04.12.2024ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ :
ಕರಾವಳಿ : ಕಾಸರಗೋಡು ಸೇರಿದಂತೆ ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಈಗಿನ ಮಳೆಯ ವಾತಾವರಣವು ಮಧ್ಯಾಹ್ನ ನಂತರ ಕಡಮೆಯಾಗುವ ಮುನ್ಸೂಚನೆ ಇದೆ. ಈಗಿನಂತೆ ಡಿಸೆಂಬರ್ 4ರಿಂದ 2 ದಿವಸಗಳ ಕಾಲ ಉತ್ತರ ಕನ್ನಡ ಜಿಲ್ಲೆಯ ಅಲ್ಲಲ್ಲಿ ಮಳೆಯ ಮುನ್ಸೂಚನೆ ಇದ್ದು, ಕಾಸರಗೋಡು, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಮೋಡ ಹಾಗೂ ಒಂದೆರಡು ಕಡೆ ಸಾಮಾನ್ಯ ಮಳೆಯ ಮುನ್ಸೂಚನೆ ಇದೆ. ಡಿಸೆಂಬರ್ 8ರ ತನಕ ಅಲ್ಲಲ್ಲಿ ಮಳೆ ಮುಂದುವರಿಯುವ ಲಕ್ಷಣಗಳಿವೆ.
ಮಲೆನಾಡು : ಕೊಡಗು ಜಿಲ್ಲೆಯಲ್ಲಿ ಮಳೆ ಕಡಿಮೆಯಾಗಿ ಮೋಡದ ವಾತಾವರಣ ಮುಂದುವರಿಯಲಿದ್ದು ಕರಾವಳಿ ಜಿಲ್ಲೆಗಳಿಗೆ ಹೊಂದಿಕೊಂಡಿರುವ ಪ್ರದೇಶಗಳಲ್ಲಿ ಒಂದೆರಡು ಕಡೆ ಸಾಮಾನ್ಯ ಮಳೆಯ ಮುನ್ಸೂಚನೆ ಇದೆ. ಹಾಸನ, ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ಮೋಡದ ವಾತಾವರಣ ಇರಲಿದ್ದು ಅಲ್ಲಲ್ಲಿ ತುಂತುರು ಮಳೆಯ ಮುನ್ಸೂಚೆನೆ ಇದೆ.
ಈಗಿನಂತೆ ಡಿಸೆಂಬರ್ 6ರಿಂದ ಮತ್ತೆ ಮಳೆಯ ಮುನ್ಸೂಚೆನೆ ಇದೆ.
ಒಳನಾಡು : ಉತ್ತರ ಒಳನಾಡಿನ ಹಾವೇರಿ – ದಾವಣಗೆರೆ ಗಡಿ ಭಾಗಗಳ ಸುತ್ತಮುತ್ತ ಮಳೆಯ ಮುನ್ಸೂಚನೆ ಇದೆ. ಉಳಿದ ಹಾವೇರಿ, ಧಾರವಾಡ, ಬೆಳಗಾವಿ, ಉಳಿದ ದಾವಣಗೆರೆ, ಬಳ್ಳಾರಿ ಜಿಲ್ಲೆಗಳ ಅಲ್ಲಲ್ಲಿ ಮೋಡದ ವಾತಾವರಣ ಹಾಗೂ ಅಲ್ಲಲ್ಲಿ ತುಂತುರು ಮಳೆಯ ಮುನ್ಸೂಚೆನೆ ಇದೆ. ಉಳಿದ ಭಾಗಗಳಲ್ಲಿ ಅಲ್ಲಲ್ಲಿ ಮೋಡದ ವಾತಾವರಣದ ಮುನ್ಸೂಚನೆ ಇದೆ
ದಕ್ಷಿಣ ಒಳನಾಡಿನ ರಾಮನಗರ, ಬೆಂಗಳೂರು ಗ್ರಾಮಾಂತರ ಹಾಗೂ ನಗರ, ತುಮಕೂರು (ಪಾವಗಢ ಸಹಿತ), ಚಿತ್ರದುರ್ಗ ಜಿಲ್ಲೆಗಳ ಅಲ್ಲಲ್ಲಿ ಸಂಜೆ ಮಳೆಯ ಮುನ್ಸೂಚನೆ ಇದೆ. ಉಳಿದ ಭಾಗಗಳಲ್ಲಿ ಅಲ್ಲಲ್ಲಿ ಮೋಡದ ವಾತಾವರಣದ ಮುನ್ಸೂಚನೆ ಇದೆ.
ಫೆಂಗಲ್ ಚಂಡಮಾರುತವು ಈಗಾಗಲೇ ದುರ್ಬಲಗೊಂಡು ಅರಬ್ಬಿ ಸಮುದ್ರ ಪ್ರವೇಶಿಸಿದೆ ಮತ್ತು ಮುಂದೆ ಪಶ್ಚಿಮಾಭಿಮುಖವಾಗಿ ಚಲಿಸುತ್ತಿದ್ದಂತೆಯೇ ರಾಜ್ಯದಲ್ಲಿ ಅದರ ಪ್ರಭಾವ ಕಡಿಮೆಯಾಗಲಿದೆ. ಆದರೆ ಬಂಗಾಳಕೊಲ್ಲಿಯ ಕಡೆಯಿಂದ ಬೀಸುತ್ತಿರುವ ಗಾಳಿ ಪರಿಣಾಮದಿಂದ ಹಿಂಗಾರು ರೀತಿಯ ಗುಡುಗು ಮಳೆ ಅಲ್ಲಲ್ಲಿ ಮುಂದುವರಿಯುವ ಲಕ್ಷಣಗಳಿವೆ. ಈಗಿನ ವಿದ್ಯಮಾನಗಳ ಹಿನ್ನೆಲೆಯಲ್ಲಿ ಡಿಸೆಂಬರ್ 7 ರ ವೇಳೆಗೆ ಬಂಗಾಳಕೊಲ್ಲಿಯ ನಿಕೋಬಾರ್ ದ್ವೀಪ ಪ್ರದೇಶದಲ್ಲಿ ಇನ್ನೊಂದು ವಾಯುಭಾರ ಕುಸಿತ ಉಂಟಾಗುವ ಲಕ್ಷಣಗಳಿವೆ.