ಮಾಹಿತಿ

ಕೂಳೆ ಕಬ್ಬು ಬೆಳೆಯಲ್ಲಿ ಉತ್ಪಾದನೆ ಹೆಚ್ಚಿಸುವ ತಾಂತ್ರಿಕತೆಗಳು | ಕೃಷಿ ವಿಜ್ಞಾನಿಗಳ ಹಾಗೂ ಕೃಷಿ ಇಲಾಖೆ  ಅಧಿಕಾರಿಗಳಿಂದ ಮಾಹಿತಿ

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ಮಂಡ್ಯ ಜಿಲ್ಲೆಯಲ್ಲಿ ಕಬ್ಬು ಪ್ರಮುಖ ವಾಣಿಜ್ಯ ಬೆಳೆಯಾಗಿದ್ದು, ಜಿಲ್ಲೆಯಾದ್ಯಂತ ವಾರ್ಷಿಕವಾಗಿ ಅಂದಾಜು 38,000-40,000 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗುತ್ತಿದೆ. ಜಿಲ್ಲೆಯಲ್ಲಿ 2-3 ಕೂಳೆ ಬೆಳೆ ಬೆಳೆಯುವುದು ವಾಡಿಕೆಯಲ್ಲಿದ್ದು, ವಿ.ಸಿ.ಎಫ್.-0517 (ಬಾಹುಬಲಿ) ತಳಿಯು ಶೇ. 90 ಕ್ಕಿಂತ ಹೆಚ್ಚಿನ ವಿಸ್ತೀರ್ಣದಲ್ಲಿ ಆವರಿಸಿದೆ. ಇತ್ತೀಚಿನ ವರ್ಷಗಳಲ್ಲಿ ಜಿಲ್ಲೆಯಲ್ಲಿ ಕಬ್ಬಿನ ಉತ್ಪಾದಕತೆಯು ಕುಂಠಿತಗೊಂಡಿದ್ದು, ಪ್ರತಿ ಎಕರೆಗೆ ಅಂದಾಜು 40 ಮೆಟ್ರಿಕ್‌ ಟನ್ ಗಿಂತ ಕಡಿಮೆ ಇಳುವರಿ ಬರುತ್ತಿದ್ದು, ಇದರಿಂದ ರೈತರಿಗೆ ಆರ್ಥಿಕವಾಗಿ ನಷ್ಟವಾಗುತ್ತಿದೆ.

Advertisement

ಕೂಳೆ ಬೆಳೆಯಲ್ಲಿ ಕೆಲವು ತಾಂತ್ರಿಕತೆಗಳನ್ನು ರೈತರು ಅಳವಡಿಸಿಕೊಂಡಲ್ಲಿ ಪ್ರತಿ ಎಕರೆಗೆ 60-70 ಮೆ. ಟನ್ ಇಳುವರಿ ಪಡೆದು ರೈತರು ಆರ್ಥಿಕವಾಗಿ ಸಭಲರಾಗಬಹುದು ಹಾಗೂ ಕಬ್ಬಿನ ಗುಣಮಟ್ಟ ಉತ್ತಮಗೊಂಡು ಅಧಿಕ ಸಕ್ಕರೆ ಹಾಗೂ ಬೆಲ್ಲದ ಇಳುವರಿ ನಿರೀಕ್ಷಿಸಬಹುದಾಗಿದೆ ಎಂಬುದು ಕೃಷಿ ವಿಜ್ಞಾನಿಗಳ ಹಾಗೂ ಕೃಷಿ ಇಲಾಖೆ  ಅಧಿಕಾರಿಗಳ ಅಭಿಪ್ರಾಯವಾಗಿದೆ. ಡಾ.ಕೇಶವಯ್ಯ, ಪ್ರಾಧ್ಯಾಪಕರು ಹಾಗೂ ಕಬ್ಬು ಬೇಸಾಯಶಾಸ್ತçಜ್ಞರು, ಬೆಲ್ಲದ ಪಾರ್ಕ್, ವಲಯ ಕೃಷಿ ಸಂಶೋಧನಾ ಕೇಂದ್ರ ವಿ.ಸಿ.ಫಾರA, ಮಂಡ್ಯರವರು ಕೂಳೆ ಕಬ್ಬು  ಬೆಳೆಯಲ್ಲಿ ರೈತರು ಅಳವಡಿಸಬೇಕಿರುವ ಪ್ರಮುಖ ಉತ್ಪಾದನಾ ತಾಂತ್ರಿಕತೆಗಳ ಕುರಿತು ಈ ಕೆಳಕಂಡಂತೆ ಮಾಹಿತಿ ನೀಡಿರುತ್ತಾರೆ.

