ಪಶ್ಚಿಮ ಘಟ್ಟ ಉಳಿಸಬೇಕು ಅನ್ನುವ ಕೂಗು ದಶಕಗಳ ಕಾಲದಿಂದ ಕೇಳಿ ಬರುತ್ತಿದೆ. ಮಾನವ ತನ್ನ ಸ್ವಾರ್ಥಕ್ಕಾಗಿ ನಮ್ಮ ಹೆಮ್ಮೆಯ ಪ್ರಕೃತಿ ಕೊಡುಗೆಯನ್ನು ವಿನಾಶದತ್ತ ಕೊಂಡೊಯ್ಯುತ್ತಿದ್ದಾನೆ. ಪ್ರಕೃತಿದತ್ತವಾಗಿ ದೊರೆತ ಪಶ್ಚಿಮ ಘಟ್ಟವನ್ನು ಉಳಿಸಿಕೊಳ್ಳಲಾಗದ ಅಧಿಕಾರಿಗಳು, ರಾಜಕಾರಣಿಗಳು ಹಾಗೂ ನಾಗರೀಕರು ಈಗ ಕೃತಕ ಪಶ್ಚಿಮ ಘಟ್ಟವನ್ನು ನಿರ್ಮಿಸಲು ಹೊರಟಿದ್ದಾರೆ. ಇದು ಸಂತಸದ ವಿಷಯವೇ.. ಆದರೆ ಮಾನವ ಹಾಗೂ ಪ್ರಾಣಿ ಕುಲಕ್ಕೆ, ಮುಂದಿನ ಪೀಳಿಗೆಗೆ ಜೀವ ಬಲವಾಗಿರುವ ಪಶ್ಚಿಮವನ್ನು ಉಳಿಸುವ ಕೆಲಸವನ್ನು ಮೊದಲು ಮಾಡಬೇಕಾಗಿದೆ. ಇದೀಗ ಈ ಎಲ್ಲಾ ಯೋಚನೆಗಳೂ ನಗರದಲ್ಲೂ ಜಾಗೃತಿಗೆ ಕಾರಣವಾಗಿದೆ.
ಬೆಂಗಳೂರಿನಲ್ಲಿ ಮಿನಿ ಪಶ್ಚಿಮ ಘಟ್ಟ ನಿರ್ಮಾಣವಾಗ್ತಿದೆ. ನಿಜಕ್ಕೂ ಶ್ಲಾಘಿಸಬೇಕಾದಂತ ಕೆಲಸವೇ. ಕಲುಷಿತಗೊಂಡಿರುವ ಬೆಂಗಳೂರಿನ ವಾತಾವರಣವನ್ನು ಸರಿ ದಾರಿಗೆ ತರಬೇಕಾದರೆ ಇಂಥದ್ದೊಂದು ಕಾರ್ಯ ಆಗಲೇ ಬೇಕಿದೆ. ಬೆಂಗಳೂರಿನಲ್ಲೇ ಪಶ್ಚಿಮ ಘಟ್ಟದ ಸೌಂದರ್ಯ ಸಿಗುವುದಾದರೆ ಅದು ನಿಜಕ್ಕೂ ಖುಷಿಯ ವಿಚಾರ. ಪಶ್ಚಿಮ ಘಟ್ಟದ ಸಸ್ಯಗಳು, ಜಲಪಾತ್, ನಿತ್ಯ ಹರಿದ್ವರ್ಣ ಕಾಡುಗಳನ್ನು ನೋಡಲು ಅದೆಷ್ಟೋ ಜನ ಅಲ್ಲಿಗೆ ಟ್ರಿಪ್ ಹೋಗ್ತಾರೆ. ಅಲ್ಲಿನ ಸೌಂದರ್ಯವನ್ನು ಕಣ್ತುಂಬಿಕೊಳ್ತಾರೆ. ಬೆಂಗಳೂರಿನಲ್ಲೇ ಮಿನಿ ಪಶ್ಚಿಮ ಘಟ್ಟ ನಿರ್ಮಾಣವಾದ್ರೆ ಹೇಗೆ? ಹೌದು ಲಾಲ್‍ಬಾಗ್‍ನಲ್ಲಿ ಮಿನಿ ಪಶ್ಚಿಮ ಘಟ್ಟಗಳನ್ನು ನಿರ್ಮಾಣ ಮಾಡಲಾಗುತ್ತಿದೆ. 