ಹಸುರೆಂಬ ಉಸಿರಿನ ಮಹತ್ವ ಇದು…

July 13, 2025
10:55 PM
ವರುಷದಿಂದ ವರುಷಕ್ಕೆ ಬಿಸಿ ಏರುತ್ತಿರುವ ಭೂಮಿ, ಕಳಕೊಳ್ಳುತ್ತಿರುವ ಸಸ್ಯ ಸಂಪತ್ತು, ಭೂಮಿಯನ್ನು ತಂಪಾಗಿಸಲು ಮತ್ತು ಭೂಮಿಗೆ ನೀರು ಇಂಗಿಸಿಕೊಡಲು ಸಹಾಯಕವಾಗುವಂತಹ ಹಸುರಿನ ನಾಶ, ಬೇಸಿಗೆ ಬಂದಂತೆ ಜೀವ ಜಲದ ಹಾಹಾಕಾರ ಮುಂದಿನ ಪೀಳಿಗೆಯ ಭಯಾನಕ ಭವಿಷ್ಯಕ್ಕೆ ನಾಂದಿ ಎಂಬ ಗುರು ದೃಷ್ಟಿಯೇ ಈ ವೃಕ್ಷಾಂದೋಲನದ ಹಿಂದಿನ ಉದ್ದೇಶ.

ಪ್ರತಿದಿನ ಬೆಳಗ್ಗಿನ ಗೋ ಸೇವೆಯ ನಂತರ ದೇವರ ಪೂಜೆ ನಮ್ಮಪ್ಪನ ಕಾಲದಿಂದಲೂ ನಡಕೊಂಡು ಬಂದ ಪದ್ಧತಿ. ಅಜ್ಜನೊಟ್ಟಿಗೆ ಮೊಮ್ಮಕ್ಕಳು ಪೂಜಾ ಕೈಂಕರ್ಯದಲ್ಲಿ ಭಾಗಿಗಳಾಗುವುದು ಕೂಡ ಅಷ್ಟೇ ಸಹಜ ಪ್ರಕ್ರಿಯೆ . ಪ್ರತಿನಿತ್ಯ ನಾನು ದೇವರ ಪೂಜೆಗೆ ಬಾವಿಯಿಂದ ನೀರು ತರುವಾಗ ಮೊಮ್ಮಕ್ಕಳು ಅಜ್ಜನ ಹಿಂದೆ ಬಾವಿಯ ಬಳಿಗೆ ಬಂದು ನೀರು ಎಳೆಯುವುದನ್ನು ನೋಡಿ ಪೂಜೆಯಲ್ಲಿ ಭಾಗಿಗಳಾಗುತ್ತಿದ್ದರು. ಈಗ್ಗೆ ಕೆಲ ದಿನಗಳ ಹಿಂದೆ ನಾಲ್ಕುವರೆ ವರ್ಷ ಪ್ರಾಯದ ಮೊಮ್ಮಗನ ಪ್ರಶ್ನೆ. ಹೀಗೆ ದಿನಾ ನೀರು ತಂದರೆ ಆ ಬಾವಿಗೆ ನೀರು ಎಲ್ಲಿಂದ ಬರುವುದು?!!ಅವನ ಕುತೂಹಲದ ಪ್ರಶ್ನೆಗೆ ನಾನಂತೂ ಮೂಕವಿಸ್ಮಿತನಾಗಿದ್ದೆ. ಸಮಾಧಾನದ ಉತ್ತರ ಸಿಗದೇ ಇದ್ದರೆ ಪ್ರಶ್ನೆಯನ್ನು ಮತ್ತೆ ಮತ್ತೆ ಬೇರೆ ರೀತಿಯಲ್ಲಿ ಕೇಳಿಯೇ ಕೇಳುತ್ತಾನೆ ಎಂಬುದು ಗೊತ್ತಿದೆ. ಅವನಿಗೆ ಅರ್ಥ ಆಗುವಂತೆ ವಿವರಿಸುವುದು ನನ್ನ ಕರ್ತವ್ಯ ಅಂತ ವಿವರಿಸಿದೆ.

