ತಾಪಮಾನ – ಬರಗಾಲ – ಪೆನ್ ಡ್ರೈವ್ ಮತ್ತು ಸೆಕ್ಸ್… ಯಾವುದು ನಮ್ಮ ಆದ್ಯತೆಯಾಗಬೇಕು……. |

May 2, 2024
6:51 AM
ಈ ಬಾರಿ ಆಗಿರುವ ತಾಪಮಾನದ ಹೆಚ್ಚಳವನ್ನು ಕನಿಷ್ಠ ಮುಂದಿನ ಕೆಲವು ವರ್ಷಗಳಲ್ಲಾದರು ನಿಯಂತ್ರಣ ಮಾಡಲು ಸರ್ಕಾರಗಳು, ಮಾಧ್ಯಮಗಳು, ಜನರು ಪ್ರಯತ್ನಿಸಲೇಬೇಕಿದೆ.

ಬೆಂಗಳೂರಿನಲ್ಲಿ ಇತಿಹಾಸವೇ ಕಂಡರಿಯದ 41.8 ಡಿಗ್ರಿ ಸೆಲ್ಸಿಯಸ್ ತಾಪಮಾನ ಕೆಂಗೇರಿ ಬಳಿ ದಾಖಲಾಗಿದೆ. ಕಲ್ಬುರ್ಗಿಯಲ್ಲಿ 42.7 ಡಿಗ್ರಿ ಸೆಲ್ಸಿಯಸ್, ಈಗಿನ ಅಲ್ಲಿನ ಸಂಸದರು ಚುನಾವಣಾ ಪ್ರಚಾರ ಸಮಯದಲ್ಲಿ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. ಕಾರಟಗಿಯಲ್ಲಿ 46 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ ಎಂಬ ಸುದ್ದಿ ಇದೆ. ಅಂದರೆ ನಾವೆಲ್ಲರೂ ಎಂತಹ ಅಪಾಯಕಾರಿ ಸ್ಥಿತಿಯಲ್ಲಿದ್ದೇವೆ ಎಂಬುದನ್ನು ನಾವೇ ಮರೆಯುತ್ತಿದ್ದೇವೆ ಅಥವಾ ನಿರ್ಲಕ್ಷಿಸುತ್ತಿದ್ದೇವೆ…..

Advertisement

ಚುನಾವಣೆಗಳು, ಪರೀಕ್ಷಾ ಫಲಿತಾಂಶಗಳು, ಶೇರು ಮಾರುಕಟ್ಟೆ, ಬಂಗಾರದ ಬೆಲೆ, ಧಾರ್ಮಿಕ ಆಚರಣೆಗಳು, ಭ್ರಷ್ಟಾಚಾರ ಇದೆಲ್ಲವೂ ತದನಂತರ. ಮೊದಲು ಬದುಕು ಮುಖ್ಯವಲ್ಲವೇ, ಬದುಕೇ ಇಲ್ಲದೆ, ಆರೋಗ್ಯವೇ ಇಲ್ಲದ ಮೇಲೆ ಉಳಿದ ವಿಷಯಗಳನ್ನು ಚರ್ಚಿಸುವುದಾದರೂ ಹೇಗೆ, ಜೊತೆಗೆ ರಾಜ್ಯದಲ್ಲಿ ಭೀಕರ ಬರಗಾಲ ಬಂದಿದೆ. ಎಷ್ಟೋ ಕೆರೆಕಟ್ಟೆಗಳು ಒಣಗಿವೆ, ಕುಡಿಯಲು ಮನುಷ್ಯರಿಗೂ, ದನ ಕರುಗಳಿಗೂ, ಕಾಡುಪ್ರಾಣಿಗಳಿಗೂ ನೀರೇ ಇಲ್ಲ‌. ಬೆಳೆಗಳು ಸಂಪೂರ್ಣ ಒಣಗಿ ನಾಶವಾಗಿದೆ. ಇಂತಹ ಸಂದರ್ಭದಲ್ಲಿ ನಮ್ಮ ಮಾಧ್ಯಮಗಳ, ಸರ್ಕಾರಗಳ, ಆದ್ಯತೆ ಏನಾಗಿದೆ ಎಂಬುದೇ ನಾಚಿಕೆಗೇಡಿನ ವಿಷಯವಾಗಿದೆ….

ಮಾನನಷ್ಟ – ಮಾನಹಾನಿ – ಸೇಡು – ಅಸೂಯೆ – ಆರೋಪ – ದ್ವೇಷ – ಸಿಡಿ – ಪೆನ್ ಡ್ರೈವ್ – ಕಾಮಪುರಾಣ ಇವುಗಳ ನಡುವೆ, ಮರೆಯಾಗುತ್ತಿರುವ ಪರಿಸರ, ಆರೋಗ್ಯ, ಮಾನ ಮರ್ಯಾದೆ, ಜೀವ ಹಾನಿ, ಸರ್ಕಾರ, ಮಾಧ್ಯಮಗಳ ಮತ್ತು ಜನಸಾಮಾನ್ಯರ ಅರಿವಿಗೆ ಬರುತ್ತಿಲ್ಲ ಎಂದು ಕಾಣುತ್ತದೆ….

ಜೀವವಿದ್ದರೆ ಜೀವನ, ಜೀವನವಿದ್ದರೆ ಮಾನ ಮರ್ಯಾದೆ. ಈಗ ಜೀವಕ್ಕೇ ಕುತ್ತು ತರುತ್ತಿರುವ ಬರಗಾಲ, ಅತಿಯಾದ ತಾಪಮಾನವನ್ನು ನಾವು ನಿರ್ಲಕ್ಷಿಸುತ್ತಿದ್ದೇವೆ. ಅಭಿವೃದ್ಧಿಯ, ಹಣದ ಅಹಂಕಾರ ನಮ್ಮನ್ನು ದಾರಿತಪ್ಪುವಂತೆ ಮಾಡುತ್ತಿದೆ…..

ನಮ್ಮ ದೇಶದ ಒಬ್ಬ ಅತ್ಯಂತ ಪ್ರಮುಖ ಸಂಸದನಿಗೆ ತನ್ನ ದೇಹ ಮತ್ತು ಮನಸ್ಸಿನ ಮೇಲೆಯೇ ನಿಯಂತ್ರಣವಿಲ್ಲ. ಆ ನಿಯಂತ್ರಣ ತಪ್ಪಿದ ಸಂಸದನನ್ನು ನಿಯಂತ್ರಿಸಲು ಪೋಷಕರು ಮತ್ತು ರಾಜಕಾರಣಿಗಳಿಗೆ ಸಾಧ್ಯವಾಗುತ್ತಿಲ್ಲ ಅಥವಾ ಆಡಳಿತ ವ್ಯವಸ್ಥೆ ಸಹ ವಿಫಲವಾಗಿದೆ. ಮಾಧ್ಯಮಗಳು ಸಹ ಅದರ ವೈಭವೀಕರಣದ ಲಾಭ ಪಡೆಯುತ್ತಿವೆ. ಬದಲಾವಣೆ, ಪರಿವರ್ತನೆ ಸರಿದಾರಿ ಮತ್ತು ಪರ್ಯಾಯ ಮಾರ್ಗಗಳ ಬಗ್ಗೆ ಯಾರು ಯೋಚಿಸುತ್ತಿಲ್ಲ. ತಪ್ಪು ಸರಿಯ ಮಧ್ಯೆ ಇರುವ ಅಂತರವನ್ನು ಕಡಿಮೆ ಮಾಡುತ್ತಾ ವಿಷಯಗಳನ್ನು ಗೊಂದಲಗೊಳಿಸುತ್ತಾ, ನೈತಿಕ – ಅನೈತಿಕತೆಯ ಬಗ್ಗೆ ಒಬ್ಬೊಬ್ಬರು ಅವರವರ ದೃಷ್ಟಿಕೋನದಲ್ಲಿ ಮಾತನಾಡಿಕೊಳ್ಳುತ್ತಾ, ಕಾನೂನು ಮತ್ತು ಪ್ರಾಕೃತಿಕ ಸಹಜತೆಯನ್ನು ಸಂಪೂರ್ಣ ದಿಕ್ಕು ತಪ್ಪಿಸುತ್ತಿದ್ದಾರೆ……..