  1. ಕಡಿಮೆ ಅಂತರದಲ್ಲಿ ನಾಟಿ ಮಾಡಿರುವ ತನು ಕಬ್ಬು ಕಟಾವಾದ ನಂತರ ಪಟ ಬಿಟ್ಟು ಪಟ ತೆಗೆಯುವುದು ಹಾಗೂ ತರಗು ನಿರ್ವಹಣೆ: ಮಂಡ್ಯ ಜಿಲ್ಲೆಯಲ್ಲಿ 2.5-3 ಅಡಿ ಅಂತರದಲ್ಲಿ ಕಬ್ಬು ನೆಡುವುದು ರೈತರ ಪದ್ಧತಿಯಾಗಿದ್ದು, ಇದರಿಂದ ತೆಂಡೆಗಳ (ದಸಿ) ಸಂಖ್ಯೆ ಅತಿ ಹೆಚ್ಚಾಗಿದ್ದು ಅರೆಯುವ ಕಬ್ಬಿನ ಜಲ್ಲೆಗಳ ಸಂಖ್ಯೆ ಹಾಗೂ ತೂಕ ಕಡಿಮೆಯಾಗಿ ಇಳುವರಿ ಕುಂಠಿತವಾಗುತ್ತಿದೆ.  ಉತ್ತಮ ಇಳುವರಿ ಹಾಗು ಗುಣಮಟ್ಟದ ಕಬ್ಬನ್ನು ಪಡೆಯಲು ಅನುಕೂಲವಾಗುವಂತೆ ತನು ಕಬ್ಬು ಕಟಾವಾದ ನಂತರ ಕೂಳೆ ಕಬ್ಬಿನಲ್ಲಿ ಪಟ ಬಿಟ್ಟು ಪಟ ತೆಗೆಯುವುದು. ಒಂದು ಎಕರೆ ಕಬ್ಬಿನಲ್ಲಿ ಸುಮಾರು 3-4 ಟನ್ ನಷ್ಟು ತರಗು ದೊರೆಯುತ್ತದೆ. ಈ ತರಗನ್ನು ವ್ಯವಸ್ಥಿತವಾಗಿ ಕೂಳೆ ಬೆಳೆಯ ಮಣ್ಣಿಗೆ ಸೇರಿಸಿದಲ್ಲಿ, ಮಣ್ಣಿನ ಸಾವಯವ ಪದಾರ್ಥ ಹಾಗೂ ಪೊಷಕಾಂಶಗಳ ಮಟ್ಟ ಹೆಚ್ಚಾಗುತ್ತದೆ. ತರಗನ್ನು ಎರಡು ಸಾಲಿನ ಮಧ್ಯೆ ಹರಡಿ (ಸಾಲು ಬಿಟ್ಟು ಸಾಲು) ಎಕರೆಗೆ 15 ಕೆ.ಜಿ. ಯೂರಿಯಾ, 20 ಕೆ.ಜಿ. ಸೂಪರ್ ಪಾಸ್ಫೇಟ್ ಗೊಬ್ಬರವನ್ನು ನಂತರ 2.0-2.5 ಕೆ.ಜಿ. ತರಗು ಕಳಿಸುವ ಸೂಕ್ಷ ಮಣು ಜೀವಿಗಳ  ಸಮೂಹವನ್ನು ಸಗಣಿಯೊಂದಿಗೆ ಮಿಶ್ರಣ ಮಾಡಿ ತರಗಿನ ಮೇಲೆ ಹಾಕಬೇಕು ಇದರಿಂದ ತರಗು ಬೇಗನೆ ಕಳಿಯಲು ಸಹಕಾರಿಯಾಗಿ, ಮಣ್ಣಿನಲ್ಲಿ ತೇವಾಂಶ ಕಾಪಾಡಲು ಹಾಗೂ ಕಳೆಗಳನ್ನು ನಿಯಂತ್ರಿಸಬಹುದು. ಚನ್ನೇಗೌಡ ಬಿನ್ ಲಿಂಗೇಗೌಡ, ಗೊರವಾಲೆ ಗ್ರಾಮ, ಮಂಡ್ಯ ತಾಲ್ಲೂಕು ರವರು ತಮ್ಮ 1 ಎಕರೆ ಜಮೀನಿನಲ್ಲಿ ಕಡಿಮೆ ಅಂತರದಿಂದ ಇಳುವರಿ ಪ್ರಮಾಣ ಕಡಿಮೆಯಾಗಿರುವುದನ್ನು ಮನಗಂಡು ಪ್ರಸ್ತುತ 2ನೇ ಕೂಳೆ ಬೆಳೆಯಲ್ಲಿ ಪಟ ಬಿಟ್ಟು ಪಟ ತೆಗೆದು ಅಗಲ ಅಂತರ ಪಟವಾಗಿ ಮಾರ್ಪಡಿಸಿ, ಕಬ್ಬಿನ ತರಗನ್ನು ನಿರ್ವಹಣೆ ಮಾಡಿ ಉತ್ತಮ ಇಳುವರಿ ನಿರೀಕ್ಷೆಯಲ್ಲಿರುತ್ತಾರೆ.
  2. ಕೂಳೆ ಕೊಚ್ಚುವುದು: ಕಬ್ಬು ಕಟಾವಾದ ನಂತರ ಉಳಿದಿರುವ ಉದ್ದ ಕೂಳೆಯನ್ನು, ಹರಿತವಾದ ಕುಡುಗೋಲಿನಿಂದ ಒಂದೇ ಹೊಡೆತಕ್ಕೆ ನೆಲಸಮಕ್ಕೆ ಕತ್ತರಿಸಬೇಕು. ಇದರಿಂದ ಒಂದೇ ಸಮಾನಾಗಿ ಮೊಳಕೆ ಒಡೆಯುವುದಲ್ಲದೇ, ಮೊಳಕೆ ಪ್ರಮಾಣವು ಕೂಡ ಗಣನೀಯವಾಗಿ ಹೆಚ್ಚಾಗುತ್ತದೆ. ಸಾಮಾನ್ಯವಾಗಿ ಭೂಮಿಯ ಮೇಲ್ಭಾಗದಲ್ಲಿರುವ ಕಣ್ಣುಗಳು ಬೇಗನೆ ಮೊಳಕೆಯೊಡೆಯುವುದರಿಂದ ಭೂಮಿಯ ಕೆಳಭಾಗದ ಕಣ್ಣುಗಳು ಮೊಳಕೆಯೊಡೆಯುವುದನ್ನು ತಡೆಯುತ್ತದೆ. ಇದರಿಂದ ತೆಂಡೆಗಳ ಸಂಖ್ಯೆ ಕಡಿಮೆಯಾಗಿ  ಇಳುವರಿ ಕುಂಠಿತಗೊಳ್ಳುತ್ತದೆ. ಅಲ್ಲದೇ ಮೇಲಿನ ಭಾಗದ ಕಣ್ಣುಗಳಿಂದ ಬೇರುಗಳು ನೆಲದೊಳಕ್ಕೆ ಹೋಗದೇ ಇರುವುದರಿಂದ ಕಬ್ಬು ನೆಲದಲ್ಲಿ ಸರಿಯಾಗಿ ಬೇರೂರುವುದಿಲ್ಲ, ಆದ್ದರಿಂದ ಭೂಮಿಯ ಆಳದಿಂದ ನೀರು  ಮತ್ತು ಪೋಷಕಾಂಶಗಳನ್ನು ಹೀರಿಕೊಳ್ಳಲು ಸಾಧ್ಯವಿರುವುದಿಲ್ಲ. ಆದ್ದರಿಂದ ಕೂಳೆ ಕೊಚ್ಚುವುದು ಕೂಳೆ ಬೆಳೆ ನಿರ್ವಹಣೆಯಲ್ಲಿ ಪ್ರಮುಖ ಪಾತ್ರವಹಿಸುತ್ತದೆ.
