ನಾವು ಪ್ರತಿ ವರ್ಷದಂತೆ ಪ್ರಸಕ್ತ ಈ ವರ್ಷದಲ್ಲಿಯೂ ನಮ್ಮ ಮನೆಯ ಎದುರಿನ “ಬಾಕಿಮಾರ್”(ಬಾಯಿತ್ಯರ್) 1 ಮುಡಿ ಗದ್ದೆಯಲ್ಲಿ(paddy field) ಈ ಸಲದ ಮುಂಗಾರಿನ(Monsoon) ತಡವಾದ ಆಗಮನದ ಕಾರಣದಿಂದ ತುಸು ತಡವಾದರೂ ಗದ್ದೆ ಉಳುಮೆ ಮಾಡಿ ಭತ್ತದ(paddy) ಬಿತ್ತನೆ ಮಾಡಿದೆವು.ನಾವು ಮೂರು ಕಾರಣಕೊಸ್ಕರ ಭತ್ತದ ಬೆಳೆ ಬೆಳೆಯುತ್ತೇವೆ . 1.)ಪ್ರತಿವರ್ಷ ನನ್ನ ಮನೆ ದೇವರು ಮತ್ತು ದೈವಗಳ “ತೆನೆ ಹಬ್ಬ” ಮಾಡಲು.2) ಮನೆಯ ಎದುರಿನ ಗದ್ದೆಯಲ್ಲಿ ಭತ್ತ ಬೆಳೆದರೆ ಮನೆಗೊಂದು ಶೃಂಗಾರವಾಗುತ್ತದೆ ಎಂದು. ಮೂರನೆಯ ಕಾರಣ ಕೊನೆಗೆ ಹೇಳುತ್ತೇನೆ.
ಬೆಳೆ ಏನೋ ಸ್ವಲ್ಪ ಪರವಾಗಿಲ್ಲ ಅನ್ನುವ ರೀತಿಯಲ್ಲಿ ಪೈರು ಬೆಳೆದು ನಿಂತಿತು.ಇತ್ತೀಚಿಗೆ ತೆನೆ ಫಸಲು ಕಟ್ಟಿ , ಕಟಾವಿಗೆ ಬಂತು. ಹಂದಿ, ಹಕ್ಕಿ, ನವಿಲು, ಇಲಿ ಹೆಗ್ಗಣ, ಇತರೆ ಪ್ರಾಣಿ ಪಕ್ಷಿಗಳು ತಿಂದುಂಡು ಕೊನೆಗೆ ಇನ್ನೇನೂ ಕಟಾವು ಮಾಡಲು ನನ್ನ ಅಪ್ಪನ ಆದೇಶದಂತೆ ಭತ್ತ ಕಟಾವು ಮಾಡುವ ಯಂತ್ರದವರನ್ನು ಸಂಪರ್ಕಸಿದೆ. ಕಳೆದ ಸಾರಿ ಕಟಾವಿಗೆ ಬಂದವ ನಾನು ಈಗ ಬೇರೆ ಕಡೆ ಕಟಾವು ಮಾಡುತ್ತಿದ್ದೇನೆ ಎಂದು ಹೇಳಿ ಇನ್ನೊಬ್ಬನ ಮೊಬೈಲ್ ನಂಬರ್ ಕೊಟ್ಟ .ಆ ಪುಣ್ಯಾತ್ಮ ತಮಿಳು ಭಾಷೆಯವ, ನನಗೆ ತಮಿಳು ಮಾತನಾಡಲು ಬರಲ್ಲ, ಆದರೆ ಅರ್ಥ ಆಗುತ್ತದೆ, ಏನೋ ಅರ್ಧಂಬರ್ಧ ಕನ್ನಡ ಮಿಶ್ರಿತ ತಮಿಳು ಮಾತನಾಡಿ ಅವನನ್ನು ಬರಲು ಹೇಳಿದೆ .ಆದರೆ ಆ ಪುಣ್ಯಾತ್ಮನಿಗೆ ಬೆಳ್ತಂಗಡಿ ಊರೆ ಹೊಸತು, ಏನು ಮಾಡುವುದು ಕೊನೆಗೆ ಅವನಿಗೆ ನನ್ನ ಮನೆಯ “location “ಕಳುಹಿಸಿದೆ. ಆದರೆ ಕೊನೆಗೆ ಅವನು ಬರಲೇ ಇಲ್ಲ.