ಆಧುನಿಕ ತಂತ್ರಜ್ಞಾನದ ಬೆಳವಣಿಗೆಯಲ್ಲಿ ಈ ಮೊಬೈಲ್ ಕ್ಯಾಮೆರಾ ಅಥವಾ ಹಿಡನ್ ಕ್ಯಾಮೆರಾ ಒಂದು ದೊಡ್ಡ ಕ್ರಾಂತಿಯನ್ನೇ ಮಾಡುತ್ತಿದೆ. ಅದರ ಒಳ್ಳೆಯ ಉಪಯೋಗಗಳು ಸಾಕಷ್ಟು ಇದೆ. ಅದನ್ನು ಇಲ್ಲಿ ವಿವರಿಸುವ ಅವಶ್ಯಕತೆ ಇಲ್ಲ. ಹಾಗೆಯೇ ಅದರ ದುರುಪಯೋಗಗಳು ಸಹ ಸಾಕಷ್ಟು ಇವೆ. ಆದರೆ ಜನರ ಮುಖವಾಡಗಳನ್ನು ಬಯಲು ಮಾಡುವ ಒಂದು ಸಾಧನವಾಗಿ ಕ್ರಾಂತಿಕಾರಕವಾಗಿ ಈ ಕ್ಯಾಮರಾಗಳು ಕೆಲಸ ಮಾಡುತ್ತಿರುವುದಂತೂ ನಿಜ. ಹಾಗೆಂದು ಅಪರಾಧಗಳೇನು ಕಡಿಮೆಯಾಗಿಲ್ಲ‌ ಬೇರೆ ಬೇರೆ ರೂಪದಲ್ಲಿ ಪ್ರಕಟವಾಗುತ್ತಿದೆ…….

ಆದರೆ ಅಂತಿಮವಾಗಿ ಜೊಳ್ಳು ಮತ್ತು ಕಾಳುಗಳ ವಿಂಗಡಣೆ ಈ ಕ್ಯಾಮರಾಗಳಿಂದ ಸಾಧ್ಯವಾಗಬಹುದೇ, ಹಾಗಾಗಬೇಕಾದರೆ ಮಾನನಷ್ಟ, ಮಾನಹಾನಿ, ನೈತಿಕತೆ, ಅನೈತಿಕತೆ ಇವುಗಳ ಬಗ್ಗೆ ಒಂದಷ್ಟು ವಾಸ್ತವಿಕ ಪ್ರಜ್ಞೆ ಬೆಳೆಸಿಕೊಳ್ಳಬೇಕಾಗುತ್ತದೆ. ಉದಾಹರಣೆಗೆ ಅನೇಕ ರಾಜಕಾರಣಿಗಳು ಅದರಲ್ಲೂ ಮಾಜಿ ಮುಖ್ಯಮಂತ್ರಿಗಳು, ಮಂತ್ರಿಗಳು, ಶಾಸಕರು, ಕೆಲವು ಉದ್ಯಮಿಗಳು, ಜನಪ್ರಿಯ ವ್ಯಕ್ತಿಗಳು, ನ್ಯಾಯಾಲಯಗಳಿಗೆ ಹೋಗಿ ತಮ್ಮ ವಿರುದ್ಧ ಮಾನಹಾನಿ ಸುದ್ದಿಗಳು ಮುಖ್ಯವಾಗಿ ಸಿಡಿಗಳು, ಪೆನ್ ಡ್ರೈವ್ ಗಳು ಅವರ ರಾಸಲೀಲೆಗಳು ಪ್ರಸಾರವಾಗದಂತೆ ತಡೆಯಾಜ್ಞೆ ತರುತ್ತಿದ್ದಾರೆ. ನಿನ್ನೆ ಸಹ ಮಾಜಿ ಉಪಮುಖ್ಯಮಂತ್ರಿ ಈಶ್ವರಪ್ಪನವರ ಮಗ ಕಾಂತೇಶ್ ಅವರು ತಡೆ ಯಜ್ಞ ತಂದಿದ್ದಾರೆ ಎಂದು ಪತ್ರಿಕೆಗಳಲ್ಲಿ ಪ್ರಕಟವಾಗಿದೆ….