  3. ಮಗ್ಗಲು ಕೊರೆಯುವುದು: ಮಣ್ಣು ಗಟ್ಟಿಯಾಗುವಿಕೆ ಅಥವಾ ಬಿರುಸುಗೊಳ್ಳುವಿಕೆ ಕೂಳೆ ಬೆಳೆಯಲು ಮುಖ್ಯವಾಗಿ ತೊಂದರೆ ಕೊಡುವ ಅಂಶ. ಬೆಳೆ ಬಹಳ ಅವಧಿಯವರೆಗೆ ಭೂಮಿಯಲ್ಲಿರುವುದರಿಂದ ಮತ್ತು ಹೆಚ್ಚು ಕಡಿಮೆ 35-40 ಸಲ ನೀರನ್ನು ಕೊಡುವುದರಿಂದ ಹಾಗೂ ಅಂತರ ಬೇಸಾಯ ಮಾಡಲು ಹಾಗೂ ಕಬ್ಬನ್ನು ಸಾಗಿಸಲು ಯಂತ್ರೋಪಕರಣಗಳನ್ನು ಓಡಾಡಿಸುವುದರಿಂದ ಮಣ್ಣು ಗಟ್ಟಿಯಾಗುತ್ತದೆ. ಇದರಿಂದಾಗಿ ಬೇರು ಬೆಳವಣಿಗೆಗೆ ತೊಂದರೆಯಾಗಿ ಅವುಗಳು ಪೋಷಕಾಂಶಗಳನ್ನು  ಮತ್ತು ನೀರನ್ನು ಹೀರಿಕೊಳ್ಳಲಾಗುವುದಿಲ್ಲ. ಆದ್ದರಿಂದ ಕೂಳೆ ಕೊಚ್ಚಿದ ನಂತರ ನೇಗಿಲಿನ ಸಹಾಯದಿಂದ ಸಾಲಿನ ಎರಡು ಪಕ್ಕ ಮಗ್ಗಲನ್ನು ಕೊರೆದು ಮಣ್ಣನ್ನು ಸಡಿಲಗೊಳಿಸುವುದು ಅತ್ಯವಶ್ಯಕ. ಇದರಿಂದ ಮಣ್ಣಿನಲ್ಲಿ ಗಾಳಿಯಾಡಲು ಅನುಕುಲವಾಗುತ್ತದೆ, ಬೇರಿನ ಬೆಳವಣಿಗೆ ಉತ್ತಮಗೊಂಡು, ಮೊಳಕೆಯ ಪ್ರಮಾಣ ಹೆಚ್ಚುತ್ತದೆ.
  4. ಪೋಷಕಾಂಶ ನಿರ್ವಹಣೆ : ಕೂಳೆ ಬೆಳೆಯಲ್ಲಿ ಇಳುವರಿ ಕಡಿಮೆಯಾಗಲು ಅಸಮತೋಲನ ಮತ್ತು ಅಸಮರ್ಪಕ ಪೊಷಕಾಂಶಗಳ ಬಳಕೆಯು ಒಂದು ಕಾರಣ. ಕೂಳೆ ಬೆಳೆಯ ಎರಡು ಪಕ್ಕ ಅಥವಾ ಮಗ್ಗಲು ಕೊರೆದ ಸಾಲಿನಲ್ಲಿ ಎಕರೆಗೆ 10 ಟನ್ ಪ್ರಮಾಣದಲ್ಲಿ ಕೊಟ್ಟಿಗೆ ಗೊಬ್ಬರ ಒದಗಿಸಬೇಕು. ಪ್ರತಿ ಎಕರೆಗೆ ಸಾರಜನಕ (100 ಕೆ.ಜಿ.), ರಂಜಕ (40 ಕೆ.ಜಿ.) ಮತ್ತು ಪೊಟ್ಯಾಷ್ (50 ಕೆ.ಜಿ.) ರಸಗೊಬ್ಬರವನ್ನು  ನೇರ ಅಥವಾ ಕಾಂಪ್ಲೆಕ್ಸ್ ರಸಗೊಬ್ಬರಗಳ ಮುಖಾಂತರ ಒದಗಿಸಬೇಕಾಗುತ್ತದೆ. ಮೊದಲ ಕಂತನ್ನು ಕೂಳೆ ಬಿಟ್ಟ ಒಂದು  ತಿಂಗಳಲ್ಲಿ ಶೇ. 