ಮಹಾತ್ಮ ಗಾಂಧೀಜಿ ಅವರು ಹೇಳಿದಂತೆ ಹಳ್ಳಿಗಳು ಅಭಿವೃದ್ಧಿ ಹೊಂದಿದರೆ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ. ಈ ನಿಟ್ಟಿನಲ್ಲಿ ಕೃಷಿ ಚಟುವಟಿಕೆಗಳಿಗೆ ಹೆಚ್ಚಿನ ಆದ್ಯತೆ ನೀಡುವ ಅಗತ್ಯವಿದೆ. ಬೆಳೆಗಳಿಗೆ ಸೂಕ್ತ ಮಾರುಕಟ್ಟೆ , ತನ್ನ ಮೌಲ್ಯವರ್ಥಿತ ಬೆಲೆ ಸಿಕ್ಕರೆ ರೈತರಿಗೆ ಅನುಕೂಲವಾಗಲಿದೆ ಎಂದು ಕೃಷಿ ವಿಜ್ಞಾನ ವಿಶ್ವವಿದ್ಯಾಲಯದ ಕುಲಪತಿ ಡಾ. ಎಂ. ಹನುಮಂತಪ್ಪ ಹೇಳಿದರು.
ಎಂ ಎಸ್ ಎಂ ಇ ದಿನಾಚರಣೆ ಹಿನ್ನೆಲೆಯಲ್ಲಿ ಬಳ್ಳಾರಿಯಲ್ಲಿ ಕೃಷಿ ಕ್ಷೇತ್ರದಲ್ಲಿ ಎಂ ಎಸ್ ಎಂ ಇ ಗಳ ಪಾತ್ರ ಕುರಿತ ಒಂದು ದಿನದ ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು. ಲೆಕ್ಕ ಪರಿಶೋಧಕ ಹಾಗೂ ಎಂ ಎಸ್ ಎಂ ಇ ದಿನಾಚರಣೆ ಕಾರ್ಯಕ್ರಮದ ಸಂಚಾಲಕ ಸಿರಿಗೇರಿ ಪೊನ್ನರಾಜ ಮಾತನಾಡಿ, ದೇಶದಲ್ಲಿ ಕಾರ್ಪೋರೇಟ್ ವಲಯದ ಉದ್ಯಮಗಳು ಶೇಕಡ 30ರಷ್ಟು ಉದ್ಯೋಗ ನೀಡಿದರೆ, ಸಣ್ಣ, ಅತಿ ಸಣ್ಣ, ಮಧ್ಯಮ ವಲಯದ ಕೈಗಾರಿಕೆಗಳು ಹಾಗೂ ಕೃಷಿ ಕ್ಷೇತ್ರದಲ್ಲಿ ಶೇಕಡ 70ರಷ್ಟು ಉದ್ಯೋಗ ನೀಡುತ್ತಿದೆ ಎಂದರು.
ಕೃಷಿ ಪ್ರಾಧ್ಯಾಪಕ ಡಾ. ಬಿ.ಕೆ. ರಮೇಶ್ ಮಾತನಾಡಿ, ದೇಶೀಯ ಪಶು ತಳಿಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಬೇಕಾಗಿದೆ. ಅದರಲ್ಲೂ ಮುರ್ರಾ ತಳಿಗಳ ಅಭಿವೃದ್ಧಿಯಿಂದ ಹಾಲಿನ ಉತ್ಪಾದನೆ ಹಾಗೂ ಹಾಲಿನ ಇನ್ನಿತರ ಉತ್ಪನ್ನಗಳು ಹೆಚ್ಚಲಿವೆ. ಇದರಿಂದ ಕೃಷಿಕರಿಗೆ ಸಹಕಾರಿಯಾಗಲಿದೆ ಎಂದು ಹೇಳಿದರು.
ಈ ವೇಳೆ ಜಿಲ್ಲಾ ಲೆಕ್ಕ ಪರಿಶೋಧನಾ ಸಂಸ್ಥೆಯ ಅಧ್ಯಕ್ಷ ಗಜರಾಜ, ಪದಾಧಿಕಾರಿಗಳಾದ ವಿಶ್ವನಾಥ್ ಆಚಾರಿ, ಸಪ್ನಾಪ್ರಿಯಾ, ಶರಣ್ ಪಾಟೀಲ್, ಸೇರಿದಂತೆ ಹಲವರು ಉಪಸ್ಥಿತರಿದ್ದರು.