ಈಗಿನ ಹೆತ್ತವರ ಮಾತೇ ಹಾಗೆ. ನಾವು ಕಷ್ಟಪಟ್ಟಿದ್ದೇವೆ. ನಮ್ಮ ಮಕ್ಕಳು ಕಷ್ಟಪಡುವುದು ಬೇಡ. ನೋಡಿ ಪಾಲಕರೇ. ನೀವುಗಳು ಕಷ್ಟ ಪಟ್ಟಿರುವುದಕ್ಕೆ ಇವತ್ತು ಬದುಕನ್ನು ಜವಾಬ್ದಾರಿಯುತವಾಗಿ ನಡೆಸುತ್ತಿದ್ದೀರಿ. ನಮ್ಮ ಮಕ್ಕಳಿಗೂ ಕಷ್ಟಗಳು ಗೊತ್ತಾಗಲಿ. ಬದುಕಿನಲ್ಲಿ ನಮ್ಮ ಮಕ್ಕಳು ಸೋಲುವುದಕ್ಕೆ ನಾವುಗಳೇ ಕಾರಣವಾಗುವುದು ಬೇಡ. ಮಕ್ಕಳನ್ನು ಹೊಡೆಯದೇ ಬೈಯ್ಯದೇ ಬೆಳೆಸುವುದುಸಾಧ್ಯವೇ? ಹೇಗೆ !?
ಶಿಸ್ತು ಮತ್ತು ಶಿಕ್ಷೆಗೂ ವ್ಯತ್ಯಾಸ ಏನು? : ಸಾಮಾನ್ಯವಾಗಿ ಸಣ್ಣ ಮಕ್ಕಳಲ್ಲಿ ಸಮಯ ಪಾಲನೆಯೇ ದೊಡ್ಡ ಸವಾಲು. ಶಾಲೆ ಇದ್ದಾಗಲಂತೂ ಬೆಳ್ಳಂಬೆಳಗ್ಗೆ ಅಮ್ಮಂದಿರ ಹರ ಸಾಹಸ ಯಾರಿಗೂ ಬೇಡ.ನಾವು ಹೇಳಿದ ಹಾಗೆ ಕೇಳದೇ ಇದ್ದರೆ ಹೊಡಿಯುವುದೊಂದೇ ದಾರಿ ಅನ್ನುವ ಅಮ್ಮಂದಿರೇ!!ಕೇಳಿ…, ಎಲ್ಲವನ್ನೂ ಹೇಳಿಕೊಳ್ಳುವ ಅಂತ ಅನ್ನಿಸುವುದು ತಾಯಿಯ ಬಳಿ ಮಾತ್ರ. ತಾಯಿಯ ಬಳಿ ಮಗು ಏನನ್ನೂ ಹೇಳಿಕೊಳ್ಳಲು ಬಯಸುತ್ತಿಲ್ಲ ಎಂದಾದರೆ ನಾವು ತಾಯಂದಿರ ಸ್ಥಾನವನ್ನು ನಿರ್ವಹಿಸುವಲ್ಲಿ ಬಹಳಷ್ಟು ಎಡವಿದ್ದೇವೆ ಎಂದರ್ಥ.
ಮಕ್ಕಳಲ್ಲಿ ಮಿದುಳಿನ ಬೆಳವಣಿಗೆ ಐದು ವರ್ಷದ ಒಳಗೆ ನಡೆಯುತ್ತೆ. ಈ ಸಮಯದಲ್ಲಿ ಎಷ್ಟು ಸಾಧ್ಯವೋ ಅಷ್ಟು ಸಕಾರಾತ್ಮಕ ಕಲಿಕಾ ವಾತಾವರಣ ಕೊಡೋಣ. ಅನೇಕ ಬಾರಿ ಮಕ್ಕಳು ಉತ್ಸಾಹಭರಿತರಾಗಿ ಪ್ರಶ್ನಿಸೋದನ್ನೇ ‘ಅಧಿಕಪ್ರಸಂಗ’ ಎಂದು ಬಯ್ಯುತ್ತಾ ಬೊಬ್ಬಿಡುವ ಹೆತ್ತವರು, ಶಿಕ್ಷಕರು ಮಕ್ಕಳನ್ನು ಒಳ್ಳೆಯ ರೀತಿಯಲ್ಲಿ ಬೆಳೆಸುವುದು ಸಾಧ್ಯವೇ?