30 ರಷ್ಟು ಸಾರಜನಕ ಮತ್ತು ಪೂರ್ಣ ಪ್ರಮಾಣದ ರಂಜಕ ಮತ್ತು ಪೋಟ್ಯಾಷ್‌ನ್ನು ಸಾಲಿನಲ್ಲಿ ಒದಗಿಸಬೇಕು. ಇನ್ನುಳಿದ ಸಾರಜನಕವನ್ನು ಎರಡು ಸಮಾನ  ಕಂತುಗಳಲ್ಲಿ 2 ಮತ್ತು 3ನೇ ತಿಂಗಳಲ್ಲಿ ಒದಗಿಸಬೇಕಾಗುತ್ತದೆ. ಇದಕ್ಕಾಗಿ ಕೆಳಕಂಡ ಕೋಷ್ಟಕದಲ್ಲಿ ಸೂಚಿಸಿರುವ ಪ್ರಮಾಣದಲ್ಲಿ ಗೊಬ್ಬರ ಕೊಡಬೇಕಾಗುತ್ತದೆ.
  5. ಪಿಗ್ಗುಳಿ ನೆಡುವುದು: ಸಾಮಾನ್ಯವಾಗಿ ಕೂಳೆ ಕಬ್ಬಿನಲ್ಲಿ ನಾಟಿ ಕಬ್ಬಿಗಿಂತ ಶೇ. 30 ರಷ್ಟು ಸಸಿಗಳ ಸಂಖ್ಯೆ ಕಡಿಮೆಯಿರುತ್ತದೆ. ಇದರಿಂದಾಗಿ ಕೂಳೆ ಕಬ್ಬಿನ ಇಳುವರಿ ಕಡಿಮೆಯಾಗುತ್ತದೆ. ಕೂಳೆ ಕಬ್ಬಿನ ಸಾಲಿನಲ್ಲಿ 60 ಸೆಂ.ಮೀ. ಅಂತರದಲ್ಲಿ ಯಾವುದೇ ಕಬ್ಬಿನ  ಸಸಿಗಳು ಕಂಡುಬರದೇ ಇದ್ದಲ್ಲಿ, ಅಂತಹ ಜಾಗದಲ್ಲಿ, ಪಿಗ್ಗಿ ನೆಡುವುದು ಅತ್ಯವಶ್ಯಕ.
  6. ನೀರು ನಿರ್ವಹಣೆ: ಕೂಳೆ ಬಿಟ್ಟು ಪ್ರಾರಂಭದಲ್ಲಿ ತರಗು ಮಡಚಿ, ಕೂಳೆ ಕೊಚ್ಚಿ ಮಗ್ಗಲು ಕೊರೆದ ನಂತರ ನೀರು ಹಾಯಿಸಬೇಕು. ಕವಲೊಡೆಯುವ ಹಂತದಲ್ಲಿ ನೀರಿನ ಅವಶ್ಯಕತೆ ಹೆಚ್ಚು. ಮಣ್ಣು ಮತ್ತು ವಾತಾವರಣಕ್ಕನುಗುಣವಾಗಿ 8-15 ದಿನಗಳ ಅಂತರದಲ್ಲಿ ನೀರು ಹಾಯಿಸಬೇಕಾಗುತ್ತದೆ. ಕಟಾವು ಮಾಡುವ 15 ದಿನ ಮುಂಚಿತವಾಗಿ ನೀರು ತಪ್ಪಿಸಬೇಕಾಗುತ್ತದೆ ಎಚಿದು ಜಂಟಿ ನಿರ್ದೇಶಕರು ತಿಳಿಸಿದ್ದಾರೆ.
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಸರ್ಪಸಂಸ್ಕಾರವು ಈ ಶಾಪದಿಂದ ಮುಕ್ತಿಯನ್ನು ಒದಗಿಸುವ ಮಾರ್ಗ