ಕೋರ್ಟ್ ಗಳು ಸಹ ಯಾವುದೋ ಆಧಾರದ ಮೇಲೆ ತಡೆಯಾಜ್ಞೆ ನೀಡುತ್ತಿವೆ. ಈಗಾಗಲೇ ಯಾರಾದರೂ, ಯಾರಿಗಾದರೂ, ಯಾವುದೇ ರೀತಿಯಲ್ಲಿ, ಮಾನಹಾನಿ ಉಂಟು ಮಾಡಿದರೆ ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವ ಅವಕಾಶ ಮತ್ತು ಕಾನೂನು ಇದೆ. ಅದರ ನಂತರವೂ ಈ ತಡೆಯಾಜ್ಞೆ ವಿಚಿತ್ರವೆನಿಸುತ್ತದೆ. ನಿರ್ದಿಷ್ಟ ಘಟನೆಗೆ ಅದು ಘಟಿಸುವ ಮುನ್ನವೇ, ಮಾನಹಾನಿಯಾಗುವ ಮೊದಲೇ ಅಥವಾ ಅದರ ಊಹೆ, ನಿರೀಕ್ಷೆಯಲ್ಲೇ, ವ್ಯಕ್ತಿಯೊಬ್ಬ ಅದರ ವಿರುದ್ಧ ನ್ಯಾಯಾಲಯಕ್ಕೆ ಹೋಗುವುದು ಜನಸಾಮಾನ್ಯರಿಗೆ ಅನುಮಾನ ಮೂಡಿಸುತ್ತದೆ……

ನ್ಯಾಯಾಲಯಗಳು ಸಹ ಈ ಅರ್ಜಿಗಳಿಗೆ, ಮನವಿಗಳಿಗೆ ತಡೆಯಾಜ್ಞೆ ನೀಡುವ ಮುನ್ನ, ದೂರುದಾರರು ಯಾರ ಮೇಲೆ ಅನುಮಾನ ವ್ಯಕ್ತಪಡಿಸಿ ದೂರು ನೀಡುತ್ತಿದ್ದಾರೆ, ಅದು ಯಾವ ಸಿಡಿ ಇರಬಹುದು, ಆ ಸಿಡಿಯಲ್ಲಿ ಏನಿದೆ ಎನ್ನುವ ಭಯ ಇವರಿಗೆ ಕಾಡುತ್ತಿದೆ, ಆ ಸಿ ಡಿ ಯಾರ ಬಳಿ ಇರಬಹುದು ಎಂಬುದನ್ನು ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಡಬೇಕು ಎಂಬ ಷರತ್ತು ಹಾಗೂ ಸ್ಪಷ್ಟತೆ ಮತ್ತು ನ್ಯಾಯಾಲಯವು ಅದನ್ನು ಸಂಬಂಧಪಟ್ಟ ಪೊಲೀಸ್ ಅಧಿಕಾರಿಗೆ ಮಾಹಿತಿ ನೀಡಿ ಶೀಘ್ರವೇ ತನಿಖೆಯನ್ನು ಆರಂಭಿಸಬೇಕು. ಕೇವಲ ಪ್ರಚಾರ ಮಾಡಬೇಡಿ ಎಂದು ತಡೆಯಾಜ್ಞೆ ನೀಡಿದ ಮಾತ್ರಕ್ಕೆ ಆ ಸಿಡಿಯ ಅಪರಾಧ ಹಾಗೆ ಮುಚ್ಚಿ ಹೋಗುತ್ತದೆ…..

