ಕರ್ನಾಟಕ ವಿಧಾನಸಭಾ ಚುನಾವಣೆಗೆ ದಿನಾಂಕ ಘೋಷಣೆಯಾಗಿದೆ. ಇಂದು ಬೆಳಗ್ಗೆ 11.30ಕ್ಕೆ ಚುನಾವಣಾ ಆಯೋಗದ ಮುಖ್ಯಸ್ಥ ರಾಜೀವ್ ಕುಮಾರ್ ಅವರು ಸುದ್ದಿಗೋಷ್ಟಿ ನಡೆಸಿ ಚುನಾವಣೆಗೆ ದಿನಾಂಕ ಘೋಷಣೆ ಮಾಡಿದ್ದು, ಮೇ 10ರಂದು ರಾಜ್ಯಾದ್ಯಂತ ಒಂದೇ ಹಂತದಲ್ಲಿ ಮತದಾನ ನಡೆದರೆ, ಮೇ 13ರಂದು ಚುನಾವಣಾ ಫಲಿತಾಂಶ ನಡೆಯಲಿದೆ.
ಈ ಬಾರಿಯ ಚುನಾವಣೆಯಲ್ಲಿ ಹಲವು ವಿಶೇಷಗಳಿದ್ದು, ಕೆಲವೊಂದು ಪ್ರಥಮಗಳನ್ನು ಚುನಾವಣಾ ಆಯೋಗದ ಮುಖ್ಯಸ್ಥ ರಾಜೀವ್ ಕುಮಾರ್ ಅವರು ಘೋಷಣೆ ಮಾಡಿದ್ದಾರೆ. ಆ ಪೈಕಿ ಇದೇ ಮೊದಲ ಬಾರಿಗೆ ಕರ್ನಾಟಕದಲ್ಲಿ ಮನೆಯಿಂದಲೇ ಮತದಾನ ಮಾಡುವ ಅವಕಾಶವನ್ನು ಕಲ್ಪಿಸಲಾಗಿದ್ದು, 80 ವರ್ಷ ಮೇಲ್ಪಟ್ಟ ಮತದಾರರು ಮತ್ತು ವಿಕಲಚೇತನ ಮತದಾರರಿಗೆ ಮನೆಯಿಂದಲೇ ಮತದಾನ ಮಾಡುವ ಅವಕಾಶವನ್ನು ಕೇಂದ್ರ ಚುನಾವಣಾ ಆಯೋಗ ಕಲ್ಪಿಸಿಕೊಟ್ಟಿದೆ.
ಮನೆಯಿಂದ ಮತದಾನ ನಡೆದರೂ ಸುರಕ್ಷಿತ..! : ಮನೆಯಿಂದಲೇ ಮತದಾನ ಮಾಡಿದರೂ ಕೂಡ ಅದು ಗೌಪ್ಯ ಮತ್ತು ಸುರಕ್ಷಿತವಾಗಿರಲಿದೆ ಎಂದು ಚುನಾವಣಾ ಆಯುಕ್ತರು ಹೇಳಿದ್ದು, ಮನೆಯಿಂದ ಮತದಾನ ಮಾಡುವ ಮತದಾರರ ಬಳಿ ಹೋದಾಗ ಪೊಲೀಸ್ ಸಿಬ್ಬಂದಿ ಮತ್ತು ಚುನಾವಣಾ ಸಿಬ್ಬಂದಿಯೂ ಹೋಗಲಿದ್ದಾರೆ. ಹೀಗಾಗಿ ಯಾವುದೇ ರೀತಿಯ ಅಕ್ರಮ ನಡೆಯದಂತೆ ಮನೆಯಿಂದ ಮಾಡುವ ಮತದಾನವನ್ನು ಸುರಕ್ಷಿತವಾಗಿ ಇರುವಂತೆ ನೋಡಿಕೊಳ್ಳಲಾಗುವುದು ಎಂದು ಹೇಳಿದ್ದಾರೆ. ಕರ್ನಾಟಕದಲ್ಲಿ ಇದು ಮೊದಲ ಪ್ರಯೋಗ ಆಗಿರುವುದಿಂದ ಸಾಕಷ್ಟು ಸಿಬ್ಬಂದಿಯನ್ನು ಕೂಡ ಇದಕ್ಕೆ ನಿಯೋಜಿಸಲಿದ್ದಾರೆ.