ನೀವು ಮಿದುಳನ್ನು ಸ್ಕ್ಯಾನಿಂಗ್ ಮಾಡುವುದೇ ಆದರೆ ಒಂದು ಪಾಸಿಟಿವ್ ವಾತಾವರಣದಲ್ಲಿ ಬೆಳವಣಿಗೆ ಹೊಂದಿದ ಮಗುವಿನ ಮಿದುಳು ಹಾಗೂ ನೆಗೆಟಿವ್ ವಾತಾವರಣದಲ್ಲಿ ಬೆಳೆದ ಮಗುವಿನ ಮಿದುಳನ್ನು ಪರೀಕ್ಷಿಸಿ ನೋಡಿ. ನೆಗೆಟಿವ್ ವಾತಾವರಣದಲ್ಲಿ ಬೆಳೆದ ಮಗುವಿನ ಮಿದುಳಿನಲ್ಲಿಸಾಕಷ್ಟು ಹಾನಿಗೊಳಗಾದ ಸ್ಥಿತಿಯನ್ನು ನಾವು ಕಾಣಬಹುದಾಗಿದೆ.
ಈ ಉದಾಹರಣೆಯನ್ನು ಗಮನಿಸಿ, ಇಲ್ಲಿ ಒಂದು ಹೋಲಿಕೆಯುಕ್ತ ಮಿದುಳಿನ MRI ಸ್ಕ್ಯಾನಿಂಗ್ ತೋರಿಸಲಾಗಿದೆ. ಇದು ಹೊರಗಡೆಯಿಂದ ಯಾವುದೇ ರೀತಿಯಲ್ಲಿ ಕಾಣುವುದಿಲ್ಲ. ಆದರೆ ಮಿದುಳಿನಲ್ಲಿ ಅದು ನಕಾರಾತ್ಮಕವಾಗಿ ಬೆಳೆಯುತ್ತಲೇ ಇರುವುದು. ಯಾವುದೇ ಉತ್ತಮ ಅಭ್ಯಾಸಕ್ಕೆ ಸಮಯ ಬೇಕಿರುತ್ತದೆ.
“ಕ್ರೋಧಾದ್ ಭವತಿ ಸಮ್ಮೋಹಃ ಸಮ್ಮೋಹಾತ್ ಸ್ಮೃತಿ ವಿಭ್ರಮ: |
ಸ್ಮೃತಿಭ್ರಂಶಾದ್ ಬುದ್ಧಿನಾಶೋ ಬುದ್ಧಿ ನಾಶಾತ್ ಪ್ರಣಶ್ಯತಿ ||ಅ 2.ಶ್ಲೋಕ63||
ಭಗವದ್ ಗೀತಾ ನುಡಿಯಂತೆ, ಅರ್ಥಾತ್ ನಮ್ಮ ಪಾಲಕರಿಗೆ ಮಕ್ಕಳು ಹೇಳಿದ್ದು ಕೇಳದೇ ಇದ್ದಾಗ ಕ್ರೋಧ ಬರುವುದು. ಕ್ರೋಧದಿಂದ ಸಂಮೋಹವು ಉಂಟಾಗುತ್ತದೆ; ಸಂಮೋಹದಿಂದ ಸ್ಮೃತಿಯ ಭ್ರಮೆಯುಂಟಾಗುತ್ತದೆ. ಸ್ಮೃತಿಭ್ರಮೆಯಿಂದ ಬುದ್ಧಿನಾಶವಾಗುತ್ತದೆ; ಯಾವುದು ಸರಿ, ಯಾವುದು ತಪ್ಪು ಎಂಬ ನಿರ್ಧಾರವನ್ನು ತೆಗೆದುಕೊಳ್ಳಲು ಸಾಧ್ಯವಾಗದ ಸ್ಥಿತಿಗೆ ತೆರಳುತ್ತೇವೆ. ಬುದ್ಧಿನಾಶವಾದಾಗ ಮನುಷ್ಯನು ಮತ್ತೆ ಐಹಿಕ ಪ್ರಪಂಚದಲ್ಲಿ ಮುಳುಗುತ್ತಾನೆ. ಮಗುವಿನ ಪಾಲನೆ ಪೋಷಣೆ ಕುರಿತಾದ ಚಿಂತನಾ ಲಹರಿಗಳ ಲಯ ತಪ್ಪಿ ಮಕ್ಕಳು ಬೆಳವಣಿಗೆ ಹಂತದಲ್ಲೇ ಕೊರತೆಯನ್ನು ಕಾಣುವಂತಾಗುತ್ತದೆ.