ಒಂದು ವೇಳೆ ಯಾರಾದರೂ ಕೃತಕವಾಗಿ ನಮ್ಮ ಮೇಲೆ ತಂತ್ರಜ್ಞಾನದ ಸಹಾಯದಿಂದ ಅಶ್ಲೀಲ ದೃಶ್ಯಗಳನ್ನ ಚಿತ್ರಿಸಿದ್ದರೆ ಅದು ಸಹ ತನಿಖೆಯಾಗಲಿ ಆಗಲಿ ಮತ್ತು ವಾಸ್ತವ ಬಯಲಾಗಲಿ. ಅದನ್ನು ಹೊರತುಪಡಿಸಿ ಸುಮ್ಮನೆ ಯಾವುದೋ ಭಯದ ಆಧಾರದ ಮೇಲೆ ಘಟಿಸದ ಘಟನೆಗಳಿಗೆ ತಡೆಯಾಜ್ಞೆ ನೀಡುವುದು ವಿಚಿತ್ರವೆನಿಸುತ್ತದೆ ಜೊತೆಗೆ ಕೆಲವು ರಾಜಕಾರಣಿಗಳು ದಾರಿ ತಪ್ಪುತ್ತಿರುವುದು ಕಂಡು ಬರುತ್ತಿದೆ. ಅಲ್ಲದೆ ಎಂದಿನಂತೆ ಮಾಧ್ಯಮಗಳೇ ತನಿಖೆಯ ಜವಾಬ್ದಾರಿ ತೆಗೆದುಕೊಂಡಂತೆ ಅಪರಾಧಿ ಮತ್ತು ಅಪರಾಧವನ್ನು ಹೊರತುಪಡಿಸಿ, ರಾಜಕಾರಣಿಗಳ, ಅದಕ್ಕೆ ಸಂಬಂಧಪಟ್ಟವರ ಹೇಳಿಕೆಗಳನ್ನು ಪಡೆಯುತ್ತಾ ಇಡೀ ಘಟನೆಯನ್ನೇ ಗೊಂದಲಮಯಗೊಳಿಸಿ ದಾರಿ ತಪ್ಪಿಸುತ್ತಿದ್ದಾರೆ…..

ಕಾಮ ಪುರಾಣದ ಬಹುಮುಖ್ಯ ಅಂಶ ಮಹಿಳೆಯ ಘನತೆ, ಶೋಷಣೆ ಮತ್ತು ಕೀಚಕ ಮನೋಭಾವದ ವ್ಯಕ್ತಿಯ ನಡವಳಿಕೆ ಮತ್ತು ಆತನಿಗೆ ಶಿಕ್ಷೆ ಮುಖ್ಯವಾಗಿ ಚರ್ಚಿಸಬೇಕಿದೆ. ಮತ್ತು ಮುಂದೆ ಈ ರೀತಿಯ ಘಟನೆಗಳಾಗದಂತೆ ತಡೆಯಬೇಕಿದೆ. ಅದನ್ನು ಹೊರತು ಪಡಿಸಿದ ಮಿಕ್ಕಿದ್ದೆಲ್ಲವೂ ಕೇವಲ ಬಾಯಿ ಚಪಲಗಳು ಮಾತ್ರವಾಗಿರುತ್ತದೆ….

ಜೊತೆಗೆ ಇದೆಲ್ಲದರುಗಳ ನಡುವೆ ಈ ಬಾರಿ ಆಗಿರುವ ತಾಪಮಾನದ ಹೆಚ್ಚಳವನ್ನು ಕನಿಷ್ಠ ಮುಂದಿನ ಕೆಲವು ವರ್ಷಗಳಲ್ಲಾದರು ನಿಯಂತ್ರಣ ಮಾಡಲು ಸರ್ಕಾರಗಳು, ಮಾಧ್ಯಮಗಳು, ಜನರು ಪ್ರಯತ್ನಿಸಲೇಬೇಕಿದೆ. ಮುಖ್ಯವಾಗಿ ಅರಣ್ಯ ಇಲಾಖೆ, ಪರಿಸರ ಇಲಾಖೆ, ಕೈಗಾರಿಕೆ, ರಸ್ತೆ ಅಭಿವೃದ್ಧಿ, ನೀರಾವರಿ ಇಲಾಖೆಗಳು ಯುದ್ದೋಪಾದಿಯಲ್ಲಿ ಸಾಧ್ಯವಿರುವ ಕ್ರಮಗಳನ್ನು ಕೈಗೊಂಡು ಜನರನ್ನು ಕಾಪಾಡಬೇಕಿದೆ. ಇಲ್ಲದಿದ್ದರೆ ಮುಂದಿನ ಕೆಲವೇ ವರ್ಷಗಳಲ್ಲಿ ತಾಪಮಾನದ ಹೊಡೆತಕ್ಕೆ ಮನುಷ್ಯ ತತ್ತರಿಸಬೇಕಾಗುತ್ತದೆ, ರಸ್ತೆಗಳಲ್ಲೇ ಪ್ರಾಣ ಕಳೆದುಕೊಳ್ಳಬೇಕಾಗುತ್ತದೆ, ಊರು ಬಿಟ್ಟು ವಲಸೆ ಹೋಗಬೇಕಾಗುತ್ತದೆ. ಇದು ಖಂಡಿತ ಸತ್ಯ….