ಮತಗಟ್ಟೆಗಳ ವಿವರ ಹೀಗಿದೆ : ಈ ಬಾರಿ ಚುನಾವಣಾ ಆಯೋಗವು ರಾಜ್ಯಾದ್ಯಂತ ಒಟ್ಟು 58282 ಮತಗಟ್ಟೆಗಳ ಸ್ಥಾಪನೆ ಮಾಡಲಿದ್ದು, ನಗರ ಪ್ರದೇಶದಲ್ಲಿ ಒಟ್ಟು 24063 ಮತಗಟ್ಟೆಗಳನ್ನು ಸ್ಥಾಪನೆ ಮಾಡಲಿದೆ. ಗ್ರಾಮಾಂತರ ಪ್ರದೇಶದಲ್ಲಿ ಒಟ್ಟು 34219 ಮತಗಟ್ಟೆಗಳ ನಿರ್ಮಾಣ ಇರಲಿದೆ. ಅದರಲ್ಲೂ ವಿಶೇಷ ಅಂದ್ರೆ ರಾಜ್ಯದ 224 ಕ್ಷೇತ್ರಗಳಲ್ಲಿ ತಲಾ ಒಂದು ಯುವ ಮತಗಟ್ಟೆಗಳನ್ನು ಸ್ಥಾಪನೆ ಮಾಡಲು ಚುನಾವಣಾ ಆಯೋಗ ಮುಂದಾಗಿದೆ. ಇದರ ಜೊತೆಗೆ ಮಹಿಳಾ ಸಿಬ್ಬಂದಿಯೇ ನಿರ್ವಹಿಸುವ ಒಟ್ಟು 1320 ಮತಗಟ್ಟೆಗಳೂ ಈ ಬಾರಿಯ ಚುನಾವಣೆಯಲ್ಲಿ ಇರಲಿದೆ. ಜೊತೆಗೆ 240 ಮಾದರಿ ಮತಗಟ್ಟೆಗಳನ್ನು ಸ್ಥಾಪನೆ ಮಾಡಲಿದೆ.
ಅಕ್ರಮ ತಡೆಗೆ ಟೈಟ್ ಸೆಕ್ಯೂರಿಟಿ : ಚುನಾವಣಾ ಅಕ್ರಮ ತಡೆಗೆ 2400 ವೀಕ್ಷಕ ಸಿಬ್ಬಂದಿಯನ್ನು ನಿಯೋಜನೆ ಮಾಡಲು ಚುನಾವಣಾ ಆಯೋಗ ಉದ್ದೇಶಿಸಿದ್ದು, ಚುನಾವಣೆಗಾಗಿ ಒಟ್ಟು 2016 ಫ್ಲೈಯಿಂಗ್ ಸ್ಕ್ಯಾಡ್‌ಗಳನ್ನು ನಿಯೋಜಿಸಲಿದೆ. ಜೊತೆಗೆ 19 ಜಿಲ್ಲೆಗಳಲ್ಲಿ 171 ಚೆಕ್‌ಪೋಸ್ಟ್‌ಗಳನ್ನು ನಿರ್ಮಾಣ ಮಾಡಿ ಅಕ್ರಮ ತಡೆಯಲು ಪ್ಲಾನ್ ಮಾಡಿದ್ದು, ಮುಖ್ಯವಾಗು ವಿಮಾನ ನಿಲ್ದಾಣ, ಹೆದ್ದಾರಿಗಳಲ್ಲಿ ಹೈ ಅಲರ್ಟ್ ಘೋಷಣೆ ಮಾಡಿ, ಬ್ಯಾಂಕ್ ವ್ಯವಹಾರಗಳ ಮೇಲೂ ಹದ್ದಿನ ಕಣ್ಣು ಇಡಲಾಗಿದೆ.