Advertisement
Advertisement

ನಿನಗೆ ಆಟವಾಡಿ ಬಾಯಾರಿಕೆ ಆಗುವುದಿಲ್ಲವೇ? ಆಗೇನು ಮಾಡುತ್ತಿ? ಅಂತ ಕೇಳಿದೆ. ನೀರು ಕುಡಿಯುತ್ತೇನೆ ಅಂತ ಅಂದ. ತುಂಬಾ ನೀರು ಕುಡಿದ ಮೇಲೆ ಮತ್ತೇನಾಗುತ್ತದೆ ಅಂತ ಕೇಳಿದೆ. ಆಗಾಗ ಉಚ್ಚೆ ಬರುತ್ತದೆ ಅಂತಂದ.

ಇಷ್ಟು ಗೊತ್ತಿದೆ ಅಂತ ಆದರೆ ಅರ್ಥ ಆಗುವಂತೆ ವಿವರಿಸುವುದು ಕಷ್ಟವಲ್ಲ ಅಂತ ನನ್ನ ಅರಿವಿಗೆ ಬಂತು. ನಿನಗೆ ಹೇಗೆ ಬಾಯಾರಿಕೆ ಆಗುತ್ತದೆಯೋ, ಅದೇ ರೀತಿ ಬೇಸಿಗೆಯ ಕಡುಬಿಸಿಲಿಗೆ ಭೂಮಿಗೆ ಬಾಯಾರಿಕೆ ಆಗುತ್ತದೆ. ಬಿಸಿಲಿನಿಂದ ಒಣಗುತ್ತಿದ್ದ ಭೂಮಿ ಜೋರಾಗಿ ಮಳೆ ಬರುವಾಗ ಬಿದ್ದ ನೀರನ್ನು ಕುಡಿಯುತ್ತದೆ. ಕುಡಿದು ಕುಡಿದು ಹೆಚ್ಚಾದ ನೀರನ್ನು ಭೂಮಿ ಕೂಡ ನಿನಗೆ ಉಚ್ಚೆ ಬಂದಂತೆ ಹೊರಬಿಡುತ್ತದೆ. ಅದಕ್ಕೆ ನಾವು ಹೇಳುವುದು ನೀರ ಒರತೆ. ಅಮ್ಮ ಅಡುಗೆ ಮನೆಯಲ್ಲಿ ಕುಡಿಯುವುದಕ್ಕೋಸ್ಕರ ನೀರು ಸಂಗ್ರಹಿಸುವ ಪಾತ್ರೆಯಂತೆ ಈ ಒರತೆಯ ನೀರನ್ನು ಸಂಗ್ರಹಿಸುವ ಪಾತ್ರೆಯೇ ಬಾವಿ. ಹಾಗಾಗಿ ಇದು ತೆಗೆದರೆ ಮುಗಿಯುವಂತದು ಅಲ್ಲ. ಆದರೆ ಮುಗಿಯಾದ ಹಾಗೆ ಮಾಡಬೇಕಾದರೆ, ಭೂಮಿ ನೀರು ಕುಡಿಯಬೇಕಾದರೆ ಸಹಾಯಕವಾಗಿ ಇರುವುದು ಗಿಡಮರಗಳು ಅಂತ ತಿಳಿಸಿದಾಗ ಹುಡುಗನ ಮುಖದಲ್ಲಿ ಮುಗುಳ್ನಗೆ ಬಂತು. ಪ್ರಶ್ನೆಗೆ ಅವನಿಗೆ ಸರಿಯಾಗಿ ಉತ್ತರ ಸಿಕ್ಕಿತು ಅಂತ ಅವನ ಮುಖಭಾವ ಹೇಳುತ್ತಿತ್ತು. ಆದರೂ ಇಂತಹ ಸಂದರ್ಭದಲ್ಲಿಯೇ ಇನ್ನಷ್ಟು ವಿವರಣೆ ಕೊಟ್ಟರೆ ಮನಸ್ಸಿನಾಳದಲ್ಲಿ ಬೇರೂರುತ್ತದೆ ಎಂಬ ದೃಷ್ಟಿಯಿಂದ ಆತನನ್ನು ಗುಡ್ಡೆಯ ಪರಿಸರಕ್ಕೆ ಕರಕೊಂಡು ಹೋದೆ.

