ್ನಡೆ ಇಲ್ಲ
January 7, 2026
7:42 PM
by: ಡಾ.ಚಂದ್ರಶೇಖರ ದಾಮ್ಲೆ
ಹೊಸರುಚಿ | ಬದನೆಕಾಯಿ ಪಲ್ಯ
January 3, 2026
9:07 AM
by: ದಿವ್ಯ ಮಹೇಶ್
ಆತ್ಮವಿಶ್ವಾಸ ಮತ್ತು ಸಂವಹನ ಕೌಶಲ್ಯ ವ್ಯಕ್ತಿತ್ವದ ಬೆನ್ನೆಲುಬು
January 2, 2026
7:42 PM
by: ಕುಮಾರಸುಬ್ರಹ್ಮಣ್ಯ ಮುಳಿಯಾಲ

You cannot copy content of this page - Copyright -The Rural Mirror