ನಾವು ಬೆಳೆದಿದ್ದ ವಾತಾವರಣ ಪಾಸಿಟಿವ್ ಆಗಿತ್ತು. ಆದರೆ ಈಗಿನ ಕಾಲಕ್ಕೆ ಹೋಲಿಸಿಕೊಂಡಲ್ಲಿ ಶೇ.99 ರಷ್ಟು ನೆಗೆಟಿವ್ ವಿಚಾರಗಳು ಮಕ್ಕಳ ಕಣ್ಣ ಮುಂದೆ ಹಾದುಹೋಗುತ್ತಿವೆ. ಇಲ್ಲಿ ‘ನೆಗೆಟಿವ್ ವಿಚಾರಗಳಿಂದ ನಮ್ಮ ಮಕ್ಕಳನ್ನು ರಕ್ಷಿಸುವುದೇ ದೊಡ್ಡ ಸಾಹಸ ಅಲ್ವೇ?’. ದುಡಿಮೆಯ ಹೋರಾಟದಲ್ಲಿ, ಸಂಪಾದನೆಯ ಓಟದಲ್ಲಿ ನಮ್ಮ ಮಗುವಿನ ನಡಿಗೆಯನ್ನು ಗಮನಿಸುವುದನ್ನೇ ಮರೆತಿದ್ದೇವೆ. ಮಗುವಿನ ತಲೆಗೆ 26 ಅಕ್ಷರಗಳನ್ನು ತುರುಕಿಸುವ ನಿರಂತರ ಪ್ರಯತ್ನದಲ್ಲಿ ಮಗುವಿನ ಸಾಮರ್ಥ್ಯವನ್ನುಹೋಲಿಕೆಯೊಂದಿಗೆ ಅಳೆಯುವಮತ್ತು ಕೆಲವೊಮ್ಮೆ ಅಲ್ಲಗೆಳೆಯುವ ಸ್ಥಿತಿಗೆ ತೆರಳುತ್ತಿದ್ದೇವೆ. ಎಲ್ಲಾ ಮಕ್ಕಳು ಶಾಲೆಗೆ ತೆರಳುವರು. ಆಡುವರು, ಬರೆಯುವರು ಹಾಗೂ ನಲಿಯುವರು. ಇದರಲ್ಲೇನೂ ವ್ಯತ್ಯಾಸ ಇಲ್ಲ. ವ್ಯತ್ಯಾಸ ಇರುವುದು ಮಗು ಬೆಳೆಯುವ ವಾತಾವರಣ ಹಾಗೂ ಅದರ ಆಸಕ್ತಿಯ ಕ್ಷೇತ್ರದಲ್ಲಿ ಮಾತ್ರ. ಮಗುವಿನ ಆಸಕ್ತಿಯನ್ನು ನಾವು ಹೇಗೆ ಹೆಚ್ಚಿಸುತ್ತಿದ್ದೇವೆ ಎನ್ನುವ ಚಿಂತನೆ ಸದಾ ಇರಲಿ.
ಮಕ್ಕಳ ವೇಗವನ್ನೇನಾದರೂ ಬಲ್ಲಿರಾ? ಮಕ್ಕಳನ್ನು ಬಹುಮುಖ ಪ್ರತಿಬೆಗಳತ್ತ ಸೆಳೆಯಿರಿ. ಹೀಗೆ ಸೆಳೆಯಬೇಕೆಂದರೂ ಪಾಲಕರಲ್ಲೂ ಪ್ರಾಮಾಣಿಕವಾಗಿ ತೊಡಗಿಸಿಕೊಳ್ಳುವ ಪ್ರಯತ್ನ ಮುಖ್ಯ. ನಾವು ನುಡಿದು- ನಡೆದಂತೆ ನಮ್ಮ ಮಕ್ಕಳ ಯೋಚನೆಗಳು ರೂಪುಗೊಳ್ಳುತ್ತವೆ. ಮಗುವಿನ ಆದರ್ಶ ನಡೆಗೆ ಮೊದಲ ಕಾರಣವೇ ಹೆತ್ತವರು. ‘ನಾವೇ ಎಡವಿದ್ದೇವೆ ಎಂದಾದರೆ ಮಗು ಬೀಳದಿರಲು ಸಾಧ್ಯವೇ?’ ನಾವು ಬಹಳಷ್ಟು ಬಾರಿ ಮಕ್ಕಳ ಮುಂದೆ ಅದು ಮಾಡಲೇ ಬಾರದ ಕೆಲಸಗಳ ಬಗ್ಗೆ ಮಾತ್ರವೇ ಮಾತನಾಡುತ್ತೇವೆ. ಹಾಗಿದ್ದರೆ ಆ ಮಗುವಿಗೆ ಏನು ಮಾಡಬೇಕು ಎಂಬುದು ತೋಚದೇ ಇರಬಹುದು. ಅದು ಪ್ರತಿಬಾರಿಯೂ ನಿಮಗಿಷ್ಟ ಇಲ್ಲದೇ ಇರುವ ಕೆಲಸಗಳನ್ನು ಮಾಡುತ್ತಿರಬಹುದು. ಯಾವುದು ಒಳ್ಳೆಯ ಅಭ್ಯಾಸ ಎಂಬುವುದನ್ನು ಹೇಳಲು ಮರೆತಿರುವ ಪಾಲಕರ ಮಕ್ಕಳು ಇನ್ನೇನು ತಾನೆ ಮಾಡಲು ಸಾಧ್ಯ.