ಕಳೆದ 30 ವರ್ಷಗಳಿಂದ ನಾನು ನೆಟ್ಟು ಬೆಳೆಸಿದ ಕಾಡನ್ನು ಆ ಮರ ಗಿಡಗಳ ಮಹತ್ವವನ್ನು ಒಂದಷ್ಟು ವಿವರಿಸಿದೆ. ಅದು ಭೂಮಿಗೆ ನೀರು ಕುಡಿಸಿ ಒರತೆಯ ರೂಪದಲ್ಲಿ ಬೆಟ್ಟದ ಅರ್ಧ ನೆತ್ತಿಯಿಂದ ನೀರು ಹರಿದು ಬರುವ ಸೌಂದರ್ಯವನ್ನು ತೋರಿಸಿದೆ. ಜುಳು ಜುಳು ನೀನಾದದಿಂದ ಹರಿಯುವ ನಿಷ್ಕಲ್ಮಶ ನೀರಿನಲ್ಲಿ ಅಣ್ಣ ತಂಗಿಯರಿಬ್ಬರು ಮನಸೋಯಿಚ್ಚೆ ಆಡಿದರು.

ಇಂದಿದು ಯಾಕೆ ನೆನಪಾಯಿತೆಂದರೇ, ನಮ್ಮ ಕುಲಗುರುಗಳಾದ ಶ್ರೀ  ರಾಘವೇಶ್ವರ ಭಾರತಿ ಮಹಾಸ್ವಾಮಿಗಳವರ 50ನೇ ವರ್ಧಂತಿಯೋತ್ಸವ ನಡೆಯಿತು. ಅದರ ಸವಿನೆನಪಿಗಾಗಿ ಇಂದಿನಿಂದ ಸುರುವಾಗಿ ಪ್ರತಿ ಮನೆಯಲ್ಲೂ ಯುವ ಕರಗಳ ಮೂಲಕವಾಗಿ ಐದೈದು ಗಿಡವನ್ನಾದರೂ ನೆಟ್ಟು ಮುಂದೆ ಅದು ಹೆಮ್ಮರವಾಗಿ ಬೆಳೆಯುವಂತೆ ಪ್ರೇರೇಪಿಸಬೇಕು ಎಂಬುದು ಗುರು ಆಶಯ. ಅದುವೇ ಸ್ವರ್ಣ ವೃಕ್ಷ ಯೋಜನೆ ಇಂದಿನಿಂದ ಆರಂಭವಾಗಿ ನಿರಂತರ 50 ದಿನಗಳ ಕಾಲ ಐವತ್ತು ಸಾವಿರ ಗಿಡಗಳನ್ನ ನೆಟ್ಟು ಬೆಳೆಸಬೇಕು ಎಂಬುದು ಗುರು ಆಶಯ. ಎಳೆಯ ಮಗುವಿನಿಂದಲೇ ಹಸುರಿನ ಮಹತ್ವವನ್ನು ಸಾರಬೇಕು ಮತ್ತು ಮಗುವಿನ ಮನದಲ್ಲಿ ಹಸುರಿನ ಮಹತ್ವ ಭದ್ರವಾಗಿ ಕೂರಬೇಕು ಎಂದಾದರೆ ಯುವ ಕರಗಳೇ ಇದಕ್ಕೆ ಸಾಕ್ಷಿಯಾಗಬೇಕು.