ವಿವಾಹದ ವಿಳಂಬ, ಸಂತಾನದ ಕೊರತೆ, ಮತ್ತು ಆರ್ಥಿಕ ಅಡೆತಡೆಗಳಿಗೆ ಕಾರಣವಾಗಬಹುದು. ಸರ್ಪಸಂಸ್ಕಾರವು ಈ…

25 minutes ago

ಹವಾಮಾನ ವರದಿ | 31-07-2025 | ಇನ್ನೊಂದು ವಾಯುಭಾರ ಕುಸಿತದ ಲಕ್ಷಣ |

ಆಗಸ್ಟ್ 2ನೇ ವಾರದಲ್ಲಿ ತಮಿಳುನಾಡು ಕರಾವಳಿಯ ಸಮೀಪ ವಾಯುಭಾರ ಕುಸಿತದಂತಹ ತಿರುವಿಕೆ ಉಂಟಾಗುವ…

20 hours ago

ಆಧುನಿಕ ಯುಗದಲ್ಲಿ ತಂತ್ರಜ್ಞ ದಲ್ಲಾಳಿಗಳು

ಅಮಾಯಕ ನಾಗರಿಕರನ್ನು ಬಲಿಗೆ ಹಾಕುವ ಕಾನೂನು ಡಿಜಿಟಲ್ ಸಿಗ್ನೇಜರಿದ್ದು ಮಾತ್ರವಲ್ಲ, ಇನ್ನು ಅನೇಕ…

1 day ago

ಹಾವೇರಿಯಲ್ಲಿ ಕಳಪೆ ಗೊಬ್ಬರ ಹಾಗೂ ಕಳಪೆ ಬೀಜಗಳ ಮಾರಾಟ ಜಾಲ ಸಕ್ರಿಯ | ರಾಜ್ಯದ 639 ರೈತರಿಗೆ ವಂಚನೆ |

ಯೂರಿಯಾ ಗೊಬ್ಬರ ಅಭಾವದ ನಡುವೆಯೇ ರಾಜ್ಯದಲ್ಲಿ ಕಳಪೆ ಗೊಬ್ಬರ ಹಾಗೂ ಕಳಪೆ ಬೀಜಗಳ…

1 day ago

ಕಾಡಾನೆಗಳ ನಿಯಂತ್ರಣಕ್ಕೆ ಕೇಂದ್ರ ಅರಣ್ಯ ಸಚಿವರಿಗೆ ಸಂಸದ ಕೋಟಾ ಶ್ರೀನಿವಾಸ್ ಪೂಜಾರಿ ಮನವಿ

ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗಿದ್ದು ಕಾಡಾನೆಗಳ ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಳ್ಳುವಂತೆ…

2 days ago

ಕೊಡಗು ಜಿಲ್ಲೆಯಲ್ಲಿ ಭಾರಿ ಗಾಳಿ ಮಳೆ | 800 ಕ್ಕೂ ಅಧಿಕ ವಿದ್ಯುತ್‌ ಕಂಬಗಳಿಗೆ ಹಾನಿ – ವಿದ್ಯುತ್ ಸಂಪರ್ಕ ಅಸ್ತವ್ಯಸ್ತ

ಕೊಡಗು ಜಿಲ್ಲೆಯಲ್ಲಿ ಕಳೆದ ಐದಾರು ದಿನಗಳಿಂದ ಸುರಿದ ಭಾರಿ ಗಾಳಿ ಮಳೆಯಿಂದಾಗಿ ಸುಮಾರು…

2 days ago