ಇವೆಲ್ಲದರ ಬದಲಿಗೆ ಯಾವ ಕಾರ್ಯ ಹೇಗೆ ಮಾಡಬೇಕು ಎಂಬುವುದನ್ನು ಮಗುವಿನೊಂದಿಗೆ ಇದ್ದು ನಿರ್ವಹಿಸೋಣ. ಸಾಕಷ್ಟು ಸಮಯ ನೀಡೋಣ. ಮೊಬೈಲ್ ಹೊರತಾಗಿ ಮಗುವಿಗೆ ನೀಡುವ ಚಟುವಟಿಕೆಗಳನ್ನು ಮೊದಲೇ ಸಿದ್ಧಪಡಿಸಿ. ಅವುಗಳಲ್ಲಿ ಕುಳಿತುಕೊಂಡು ಮಾಡುವ, ಓಡಾಡುವ, ಅದರ ಖುಷಿಯನ್ನು ಹಾಗೂ ಆಸಕ್ತಿಯನ್ನು ಹೆಚ್ಚಿಸುವ , ಬುದ್ಧಿಶಕ್ತಿಯನ್ನು ಹೆಚ್ಚಿಸುವ, ಮಿದುಳಿಗೆ ಕೆಲಸ ನೀಡುವ ಚಟುವಟಿಕೆಯನ್ನು ನೀಡಿರಿ.ಮಗುವಿಗೆ ಯೋಚಿಸಲು ಸಾಕಷ್ಟು ಅವಕಾಶ ನೀಡಿ. ಅವುಗಳನ್ನು ವ್ಯಕ್ತಪಡಿಸಲು ಸಮಯ ಕೊಡಿ. ಮಗುವಿಗೂ ಪಾಲಕರೊಂದಿಗೆ ಚರ್ಚಿಸಿ ನಿರ್ಧಾರಗಳನ್ನು ತೆಗೆದುಕೊಳ್ಳಲು ಪ್ರೇರೇಪಿಸಿ.ಮಗುವಿನ ತಪ್ಪುಗಳನ್ನು ತಿದ್ದುವ ಮುನ್ನ ಮಗುವಿನ ಭಾವನೆಗಳೊಂದಿಗೆ ನೀವು ಬೆರೆಯಿರಿ. ಪಾಲಕರು ಹಾಗೂ ಮಕ್ಕಳ ನಡುವಿನ ಅಂತರವನ್ನು ಕಡಿಮೆ ಮಾಡುವ ಪ್ರಯತ್ನ ನಿರಂತರವಾಗಿರಲಿ. ಮಗುವಿಗೆ ತಾಯಿಯ ಬಗ್ಗೆ ಗೌರವದ ಮಾತುಗಳನ್ನು ಹಾಗೂ ತಾಯಿಯೇ ಅತ್ಯಂತ ಶ್ರೇಷ್ಠ ಎಂಬುದನ್ನು ತಂದೆ ಹೇಳುತ್ತಿರಬೇಕು. ಅಂತೆಯೇ ತಾಯಿಯೂ ತಂದೆಯ ಕುರಿತಂತೆ ಹೆಮ್ಮೆಯ ಮಾತುಗಳನ್ನು ಆಡುತ್ತಲಿರಬೇಕು.