6 ಎಕರೆ ಬಂಜರು ಭೂಮಿಯಲ್ಲಿ ಸಹ್ಯಾದ್ರಿ ಪ್ರದೇಶದಲ್ಲಿ ಬೆಳೆಯುವ ವಿವಿಧ ಜಾತಿಯ ಮರಗಳನ್ನು ಬೆಳೆಯಲು ತೋಟಗಾರಿಕಾ ಇಲಾಖೆ ಅಧಿಕಾರಿಗಳು ಮುಂದಾಗಿದ್ದಾರೆ ಎಂದು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ಎರಡು ವರ್ಷಗಳ ಹಿಂದೆ ಸಹ್ಯಾದ್ರಿ ಪ್ರದೇಶದಿಂದ 190 ಕ್ಕೂ ಹೆಚ್ಚು ಜಾತಿಯ ಸಸಿಗಳನ್ನು ತರಿಸಿ ನೆಡಲಾಗಿದೆ, ಅದರಲ್ಲಿ ಕೆಲವು ಹಣ್ಣಿನ ಗಿಡಗಳು ಸೇರಿದಂತೆ 132 ಗಿಡಗಳು ಉಳಿದುಕೊಂಡಿವೆ ಎಂದು ಜೀವವೈವಿಧ್ಯ ತಜ್ಞ ಕೇಶವ ಮೂರ್ತಿ ಹೇಳಿದ್ದಾರೆ. ಉತ್ತರ ಕನ್ನಡ, ಶಿವಮೊಗ್ಗ, ಹಾಸನ, ಚಿಕ್ಕಮಗಳೂರು, ಉಡುಪಿ, ದಕ್ಷಿಣ ಕನ್ನಡ, ಮೈಸೂರು ಮತ್ತು ಕೊಡಗು ಜಿಲ್ಲೆಗಳ ಪಶ್ಚಿಮ ಘಟ್ಟಗಳ 400 ಕ್ಕೂ ಹೆಚ್ಚು ಜಾತಿಯ ಗಿಡಗಳನ್ನು ಲಾಲ್‍ಬಾಗ್‍ನಲ್ಲಿ ನೆಡಲಾಗಿದೆ. ತೋಟಗಾರಿಕೆ ಇಲಾಖೆ ಸಿಬ್ಬಂದಿ ಮಣ್ಣಿನ ಫಲವತ್ತತೆ ಕುರಿತು ಕೆಲಸ ಮಾಡುತ್ತಿದ್ದು, ಮಂಗಳವಾರ ಸಹ್ಯಾದ್ರಿ ಬೆಟ್ಟದಿಂದ ತರಿಸಿದ್ದ 400 ಸಸಿಗಳನ್ನು ವಿದ್ಯಾರ್ಥಿ ಸ್ವಯಂಸೇವಕರ ನೆರವಿನಿಂದ ನೆಡಲಾಗಿದೆ. ಮುಂದಿನ ದಿನಗಳಲ್ಲಿ ಪಶ್ಚಿಮ ಘಟ್ಟದ ಪೊದೆಗಳು, ಗಿಡಮೂಲಿಕೆಗಳ ಸಸ್ಯಗಳನ್ನು ಸೇರಿಸಲಾಗುವುದು ಎಂದು ತೋಟಗಾರಿಕಾ ಅಧಿಕಾರಿಗಳು ತಿಳಿಸಿದ್ದಾರೆ.
Source : Indian Express