ನಂತರ ಮತ್ತೊಬ್ಬ ಕಟಾವು ಮಾಡುವ ಯಂತ್ರದವನಿಗೆ ಫೋನಾಯಿಸಿದೆ .ಅವನು ನಾಳೆ ಬರುತ್ತೇನೆ ಅಂದ. ಅಬ್ಬಾ ಕೊನೆಗೂ ಒಬ್ಬ ಸಿಕ್ಕನಲ್ಲ ಅಂತ ಖುಷಿಯಾಯಿತು. ಮರುದಿವಸ ಮತ್ತೆ ಫೋನ್ ಮಾಡಿದೆ ಸಂಜೆ ಬರುತ್ತೀರಾ ಅಲ್ಲಾ ಬೆಳಗ್ಗೆಯ ಅಂಥ. ಆದರೆ ಅವನು ಮತ್ತೆ ನಾಳೆ ಅಂದ. ಆದರೆ ಮಾರನೇ ದಿನ ಕೂಡ ಅದೇ ಕಥೆ. ಮನೆಯಲ್ಲಿ ಅಪ್ಪನ ಸ್ವಲ್ಪ ಪಿರಿ – ಪಿರಿ ಜಾಸ್ತಿಯಾಯಿತು. ಕೊನೆಗೆ ಅಪ್ಪ ಅಂದರು ಯಾರು ಬೇಡ ಕೈಯಲ್ಲೇ ಕೊಯ್ಲು ಮಾಡುವ. ಕೈಯಲ್ಲೇ ಕೊಯ್ಯಲು ಈಗ ಯಾರೂ ಸಿಗುತ್ತಾರೆ.
ನಾವು ಮನೆಯವರೇ ಕುಯ್ದರೆ 10 ದಿನ ಬೇಕು. ಹಾಗೆ ನಮ್ಮ ಮನೆಗೆ ಮಾಮೂಲು ತೋಟದ ಕೆಲಸಕ್ಕೆ ಬರುವ ತಂಡ ಕೊಯ್ಯಲು ಬರುತ್ತಾರೆ ಎಂದು ಅಪ್ಪ ಹೇಳಿದರು. ಅದಕ್ಕೆ ಆಯ್ತು ಅಂದೆ. 10 ಜನ ಬಂದರೂ ಕೊಯ್ಲು ಅಂತು ಆಯ್ತು 2 ದಿನಕ್ಕೆ . 15,000 ರೂಪಾಯಿ ಮಜೂರಿ ಆಯ್ತು. ಗದ್ದೆ ಉಳುಮೆ ಮತ್ತು ಇತರ ಖರ್ಚು 10,000 . ಒಟ್ಟು ಇಪ್ಪತ್ತೈದು ಸಾವಿರ ವೆಚ್ಚವಾಯಿತು. ಭತ್ತ ಸುಮಾರು 7.5 ಕ್ವಿಂಟಾಲ್ ಸಿಕ್ಕಿತು. ಬೈ ಹುಲ್ಲು ಸುಮಾರು ನಮ್ಮ ಜಾನುವಾರುಗಳಿಗೆ 3-4 ತಿಂಗಳಿಗೆ ಬೇಕಾಗುವಷ್ಟು. ಒಟ್ಟು ಇಪ್ಪತ್ತು ಸಾವಿರ ರೂಪಾಯಿಯ ಫಸಲು ಕೈಗೆ ಸಿಕ್ಕಿತು. ಇದು ಭತ್ತ ಬೆಳೆಯುವ ರೈತನ ಕಷ್ಟ.