ವರುಷದಿಂದ ವರುಷಕ್ಕೆ ಬಿಸಿ ಏರುತ್ತಿರುವ ಭೂಮಿ, ಕಳಕೊಳ್ಳುತ್ತಿರುವ ಸಸ್ಯ ಸಂಪತ್ತು, ಭೂಮಿಯನ್ನು ತಂಪಾಗಿಸಲು ಮತ್ತು ಭೂಮಿಗೆ ನೀರು ಇಂಗಿಸಿಕೊಡಲು ಸಹಾಯಕವಾಗುವಂತಹ ಹಸುರಿನ ನಾಶ, ಬೇಸಿಗೆ ಬಂದಂತೆ ಜೀವ ಜಲದ ಹಾಹಾಕಾರ ಮುಂದಿನ ಪೀಳಿಗೆಯ ಭಯಾನಕ ಭವಿಷ್ಯಕ್ಕೆ ನಾಂದಿ ಎಂಬ ಗುರು ದೃಷ್ಟಿಯೇ ಈ ವೃಕ್ಷಾಂದೋಲನದ ಹಿಂದಿನ ಉದ್ದೇಶ. ಅರ್ಥವಿಸಿಕೊಂಡರೆ ಭವಿಷ್ಯದ ಪೀಳಿಗೆಗೆ ಅತ್ಯಂತ ದೊಡ್ಡ ಕೊಡುಗೆ.

ಸ್ವಭಾಷಾ ಚಾತುರ್ಮಾಸ್ಯದ ಹಿನ್ನೆಲೆಯಲ್ಲಿ ಸ್ವಸಂರಕ್ಷಿತ ವೃಕ್ಷ ಸಾಮ್ರಾಜ್ಯವೂ ಬೆಳೆಯಲಿ ಎಂಬುದೇ ಹಾರೈಕೆ. ಹಸಿರೇ ನಮ್ಮ ಉಸಿರಾಗಲಿ.

ಬರಹ :
ಎ.ಪಿ. ಸದಾಶಿವ ಮರಿಕೆ.
Advertisement
Advertisement
Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಎ ಪಿ ಸದಾಶಿವ ಮರಿಕೆ

ಸಾವಯವ ಕೃಷಿಕರು, ಪುತ್ತೂರು ಕಳೆದ ಹಲವಾರು ವರ್ಷಗಳಿಂದ ಸಾವಯವ ಕೃಷಿ, ಗೋಆಧಾರಿತ ಕೃಷಿಯ ಮೂಲಕ ಗಮನ ಸೆಳೆದ ಕೃಷಿಕ ಇವರು.

ಇದನ್ನೂ ಓದಿ

ಕೊಳೆ ರೋಗ ನಿಯಂತ್ರಣಕ್ಕೂ ತೆರಿಗೆ…? ಮೈಲುತುತ್ತಿಗೆ ಸುಂಕ – ಅಡಿಕೆ ರೈತನಿಗೆ ಮತ್ತೊಂದು ಹೊರೆ..!
January 29, 2026
7:39 AM
by: ಕುಮಾರಸುಬ್ರಹ್ಮಣ್ಯ ಮುಳಿಯಾಲ
ಶುದ್ಧ ಹಿಮಾಲಯವೂ ಸುರಕ್ಷಿತವಲ್ಲ..! ಮರುಭೂಮಿ ಧೂಳಿನೊಂದಿಗೆ ಹರಡುವ ರೋಗಕಾರಕಗಳು
January 29, 2026
6:58 AM
by: ದ ರೂರಲ್ ಮಿರರ್.ಕಾಂ
ಅಡಿಕೆ ‘Group 1’ ವಿಶ್ವ ಆರೋಗ್ಯ ಸಂಸ್ಥೆಯ ವರ್ಗೀಕರಣದ ಅರ್ಥವೇನು?
January 28, 2026
8:00 AM
by: ಕುಮಾರಸುಬ್ರಹ್ಮಣ್ಯ ಮುಳಿಯಾಲ
ಅಡಿಕೆಯನ್ನು ಕ್ಯಾನ್ಸರ್ ಕಾರಕ ಎಂದ WHO ನಿರ್ಧಾರ | ಬೆಳೆಗಾರರ ಮುಂದೆ ಉಳಿದಿರುವ ಏಕೈಕ ಮಾರ್ಗ ಏನು?
January 26, 2026
10:31 PM
by: ರಮೇಶ್‌ ದೇಲಂಪಾಡಿ

You cannot copy content of this page - Copyright -The Rural Mirror