ಆದ್ದರಿಂದ ನಮ್ಮೆಲ್ಲರ ಆದ್ಯತೆ ಪರಿಸರ ರಕ್ಷಣೆ ಮತ್ತು ತಾಪಮಾನ ನಿಯಂತ್ರಣದ ಕಡೆಗಿರಲಿ. ಬದುಕೇ ಇಲ್ಲದ ಮೇಲೆ ಬದುಕಿನ ಬವಣೆಗಳಿಗೆ, ಮೌಲ್ಯಗಳಿಗೆ ಅರ್ಥವೇ ಇರುವುದಿಲ್ಲ. ದಯವಿಟ್ಟು ಯೋಚಿಸೋಣ ಮತ್ತು ಕಾರ್ಯೋನ್ಮುಖರಾಗೋಣ…..

ಬರಹ :
ವಿವೇಕಾನಂದ. ಎಚ್. ಕೆ
. 9844013068…….

Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ವಿವೇಕಾನಂದ ಎಚ್‌ ಕೆ

ಸಾಮಾಜಿಕ ಕಾರ್ಯಕರ್ತ ( ಪ್ರಬುದ್ಧ ಮನಸ್ಸು, ಪ್ರಬುದ್ಧ ಸಮಾಜ,ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ ಮನಸ್ಸುಗಳ ಅಂತರಂಗದ ಚಳವಳಿಯನ್ನು  ಜ್ಞಾನ ಭಿಕ್ಷಾ ಪಾದಯಾತ್ರೆಯ ಮೂಲಕ ನಡೆಸುತ್ತಿರುವ ಸಾಮಾಜಿಕ ಕಾರ್ಯಕರ್ತ)

ಇದನ್ನೂ ಓದಿ

ಒತ್ತುವರಿಯಾಗಿರುವ  ಕೆರೆಗಳನ್ನು ಮುಲಾಜಿಲ್ಲದೆ ತೆರವುಗೊಳಿಸಲು ಮುಖ್ಯಮಂತ್ರಿ ಸೂಚನೆ
April 25, 2025
7:47 AM
by: The Rural Mirror ಸುದ್ದಿಜಾಲ
ಭಾರತದಿಂದ ಅಫ್ಘಾನಿಸ್ತಾನಕ್ಕೆ 4.8 ಟನ್ ಜೀವರಕ್ಷಕ ಲಸಿಕೆ ರವಾನೆ
April 25, 2025
7:42 AM
by: The Rural Mirror ಸುದ್ದಿಜಾಲ
ಭ್ರಷ್ಟಾಚಾರದ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ  | ಉಪಲೋಕಾಯುಕ್ತ ಬಿ. ವೀರಪ್ಪ ಎಚ್ಚರಿಕೆ
April 25, 2025
7:31 AM
by: The Rural Mirror ಸುದ್ದಿಜಾಲ
ಇಂದು ಶೂನ್ಯ  ನೆರಳಿನ ದಿನ | ಪಿಲಿಕುಳದಲ್ಲಿ  ಪ್ರಾತ್ಯಕ್ಷಿಕೆ
April 24, 2025
6:29 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group