ಕೇಂದ್ರ ಸರ್ಕಾರವು ದೇಶದ ಹೆಸರನ್ನು `ಇಂಡಿಯಾ’ ಬದಲಿಗೆ `ರಿಪಬ್ಲಿಕ್ ಆಫ್ ಭಾರತ್’ ಎಂದು ಮರುನಾಮಕರಣ ಮಾಡುತ್ತದೆಯೇ..? ಹೀಗೊಂದು ಚರ್ಚೆ ಈಗ ಮಾಧ್ಯಮಗಳಲ್ಲಿ ಕಾಣಿಸಿಕೊಂಡಿದೆ. ಜಿ20 ಶೃಂಗಸಭೆಗೆ ರಾಷ್ಟ್ರಪತಿಗಳು ಗಣ್ಯರಿಗೆ ನೀಡಿದ ಆಹ್ವಾನ ಪತ್ರಿಕೆಯಲ್ಲಿ `ಪ್ರೆಸಿಡೆಂಟ್ ಆಫ್ ಇಂಡಿಯಾ’ ಬದಲಿಗೆ `ಪ್ರೆಸಿಡೆಂಟ್ ಆಫ್ ಭಾರತ್’ ಎಂದು ಉಲ್ಲೇಖಿಸಿದ ನಂತರ ಈ ಚರ್ಚೆ ಹುಟ್ಟಿಕೊಂಡಿದೆ.
ಈ ನಡುವೆಯೇ ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ ಅವರ ಟ್ವಿಟರ್ (ಎಕ್ಸ್) ಪೋಸ್ಟ್ ಚರ್ಚೆಗೆ ಮತ್ತಷ್ಟು ಇಂಬು ನೀಡಿದೆ. ಹೀಗಾಗಿ ಹೆಸರು ಬದಲಾವಣೆ ಮಾಡುವ ಹೊಸ ನಿರ್ಣಯವನ್ನು ಸಂಸತ್ ಅಧಿವೇಶನದಲ್ಲಿ ಮಂಡಿಸುವ ಸಾಧ್ಯತೆಯಿದೆ ಎಂದು ಚರ್ಚೆಯಲ್ಲಿ ಕೇಳಿಬಂದಿದೆ. ಸಂಸತ್‌ನಲ್ಲಿ ನಿರ್ಣಯ ಮಂಡನೆಗೆ ಸರ್ಕಾರ ಸಜ್ಜಾಗಿದೆ. ಈ ಮೂಲಕ ವಿಪಕ್ಷಗಳ ಒಕ್ಕೂಟಕ್ಕೆ ಠಕ್ಕರ್ ಕೊಡಲು ಕೇಂದ್ರ ಐಡಿಯಾ ಮಾಡಿದೆ ಎಂದು ಹೇಳಲಾಗುತ್ತಿದೆ.
ಇಂಡಿಯಾ ಬದಲು ದೇಶದ ಹೆಸರನ್ನು `ರಿಪಬ್ಲಿಕ್ ಆಫ್ ಭಾರತ್’ ಎಂದು ಕರೆಯಬೇಕು ಎಂಬುದಾಗಿ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ಸಲಹೆ ನೀಡಿದ್ದ ಬೆನ್ನಲ್ಲೇ ಈ ಚರ್ಚೆ ಆರಂಭವಾಗಿತ್ತು. ಇದೀಗ ಜಿ20 ಶೃಂಗಸಭೆಗೆ ರಾಷ್ಟ್ರಪತಿಗಳು ಗಣ್ಯರಿಗೆ ನೀಡಿದ ಆಹ್ವಾನ ಪತ್ರಿಕೆಯಲ್ಲಿ `ಪ್ರೆಸಿಡೆಂಟ್ ಆಫ್ ಇಂಡಿಯಾ’ ಬದಲಿಗೆ `ಪ್ರೆಸಿಡೆಂಟ್ ಆಫ್ ಭಾರತ್’ ಎಂದು ಉಲ್ಲೇಖಿಸಲಾಗಿದೆ.
ಸೆಪ್ಟೆಂಬರ್ 18 ರಿಂದ 22 ರವರೆಗೆ ಸಂಸತ್ತಿನ ವಿಶೇಷ ಅಧಿವೇಶನದ ಘೋಷಣೆಯು ಮಾಧ್ಯಮಗಳು ಮತ್ತು ರಾಜಕೀಯ ವಲಯಗಳಲ್ಲಿ ಸಾಕಷ್ಟು ಸಂಚಲನವನ್ನು ಸೃಷ್ಟಿಸಿದೆ. ಹಲವರ ಪ್ರಕಾರ ಮಹಿಳಾ ಮೀಸಲಾತಿ ಮಸೂದೆ, ‘ಒಂದು ರಾಷ್ಟ್ರ, ಒಂದು ಚುನಾವಣೆ’ ಮಸೂದೆ, ಏಕರೂಪ ನಾಗರಿಕ ಸಂಹಿತೆ , ಅಥವಾ ಪೂಜಾ ಸ್ಥಳಗಳ ಕಾಯಿದೆ, ವಕ್ಫ್‌ನಂತಹ ಕಾನೂನುಗಳನ್ನು ರದ್ದುಪಡಿಸುವ ಮಸೂದೆಗಳ ಗುಂಪನ್ನು ಸರ್ಕಾರವು ತರಬಹುದು ಎಂಬ ಊಹಾಪೋಹಗಳು ವ್ಯಾಪಕವಾಗಿವೆ.
ಈ ಎಲ್ಲದರ ನಡುವೆ, ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ ಅವರು ‘ರಿಪಬ್ಲಿಕ್ ಆಫ್ ಭಾರತ್’ ಎಂದು ಟ್ವಿಟರ್‌ನಲ್ಲಿ , ನಮ್ಮ ನಾಗರಿಕತೆಯು ಅಮೃತ ಕಾಲದ ಕಡೆಗೆ ಧೈರ್ಯದಿಂದ ಮುನ್ನಡೆಯುತ್ತಿರುವುದಕ್ಕೆ ಸಂತೋಷ ಮತ್ತು ಹೆಮ್ಮೆ ಎಂದು ಬರೆದುಕೊಂಡಿದ್ದಾರೆ.
ದೇಶದ ಹೆಸರನ್ನೇ ಬದಲಾಯಿಸಲು ಸರ್ಕಾರ ಮುಂದಾಗಿದೆ ಎಂದು ಐಎನ್‌ಡಿಐಎ ಒಕ್ಕೂಟ ತೀವ್ರವಾಗಿ ಖಂಡಿಸಿದೆ.
Source: News Agencies