ಈಗ ನಾನು ಮೇಲೆ ಹೇಳಿದ ಮೂರನೇ ಕಾರಣ ಹೇಳುತ್ತೇನೆ.
ನಾವು ಭತ್ತ ಬೆಳೆಯುದು ಯಾಕಂದರೆ. ನಾವು ಬೆಳೆಯುವ ಭತ್ತದಿಂದ ಸುಮಾರು 5 ಕ್ವಿಂಟಾಲ್ ಅಕ್ಕಿ ಸಿಗುತ್ತದೆ, ಅದೇ ರೀತಿ ನಮ್ಮ ಜಾನುವಾರುಗಳಿಗೆ 3-4 ತಿಂಗಳ ಒಣ ಮೇವು ಸಿಗುತ್ತದೆ. ಒಂದು ವೇಳೆ ನಾವು ಭತ್ತದ ಬೆಳೆ ಬೆಳೆಯದಿದ್ದರೆ, ಆ 5 ಕ್ವಿಂಟಾಲ್ ಅಕ್ಕಿಗೆ ಮತ್ತು ಒಣ ಮೇವಿಗೆ ಬೇರೆ ಕಡೆ ಕೈ ಚಾಚಬೇಕು. ಆ ಅಕ್ಕಿನ ಮತ್ತೊಬ್ಬ ರೈತನೇ ಬೆಳೆಯಬೇಕು ತಾನೇ. ನಮಗೆ ಆ ಭತ್ತ ಬೆಳೆಯಲು ಇಪ್ಪತ್ತೈದು ಸಾವಿರ ರೂಪಾಯಿ ಖರ್ಚಾದರೂ ಪರವಾಗಿಲ್ಲ ಅದನ್ನು 60 ಕೆಜಿ ಅಡಿಕೆ ಮಾರಿದರೆ ಸಿಗುತ್ತದೆ. ಆದರೆ ಆ 60 k g ಅಡಿಕೆಯನ್ನ ನಮಗೆ ತಿನ್ನಕ್ಕಾಗಲ್ಲ.ಇನ್ನೊಂದು ವಿಷಯ ನಾನು ನನ್ನ ದೇಶಕ್ಕೆ 5 ಕ್ವಿಂಟಾಲ್ ಅಕ್ಕಿಯ ಮತ್ತು ಒಣ ಮೇವಿನ ಹೊರೆಯನ್ನು ಕಡಿಮೆ ಮಾಡಿದೆ ಎನ್ನುವ ಆತ್ಮ ತೃಪ್ತಿಯಿದೆ. ಇದೆ ದೇಶಕ್ಕೆ ಆಹಾರ ಭದ್ರತೆಯ ಖಾತ್ರಿಯಡಿ ನಾನು ನನ್ನ ದೇಶಕ್ಕೆ ನೀಡಿದ ಅತಿ ಸಣ್ಣ ಅಳಿಲು ಸೇವೆ.ಆ ಆತ್ಮ ತೃಪ್ತಿಯೇ ಒಬ್ಬ ರೈತನ ನಿಜವಾದ ಸುಖ.
ಅನ್ನಕ್ಕೆ ಯಾವತ್ತೂ ಬೆಲೆ ಕಟ್ಟಲಾಗದು.
ಕೋಟಿ ಕೋಟಿ ಇದ್ದರೂ ಹೊಟ್ಟೆಗೆ ತಿನ್ನೋದು ಅನ್ನನೇ… ದೇಹ ಸೇರೋದು ಮಣ್ಣಿಗೆನೆ…. ಅನ್ನದಾತ ಸುಖಿಭವಃ
– ಅಶೋಕ್ ಕರಿಯನೆಲ